ನೆಲದನಿ
ಸಮಾನತೆಯ ಕನಸೊತ್ತ ಬುದ್ಧಮಾರ್ಗಿ’ಹೆಚ್.ಲಿಂಗಪ್ಪ’..!
- ಡಾ.ಕೆ.ಎ.ಓಬಳೇಶ್
ಭಾರತದ ತವರು ಧರ್ಮವಾದ ಬೌದ್ಧಧರ್ಮವು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು, ವಿಶ್ವದ ಎರಡನೇ ದೊಡ್ಡ ಧರ್ಮವಾಗಿ ತನ್ನ ಕೀರ್ತಿ ಗಳಿಸಿಕೊಂಡಿದೆ. ಆದರೆ ತನ್ನ ತವರು ನೆಲದಲ್ಲಿಯೇ ಇಂದು ಬೌದ್ಧಧರ್ಮವು ಅವನತಿಯನ್ನು ಕಂಡುಕೊಂಡಿದೆ. ಹೀಗೆ ತನ್ನ ತವರು ನೆಲದಿಂದ ಶಾಶ್ವತವಾಗಿ ಮರೆಯಾಗಿದ್ದ ಬೌದ್ಧಧರ್ಮ ಹಾಗೂ ಬುದ್ಧನ ದರ್ಶನವನ್ನು ಪುನರುಜ್ಜಿವನಗೊಳಿಸಿದ ಹಿರಿಮೆ ಭಾರತರತ್ನ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.
ಬುದ್ಧನ ತತ್ವಾದರ್ಶ, ಸೈದ್ಧಾಂತಿಕ ಚಿಂತನೆ ಹಾಗೂ ಜೀವಪರವಾದ ಮೌಲ್ಯಗಳನ್ನರಿತ ಬಾಬಾಸಾಹೇಬರು ‘ನಾನು ಹಿಂದುವಾಗಿ ಹುಟ್ಟಿದ್ದೇನೆ. ಆದರೆ ಹಿಂದೂವಾಗಿ ಸಾಯಲಾರೆ’ ಎಂಬುದಾಗಿ ನುಡಿದು ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ‘ನಾಗಭೂಮಿ’ಯಲ್ಲಿ ಬೌದ್ಧಧಮ್ಮ ಸ್ವೀಕಾರ ಮಾಡಿದರು.
ಬಾಬಾಸಾಹೇಬರಿಗೆ ಬೌದ್ಧಧಮ್ಮ ಸ್ವೀಕಾರ ಮಾಡಿರುವುದು ಕೇವಲ ಒಂದು ಧರ್ಮವನ್ನು ತೊರೆದು ಇನ್ನೊಂದು ಧರ್ಮವನ್ನು ಒಪ್ಪಿಕೊಳ್ಳುವುದಾಗಿರಲಿಲ್ಲ. ಬಾಬಾಸಾಹೇಬರ ಈ ಧರ್ಮಾಂತರ ಪ್ರಕ್ರಿಯೆಯ ಹಿಂದೆ ಭಾರತದ ಮೂಲನಿವಾಸಿಗಳು ಹಾಗೂ ಈ ದೇಶದ ಬಹುಸಂಖ್ಯಾತರ ಪರವಾದ ಸೈದ್ಧಾಂತಿಕ ತುಡಿತವಿತ್ತು.
ಭಾರತಕ್ಕೆ ವಲಸೆ ಬಂದ ಆರ್ಯರ ಆಕ್ರಮಣಕಾರಿ ನೀತಿಯಿಂದ ಶೋಷಣೆಗೆ ಒಳಗಾದ ಈ ನಾಡಿನ ಬಹುಸಂಖ್ಯಾತರಾದ ಶೂದ್ರರನ್ನು ಶೊಷಣೆಯಿಂದ ಮುಕ್ತಗೊಳಿಸುವುದಾಗಿತ್ತು. ಆ ಮೂಲಕ ಪುರೋಹಿತಶಾಹಿ ಮನಸುಗಳು ತಮ್ಮ ಇಚ್ಚಾನುಸಾರ ರೂಪಿಸಿಕೊಂಡಿದ್ದ ವರ್ಣಾಶ್ರಮ ವ್ಯವಸ್ಥೆ ಹಾಗೂ ಅವೈಜ್ಞಾನಿಕ ನೆಲೆಯ ಮನುವಾದವನ್ನು ತೊಡೆದುಹಾಕಿ ಸಮಾನತೆಯನ್ನು ಸಾರುವ ಭಾಗವಾಗಿ ಬಾಬಾಸಾಹೇಬರು ತಮ್ಮ ನೆಲದ ನಿಜಸತ್ವವನ್ನು ಸಾರುವ ಬೌದ್ಧಧಮ್ಮದತ್ತ ಮುಖಮಾಡಿದರು. ತಾವು ನುಡಿದಂತೆ ನಡೆದು ಬೌದ್ಧಧಮ್ಮ ಸ್ವೀಕಾರ ಮಾಡುವ ಮೂಲಕ ಮುಂದಿನ ಶೋಷಿತ ಜನಾಂಗಕ್ಕೆ ಸ್ವಾಭಿಮಾನಿ ನೆಲೆಯ ಧರ್ಮದ ಮಾರ್ಗವೊಂದನ್ನು ತೋರಿದರು.
ಬಾಬಾಸಾಹೇಬರು ತೋರಿದ ಬೌದ್ಧದರ್ಶನದ ಜಾಡುಹಿಡಿದು ವೈಚಾರಿಕ ಮಾರ್ಗವನ್ನು ಕಂಡುಕೊಳ್ಳುವ ನೆಲೆಯಲ್ಲಿ ಭಾರತದ ಹಲವಾರು ಚಿಂತಕರು ಬೌದ್ಧ ಚಿಂತನೆಗಳನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಬಾಬಾಸಾಹೇಬರ ಬೌದ್ಧದರ್ಶನದ ಪ್ರಭಾವವು ಕನ್ನಡದ ಹಲವಾರು ವಿಚಾರವಾದಿಗಳ ಸೈದ್ಧಾಂತಿಕ ನೆಲೆಗೆ ವೇದಿಕೆಯನ್ನು ರೂಪಿಸಿದೆ.
ಹೀಗೆ ಬಾಬಾಸಾಹೇಬರು ತೋರಿದ ಬೌದ್ಧ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಕಾಲೀನ ಸಮಾಜದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿರುವ ಬೌದ್ಧ ಚಿಂತಕರಲ್ಲಿ ಶ್ರೀಯುತ ಹೆಚ್.ಲಿಂಗಪ್ಪನವರು ಒಬ್ಬರಾಗಿದ್ದಾರೆ. ದಲಿತ ಸಂವೇದನೆಗಳನ್ನು ಮೈಗೂಡಿಸಿಕೊಂಡು ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮಾಡಿಸುವ ನೆಲೆಯಲ್ಲಿಯೇ ತಮ್ಮ ವೈಚಾರಿಕ ಚಿಂತನೆಗಳನ್ನು ಪ್ರತಿಪಾದಿಸುತ್ತ ಬಂದಿರುವ ಶ್ರೀಯುತರು ಬಾಬಾಸಾಹೇಬರ ತೋರಿದ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.
ಶ್ರೀಯುತ ಹೆಚ್.ಲಿಂಗಪ್ಪನವರು ಓದಿದ್ದು, ಅಧ್ಯಾಪನ ಮಾಡಿದ್ದು ಅರ್ಥಶಾಸ್ತ್ರ ಹಾಗೂ ಹಣಕಾಸಿಗೆ ಸಂಬಂಧಿಸಿದ ವಿಷಯವಾಗಿದ್ದರು ಕೂಡ ತಮ್ಮ ಜೀವಪರವಾದ ಚಿಂತನಧಾರೆಗಳನ್ನು ಅಭಿವ್ಯಕ್ತಿಸಲು ಆಯ್ದುಕೊಂಡಿದ್ದು ಸಾಹಿತ್ಯ ಪ್ರಕಾರ. ಈ ಸಾಹಿತ್ಯ ಪ್ರಕಾರದ ಮೂಲಕ ತಮ್ಮ ಶೋಷಿತ ಸಮುದಾಯದ ಪರವಾದ ಚಿಂತನೆಗಳನ್ನು ಪ್ರತಿಪಾದಿಸುತ್ತ ಬಂದಿದ್ದಾರೆ.
ಇವರ ಈ ವೈಚಾರಿಕ ಚಿಂತನಧಾರೆಗಳಿಗೆ ಪ್ರೇರಕ ಶಕ್ತಿಯೇ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್ ಅವರು. ಬಾಬಾಸಾಹೇಬರ ಸೈದ್ಧಾಂತಿಕ ನೆಲೆಗಳಿಂದ ಪ್ರಭಾವಿತರಾದ ಶ್ರೀಯುತ ಹೆಚ್.ಲಿಂಗಪ್ಪನವರು ವಿದ್ಯಾರ್ಥಿ ದೆಸೆಯಿಂದಲೇ ದಲಿತಪರವಾದ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
ಶೋಷಿತ ಸಮುದಾಯಗಳ ಮೇಲೆ ನಡೆಯುವಂತಹ ಹಲ್ಲೆ, ದೌರ್ಜನ್ಯಗಳನ್ನು ಕಣ್ಣಾರೆ ಕಂಡವರು. ಹಿಂದುತ್ವದ ವಿಕೃತ ಸ್ವರೂಪವಾದ ಜಾತಿವಾದದ ಜ್ವಾಲೆಯಿಂದ ಬೆಂದವರು, ನೊಂದವರು. ಹೀಗಾಗಿ ತಮ್ಮ ಬರಹಗಳಲ್ಲಿ ಅಸಮಾನತೆಯ ವಿರೋಧಿ ನೆಲೆಗಳನ್ನೆ ಮುಖ್ಯವಾಗಿಸಿಕೊಂಡಿದ್ದಾರೆ.
ಶ್ರೀಯುತ ಹೆಚ್.ಲಿಂಗಪ್ಪನವರು ಹೋರಾಟ ಕಿಚ್ಚನ್ನು ಹಾಗೂ ದಲಿತಪರವಾದ ಹೋರಾಟಕ್ಕೆ ಬೇಕಾದ ಸೈದ್ಧಾಂತಿಕ ಗಟ್ಟಿತನವನ್ನು ಪ್ರೊ.ಬಿ.ಕೃಷ್ಣಪ್ಪನವರ ಮೂಲಕ ಪಡೆದುಕೊಂಡವರು. ಸಮಾಜದಲ್ಲಿ ನೊಂದವರ ಪರವಾದ ತುಡಿತವನ್ನು ಹೊಂದಿರುವ ಶ್ರೀಯುತರು ಅಂಬೇಡ್ಕರ್ ಅವರ ಚಿಂತಧಾರೆಗಳ ಮೂಲಕವೇ ಸಾಮಾಜಿಕ ಸಮಸ್ಯೆ ಹಾಗೂ ಒತ್ತಡಗಳಿಗೆ ಪರಿಹಾರವನ್ನು ಕಂಡುಕೊಳ್ಳುವತ್ತ ತಮ್ಮ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ.
ಇವರು ತಮ್ಮ ವೈಚಾರಿಕ ಧಾರೆಗಳ ಮೂಲಕ ಕಟ್ಟಿಕೊಟ್ಟಿರುವ ಕೃತಿಗಳು ದಲಿತ ಹಾಗೂ ಹಿಂದುಳಿದ ಸಮುದಾಯಗಳಿಗೆ ಜಾಗೃತ ನೆಲೆಯೊಂದನ್ನು ರೂಪಿಸಿಕೊಟ್ಟಂತಿವೆ. ತಾವು ರಚಿಸಿರುವ ಹತ್ತಾರು ಕೃತಿಗಳು ಶೋಷಿತ ಸಮುದಾಯದ ಪರವಾದ ತುಡಿತವನ್ನೆ ಹೊಂದಿವೆ.
ಇವರ ಒತ್ತಾಸೆಯ ಮೂಲಕ ರಚನೆಯಾಗಿರುವ ಎಲ್ಲಾ ಕೃತಿಗಳಲ್ಲೂ ಬುದ್ಧ, ಬಸವ, ಅಂಬೇಡ್ಕರ್ ಅವರ ಸಮಾನತೆಯ ಆಶಯಗಳು ಅಂತರ್ಗತವಾಗಿವೆಯೇ ಹೊರತು ವೈಯಕ್ತಿಕವಾದ ಯಾವುದೇ ಸ್ವಾರ್ಥಪರವಾದ ನೆಲೆಗಳು ಕಂಡುಬರುವುದಿಲ್ಲ. ಹೀಗಾಗಿ ನಿಜನೆಲೆಯ ದಲಿತಪರವಾದ ಚಿಂತಕರ ಸಾಲಿನಲ್ಲಿ ಶ್ರೀಯುತ ಹೆಚ್.ಲಿಂಗಪ್ಪನವರು ನಿಲ್ಲುತ್ತಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಶೋಷಣೆಗೆ ಒಳಗಾಗಿರುವ ದಲಿತ ಹಾಗೂ ಹಿಂದುಳಿದ ಸಮುದಾಯವು ಶಿಕ್ಷಣ ಪಡೆದು ಜಾಗೃತರಾದರೆ, ತಮ್ಮ ಶೋಷಿತ ಸಮುದಾಯಗಳ ಪ್ರಗತಿಗಾಗಿ ಹೋರಾಟವನ್ನು ಮುನ್ನಡೆಸುತ್ತಾರೆ ಎಂಬ ಸದಾಶಯವನ್ನು ಹೊಂದಿದ್ದರು. ಹೀಗಾಗಿ ಅವರು ತಮ್ಮ ಹೋರಾಟದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು.
ಆದರೆ ಇಂದು ಬಾಬಾಸಾಹೇಬರು ನೀಡಿರುವ ಸಂವಿಧಾನಿಕ ಸವಲತ್ತು ಪಡೆದ ಬಹುತೇಕ ದಲಿತ ವಿದ್ಯಾವಂತ ವರ್ಗವು ಕಿಂಚಿತ್ತು ಶೋಷಿತರ ಪರವಾದ ತುಡಿತವಿಲ್ಲದೆ ನವಬ್ರಾಹ್ಮಣರಂತೆ ಬದುಕುತಿದ್ದಾರೆ. ಆದರೆ ಬೆರಳೆಣಿಕೆಯಷ್ಟು ದಲಿತ ವಿದ್ಯಾವಂತ ವರ್ಗವು ಮಾತ್ರ ತಮ್ಮ ಸಮುದಾಯದ ಪ್ರಗತಿಗಾಗಿ ತಮ್ಮನ್ನು ಮುಡುಪಾಗಿಟ್ಟುಕೊಂಡು ಸೇವೆ ಸಲ್ಲಿಸುತ್ತಿದೆ.
ಅಂತಹ ಪ್ರಾಮಾಣಿಕ ಅಂಬೇಡ್ಕರ್ ಅನುಯಾಯಿಗಳಲ್ಲಿ ಶ್ರೀಯುತರು ಒಬ್ಬರಾಗಿದ್ದಾರೆ. ಇವರ ಹೋರಾಟ ಹಾಗೂ ಚಿಂತನೆಗಳಲ್ಲಿ ಶೋಷಿತ ಸಮುದಾಯಗಳ ಸ್ವಾಭಿಮಾನದ ತುಡಿತವಿದೆ. ಅಸ್ಪøಶ್ಯತೆಯ ಬೆಂಕಿಯಲ್ಲಿ ಬೆಂದು ನರಳಾಡುತ್ತಿರುವ ತನ್ನ ಸಮುದಾಯವನ್ನು ವೈಚಾರಿಕ ಅರಿವಿನ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಕನಸಿದೆ. ಹೀಗಾಗಿ ಇವರ ಚಿಂತನೆಗಳಲ್ಲಿ ಶೋಷಿತ ಸಮುದಾಯಗಳ ಪರವಾದ ಗಟ್ಟಿ ದನಿಯಿದೆ. ಈ ಸ್ವಾಭಿಮಾನಿ ದನಿಯ ಹಿಂದಿನ ಶಕ್ತಿಯೇ ಬಾಬಾಸಾಹೇಬ್ ಅಂಬೇಡ್ಕರ್.
ಶ್ರೀಯುತ ಹೆಚ್.ಲಿಂಗಪ್ಪನವರು ಅಲಕ್ಷಿತ ಸಮುದಾಯಗಳ ಪರವಾದ ಚಿಂತನೆಯನ್ನೆ ತಮ್ಮ ಸೈದ್ಧಾಂತಿಕ ಅಡಿಪಾಯವಾಗಿಸಿಕೊಂಡಿದ್ದಾರೆ. ಆದ ಕಾರಣ ಹಿಂದುತ್ವದ ತೆಕ್ಕೆಯೊಳಗೆ ತನ್ನ ಅಸ್ಮಿತೆಯನ್ನು ಕಳೆದುಕೊಂಡಿರುವ ಸಮುದಾಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳು ಇವರ ಚಿಂತನೆಯಲ್ಲಿ ಪ್ರಧಾನವಾಗಿ ಕಂಡುಬರುತ್ತವೆ. ಬಾಬಾಸಾಹೇಬರ ಪ್ರಮುಖ ಆಶಯವು ಕೂಡ ಇದೇ ಆಗಿತ್ತು.
ಆದ ಕಾರಣದಿಂದಾಗಿ ಅವರು ‘ಚರಿತ್ರೆ ಇಲ್ಲದವರು ಚರಿತ್ರೆ ನಿರ್ಮಿಸಲಾರರು. ಚರಿತ್ರೆಯನ್ನು ಮರೆತವರು ತಮ್ಮ ಬದುಕನ್ನು ಕಟ್ಟಲಾರರು’ ಎಂಬ ಮಾತನ್ನು ವ್ಯಕ್ತಪಡಿಸಿದ್ದು. ಬಾಬಾಸಾಹೇಬರು ತೋರಿದ ದಾರಿಯಲ್ಲಿ ನಡೆದ ಶ್ರೀಯುತರು ಭಾರತದ ನೆಲದಲ್ಲಿ ಅಸಮಾನತೆಯ ಕೂಸಾದ ಮನುವಾದದ ವಿರುದ್ಧ ಹೋರಾಡಿ, ಸಮಾನತೆಗಾಗಿ ತುಡಿದ ಅಲಕ್ಷಿತ ಸಮುದಾಯದ ಮಹಾನಿಯರ ಮೇಲೆ ಸಾಕಷ್ಟು ಅಧ್ಯಯನಗಳನ್ನು ನಡೆಸುವ ಮೂಲಕ ಮೌಲಿಕವಾದ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡಿದ್ದಾರೆ.
ಅಲಕ್ಷಿತ ವಚನಕಾರರು, ವಚನಕಾರ್ತಿಯರು, ಬಾಬು ಜಗಜೀವನ್‍ರಾಮ್, ಬಿ.ಕೃಷ್ಣಪ್ಪ ಹಾಗೂ ಮುಂತಾದ ಅಲಕ್ಷಿತ ಸಮುದಾಯದ ಜೀವಸೆಲೆಗಳ ಹೋರಾಟ ಹಾಗೂ ಅವರ ಸೈದ್ಧಾಂತಿಕ ದೃಷ್ಟಿಕೋನಗಳನ್ನು ಪರಿಚಯಿಸಿದ್ದಾರೆ. ಆ ಮೂಲಕ ಶೋಷಿತ ಸಮುದಾಯಗಳಿಗೆ ವಿಮೋಚನ ನೆಲೆಗಳನ್ನು ತೆರೆದಿಟ್ಟಿದ್ದಾರೆ.
ಬಾಬಾಸಾಹೇಬರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾನತೆಯತ್ತ ಮುನ್ನಡೆಯಬೇಕಾದ ದಲಿತ ಸಮುದಾಯಗಳಲ್ಲಿಯೇ ಇಂದು ‘ಎಡ-ಬಲ’ ಎಂಬ ಭಿನ್ನಮತಗಳು ಸೃಷ್ಟಿಯಾಗುತ್ತಿವೆ. ಇದು ಅತ್ಯಂತ ಅಪಾಯಕಾರಿಯಾದ ಬೆಳವಣಿಗೆ. ಎಡ-ಬಲಗಳ ನಡುವಿನ ಈ ದ್ವೇಷವು ಬಾಬಾಸಾಹೇಬರನ್ನು ಕೂಡ ಹುಟ್ಟಿನ ನೆಲೆಯ ಜಾತಿಯ ಆಧಾರದ ಮೇಲೆ ಆರಾಧಿಸುವ, ದ್ವೇಷಿಸುವ ಹಂತವನ್ನು ತಲುಪಿದೆ.
ಇದರ ವಿಕೃತ ಫಲವಾಗಿ ಶೋಷಿತರಿಗಾಗಿಯೇ ತನ್ನ ಬದುಕನ್ನು ಮುಡುಪಾಗಿಟ್ಟ ತಂದೆ ಬಾಬಾಸಾಹೇಬರನ್ನು ದ್ವೇಷಿಸುವ ಹಂತವನ್ನು ನಮ್ಮ ಮುಂದಿನ ಕೆಲವು ದಲಿತ ಸಂಘಟನೆಗಳು ಹಾಗೂ ಅವುಗಳ ನಾಯಕರು ತಲುಪಿದ್ದಾರೆ. ಈ ಪಾಪಕೃತ್ಯ ಹೆತ್ತ ತಂದೆಗೆ ಬಗೆದಷ್ಟೆ ದ್ರೋಹದ್ದು. ನಮ್ಮ ಮುಂದಿರುವ ಎಡ-ಬಲ ಹಾಗೂ ಅನ್ಯ ಸಂಘಟನೆಗಳ ವೈಯಕ್ತಿಕ ದ್ವೇಷ ಏನೆ ಇರಲಿ.
ಆದರೆ ಈ ವೈಯಕ್ತಿಕ ದ್ವೇಷಕ್ಕೆ ಬಾಬಾಸಾಹೇಬರನ್ನು ಬಳಸಿಕೊಳ್ಳುವುದು ಸೂಕ್ತವಲ್ಲ. ಇಂತಹ ಮಾರಕ ಪ್ರವೃತ್ತಿಗಳಿಗೆ ಚಿಕಿತ್ಸಕ ದೃಷ್ಟಿಕೋನವನ್ನು ಬಿತ್ತರಿಸುವ ಅಂಶಗಳು ಶ್ರೀಯುತರ ಹೆಚ್.ಲಿಂಗಪ್ಪನವರ ಚಿಂತನೆಗಳಲ್ಲಿ ಅಂತರ್ಗತವಾಗಿವೆಯಾದರೂ ಮತ್ತಷ್ಟು ಈ ಬಗೆಯ ಚಿಂತನೆಗಳು ಇವರಿಂದ ಹೊರಹೊಮ್ಮಲಿ. ಬಾಬಾಸಾಹೇಬರನ್ನು ಕೇಂದ್ರಶಕ್ತಿಯಾಗಿಟ್ಟುಕೊಂಡು ದಲಿತ ಸಮುದಾಯಗಳು ಅಸ್ಪೃಶ್ಯತೆ ಹಾಗೂ ಅವಮಾನಗಳಿಂದ ಹೊರಬಂದು, ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವಂತಹ ವೇದಿಕೆಯನ್ನು ಸೃಜಿಸುವ ಚಿಂತನಧಾರೆಗಳು ಇಂದಿಗೆ ಅತ್ಯಗತ್ಯವಾಗಿದೆ. ಆದ್ದರಿಂದ ಬಾಬಾಸಾಹೇಬರ ಹಾದಿಯಲ್ಲಿ ಮುನ್ನಡೆಯುತ್ತಿರುವ ಶ್ರೀಯುತರಿಂದ ಇಂತಹ ಹೊಸ ಧಾರೆಗಳು ರೂಪಗೊಳ್ಳಲಿ ಎಂದು ಆಶೀಸುತ್ತೇವೆ.
(-ಡಾ.ಕೆ.ಎ.ಓಬಳೇಶ್ :
9591420216)
ಸುದ್ದಿದಿನ.ಕಾಂ|ವಾಟ್ಸಾಪ್|9980346243