ನೆಲದನಿ
‘ಹಾದಿಗಲ್ಲು’ : ಜನಪರ ಹೆಜ್ಜೆಗಳ ಅನನ್ಯ ಯಾನ
- ಡಾ.ಎನ್.ಕೆ.ಪದ್ಮನಾಭ,ಸಹಾಯಕ ಪ್ರಾಧ್ಯಾಪಕರು,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಲಾಕ್‌ಡೌನ್‌ನ ಸುಧೀರ್ಘ ಅವಧಿಯ ನಂತರ ತೀರಾ ಇತ್ತೀಚೆಗೆ ನಮ್ಮ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಕ್ಲಾಸ್‌ಗಳು ಶುರುವಾದವು. ಕಳೆದ ವಾರದ ತರಗತಿಯಲ್ಲಿ ಸಾರ್ವಜನಿಕ ಸಂಪರ್ಕದ ಕುರಿತ ವ್ಯಾಖ್ಯಾನ ಆಧರಿಸಿ ಚರ್ಚೆ ಆರಂಭಿಸಿದ್ದೆ.
ಇಡೀ ಸರ್ಕಾರೀ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಾಯಿಸಲು ಆಡಳಿತದಲ್ಲಿ ಸಾರ್ವಜನಿಕ ಸಂಪರ್ಕ ಅಥವಾ ಪಬ್ಲಿಕ್ ರಿಲೇಷನ್ಸ್ ಎಂಬ ಪ್ರತ್ಯೇಕ ಇಲಾಖೆ ರೂಪಿಸಿ ಅದನ್ನು ಬಲಪಡಿಸುವುದರ ಕಡೆಗೆ ನೀತಿ ನಿರೂಪಕರು ಯೋಚಿಸುವ ಅಗತ್ಯವಿದೆ ಎಂಬ ಪ್ರತಿಪಾದನೆಯೊಂದಿಗೆ ತರಗತಿಯಲ್ಲಿ ನನ್ನ ಉಪನ್ಯಾಸ ಶುರುವಾಗಿತ್ತು.
ರೆಕ್ಸ್ ಹಾರ್ಲೋ ಅವರ ವಿಸ್ತೃತವಾದ ವ್ಯಖ್ಯಾನವನ್ನು ಈ ಕೇಂದ್ರ ಆಶಯ ಆಧರಿಸಿ ವಿವರಿಸಿದ್ದೆ. ಪ್ರತ್ಯೇಕವಾದ ಸ್ವಾಯತ್ತ ಸಂಸ್ಥೆಯಾಗಿ ಸರ್ಕಾರಿ ಆಡಳಿತದ ಉನ್ನತೀಕರಣಕ್ಕೆ ಹೇಗೆ ನೆರವಾಗಬಹುದು ಎಂಬುದನ್ನು ವಿವಿಧ ಆಯಾಮಗಳಲ್ಲಿ ವಿಶ್ಲೇಷಣೆಗೊಳಪಡಿಸಲು ಪ್ರಯತ್ನಿಸಿದ್ದೆ.
ಇದಾದ ಮರುದಿನ ನನ್ನ ಓದಿಗೆ ಸಿಕ್ಕಿದ್ದು ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರು ಬರೆದ ‘ಹಾದಿಗಲ್ಲು’ ಕೃತಿ. ‘ಆತ್ಮವೃತ್ತಾಂತದ ಮೊದಲ ಚರಣ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಐದನೇ ಮುದ್ರಣ ಕಂಡಿರುವ ಈ ಕೃತಿಯೊಂದಿಗಿನ ಓದಿನ ಯಾನ ನನ್ನ ತರಗತಿಯ ಚರ್ಚೆಯ ಮುಂದುವರಿದ ಭಾಗದಂತಿತ್ತು. ವ್ಯಕ್ತಿಗತ ಯಶಸ್ಸನ್ನು ಸಮಾಜಪರ-ಜನಪರ ಕೆಲಸಗಳೊಂದಿಗೆ ಸಮೀಕರಿಸಿ ಸಾಧನೆ ಸಾಧ್ಯವಾಗಿಸಿಕೊಂಡ ಹಿಂದಿನ ಮತ್ತು ವರ್ತಮಾನದ ಎಲ್ಲಾ ಸಾಧಕರೊಳಗೆ ಪಬ್ಲಿಕ್ ರಿಲೇಷನ್ಸ್ ತಂತ್ರಜ್ಞ ಕ್ರಿಯಾಶೀಲತೆ ಇರುತ್ತದೆ ಎಂಬ ನನ್ನ ತರಗತಿಯ ಪ್ರತಿಪಾದನೆಗೆ ಪೂರಕವಾದ ಸಮರ್ಥನಾ ಸಾಕ್ಷ್ಯವಾಗಿ ಇಡೀ ಕೃತಿ ಸಹಾಯಕವಾಯಿತು.
ಖಾಸಗೀಕರಣವೊಂದೇ ಸದ್ಯದ ಎಲ್ಲ ಬಗೆಯ ಸಮಸ್ಯೆಗಳಿಗೆ ಪರಿಹಾರೋಪಾಯ ಎಂಬ ಪೂರ್ವಗ್ರಹಪೀಡಿತ-ಅವಸರದ ದೃಷ್ಟಿಕೋನವೇ ವಿಜೃಂಭಿಸುತ್ತಿರುವಾಗ ಸರ್ಕಾರೀ ಆಡಳಿತದ ಪರಿಕಲ್ಪನೆಯೊಳಗೇ ಇರುವ ಸರ್ವೋದಯದ ಪ್ರಾಯೋಗಿಕ ಆಯಾಮವನ್ನು ಗಂಭೀರವಾಗಿ ಪರಿಗಣಿಸಬೇಕಾದ ಸಕಾರಾತ್ಮಕ ಒತ್ತಡವನ್ನು ‘ಹಾದಿಗಲ್ಲು’ ಸೃಷ್ಟಿಸುತ್ತದೆ. ಈ ಕೃತಿಯ ಓದು ಶುರುವಾಗುವ ಮುನ್ನಾದಿನದ ನನ್ನ ತರಗತಿಯಲ್ಲಿ ಸರ್ಕಾರಿ ವ್ಯವಸ್ಥೆಯೊಳಗೆ ಪಿಆರ್ ಸ್ವಾಯತ್ತ ಸಂಸ್ಥೆಯಾಗಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾವಾರು ಮಟ್ಟಗಳಲ್ಲಿ ಹೇಗೆ ಕಾರ್ಯನಿರ್ವಹಿಸಬಹುದು ಎಂಬುದನ್ನು ಪ್ರಸ್ತಾಪಿಸಿದ್ದೆ.
ದಯಾನಂದ ಅವರು ಬರೆದ ಒಂದೊಂದು ಅಧ್ಯಾಯವೂ ನನ್ನ ಪ್ರತಿಪಾದನೆಗೆ ಸಹಾಯಕವಾಗುವ ಬೌದ್ಧಿಕ ಪ್ರಾಯೋಗಿಕ ಸಂಪನ್ಮೂಲವಾಗಿ ಒದಗಿಬಂದಿದ್ದು ಒಂದು ವಿಶೇಷ ಅನುಭವ. ಒಂದು ಅಧ್ಯಾಯದಿಂದ ಮತ್ತೊಂದು ಅಧ್ಯಾಯಕ್ಕೆ ದಾಟಿಕೊಳ್ಳುವಾಗಲೆಲ್ಲಾ ಅವರೊಳಗೆ ಸುಪ್ತವಾದ ಸಾರ್ವಜನಿಕ ಸಂಪರ್ಕ ಕೌಶಲ್ಯದೊಂದಿಗೆ ಬೆರೆತುಹೋದ ಮನುಷ್ಯಪರ ಕಾಳಜಿ ಸರ್ಕಾರಿ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಬಹುದು ಎಂಬ ಆಶಾವಾದ ಗಟ್ಟಿಗೊಳ್ಳುತ್ತಲೇ ಇತ್ತು.
ಉನ್ನತ ಹಂತದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ತಾನು ಪ್ರತಿನಿಧಿಸುವ ಆಡಳಿತಾತ್ಮಕ ವ್ಯವಸ್ಥೆಯೊಳಗೆ ಸಮಗ್ರ ಬದಲಾವಣೆ ತರುವ ಕನಸನ್ನು ಬಿತ್ತಿ ಸಮೃದ್ಧಿಯನ್ನು ನೆಲೆಗೊಳಿಸುವ ಮಾದರಿಗಳನ್ನು ಸೃಷ್ಟಿಸಬಹುದು. ಎಲ್ಲವೂ ಸರಿಯಿಲ್ಲ ಎಂಬ ಹತಾಶೆಗಿಂತಲೂ ಮಿತಿಗಳನ್ನೇ ಗುರುತಿಸಿ ಅವುಗಳನ್ನೇ ಸಮೃದ್ಧಿಯ ಕಡೆಗೆ ಪಯಣಿಸಲು ಒತ್ತಡವನ್ನುಂಟುಮಾಡುವ ಅಪೂರ್ವ ಅವಕಾಶಗಳನ್ನಾಗಿಸಿಕೊಂಡರೆ ಬದಲಾವಣೆ ಸಾಧ್ಯವಾಗುತ್ತದೆ. ಈ ಬಗೆಯ ಮಹತ್ವದ ಬದಲಾವಣೆಗಾಗಿ ಮ್ಯಾನೇಜ್‌ಮೆಂಟಿನ ಅಕ್ಯಾಡೆಮಿಕ್ ಅಧ್ಯಯನದ ಅವಶ್ಯಕತೆ ಇಲ್ಲ.
ಸದಾ ಸಕಾರಾತ್ಮಕ ಮನೋಬಲ, ವ್ಯಕ್ತಿಗತ ಬದುಕಿನ ಅನುಭವಗಳು, ಸ್ವತಃ ಕಂಡುಕೊಂಡ ವಿನೂತನ ಅವಲೋಕನದ ಮಾದರಿ, ಜಗತ್ತನ್ನು, ಸುತ್ತಮುತ್ತಲಿನ ಘಟನೆ- ಮನುಷ್ಯ ವರ್ತನೆಗಳನ್ನು ಸೂಕ್ಷ್ಮವಾಗಿ ನೋಡುವ ಚಿಕಿತ್ಸಕ ದೃಷ್ಟಿಕೋನ, ವೃತ್ತಿಪರ ಯಶಸ್ಸಿನ ಸ್ಪಷ್ಟ ಪ್ರಜ್ಞೆ- ಇವಿಷ್ಟೂ ಇದ್ದರೆ ಬಹುದೊಡ್ಡ ಸಾಮಾಜಿಕ ಪಲ್ಲಟಗಳಿಗೆ ಕಾರಣವಾಗಬಲ್ಲ ಕೊಡುಗೆಗಳನ್ನು ನೀಡಬಹುದು. ‘ಹಾದಿಗಲ್ಲು’ ಇಂಥದ್ದೊಂದು ಒಳನೋಟವನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ.
ಮ್ಯಾನೇಜ್‌ಮೆಂಟ್ ಅಕ್ಯಾಡೆಮಿಕ್ ವಲಯದಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುವ ಸ್ವಾಟ್ ಅನಾಲಿಸಿಸ್ (SWOT Analysis – Strengths, Weaknesses, Opportunities and Threats)ಪರಿಕಲ್ಪನೆಯು ಪರಿಣಾಮಕಾರಿಯಾಗಿ ಪ್ರಯೋಗಕ್ಕೊಳಪಡಬೇಕಾಗಿರುವುದು ಸರ್ಕಾರೀ ಆಡಳಿತಾತ್ಮಕ ಹಂತಗಳಲ್ಲಿ. “ಯೋಜನೆಗಳು ರೂಪುಗೊಳ್ಳುತ್ತವೆ, ಹಾಗೆ ರೂಪುಗೊಂಡು ಅನುಷ್ಠಾನಗೊಳ್ಳದೇ ನಿಷ್ಪ್ರಯೋಜಕವೆನ್ನಿಸುತ್ತವೆ” ಎಂಬ ಸಾರ್ವತ್ರಿಕ ಟೀಕೆ ಈಗಲೂ ವ್ಯಕ್ತವಾಗುತ್ತಲೇ ಇರುತ್ತದೆ.
ಯಾರದೋ ಪ್ರಬಂಧಕ್ಕೆ, ಇನ್ಯಾರದೋ ಭಾಷಣಕ್ಕೆ, ಮತ್ತಿನ್ಯಾರದೋ ಭಾವಾವೇಶಭರಿತ ಜನಪ್ರಿಯ ಸ್ವರೂಪದ ವಾಕ್ ವಾಹಕ್ಕೆ ಈ ಟೀಕಾತ್ಮಕ ಹೇಳಿಕೆಯ ಧ್ವನಿ ಪುನರಾವರ್ತಿತವಾಗುತ್ತಲೇ ಇರುತ್ತದೆ. ಆಡಳಿತ ಮತ್ತು ವಿರೋಧ ಪಕ್ಷಗಳವರು ಈ ಹೇಳಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಆ ಕ್ಷಣದ ಲಾಭ ಪಡೆದುಕೊಳ್ಳುವ ತಾತ್ಪೂರ್ತಿಕ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಲೇ ಇರುತ್ತಾರೆ.
ಟಿಆರ್‌ಪಿ ಎಂಬ ಮಹಾಮಾಯೆಯ ಹಿಡಿತಕ್ಕೊಳಗಾದ ಸುದ್ದಿಮಾಧ್ಯಮಗಳೂ ಇವುಗಳನ್ನೇ ವೈಭವೀಕರಿಸುತ್ತವೆ.ಯೋಜನೆಗಳ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಸರ್ಕಾರಿ ವ್ಯವಸ್ಥೆಯ ಪುನರುತ್ಥಾನದ ಕುರಿತ ಪರಿಹಾರೋಪಾಯದ ತಾರ್ಕಿಕ ಸಂವಾದ ನಡೆದರೂ ಅದು ಸಂಪೂರ್ಣವಾಗಿ ಆಡಳಿತಾತ್ಮಕ ಪ್ರಾಯೋಗಿಕತೆಯಲ್ಲಿ ಪ್ರತಿಫಲಿತವಾಗದೇ ಉಳಿದುಬಿಟ್ಟಿದೆ.
ಬರೀ ಚರ್ಚೆ, ಸಮಾಲೋಚನೆ, ಚಿಂತನೆಗಳು, ಪ್ರಯತ್ನಗಳು ಬಿಡಿಬಿಡಿಯಾಗಿ ನಡೆದವೇ ಹೊರತು ನಿರೀಕ್ಷಿತ ಆಡಳಿತಾತ್ಮಕ ಪ್ರಯೋಗಶೀಲತೆ ಸಮಗ್ರವಾಗಿ ವ್ಯಕ್ತವಾಗಲಿಲ್ಲ. ಇಂಥದ್ದೊಂದು ಕೊರಗಿನೊಂದಿಗೇ ಹೊಸ ಪೀಳಿಗೆ ಬದುಕಬೇಕಾಗಿಲ್ಲ ಎಂಬುದನ್ನು ‘ಹಾದಿಗಲ್ಲು’ ಸ್ಪಷ್ಟಪಡಿಸುತ್ತದೆ. ಆಡಳಿತಾತ್ಮಕ ಪ್ರಯೋಗಶೀಲತೆ ಯಾವ ಯಾವ ರೀತಿಯಲ್ಲಿ ಅಳವಡಿಸಲ್ಪಡಬಹುದು ಎಂಬ ದಾರಿಗಳನ್ನು ಕಾಣಿಸುತ್ತದೆ.
ಆಡಳಿತದ ವಿವಿಧ ಹುದ್ದೆಗಳ ವಿವಿಧ ಹಂತಗಳ ಕಾರ್ಯನಿರ್ವಹಣೆಯು ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಹೇಗೆ ಪುನರ್‌ಸ್ವರೂಪ ಪಡೆದುಕೊಳ್ಳಬಹುದು ಎಂಬ ಹೊಳಹುಗಳನ್ನು ಹೊಳೆಸುತ್ತದೆ. ‘ಅಧಿಕಾರ’ ಮತ್ತು ‘ಅಧಿಕಾರಿ’ ಈ ಎರಡೂ ಪದಗಳ ಕುರಿತು ಬೇರೂರಿಬಿಟ್ಟಿರುವ ಹತಾಶೆ, ಅಸಮಾಧಾನ ಮತ್ತು ಆಕ್ರೋಶದ ಭಾವಗಳೆಲ್ಲವನ್ನೂ ಇಲ್ಲವಾಗಿಸಿ ಅವುಗಳ ಸ್ಥಾನಗಳಲ್ಲಿ ಆಶಾವಾದ, ಆತ್ಮಸಂತೃಪ್ತಿ ಮತ್ತು ಹೊಂಗನಸುಗಳ ಮಹತ್ವಾಕಾಂಕ್ಷೀ ಮನೋಬಲವನ್ನು ನೆಲೆಗೊಳಿಸಿಕೊಳ್ಳಲು ಈ ಕೃತಿಯು ಪ್ರೇರಣೆ ನೀಡುತ್ತದೆ.
ಐಎಎಸ್, ಕೆಎಎಸ್ ಅಧಿಕಾರಿಗಳ ಬಗ್ಗೆ ಜನರಲ್ಲಿ ತಪ್ಪುಕಲ್ಪನೆಯೊಂದಿದೆ. ಎಲ್ಲರೂ ಹೀಗೆ ಯೋಚಿಸುವುದಿಲ್ಲವಾದರೂ ಇದು ಇಡೀ ಸಾಮುದಾಯಿಕ ದೃಷ್ಟಿಕೋನದ ಮೇಲೆಯೇ ಪ್ರಭಾವ ಬೀರುತ್ತದೆ. ಅದೇನೆಂದರೆ, ಅಷ್ಟೆಲ್ಲಾ ಕಷ್ಟಪಟ್ಟು ಓದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಅಧಿಕಾರಿಗಳಾಗಿ ನೇಮಕಗೊಂಡು ಏನನ್ನೂ ಓದಿಕೊಳ್ಳದ, ವಿಚಿತ್ರ ಧೋರಣೆಗಳೊಂದಿಗಿನ ಮಂತ್ರಿಗಳು, ರಾಜಕಾರಣಿಗಳ ಮುಂದೆ ಕೈಕಟ್ಟಿ ನಿಲ್ಲಬೇಕಾಗುತ್ತದೆ, ಅಂಥದ್ದೊಂದು ವಿಚಿತ್ರ ಸ್ಥಿತಿ ಎದುರಿಸಿ ಸ್ವಾಭಿಮಾನ ಬಲಿಕೊಡಬಾರದು ಎನ್ನುವ ಅವಸರದ ಧಾಟಿಯ ಮಾತುಗಳು ಕೇಳಿಬರುತ್ತವೆ.
ಇಂಥ ಅವಸರವಾದಿ ದೃಷ್ಟಿಕೋನಗಳನ್ನು ‘ಹಾದಿಗಲ್ಲು’ ಅಲ್ಲಗಳೆಯುತ್ತದೆ. ಐಎಎಸ್, ಕೆಎಎಸ್ ಅಧಿಕಾರಿ ಹುದ್ದೆಗಳು ಪ್ರತಿಷ್ಠಿತ ಮಂತ್ರಿಮಹೋದಯರ ಗುಲಾಮಗಿರಿಯ ಸಂಕೇತಗಳಲ್ಲ ಎಂಬುದನ್ನು ಅಧಿಕೃತವಾಗಿ ದೃಢಪಡಿಸುತ್ತದೆ. ವ್ಯಕ್ತಿಗತ ವೃತ್ತಿಬದ್ಧತೆ, ಬದಲಾವಣೆಗೆ ತುಡಿಯುವ ಅಂತರ್ಗತ ಶಕ್ತಿ, ಸದ್ಯದ ಕಾಲದ ಸವಾಲುಗಳಿಗೆ ಎದುರುಗೊಂಡು ಹೊಸತಾದ ಮುನ್ನಡೆ ಸಾಧಿಸುವ ಸೌಜನ್ಯಯುತ ಛಲವೊಂದಿದ್ದರೆ ಈ ಹುದ್ದೆಗಳ ನಿರ್ವಹಣೆಯು ಆತ್ಮತೃಪ್ತಿಯನ್ನು ತಂದುಕೊಡುತ್ತದೆ ಎಂಬುದನ್ನು ದಯಾನಂದ ಅವರು ಸ್ವಾನುಭವದ ನಿದರ್ಶನಗಳ ಮೂಲಕ ಸಾಬೀತುಪಡಿಸಿದ್ದಾರೆ.
ತಾವು ವಿವಿಧ ಇಲಾಖೆಗಳ ನೇತೃತ್ವ ವಹಿಸಿದಾಗಲೆಲ್ಲಾ ನಿಯಮಾವಳಿಗಳಿಗೆ ಅನುಗುಣವಾಗಿ ಅನುಷ್ಟಾನಕ್ಕೆ ತಂದ ಯೋಚನೆ, ಯೋಜನೆಗಳು, ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟ ತತ್‌ಕ್ಷಣದ ಕ್ರಮಗಳು, ಇಲಾಖೆಗಳಿಗೆ ಆಧುನಿಕ ತಾಂತ್ರಿಕಸ್ಪರ್ಶ ನೀಡಿದ ಕ್ರಾಂತಿಕಾರಿ ಹೆಜ್ಜೆಗಳು, ಎಲ್ಲಕ್ಕಿಂತ ಹೆಚ್ಚಾಗಿ ಉನ್ನತಾಧಿಕಾರಿ ಹುದ್ದೆಯ ವೃತ್ತಿಪರ ಮೌಲ್ಯವನ್ನು ವಿಸ್ತರಿಸಿದ ಅನೇಕ ಅನುಭವಗಳ ಆಪ್ತ ಉಲ್ಲೇಖವು ಇಡೀ ಕೃತಿಯನ್ನು ಬದಲಾವಣೆಯ ಮಹೋನ್ನತ ಸಾಧ್ಯತೆಗಳನ್ನು ಕಂಡರಿಸುವ ಪ್ರಾಯೋಗಿಕ ಜ್ಞಾನಸಂಪನ್ಮೂಲವನ್ನಾಗಿಸಿದೆ.
ಈ ಕೃತಿಯು ಕೇವಲ ಆಡಳಿತಾತ್ಮಕ ಹುದ್ದೆ ನಿರ್ವಹಣೆಯ ಸ್ವಾನುಭವ ವಿವರಗಳ ಸಂಕಲನವಷ್ಟೇ ಅಲ್ಲ. ಈಗಾಗಲೇ ಬಾಳಿಹೋದ ನಮ್ಮ ಹಿರಿಯ ತಲೆಮಾರುಗಳು ಹಾದುಬಂದ ಒಡಲಬೇಗೆಯನ್ನು ಅಕ್ಷರಗಳಲ್ಲಿ ಹಿಡಿದಿಡುವ ಸೃಜನಶೀಲ ಆಕೃತಿಯನ್ನಾಗಿಯೂ ಇದನ್ನು ಗ್ರಹಿಸಬಹುದು. ಸಾಮಾಜಿಕ ಏಣಿ-ಶ್ರೇಣಿ ವ್ಯವಸ್ಥೆಯೊಳಗೆ ಯಾತನೆ ಅನುಭವಿಸುತ್ತಾ ಬದಲಾವಣೆಯ ಹೊಂಗನಸುಗಳಿಂದ ದೂರ ಉಳಿದು ಅಭಿವೃದ್ಧಿಯ ಮುಖ್ಯವಾಹಿನಿ ಸೇರಿಕೊಳ್ಳುವ ಕನಸುಗಳಿಲ್ಲದೇ ಬದುಕುವ ಅನಿವಾರ್ಯತೆಯ ಗತದ ಕಾಲವನ್ನು ದಯಾನಂದ ಅವರು ಕಾಣಿಸುವ ಪರಿ ಅನನ್ಯ.
ಜಡಗೊಂಡ ಸಾಮಾಜಿಕ ವ್ಯವಸ್ಥೆಯಲ್ಲಿ ಪಲ್ಲಟಗಳನ್ನು ನೆಲೆಗೊಳಿಸುವ ಹೆಜ್ಜೆಗಳ ವಿವರಗಳನ್ನು ಸೌಜನ್ಯದ ಧಾಟಿಯಲ್ಲಿ ಮುಂದಿಡುತ್ತಲೇ ಸಾಂಸ್ಕೃತಿಕ ಪ್ರಜ್ಞೆಯನ್ನು ಕಟ್ಟಿಕೊಳ್ಳಲು ಬೇಕಾದ ಒಳನೋಟಗಳು ಅವರ ಬರಹಕ್ಕೆ ಜೀವಂತಿಕೆಯನ್ನು ತಂದುಕೊಟ್ಟಿವೆ. ಅವರೊಳಗಿನ ಅಪ್ಪಟ ಸಾಹಿತ್ಯಕ ವಿಮರ್ಶಕನನ್ನು ಈ ಕೃತಿ ಪರಿಚಯಿಸಿದೆ.
ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಡಿ.ವಿ.ಜಿ ಅವರಂಥ ಪ್ರತಿಭೆಗಳನ್ನು ದಯಾನಂದ್ ವರ್ತಮಾನದಲ್ಲಿ ನಿಂತು ಗ್ರಹಿಸುವ ಬಗೆ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಕೆಲವು ಸಿನಿಮಾಗಳ ಪ್ರಸ್ತಾಪದ ಮೂಲಕ ಮೌಲ್ಯಪರ ಆಲೋಚನಾಕ್ರಮಗಳ ವೈಶಿಷ್ಟ್ಯತೆಯನ್ನು ಮನಗಾಣಿಸುತ್ತಾರೆ. ಅಧ್ಯಾಯಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ಕೇವಲ ನೆನಪುಗಳ ಯಾನದ ಸಹಭಾಗೀ ಯಾತ್ರಿಕರು ಮಾತ್ರವಲ್ಲ.
ನನಗೆ ತುಂಬಾ ಇಷ್ಟವಾದ ಪಾತ್ರವ್ಯಕ್ತಿತ್ವಗಳೆಂದರೆ ದಯಾನಂದ ಅವರ ತಂದೆ, ತಾಯಿ ಮತ್ತು ಹುಚ್ಚಮ್ಮತ್ತೆ. ಅಪ್ಪನನ್ನು ಅವರು ಆಧ್ಯಾತ್ಮ ಜೀವಿ ಎಂದು ಗುರುತಿಸುತ್ತಾರೆ. ತಾಯಿಯು ಅವರ ದೃಷ್ಟಿಯಲ್ಲಿ ಆರ್ಥಿಕ ತಜ್ಞೆ. ಹುಚ್ಚಮ್ಮ ಅವರ ತಂದೆಯ ತಂಗಿ. ಅವರ ಮನೆದೇವರ ಹೆಸರನ್ನೇ ಅಜ್ಜ ತನ್ನ ಅತ್ತೆಗೆ ಇಟ್ಟದ್ದನ್ನು ನೆನಪಿಸಿಕೊಳ್ಳುತ್ತಲೇ ತಮ್ಮ ಪಾಲಿನ ನಿಜದ ದೇವರಾಗಿ ಪ್ರಭಾವಿಸಿದ್ದನ್ನು ಪ್ರಸ್ತಾಪಿಸಿದ ಬರಹವು ಜನರ ನೋವಿಗೆ ಸ್ಪಂದಿಸುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಹುಚ್ಚಮ್ಮತ್ತೆಯೇ ಪ್ರೇರಣೆಯಾಗಿರುವ ದಿವ್ಯತೆಗೆ ಕನ್ನಡಿ ಹಿಡಿಯುತ್ತದೆ.
‘ಚರ್ಮವನ್ನೇ ಚಪ್ಪಲಿಯಾಗಿಸಿಕೊಂಡ ಅಪ್ಪ’ ಶೀರ್ಷಿಕೆಯ ಬರಹವು ಆ ಕಾಲದ ಆರ್ಥಿಕ ದುಃಸ್ಥಿತಿಯ ಸಾಮಾಜಿಕ ರೂಪವನ್ನು ಅನಾವರಣಗೊಳಿಸುತ್ತದೆ. ಇದನ್ನು ಓದುವಾಗ ಮತ್ತೆ ಮತ್ತೆ ನೆನಪಿಗೆ ಬಂದದ್ದು ಪುನೀತ್ ರಾಜಕುಮಾರ್ ಬಾಲನಟರಾಗಿ ಅಭಿನಯಿಸಿದ ‘ಬೆಟ್ಟದ ಹೂವು’ ಸಿನಿಮಾ. ಅಮ್ಮನ ದುಃಖ ದುಮ್ಮಾನಗಳ ನಡುವೆ ಓದುವ ಕನಸನ್ನು ಜೀವಂತವಾಗಿರಿಸಿಕೊಂಡ ಹುಡುಗ ಕುವೆಂಪು ಅವರ ಕೃತಿಯನ್ನು ಕೊಂಡುಕೊಳ್ಳಲು ದುಡ್ಡು ಹೊಂದಿಸಿಕೊಳ್ಳಲು ಹೆಣಗಾಡುತ್ತಾನೆ.
ಕೊನೆಗೆ ದುಡಿಮೆಯ ದುಡ್ಡನ್ನು ಹೇಗೋ ಹೊಂದಿಸಿಕೊಂಡು ಆ ಕೃತಿಯನ್ನು ಕೊಂಡುಕೊಳ್ಳಬೇಕು ಎನ್ನುವಷ್ಟರಲ್ಲಿ ಚಳಿಗಾಲದ ಚಳಿಯಿಂದ ರಕ್ಷಿಸಿಕೊಳ್ಳಲು ಕಂಬಳಿಯ ಅಗತ್ಯ ಮನಗಂಡು ಕೃತಿಯನ್ನು ಓದುವ ಕನಸನ್ನು ಬಿಟ್ಟುಕೊಡುತ್ತಾನೆ. ಬಡತನವು ಎಳೆಯರ ಮನಸುಗಳ ಒಡಲಾಳದ ಕನಸುಗಳ ಬಲಿ ಕೇಳುವ ವೈರುಧ್ಯವನ್ನು ಎನ್.ಲಕ್ಷ್ಮೀನಾರಾಯಣ ಅವರು ಮನಮುಟ್ಟುವಂತೆ ಸಿನಿಮಾದಲ್ಲಿ ಬಿಂಬಿಸಿದ್ದರು.
ದಯಾನಂದ ಅವರು ಈ ಬರಹದ ಮೂಲಕ ಆತ್ಮಕಥನಕ್ಕೆ ಕಾವ್ಯಾತ್ಮಕ ಪ್ರತಿಮೆಯ ಆಯಾಮವನ್ನು ಒದಗಿಸಿಕೊಟ್ಟಿದ್ದಾರೆ. ಇದನ್ನು ಶೀರ್ಷಿಕೆಯೇ ಧ್ವನಿಸುತ್ತದೆ. ಮತ್ತೊಂದು ಅಧ್ಯಾಯದಲ್ಲಿ ಇದೇ ಬರಹದ ಧ್ವನಿ ದಾರ್ಶನಿಕ ಪ್ರತಿಪಾದನೆಯ ಎತ್ತರ ಪಡೆದುಕೊಳ್ಳುತ್ತದೆ. ಆಡಿ-ಕೂಡಿ ಬಾಳುವ ನಮ್ಮತನವು ಬಡತನದ ನಿವಾರಣೆಗಾಗಿಯೋ, ಸಂಪತ್ತಿನ ಆಸೆಗಾಗಿಯೋ ಬಲಿಯಾಗುತ್ತಿರುವುದಂತೂ ಕಟು ಸತ್ಯ ಎಂಬ ಅವರ ವ್ಯಾಖ್ಯಾನವು ವರ್ತಮಾನದ ಬದುಕನ್ನು ವಿಭಿನ್ನವಾಗಿ ಅರ್ಥೈಸಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಪುರಾಣ ಮತ್ತು ಇತಿಹಾಸದ ಕುರಿತ ಹೊಸದಾದ ವಿಚಾರ ಲಹರಿಯನ್ನೊಳಗೊಂಡ ಬರಹಗಳು ನಮ್ಮನ್ನು ಹೊಸ ರೀತಿಯಲ್ಲಿ ಆಲೋಚಿಸುವಂತೆ ನೆರವಾಗುತ್ತವೆ. ಪುರಾಣಗಳ ಕಾಲ್ಪನಿಕತೆಯೊಳಗೇ ಇರುವ ವಾಸ್ತವವಾದಿ ನೆಲೆಗಳನ್ನು ಶೋಧಿಸುತ್ತವೆ. ಇಲ್ಲದ ಇತಿಹಾಸವನ್ನು ಸೃಷ್ಟಿಸುವ ವರ್ತಮಾನದ ವಿಚಿತ್ರ ಜಾಯಮಾನವನ್ನು ನಿರಾಕರಿಸಿ ಇಸಿಹಾಸವನ್ನು ನೋಡುವ ಬಗೆ ಹೇಗೆಂಬುದನ್ನು ತಿಳಿಸಿಕೊಡುತ್ತವೆ.
ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಅವುಗಳಿಗೆ ಅನುಗುಣವಾಗಿ ಆಡಳಿತಾತ್ಮಕ ಮಾದರಿಗಳನ್ನು ಮರುರೂಪಿಸಿದ ಪ್ರಯೋಗಶೀಲತೆಯ ಸಾಧ್ಯತೆಯನ್ನು ಈ ಕೃತಿ ಅಂತಃಕರಣದ ಭಾಷೆಯಲ್ಲಿ ಚಿತ್ರಿಸಿದೆ. ಇಡೀ ಕೃತಿಯು ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಆಡಳಿತಾತ್ಮಕ ಮಾದರಿಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶಿಯೂ ಹೌದು. ಕೇವಲ ಅಧಿಕಾರಿಗಳಿಗೆ ಮಾತ್ರವಲ್ಲ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಇದನ್ನೊಮ್ಮೆ ಓದಲೇಬೇಕು.
ಅಧಿಕಾರಿಗಳಾಗಿ ಸಾಧನೆಗೈಯ್ಯುವ ಕನಸುಳ್ಳ ಯುವ ಪೀಳಿಗೆ ಈ ಕೃತಿಯ ಪುಟಗಳೊಂದಿಗೆ ಸಂವಾದಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮದೇ ಪ್ರತಿಷ್ಠೆಯ ಗುಂಗಿನಲ್ಲೇ ರಾಜಕಾರಣದ ಮಹತ್ವಪೂರ್ಣ ಅವಧಿಯನ್ನು ಕಳೆಯುವ ಜನಪ್ರತಿನಿಧಿಗಳು ಅತ್ಯಂತ ಶ್ರದ್ಧೆಯಿಂದ ಓದಿಕೊಳ್ಳಬೇಕು. ಮಂತ್ರಿಗಳೆನ್ನಿಸಿಕೊಂಡವರು ‘ತಮ್ಮ ಬಿಡುವಿಲ್ಲದ ಕಾರ್ಯದೊತ್ತಡಗಳ!?’ ಮಧ್ಯೆ ಈ ಕೃತಿಗಾಗಿಯೇ ಸಮಯ ಮೀಸಲಿರಿಸಿ ದೂರದರ್ಶಿತ್ವದ ಗುಣದ ಪಾಠವನ್ನು ಕಲಿತುಕೊಳ್ಳಬೇಕು.
ಈ ಕೃತಿ ಇಂಗ್ಲಿಷ್‌ಗೆ ಅನುವಾದಿತಗೊಂಡು ರಾಷ್ಟ್ರ ದ ವಿವಿಧ ರಾಜ್ಯಗಳವರೂ ಓದುವಂತಾಗಬೇಕು. ಸಾಮಾಜಿಕ ಬದಲಾವಣೆಯ ಕನಸು ಸಂಪೂರ್ಣವಾಗಿ ಈಡೇರುವುದಕ್ಕೆ ಇಡೀ ಆಡಳಿತಾತ್ಮಕ ವ್ಯವಸ್ಥೆಯನ್ನು ಸಿದ್ಧಗೊಳಿಸುವುದಕ್ಕೆ ಈ ಓದು ಸಹಾಯಕವಾಗಬೇಕು. ಹಾಗಾದಾಗ ಮಾತ್ರ ಇಡೀ ಸರ್ಕಾರೀ ಆಡಳಿತ ವ್ಯವಸ್ಥೆಯೊಳಗೆ ಸಮಗ್ರ ಬದಲಾವಣೆ ತರಲು ಪೂರಕವಾಗುವಂಥ ಪಬ್ಲಿಕ್ ರಿಲೇಷನ್ಸ್ ಎಂಬ ಪ್ರತ್ಯೇಕ ಸ್ವಾಯತ್ತ ಸಂಸ್ಥೆ ಸ್ಥಾಪಿತವಾಗಬಹುದು.
ಅಂಥ ಸಂಸ್ಥೆಯ ಮುಂಚೂಣಿ ನಾಯಕರಾಗಿ ಕೆ.ಎ.ದಯಾನಂದ ಅವರಂಥ ಅಧಿಕಾರಿಗಳೇ ಕಂಗೊಳಿಸಬಹುದು. ಜನರನ್ನು ನಲುಗಿಸುತ್ತಿರುವ ಎಲ್ಲ ಬಗೆಯ ಸಂಕಟಗಳಿಂದ ಪಾರುಮಾಡುವ ಸರ್ವೋದಯದ ಸಾಧ್ಯತೆಗಳು ಸರ್ಕಾರಿ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳಬಹುದು. ಜನಕಲ್ಯಾಣದ ಆದರ್ಶ ರಾಷ್ಟ್ರವಾಗಿ ಭಾರತ ರೂಪುಗೊಂಡು ಜಗತ್ತನ್ನು ಸೆಳೆಯಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243