ಬಹಿರಂಗ
ನುಡಿದ ಸತ್ಯವನ್ನು ಬಂಧಿಸಲಾಗದು
- ಸುರೇಶ ಎನ್ ಶಿಕಾರಿಪುರ
ಹಂಪ ನಾಗರಾಜಯ್ಯನವರು ಕನ್ನಡದ ಮೇರು ವಿದ್ವಾಂಸರು. ಜೀವಮಾನವಿಡೀ ಅಧ್ಯಯನ ಸಂಶೋಧನೆಯಲ್ಲಿ ತೊಡಗಿಕೊಂಡು ಕನ್ನಡದ ವಿವೇಕವನ್ನು ವಿಸ್ತರಿಸಿದವರು. ನಾವೆಲ್ಲ ಅವರ ಕೃತಿಗಳನ್ನು ಓದಿಕೊಂಡು ಬೆಳೆದ ಹುಡುಗರು. ಇಂಥಹಾ ತಲ್ಪರ್ಷಿ ವಿದ್ವಾಂಸರು ಇಲ್ಲದೇ ಹೋಗಿದ್ದರೆ ಖಂಡಿತಾ ಕನ್ನಡದ ಕುರಿತು ನಮ್ಮಂತವರ ಜ್ಞಾನ ಇಸ್ಟು ವಿಸ್ತಾರಗೊಳ್ಳಲು ಸಾಧ್ಯವಿರಲೇ ಇಲ್ಲ.
ಹಳಗನ್ನಡವನ್ನು ಓದಲು ಬರದ ಕಲಿಯಲು ಆಗದ ಇಂದಿನ ಹೊಸತಲೆಮಾರು ಒಂದು ಕಡೆ ಭರವಸೆಯನ್ನು ಕಳೆಯುತ್ತಿದೆ ಆದರೆ ಹಂಪ ನಾಗರಾಜಯ್ಯ ರಂತಹ ಪಂಡಿತರು ಹಳಗನ್ನಡವನ್ನು ಹೊಸಗನ್ನಡಕ್ಕಿಂತ ಸೊಗಸಾಗಿ ಮಾತಾಡಬಲ್ಲರು. ಕಳೆದೆರೆಡು ಮೂರು ವರ್ಷದ ಹಿಂದೆ ಶ್ರವಣಬೆಳಗೊಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮೊತ್ತಮೊದಲ ಬಾರಿಗೆ ಹಳಗನ್ನಡ ಸಾಹಿತ್ಯ ಸಮ್ಮೇಳನವನ್ನು ಕರೆಯಿತು. ಅದರ ಅಧ್ಯಕ್ಷರು ಡಾ. ಷ. ಶೆಟ್ಟರರು. ಆ ವೇದಿಕೆಯ ಗೋಷ್ಠಿಯೊಂದರಲ್ಲಿ ಹಂಪನಾ ರವರು ಹಳಗನ್ನಡಲ್ಲಿ ಭಾಷಣ ಮಾಡಿದರು.
ನಾವೆಲ್ಲ ಮಂತ್ರಮುಗ್ಧರಾಗಿ ಕುಳಿತು ಆಲಿಸಿದೆವು. ಜಿನಧರ್ಮದ ಕುರಿತ ಹಾಗೂ ಜೈನಕಾವ್ಯಗಳ ಕುರಿತ ಅವರ ಸಂಶೋಧನೆಗಳು ಕನ್ನಡದ ಯಾವತ್ತೂ ಮೌಲಿಕ ಬರೆಹಗಳು. ಭಾಷಾ ಶಾಸ್ತ್ರಜ್ಞರಾಗಿ ಅವರು ಅತಿಮುಖ್ಯರು. ಅದಕ್ಕೆಂತಲೇ ಅವರಿಗೆ ‘ನಾಡೋಜ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ದೇಶ ಹೇಗಿರಬೇಕು ಈ ದೇಶವನ್ನು ಆಳುವವರು ಹೇಗಿರಬೇಕು ಹೇಗಿರಬಾರದು ಎಂಬುದನ್ನು ಅವರು ಸ್ಪಷ್ಟವಾಗಿ ವಿಮರ್ಶಿಸಿ ಹೇಳಬಲ್ಲರು. ಹಾಗೆ ಹೇಳುವ ಧೈರ್ಯ ಮತ್ತು ಬದ್ಧತೆ ಅವರಿಗೆ ಅವರ ಅಗಾಧವಾದ ಓದಿನಿಂದಲೇ ಬಂದಿರುತ್ತದೆ.
ನಿರಂತರ ಅಧ್ಯಯನದಲ್ಲಿ ತೊಡಗಿದಾಗ ಇತಿಹಾಸದ ಕಾಲಘಟ್ಟಗಳಲ್ಲಿ ಬಂದುಹೋದ ಅನೇಕ ಪ್ರಭುತ್ವಗಳ ಹಲವಾರು ಗುಣಾವಗುಣಗಳು ನೀತಿ ನಡೆಗಳು ಹೇಗಿದ್ದವೆಂಬ ಒಂದು ರಾಜಕೀಯ ತಿಳುವಳಿಕೆಯೂ ಅದರಿಂದಲೇ ಬಂದಿರುತ್ತದೆ. ಹಾಗೆ ನೋಡಿದರೆ ಯಾವುದೇ ಸಾಹಿತ್ಯದ ಅಧ್ಯಯನ ಏಕಕಾಲಕ್ಕೆ ಅದು ರಾಜಕೀಯ ಅಧ್ಯಯನವೂ ಆಗಿರುತ್ತದೆ. ಹಾಗಿದ್ದಮೇಲೆ ಸಂಶೋಧಕನೊಬ್ಬ ತನ್ನ ಸಮಕಾಲೀನ ರಾಜಕೀಯ ಸನ್ನಿವೇಷಗಳಿಗೆ ಪ್ರತಿಕ್ರಿಯಿಸಿಯೇ ಪ್ರತಿಕ್ರಿಯಿಸುತ್ತಾನೆ.
ರಾಜಪ್ರಭುತ್ವವೇ ಮೆರೆಯುತ್ತಿದ್ದ ಕಾಲದಲ್ಲಿ ಆದಿ ಕವಿ ಪಂಪ ತನ್ನ ಆಶ್ರಯದಾತ ದೊರೆ ಅರಿಕೇಸರಿಯನ್ನು ಕುರಿತೇ ಮಾರ್ಮಿಕವಾಗಿ ‘ಓಲಯಿಸಿ ಬಾಳ್ವುದು ಕಡುಕಷ್ಟಂ ಇಳಾದಿನಾಥರಂ’ ಎಂದುಬಿಟ್ಟಿದ್ದಾನೆ. ಬಸವಣ್ಣ ತಾನು ‘ಬಿಜ್ಜಳನಿಗೆ ಅಂಜೆನು’ ಎಂದು ನೇರವಾಗೇ ಹೇಳುತ್ತಾನೆ. ಇದೆಲ್ಲಾ ನಿಜವಾದ ಜನಪರ ಕಾಳಜಿ ತುಡಿತಗಳುಳ್ಳ ಮನುಷ್ಯನೊಬ್ಬ ಪ್ರಭುತ್ವದ ದಬ್ಬಾಳಿಕೆಗಳನ್ನು ಕಣ್ಣಾರೆ ಕಾಣುತ್ತಾ ಆತ್ಮಸಾಕ್ಷಿಯನ್ನು ಹೂತಿಟ್ಟುಕೊಂಡು ಸುಮ್ಮನೆ ಕೂರಲಾರ ಎಂಬುದಕ್ಕೆ ಸಾಕ್ಷಿ.
ಗದುಗಿನ ನಾರಣಪ್ಪ ಯಾವ ರಾಜನ ಆಶ್ರಯದಲ್ಲಿ ಇರದಿದ್ದರೂ ತಾನು ಬದುಕಿದ್ದ ಕಾಲದ ರಾಜರನ್ನೇ ಕುರಿತು “ಅರಸು ರಾಕ್ಷಸ ಮಂತ್ರಿ ಯೆಂಬುವ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ ಬಡವರ ಬಿನ್ನಪವನಿನ್ನಾರು ಕೇಳುವರು? ಎಂದು ಯಾವ ಭೀತಿಯೂ ಇಲ್ಲದೆ ಕುಟುಕಿದ್ದಾನೆ. ಮತ್ತೋರ್ವ ಕವಿ ತನ್ನ ದೊರೆ ರಾಷ್ಟ್ರಕೂಟ ಇಂದ್ರರಾಜನನ್ನು ಅಭಿಮಾನದಿಂದ ನೆನೆಯುತ್ತಾ ತನ್ನ ಕಾಲದ ದುರ್ಗುಣಿ ರಾಜರುಗಳನ್ನು ಅತ್ಯಂತ ಕಟುವಾದ ಭಾಷೆಯಲ್ಲಿ ಕುಟುಕುತ್ತಾನೆ. ಈಗಡಿನ ರಾಜರಿಗೆ ಸುಳ್ಳು ಹೇಳುವುದೇ ಕೆಲಸ, ಕೊಟ್ಟು ಆಡಿಕೊಳ್ಳುವ ಬುದ್ಧಿ, ಪರನಾರಿಯರನ್ನು ಪಡೆಯುವ ದುರಾಸೆಯ ತಂತ್ರ ಇವರನ್ನೆಲ್ಲಾ ಇಂದ್ರರಾಜ (ರಾಷ್ಟ್ರಕೂಟ)ನಲ್ಲಿ ಹೇಗೆ ಹೋಲಿಸುವುದು ಎನ್ನುತ್ತಾನೆ.
ಎಸ್ ಎಲ್ ಭೈರಪ್ಪ ದೊಡ್ಡರಂಗೇಗೌಡರಂತಹಾ ಪ್ರಭುತ್ವದ ಬಾಲಬಡುಕರು ಹೊಗಳು ಭಟ್ಟರು ಆಗಲೂ ಇದ್ದೇ ಇದ್ದರು. ಇದನ್ನೆಲ್ಲಾ ನಾನೇಕೆ ಹೇಳಿದೆನೆಂದರೆ ಪ್ರಭುತ್ವ ತನ್ನ ಹೊಗಳುವವರ ರಕ್ಷಕ ಮತ್ತು ಪ್ರಶ್ನಿಸುವವರ ಸತ್ಯ ಹೇಳುವವರ ಭಕ್ಷಕ ಮತ್ತು ಬಕ. ತನ್ನದನ್ನು ಒಪ್ಪುವವರನ್ನು ಅದು ಅನೈತಿ ಮಾರ್ಗದಲ್ಲಾದರೂ ಮಾನಸಮ್ಮಾನಗಳನ್ನು ಮಾಡಿ ಮೆರೆಸುತ್ತದೆ ಪೋಷಿಸುತ್ತದೆ. ತನ್ನ ಪ್ರಶ್ನಿಸಿದ ಕೂಡಲೇ ದಮನಕ್ಕೆ ನಿಲ್ಲುತ್ತದೆ.
ಸಾಕ್ರಟೀಸ್ ಕೆಪ್ಲರ್ ಗೆಲಿಲಿಯೋ ಡಾರ್ವಿನ್ ಯಾರು ಪ್ರಭುತ್ವದ ಕೆಂಗಣ್ಣಿಗೆ ಉಪಟಳಕ್ಕೆ ಗುರಿಯಾಗಿಲ್ಲ ಹೇಳಿ? ಹಂಪನಾ ಅವರೇ ಮೊದಲೇನಲ್ಲವಾದರೂ ಇಂದು ಕುಸಿದು ಬೀಳುತ್ತಿರುವ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಸೌಹಾರ್ದತೆ, ಸಹಿಷ್ಣುತೆ ಮರೀಚಿಕೆಗಳಾಗುತ್ತಿರುವ ಈ ವಿಷಮ ಕಾಲಘಟ್ಟದಲ್ಲಿ ಆಡುವ ಮಾತುಗಳು ಒಂದಷ್ಟು ಪ್ರಜಾಪ್ರಭುತ್ವಕ್ಕೆ ಬಲ ತುಂಬುತ್ತವೆ. ಆದರೆ ಅದನ್ನು ಆರೋಗ್ಯಕರ ವಿಷಯವಾಗಿ ತೆಗೆದುಕೊಳ್ಳಬೇಕಾದ ಸ್ಥಿತಿ ಇಂದಿನ ಮತೀಯ ದ್ವೇಷದ ರಾಜಕಾರಣದಲ್ಲಿ ಕಿಂಚಿತ್ತೂ ಉಳಿದಿಲ್ಲ.
ಅಸಹನೆಯ ಮಟ್ಟ ಮೇರೆ ಮೀರಿ ಸಂಶೋಧಕರನ್ನು ವಿಚಾರವಾದಿಗಳನ್ನು ಒಟ್ಟಾರೆಯಾಗಿ ಪ್ರಗತಿಪರರು ಜನಮುಖಿಗಳು ಎನ್ನಿಸಿಕೊಳ್ಳುವ ಯಾರೇ ವ್ಯಕ್ತಿಗಳನ್ನು ಕೊಲ್ಲುವುದು ಸುಳ್ಳು ಆರೋಪ ಹೊರಿಸಿ ಜೈಲಿಗೆ ತಳ್ಳುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ದಬ್ಬಾಳಿಕೆಗಳನ್ನು ನೆಡೆಸುವುದು ಇವೇ ಮೊದಲಾದವನ್ನು ಪ್ರಭುತ್ವ ನಿರ್ಲಜ್ಜೆಯಿಂದ ಮಾಡುತ್ತದೆ. ಫ್ಯಾಸಿಜಂನ ಗುಣಲಕ್ಷಣವೇ ಇದು. ಅದರ ಒಂದು ಭಾಗವೇ ಪೋಲೀಸರು ಹಂಪನಾ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿ ತಪ್ಪೊಪ್ಪಿಗೆ ಬರೆಸಿಕೊಂಡಿರುವುದು.
ಇದು ಅತ್ಯಂತ ಹೇಯ ಕೃತ್ಯ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಗಲುಗೊಲೆ. ವೇದಿಕೆಯ ಮೇಲೆ ಕೈ ಕಡಿಯುತ್ತೇವೆ, ನಾಲಗೆ ಕೊಯ್ಯುತ್ತೇವೆ, ಬಾಲ ಕತ್ತರಿಸುತ್ತೇವೆ, ಬೂಟು ನೆಕ್ಕುವವರು, ಯಾರಿಗೆ ಹುಟ್ಟಿದವರು?, ಅಪ್ಪನಿಗೆ ಹುಟ್ಟಿದ್ದಾರಾ? ಇಂತವು ಮಾತ್ರವಲ್ಲ ಇದಕ್ಕಿಂತಲೂ ಅಸಹ್ಯವೂ ಭಯಾನಕವೂ ಆದ ರೀತಿಯಲ್ಲಿ ಮಾತಾಡುತ್ತಾ ಗೂಂಡಾಗಿರಿಯನ್ನು ಸಾರ್ವಜನಿಕವಾಗಿಯೇ ಮಾಡುವವರನ್ನು ಮಾತ್ರ ಬಂಧಿಸುವುದಿಲ್ಲ ಕೇಸು ದಾಖಲು ಮಾಡುವುದಿಲ್ಲ ಆದರೆ ತಮ್ಮ ಪ್ರಮಾದಗಳನ್ನ ಪ್ರಶ್ನಿಸುವವರನ್ನ ಮಾತ್ರ ದಮನ ಮಾಡಲು ಕಾರ್ಯಪ್ರವೃತ್ತವಾಗುತ್ತದೆ.
ನಾನಂತೂ ಈ ಹೊತ್ತು ಹಂಪ ನಾಗರಾಜಯ್ಯನವರ ಪರವಾಗಿ ನಿಲ್ಲುತ್ತೇನೆ. ಹಂಪ ನಾಗರಾಜಯ್ಯ ಮೋದಿಯವರನ್ನು ಟೀಕಿಸಿದ್ದರೆ ಅದು ಸಮಯೋಚಿತವಾಗಿದೆ ನ್ಯಾಯೋಚಿತವಾಗಿದೆ. ಹಂಪನಾ ಅವರ ಹೇಳಿಕೆ ವಯಕ್ತಿಕವಲ್ಲ ಅವರು ಹೇಳಿಕೊಳ್ಳಲಾಗದ ಸಾಮಾನ್ಯರನ್ನು ಪ್ರತಿನಿಧಿಸಿ ಅಂತವರ ದನಿಯಾಗಿ ಮಾತನಾಡಿದ್ದಾರೆ. ಪ್ರಧಾನಿ ಈಗ ಆ ಸ್ಥಿತಿಯಲ್ಲಿದ್ದಾರೆ.
ಅವರ ನಡವಳಿಕೆ ಮಾತು ಆಡಳಿತ ವೈಖರಿ ದೇಶವನ್ನು ಕಡೆಗಣಿಸಿ ಕೆಲವೇ ಕೆಲವು ಜನರ ಹಿತಕ್ಕಾಗಿ ಕೆಲಸ ಮಾಡುತ್ತಾ ಪ್ರಜಾಪೀಡಕನಾಗಿ ವಿಲಾಸಿಯಾಗಿ ಬದುಕುವ ಚರಿತ್ರೆಯ ಯಾವ ರಾಜನಿಗೂ ಕಡಿಮೆ ಇಲ್ಲ. ಈಗಿನ ಭಕ್ತರು ವಂದಿಮಾಗದರು ಲಾಭಕೋರರು ಪ್ರಧಾನಿಯವರನ್ನು ಹೊಗಳಿ ಅಟ್ಟಕ್ಕೇರಿಸಿರಬಹುದು ಆದರೆ ಚರಿತ್ರೆಯೆಂಬುದೊಂದು ಇರುತ್ತದಲ್ಲ ಅದು ಕ್ಷಮಿಸುವುದಿಲ್ಲ. ಇತಿಹಾಸದ ಪುಟಗಳಲ್ಲಿ ಒಳ್ಳೆಯವರು ಕೆಟ್ಟವರು ಎಲ್ಲರಿಗೂ ಅವರವರದೇ ಆದ ಸ್ಥಾನಮಾನಗಳು ಪ್ರಾಪ್ತವಾಗುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243