ನೆಲದನಿ

‘ಹರಿಹರೇಶ್ವರ ದೇವಾಲಯ’ದ ಬಗ್ಗೆ ನಿಮಗಿಷ್ಟು ತಿಳಿದಿರಲಿ..!

Published

on

ದೇವಾಲಯ ನಗರದ ಪಶ್ಚಿಮ ಭಾಗದಲ್ಲಿದ್ದು, ತುಂಗಭದ್ರಾ ನದಿಯ ಬಲದಂಡೆಯ ಮೇಲಿದೆ. ಈ ದೇವಾಲಯ ನಗರದ ಪಶ್ಚಿಮ ಭಾಗದಲ್ಲಿದ್ದು ತುಂಗಭದ್ರಾ ನದಿಯ ಬಲದಂಡೆಯ ಮೇಲಿದೆ. ಹರಿಹರೇಶ್ವರ ದೇವಾಲಯವು ವಿಶಾಲವಾದ ತಳವಿನ್ಯಾಸದಲ್ಲಿ ರಚನೆಗೊಂಡಿದ್ದು ಗರ್ಭಗೃಹ, ಅದೇ ಅಳತೆಯ ಶುಕನಾಸ, ನವರಂಗ ಮತ್ತು ವಿಶಾಲವಾದ ಮಹಾಮಂಟಪವನ್ನು ಹೊಂದಿದೆ. ಚೌಕಾಕಾರದ ಗರ್ಭಗೃಹದಲ್ಲಿ ಹರಿಹರನ ಸ್ಥಾನಿಕ ಶಿಲ್ಪವಿದೆ. ವಿತಾನದಲ್ಲಿ ಪದ್ಮದ ಅಲಂಕರಣವಿದೆ.

ಗರ್ಭಗೃಹದ ಪ್ರವೇಶದ್ವಾರವು ಹೆಚ್ಚಿನ ಅಲಂಕರಣೆಗಳನ್ನು ಹೊಂದಿಲ್ಲವಾದರೂ ಪೇದ್ಯದಲ್ಲಿ ಕುಂಭದ ಅಲಂಕರಣವಿದೆ. ಇದಕ್ಕೆ ಹೊಂದಿಕೊಂಡಂತೆ ಗರ್ಭಗೃಹದಷ್ಟೇ ವಿಸ್ತೀರ್ಣದ ಶುಕನಾಸವಿದೆ. ಇದರಲ್ಲಿ ಯಾವುದೇ ಮೂರ್ತಿಗಳಿಲ್ಲ. ಆದರೆ ವಿತಾನದಲ್ಲಿ ಪದ್ಮದ ಅಲಂಕರಣವಿದೆ. ಪ್ರವೇಶದ್ವಾರದ ಬಲ ಪೇದ್ಯದಲ್ಲಿ ಇಬ್ಬರು ಶೈವ ದ್ವಾರಪಾಲಕರೂ, ಹಾಗೂ ಎಡ ಪೇದ್ಯದಲ್ಲಿ ಇಬ್ಬರು ವೈಷ್ಣವ ದ್ವಾರಪಾಲಕರಿರುವರು. ಪ್ರವೇಶ ದ್ವಾರವು ಪುಷ್ಟ, ಲತಾ, ಸ್ತಂಭ ಇವುಗಳಿಂದ ಅಲಂಕೃತಗೊಂಡಿದೆ. ಸ್ತಂಭಶಾಖೆಯ ಇಕ್ಕೆಲಗಳಲ್ಲಿ ಜಾಲಾಂಧ್ರಗಳಿವೆ. ಈ ಜಲಾಂಧ್ರಗಳನ್ನು ಪುಷ್ಟಗಳಿಂದ ಅಲಂಕರಿಸಲಾಗಿದೆ. ಪುಷ್ಟ ಹಾಗೂ ಲತಾ ಶಾಖೆಗಳು ಲಲಾಟದವರೆಗೂ ಮುಂದುವರೆದಿವೆ. ಲಲಾಟದಲ್ಲಿ ಗಜಲಕ್ಷ್ಮಿಯ ಶಿಲ್ಪವಿದೆ.

ದೇವಾಲಯದ ನವರಂಗವು ತುಂಬ ವಿಶೇಷತೆಯಿಂದ ಕೂಡಿದೆ. ಇದು ದಕ್ಷಿಣ, ಉತ್ತರ ಮತ್ತು ಪೂರ್ವದಿಂದ ಪ್ರವೇಶ ದ್ವಾರಗಳನ್ನು ಹೊಂದಿದೆ. ನವರಂಗದ ಮಧ್ಯಭಾಗದಲ್ಲಿ ತಿರುಗಣಿಯಂತ್ರದ ಸಹಾಯದಿಂದ ನಿರ್ಮಿಸಿರುವ ಬಳಪದಕಲ್ಲಿನ ಘಂಟಾಕೃತಿಯ ನಾಲ್ಕು ಕಂಬಗಳಿವೆ. ಪೀಠದ ಮೇಲೆ ನಿಂತಿರುವ ಬಳಪದಕಲ್ಲಿನ ಘಂಟಾಕೃತಿಯ ನಾಲ್ಕು ಕಂಬಗಳಿವೆ. ಪೀಠದ ಮೇಲೆ ನಿಂತಿರುವ ಕಂಬಗಳ ಕೆಳಬಾಗ ಹನ್ನೊಂದು ವೃತ್ತಗಳುಳ್ಳ ದಿಂಡು, ಮುಗುಚಿದ ಬೋಗುಣಿಯಂತೆ ಮಧ್ಯ ಉಬ್ಬಿದ ವೃತ್ತಕಾರ ಭಾಗ ಹಾಗೂ ಬೋಧಿಗೆಯನ್ನು ಹೊಂದಿದೆ. ಬೋಧಿಗೆಗಳು ಪುಷ್ಟದಳಗಳಿಂದ ಅಲಂಕೃತಗೊಂಡಿದ್ದರೆ, ಮಧ್ಯದ ಮುಗುಚಿದ ಭೋಗುಣಿಯಂತಹ ಭಾಗವು ಪತ್ರ ಹಾಗೂ ಮಾಲಾಲಂಕಾರದಿಂದ ಕೂಡಿವೆ.

ಭುವನೇಶ್ವರಿಯಲ್ಲಿ ಅಷ್ಟದಿಕ್ಪಾಲರನ್ನು ವಾಹನ ಸಮೇತರಾಗಿ ಅತ್ಯಂತ ಸುಂದರವಾಗಿ ನಿರೂಪಿಸಲಾಗಿದೆ. ಉತ್ತರದಿಂದ ಕ್ರಮವಾಗಿ ಕುಬೇರ, ಈಶಾನ, ಇಂದ್ರ, ಅಗ್ನಿ, ಯಮ, ನಿಋತಿ, ವರುಣ ಮತ್ತು ವಾಯು ಇರುವರು. ನವರಂಗದ ಉಳಿದ ವಿತಾನಗಳಲ್ಲಿ ಕಮಲದ ಮೊಗ್ಗುಗಳನ್ನು ಕಾಣಬಹುದು. ಉತ್ತರ ಪ್ರವೇಶದ್ವಾರವು ಲತಾ, ಪುಷ್ಟ, ಹಾಗೂ ಸ್ತಂಭಶಾಖೆಗಳಿಂದ ಅಲಂಕೃತಗೊಂಡಿದ್ದು ದ್ವಾರಪಾಲಕರಿದ್ದಾರೆ. ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ, ಈ ಪ್ರವೆಶದ್ವಾರಕ್ಕೆ ಹೊಂದಿಕೊಂಡಿರುವ ಕಾಲ ಭೈರವನ ದೇವಾಲಯ ವಿದೆ. ಕಾಲಭೈರವ ದೇವಾಲಯದ ಅಧಿಷ್ಠಾನ, ಭಿತ್ತಿ, ಹಾರಗಳೆಲ್ಲವೂ ಹರಿಹರೇಶ್ವರ ದೇವಾಲಯಕ್ಕೆ ಪೂರಕವಾಗಿಯೇ ರಚನೆಗೊಂಡಿವೆ. ನವರಂಗದ ದಕ್ಷಿಣ ದ್ವಾರವು ಉತ್ತರ ದ್ವಾರದ ಅಲಂಕರಣ ರೀತಿಯಲ್ಲಿಯೇ ಇದೆ. ನವರಂಗದ ಪಶ್ಚಿಮ ಭಾಗದಲ್ಲಿ ಅಂದರೆ ಅಂತರಾಳದ ಇಕ್ಕೆಲಗಳಲ್ಲಿ ಎರಡು ದೇವಕೋಷ್ಟಗಳಿವೆ.

ನವರಂಗದ ಮುಖ್ಯ (ಪೂರ್ವ) ಪ್ರವೇಶದ್ವಾರವು ಹಲವಾರು ಶಾಖೆಗಳಿಂದ ಅಲಂಕೃತಗೊಂಡಿದೆ. ರತ್ನ, ಪುಷ್ಟ, ಸ್ತಂಭ ಯಾಳಶಾಖೆಗಳಿವೆ. ಮೊದಲ ಮೂರು ಶಾಖೆಗಳು ಲಲಾಟದವರೆಗೂ ಮುಂದುವರೆದಿವೆ. ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪಿವಿದೆ. ಚೌಕಾಕಾರದ ಈ ಪಟ್ಟಿಕೆಯ ಇಕ್ಕೆಲಗಳಲ್ಲಿ ಇಳಿ ಬಿದ್ದ ಕಮಲದ ಮೊಗ್ಗಿನ ಸುಂದರ ಅಲಂಕಾರವಿದೆ. ಉತ್ತರಾಂಗವನ್ನು ಪುಷ್ಟ, ಲತೆ ಹಾಗೂ ಸ್ತಂಭಗಳಿಂದ ಅಲಂಕರಿಸಲಾಗಿದೆ. ಮಧ್ಯದಲ್ಲಿ ಹರಿಹರೇಶ್ವರ ಹಾಗು ಇಕ್ಕೆಲಗಳಲ್ಲಿ ಕೆಲವು ಧ್ಯಾನಾಸಕ್ತ ಮೂರ್ತಿಗಳನ್ನು ನಿರೂಪಿಸಿದ್ದು ಇವುಗಳನ್ನು ಕೀರ್ತಿಮುಖಗಳಿಂದ ಸಿಂಗರಿಸಲಾಗಿದೆ. ಪ್ರಸ್ತುತ ದ್ವಾರಬಂಧದ ದ್ವಾರಪಾಲಕರ ಕೆತ್ತನೆಯಲ್ಲಿಯೂ ಸಹ ಶೈವ ಮತ್ತು ವೈಷ್ಣವ ಸಂವೇದನೆಗಳಿಗೆ ಪೂರಕವಾಗಿ ದ್ವಾರಬಂಧದ ಬಲಭಾಗದಲ್ಲಿ ದ್ವಾರಪಾಲಕನ ಪಕ್ಕದಲ್ಲಿ ಶಿವನ ಶಿಲ್ಪವೂ ಎಡಭಾಗದ ದ್ವಾರಪಾಲಕನ ಪಕ್ಕದಲ್ಲಿ ಕೇಶವನ ಶಿಲ್ಪವೂ ಕಂಡುಬರುತ್ತವೆ.

ನವರಂಗಕ್ಕೆ ಹೊಂದಿಕೊಂಡಂತೆ ಪೂರ್ವದಿಕ್ಕಿನಲ್ಲಿ ವಿಶಾಲವಾದ ಮಹಾಮಂಟಪವಿದೆ. ಮಹಾಮಂಟಪಕ್ಕೆ ಪೂರ್ವ, ಉತ್ತರ ಮತ್ತು ದಕ್ಷಿಣದಲ್ಲಿ ಪ್ರವೇಶದ್ವಾರಗಳಿವೆ. ಮಹಾಮಂಟಪದಲ್ಲಿ ಒಟ್ಟು ಅರವತ್ತೆಂಟು ಸುಂದರವಾದ ವಿಭಿನ್ನ ಶೈಲಿಯ ಕಂಬಗಳಿವೆ. ಕಂಬಗಳ ಪೀಠದ ಮೇಲಿನ ಭಾಗ ಚೌಕಾಕಾರವಾಗಿದ್ದು ಅದರ ಮೇಲಿನ ಕಂಬಗಳ ರಚನೆ ನವರಂಗದ ಕಂಬಗಳಂತೆಯೇ ಕಂಡುಬರುತ್ತದೆ. ಬೋಧಿಗೆಯು ಪುಷ್ಟಗಳಿಂದ ಅಲಂಕೃತಗೊಂಡಿದೆ. ಮಹಾಮಂಟಪದ ಮಧ್ಯದ ಭುವನೇಶ್ವರಿಯಲ್ಲಿ ಅರಳಿ ಮುಗುಚಿದ ಕಮಲದ ಹಾಗೂ ಮಧ್ಯದಲ್ಲಿ ಕಮಲದ ಮೊಗಿನ ಅಲಂಕಾರವಿದೆ. ಸುತ್ತಲೂ ಚಿಕ್ಕ ಚಿಕ್ಕ ಪುಷ್ಟಗಳಿವೆ. ಮಹಾಮಂಟಪದ ಸುತ್ತಲೂ ಹೊರಚಾಚಿದ ಕಪೋತದ ಒಳಬಾಗದಲ್ಲಿ ಪುಷ್ಟ, ಹುಲಿಯನ್ನು ಕೊಲ್ಲುತ್ತಿರುವ ಸಳ, ಆನೆ, ಸಿಂಹ,ಹಾಗೂ ಕೀರ್ತಿಮುಖಗಳನ್ನು ನಿರೂಪಿಸಲಾಗಿದೆ.

ಪಾಶ್ರ್ವನೋಟದಲ್ಲಿ ಹರಿಹರೇಶ್ವರ ದೇವಾಲಯವು ಅಧಿಷ್ಠಾನದ ಮೇಲೆ ನಿರ್ಮಾಣಗೊಂಡಿದೆ. ಅಧಿಷ್ಠಾನವು ಉಪಾನ, ಜಗತಿ, ಪದ್ಮ, ಕಪೋತ, ದಂತ ಪಂಕ್ತಿಗಳನ್ನು ಹೊಂದಿದೆ. ಅಧಿಷ್ಠಾನದ ಕೆಲಪಟ್ಟಿ ಅಂದರೆ ಉಪಾನದಲ್ಲಿ ಲತಾಸುರುಳಿವೆ ಭಿತ್ತಿಯು ಅರೆಗಂಬಗಳಿಂದ ಕೂಡಿದ್ದು ಮೇಲ್ಬಾಗದಲ್ಲಿ ಶಿಖರದ ಮಾದರಿಯನ್ನು ಕೆತ್ತಲಾಗಿದೆ. ಇವುಗಳನ್ನು ಭಿತ್ತಿಯಲ್ಲಿಯೇ ಗೂಡಿನಂತೆ ರಚಿಸಿದಂತೆ ಕಂಡುಬರುತ್ತದೆ. ಎರಡೂ ಪಾಶ್ರ್ವಗಳಲ್ಲಿ ಕೋಷ್ಟಪಂಜರಗಳಿವೆ. ಈ ಎಲ್ಲ ಕೋಷ್ಟಳಿಗೆ ಒಂದೇ ಎತ್ತರದಲ್ಲಿ ಕಪೋತ ಪಟ್ಟಿಕೆಗಳಿವೆ. ಮೇಲ್ಭಾಗದಲ್ಲಿ ಶಿಖರಗಳಿವೆ. ದೇವಾಲಯದ ಭಿತ್ತಿಯ ಕೊನೆಸ್ತರದಲ್ಲಿ ಕಪೋತಭಾಗವು ಹೊರಚಾಚಿ ಕೆಳಕ್ಕೆ ಬಾಗಿದ ರೀತಿಯಲ್ಲಿದೆ. ಇದು ಮಹಾಮಂಟಪದ ಸುತ್ತಲೂ ಹೆಚ್ಚು ಹೊರಬಾಗಿದ್ದು ಕಪೋತದ ಮೆಲ್ಭಾಗದಲ್ಲಿ ಕೂಟ, ಪಂಜರ ಹಾಗೂ ಕೀರ್ತಿ ಮುಖಗಳನ್ನು ನಿರೂಪಿಸಲಾಗಿದೆ. ಈ ದೇವಾಲಯದ ಗರ್ಭಗೃಹದ ಮೇಲಿನ ಶಿಖರವು ದ್ರಾವಿಡಶೈಲಿಯ ತ್ರಿತಲದಲ್ಲಿದೆ. ಅಧಿಷ್ಠಾನದಲ್ಲಿರುವ ಅಲಂಕರಣೆಗಳು, ಭಿತ್ತಿಯಲ್ಲಿ ಬರುವ ಕೋಷ್ಟಪಂಜರಗಳು ಕಂಡುಬರುತ್ತವೆ. ಶುಕನಾಸಿಯಲ್ಲಿ ಈಗಿನ ಶಿಖರಕ್ಕೆ ಹೊಂದಿಕೊಂಡಂತೆ ಸಳನು ಹುಲಿಯನ್ನು ಕೊಲ್ಲುತ್ತಿರುವ ಶಿಲ್ಪವನ್ನು ಅಳವಡಿಸಿದ್ದಾರೆ.

ಪ್ರಸ್ತುತ ದೇವಾಲಯವು ವಿಶಾಲವಾದ ಪ್ರಾಕಾರವನ್ನು ಹೊಂದಿದ್ದು, ಮಹಾದ್ವಾರವೂ ಸಹ ಇದೆ. ಈದೇಗುಲದ ಸುತ್ತಲೂ ಕಿರು ದೇವಾಲಯಗಳು ಕಂಡುಬರುತ್ತವೆ. ಈ ದೇವಾಲಯದ ಉತ್ತರಕ್ಕೆ ಇದೇ ಸಂಕೀರ್ಣದಲ್ಲಿ ಲಕ್ಷ್ಮೀ ದೇವಾಲಯವಿದೆ. ಇದೊಂದು ಏಕಕೂಟ ದೇವಾಲಯವಾಗಿದ್ದು, ತಳವಿನ್ಯಾಸದಲ್ಲಿ ಗರ್ಭಗೃಹ, ಮತ್ತು ನೇರವಾಗಿ ಮಹಾ ಮಂಟಪವನ್ನು ಹೊಂದಿದ್ದು. ಮಹಾಮಂಟಪದಿಂದಲೇ ಗರ್ಭಗೃಹವನ್ನು ಪ್ರವೇಶಿಸಬಹುದಾಗಿದೆ. ಗರ್ಭಗೃಹವು ಚೌಕಾಕಾರವಾಗಿದ್ದು ಪಾಶ್ರ್ವನೋಟದಲ್ಲಿ ಅಧಿಷ್ಠಾನ ಮಾತ್ರ ಹರಿಹರೇಶ್ವರ ದೇವಾಲಯದಂತೆಯೇ ಕಂಡುಬರುತ್ತದೆ.

ಮಹಾಮಂಟಪವೂ ಸಹ ಸುತ್ತಲೂ ಕಕ್ಷಾಸನವನ್ನು ಹೊಂದಿದೆ. ಕಕ್ಷಾಸನದ ಹೊರಮೈ ಸ್ತಂಭ ಪಂಜರಗಳಿಂದ ಮತ್ತು ಪುಷ್ಟಗಳಿಂದ ಅಲಂಕೃತವಾಗಿದೆ. ಮಹಾಮಂಟಪದ ಮಧ್ಯದ ಕಂಬಗಳು ಮಾತ್ರ ವೃತ್ತಾಕಾರವಾಗಿದ್ದು ಉಳಿದೆಲ್ಲ ಕಂಬಗಳು ಅಷ್ಟಮುಖಗಳನ್ನು ಹೊಂದಿವೆ. ಇದೇ ಪ್ರಕಾರದಲ್ಲಿ ಪಾರ್ವತಿಯ ದೇವಾಲಯವು ಇದ್ದ ಬಗ್ಗೆ ಮಾಹಿತಿ ಇದ್ದರೂ ಅದು ಈಗ ಸಂಪೂರ್ಣವಾಗಿ ನಾಶವಾಗಿದೆ. ಬಹುಶಃ ಹರಿಹರರ ಪತ್ನಿಯರಾದ ಲಕ್ಷ್ಮೀ ಹಾಗೂ ಪಾರ್ವತಿಯರಿಗಾಗಿ ಈ ದೇವಾಲಯಗಳು ನಿರ್ಮಾಣವಾಗಿರಬಹುದೆಂದು ಲೂಹಿಸಬಹುದಾಗಿದೆ.

ಅಲ್ಲದೆ ಈ ದೇವಾಲಯದ ಮಹಾದ್ವಾರದ ಎರಡು ಪಾಶ್ರ್ವಗಳಲ್ಲಿ ದೀಪಸ್ತಂಬಗಳು ಕಂಡುಬರುತ್ತವೆ. ಈ ರೀತಿಯ ದೀಪಸ್ತಂಭಗಳು ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರಗಳಲ್ಲಿರುವ ದೇವಾಲಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ದೀಪಸ್ತಂಭಗಳು ಅಷ್ಟಮುಖಗಳನ್ನು ಹೊಂದಿದ್ದು, ವೃತ್ತಾಕಾರವಾಗಿವೆ. ಈ ಸ್ತಂಭದಲ್ಲಿ 25 ಹೊರಚಾಚಿದ ಎಣ್ಣೆದೀಪದ ಕುಳಿಗಳಿವೆ. ಇದೇ ರೀತಿಯ ದೀಪದ ಕಂಬಗಳನ್ನು ಬದಾಮಿಯ ಬನಶಂಕರಿ ದೇವಾಲಯದಲ್ಲಿ, ಸವದತ್ತಿ ತಾಲ್ಲೂಕಿನ ಎಲ್ಲಮ್ಮನ ಗುಡ್ಡದಲ್ಲಿ ಕಾಣಬಹುದಾಗಿದೆ. ಇವುಗಳನ್ನು ಮಹಾದ್ವಾರದ ಎರಡೂ ಒಳಪಾಶ್ರ್ವಗಳಲ್ಲಿ ನಿರ್ಮಿಸಿರುವುದು ಕಂಡುಬರುತ್ತದೆ.

ಈ ದೇವಾಲಯಕ್ಕೆ ಸಂಬಂಧಿಸಿದಂತೆ ಸುಮಾರು ಅರವತ್ತು ಶಾಸನಗಳು ದೊರೆಯುತ್ತವೆ. ಆದರೆ ಯಾವ ಶಾಸನವೂ ಮೂಲ ದೇವಾಲಯದ ನಿರ್ಮಾಣದ ಬಗ್ಗೆ ಬೆಳಕು ಚೆಲ್ಲುವುದಿಲ್ಲ. ಕ್ರಿ.ಶ.1110ರ ಉಚ್ಚಂಗಿ ಪಾಂಡ್ಯರ ಶಾಸನವು ಪಾಂಡ್ಯರ ದೊರೆಗಳಾದ ವೀರಪಾಂಡ್ಯ, ವಿಜಯಪಾಂಡ್ಯ ಮತ್ತು ಕಲಚೂರಿಗಳ ಬಿಜ್ಜಳ, ಹೊಯ್ಸಳ, ಯಾದವ ಮತ್ತು ವಿಜಯನಗರ ಅರಸರುಗಳು ಈ ದೇವಾಲಯದ ಉನ್ನತಿಗಾಗಿ ಹಲವಾರು ದಾನಗಳನ್ನು ನೀಡಿದ್ದಾರೆ.

ಆದರೆ ಹೊಯ್ಸಳರ ದೊರೆ ಎರಡನೇ ನರಸಿಂಹ ಮತ್ತು ಬಲ್ಲಾಳರ ಕಾಲದಲ್ಲಿ ಈ ಭಾಗದ ದಂಡನಾಯಕನಾಗಿದ್ದ ಪೊಲಾಳ್ವ ದಂಡನಾಯಕನು ಈ ಹಿಂದೆ ಅಂದರೆ ಕ್ರಿ.ಶ.1124ರಲ್ಲಿ ಪೆರ್ಮಾಡಿಯು ನಿರ್ಮಿಸಿದ್ದ ಈ ದೇವಾಲಯವನ್ನು ಸಂಪೂರ್ಣವಾಗಿ ಪುನರನಿರ್ಮಿಸಿ ದೇವಾಲಯದ ಮೇಲೆ ನೂರಾಹದಿನೈದು ಬಂಗಾರದ ಕಲಶಗಳನ್ನು ಪ್ರತಿಷ್ಟಾಪಿಸಿದನೆಂದು ತಿಳಿದುಬರುತ್ತದೆ. ಹೊಯ್ಸಳ ನರಸಿಂಹನು ಈ ದೇವಾಲಯಕ್ಕೆ ಹಲವಾರು ರೀತಿಯ ದಾನದತ್ತಿಗಳನ್ನು ನೀಡಿದ ವಿಷಯ ಶಾಸನೋಕ್ತವಾಗಿದೆ. ಮಹಾದ್ವಾರವನ್ನು ನಿರ್ಮಿಸಿ ಅದರ ಮೆಲೆ ಸುವರ್ಣ ಕಳಶಗಳನ್ನು ಇರಿಸಿದನೆಂದು ತಿಳಿದುಬರುತ್ತದೆ. ನಂತರದ ಕಾಲದಲ್ಲಿ ಸಾಕಷ್ಟು ಜೀರ್ಣೋದ್ಧಾರಗೊಂಡ ಈ ದೇವಾಲಯ ಪುನಃ ವಿಜಯನಗರದ ಅರಸರ ಕಾಲದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದೆ.

-ಹರೀಶ್. ಟಿ
ಸಂಶೋಧನಾ ವಿದ್ಯಾರ್ಥಿ
ಇತಿಹಾಸ ವಿಭಾಗ
ಗುಲ್ಬರ್ಗ ವಿಶ್ವವಿದ್ಯಾಲಯ
ಮೊಬೈಲ್ : 7090256234

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version