ದಿನದ ಸುದ್ದಿ
ಹೊಳಲ್ಕೆರೆ | ಎರಡು ವರ್ಷದ ಕಂದಮ್ಮನ ಹೊಡೆದು ಕೊಂದ ಮಂತ್ರವಾದಿ ; ಅಮಾನವೀಯ ಕೃತ್ಯ ಎಸಗಿದ ಪಾಪಿ..!
ಸುದ್ದಿದಿನ,ಹೊಳಲ್ಕೆರೆ: ಅಪ್ಪ, ಅಮ್ಮನ ಮಡಿಲಿನಲ್ಲಿ ಸುಖವಾಗಿದ್ದ ಎರಡು ವರ್ಷದ ಕಂದಮ್ಮ ಮಂತ್ರವಾದಿಯ ಅಮಾನವೀಯ ಕೃತ್ಯಕ್ಕೆ ಬಲಿಯಾಗಿದೆ.
ಎರಡು ವರ್ಷದ ಹೆಣ್ಣು ಮಗುವನ್ನು ಮಂತ್ರವಾದಿ ಕೊಲಿನಿಂದ ಹೊಡೆದು ಸಾಯಿಸಿದ್ದು, ಇಡೀ ಗ್ರಾಮಸ್ಥರೇ ಮಮ್ಮಲ ಮರುಗುವಂತೆ ಮಾಡಿದೆ.
ಹೊಳಲ್ಕೆರೆ ತಾಲೂಕಿನ ಅಜ್ಜಿಕ್ಯಾತನಹಳ್ಳಿ ಗ್ರಾಮ ಈ ಅಮಾನವೀಯ ಕೃತ್ಯಕ್ಕೆ ಸಾಕ್ಷಿಯಾಗಿದೆ. ರಾಕೇಶ್ (19) ಎಂಬ ಮಂತ್ರವಾದಿ ಕಂದಮ್ಮನ ಬಲಿಪಡೆದ ಪಾಪಿ ಮಂತ್ರವಾದಿ.
ಅಜ್ಜಿಕ್ಯಾತನಹಳ್ಳಿ ಗ್ರಾಮದ ಪ್ರವೀಣ್ ಹಾಗೂ ಬೇಬಿ ಎಂಬ ದಂಪತಿಗಳ ಎರಡು ವರ್ಷದ ಹೆಣ್ಣು ಮಗು ಪೂರ್ಣಿಕಾಗೆ ಯಾರೋ ಮಾಟ ಮಾಡಿಸಿದ್ದಾರೆ ಎಂಬ ಅನುಮಾನದಿಂದ ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ಪಾಪಿ ಮಂತ್ರವಾದಿ ರಾಕೇಶ್ ಮಗುವಿನಲ್ಲಿ ದೆವ್ವ ಸೇರಿಕೊಂಡಿದೆ. ದೆವ್ವ ಬಿಡಿಸುದಾಗಿ ಮಗುವಿನ ಪೋಷಕರನ್ನು ನಂಬಿಸಿದ್ದಾನೆ. ನಂತರ ಮಗುವಿಗೆ ಕೋಲಿನಿಂದ ಥಳಿಸಿದ್ದಾನೆ. ಆ ಹೊಡೆತಕ್ಕೆ ಮಗು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದೆ.
ಮಗುವಿನ ತಂದೆ, ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243