ದಿನದ ಸುದ್ದಿ

ಜನಸಾಮಾನ್ಯರ ಗಟ್ಟಿದನಿಯಾಗಿದ್ದ ದೊರೆಸ್ವಾಮಿ

Published

on

  • ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

ಶ್ರೀಯುತ ಹೆಚ್ ಎಸ್ ದೊರೆಸ್ವಾಮಿಯವರು ವಸಾಹತುಶಾಹಿ ಬ್ರಿಟೀಶರ ವಿರುದ್ಧ ಹೋರಾಟ ಮಾಡಿ, ‘ ಭಾರತ ಬಿಟ್ಟು ತೊಲಗಿ’ ಚಳವಳಿಯ ಸಂದರ್ಭದಲ್ಲಿ ಅಂಚೆ ಪೆಟ್ಟಿಗೆಗಳು ಮತ್ತು ರೆಕಾರ್ಡ್ ರೂಂಗಳಲ್ಲಿ ಸಣ್ಣ ಟೈಂಬಾಂಬುಗಳನ್ನು ಇರಿಸಿದ್ದಕ್ಕೆ ಜೈಲುವಾಸವನ್ನು ಅನುಭವಿಸಿದರು. ಆ ಕಾಲದಲ್ಲೇ ಸಮಾಜದ ಅಂಚಿನಲ್ಲಿರುವವರ ಬವಣೆಗಳನ್ನು ಕಂಡು, ಅವರ ಹಿತದಲ್ಲೂ ಕ್ರಿಯಾಶೀಲರಾದರು.

ಕಾರ್ಮಿಕರ ಹೋರಾಟಗಳಲ್ಲೂ ಭಾಗವಹಿಸಿದರು. ತಮ್ಮ ಬೇಡಿಕೆಗಳ ಜೊತೆಗೆ ಕಾರ್ಮಿಕರು ಸ್ವಾತಂತ್ರ್ಯ ಸಂಗ್ರಾಮದಲ್ಲೂ ಪಾಲ್ಗೊಳ್ಳುತ್ತಿದ್ದರು. 1940ರ ದಶಕದಲ್ಲಿ ಕಮ್ಯುನಿಸ್ಟ್ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎನ್ ಡಿ ಶಂಕರ್ ಜೊತೆ ಸೇರಿ ಬೆಂಗಳೂರಿನ ರಾಜಾ, ಮಿನರ್ವ ಮತ್ತು ಬಿನ್ನಿ ಮಿಲ್ ಗಳಲ್ಲಿ 14 ದಿನಗಳ ಮುಷ್ಕರವನ್ನು ಹೂಡುವುದರಲ್ಲಿ ಅವರ ಪಾತ್ರವಿತ್ತು.

ನಂತರ ಬೆಂಗಳೂರಿನಲ್ಲಿ ಒಂದು ಪ್ರಕಾಶನ ಸಂಸ್ಥೆ ಮತ್ತು ‘ಸಾಹಿತ್ಯ ಮಂದಿರ’ ಎಂಬ ಪುಸ್ತಕ ಅಂಗಡಿಯನ್ನು ಪ್ರಾರಂಭಿಸಿದರು. ಕೆಲ ಸಮಯದ ನಂತರ ಮೈಸೂರಿನಿಂದ ಪ್ರಕಟವಾಗುತ್ತಿದ್ದ ‘ಪೌರವಾಣಿ’ ಪತ್ರಿಕೆಯ ಸಂಪಾದಕರಾದರು. ಸ್ವಾತಂತ್ರ್ಯ ಗಳಿಸಿದ ಸಮಯದಲ್ಲಿ ಮೈಸೂರು ಸಂಸ್ಥಾನ ಭಾರತದ ಜೊತೆ ವಿಲೀನವಾಗಲು ಹಿಂದೇಟು ಹಾಕುತ್ತಿದ್ದಾಗ ದೊರೆಸ್ವಾಮಿಯವರು ತಮ್ಮ ಪತ್ರಿಕೆಯಲ್ಲಿ ಅಂದಿನ ಮಹಾರಾಜರ ನಡೆಯನ್ನು ಖಂಡಿಸಿದರು.ಇದಕ್ಕಾಗಿ ಅವರು ಕಿರುಕಳವನ್ನು ಅನುಭವಿಸಬೇಕಾಯಿತು.

ವಿನೋಬ ಭಾವೆಯವರ ಭೂದಾನ ಮತ್ತು ಕರ್ನಾಟಕ ಏಕೀಕರಣ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗಬಹಿಸಿರು. ತುರ್ತುಪರಿಸ್ಥಿಯ ಕಾಲದಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಆಕೆಗೆ ನೇರವಾಗಿ ಪತ್ರವನ್ನು ಬರೆದರು. ಆ ಸಮಯದಲ್ಲಿ ನಾಲ್ಕು ತಿಂಗಳ ಕಾಲ ಬಂದೀಖಾನೆಯ ವಾಸಿಯಾದರು.

ಕಳೆದ ಮೂರು ದಶಕಗಳಲ್ಲಿ ಅವರು ಭಾಗವಹಿಸದೇ ಇರದ ಚಳುವಳಿಗಳು ಇರಲೇ ಇಲ್ಲ ಎಂದರೆ ಅತಿಶಯೋಕ್ತಿಯಾಗುವುದಿಲ್ಲ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ, ಕಸ ವಿಲೇವಾರಿ, ವಸತಿಹೀನರಿಗೆ ಸೂರು, ಭೂಕಬಳಿಕೆ, ಕೊಡಗು ಜಿಲ್ಲೆಯ ಬುಡಕಟ್ಟು ಪ್ರದೇಶಗಳಿಂದ ಆದೀವಾಸಿಗಳ ಸ್ಥಳಾಂತರ, ಸಿಎಎ ಕಾನೂನು, ನೂತನ ಕೃಷಿ ಕಾಯಿದೆಗಳು ಇತ್ಯಾದಿ ಹತ್ತು ಹಲವು ಗಹನ ಹಾಗೂ ಜ್ವಲಂತ ವಿಷಯಗಳ ಬಗೆಗೆ ಮಧ್ಯಪ್ರವೇಶವನ್ನು ಮಾಡಿ , ಅನೇಕ ಸಮಾಜಮುಖಿ ಹೋರಾಟಗಳಲ್ಲಿ ಸಕ್ರಿಯ ಪಾತ್ರವನ್ನು ವಹಿಸಿದರು.

ಬ್ರಿಟೀಶ್ ಸರ್ಕಾರದ ದಮನಕಾರಿ ರೀತಿನೀತಿಗಳ ವಿರುದ್ಧ ಹೋರಾಡಿದಂತೆ ಅವರು ಸ್ವಾತಂತ್ರ್ಯದ ತರುವಾಯ ನಮ್ಮನ್ನು ಆಳಿದ ವಿವಿಧ ಸರ್ಕಾರಗಳ ಜನವಿರೋಧಿ ಕ್ರಮಗಳ ವಿರುದ್ಧ ತಮ್ಮ ದನಿಯನ್ನು ಎತ್ತಿದರು. ನುಡಿದಂತೆ ನಡೆದರು; ಸಾರ್ಥಕ, ಸತ್ವಪೂರ್ಣ ಜೀವನವನ್ನು ನಡೆಸಿದರು. ಅವರಿಗೆ ಗೌರವಪೂರ್ವಕ ನಮನಗಳು.

ಲೇಖಕ : ಮ ಶ್ರೀ ಮುರಳಿ ಕೃಷ್ಣ

(ಬರೆದವರು : ಮ ಶ್ರೀ ಮುರಳಿ ಕೃಷ್ಣ
ವಿಳಾಸ : ನಂ 38, 3ನೇ ಕ್ರಾಸ್
ರಾಜಾ ಗಾರ್ಡನಿಯಾ ಲೇಔಟ್
ತುರಹಳ್ಳಿ, ಸುಬ್ರಹ್ಮಣ್ಯಪುರ ಅಂಚೆ
ಬೆಂಗಳೂರು – 560 061
ಜಂಗಮವಾಣಿ :
+919481200960
ಇಮೈಲ್ :
msmurali1961@gmail.com)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version