ಬಹಿರಂಗ

ಸೇನಾಪಡೆಯನ್ನು ರಾಜಕೀಯಕರಣಗೊಳಿಸಬೇಡಿ..!

Published

on

  • ಜನವರಿ 26 ರಂದು ಗಣತಂತ್ರ ಸಂವಿಧಾನವನ್ನು ಅಂಗೀಕರಿಸಿ 70 ವರ್ಷಗಳಾಗುತ್ತಿವೆ. ಭಾರತ ಸಂವಿಧಾನಿಕ ಯೋಜನೆಯ ಪ್ರಕಾರ ಒಂದು ಸಂಸದೀಯ ಪ್ರಜಾಪ್ರಭುತ್ವವಾಗಿದೆ ಮತ್ತು ಸಶಸ್ತ್ರ ಪಡೆಗಳು ನಾಗರಿಕ ಕಾರ್ಯಾಂಗದ ಅಡಿಯಲ್ಲಿ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲು ಬದ್ಧವಾಗಿರುವ ಒಂದು ವೃತ್ತಿಪರ ಪಡೆಯಾಗಿ ಸೇವೆ ಸಲ್ಲಿಸಬೇಕು. ಆದರೆ ಇದಕ್ಕೆ ಚ್ಯುತಿ ತರುವಂತಹ ಹೇಳಿಕೆಗಳು ಕೆಲವು ಸೇನಾಮುಖಂಡರುಗಳಿಂದ ಬರುತ್ತಿದೆ. ಇದಕ್ಕೆ ಮೋದಿ ಸರಕಾರದ ಪ್ರಜ್ಞಾಪೂರ್ವಕ ಪ್ರೋತ್ಸಾಹ ಇರುವಂತೆ ಕಾಣುತ್ತದೆ. ಇದು ಗಣತಂತ್ರಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯದ ಲಕ್ಷಣ. ಸಶಸ್ತ್ರ ಪಡೆಗಳ ಮುಖಂಡರಿಂದ ರಾಜಕೀಯ ವಿಷಯಗಳಲ್ಲಿ ಅಧಿಕಾರಯುಕ್ತ ಹೇಳಿಕೆಗಳು ತಕ್ಷಣವೇ ನಿಲ್ಲಬೇಕು.

-ಪ್ರಕಾಶ ಕಾರಟ್

ಶಸ್ತ್ರ ಪಡೆಗಳ ಕೆಲವು ಮುಖಂಡರ ಸಾರ್ವಜನಿಕ ಟಿಪ್ಪಣಿಗಳು ಸಶಸ್ತ್ರ ಪಡೆಗಳ ಕಟ್ಟುನಿಟ್ಟಾದ ವೃತ್ತಿಪರ ಮತ್ತು ರಾಜಕೀಯೇತರ ಪಾತ್ರಕ್ಕೆ ಚ್ಯುತಿ ತರುವಂತವುಗಳು. ಹೀಗಾಗುತ್ತಿರಲು ಕಾರಣ ಮೋದಿ ಸರಕಾರ ರಕ್ಷಣಾ ಮಂತ್ರಾಲಯದ ಉನ್ನತ ಪೀಠಸ್ಥರು ತನ್ನ ಹಿಂದುತ್ವ ರಾಷ್ಟ್ರವಾದಿ ಕಣ್ಣೋಟಕ್ಕೆ ಅನುಗುಣವಾದ ಅಭಿಪ್ರಾಯಗಳನ್ನು ತೇಲಿ ಬಿಡಲು ಪ್ರಜ್ಞಾಪೂರ್ವಕವಾಗಿ ಪ್ರೋತ್ಸಾಹಿಸುತ್ತಿರುವಂತೆ ಕಾಣುತ್ತದೆ.

ಜನರಲ್ ಬಿಪಿನ್ ರಾವತ್ , ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಹುದ್ದೆಯನ್ನು ವಹಿಸಿಕೊಳ್ಳುವ ಕೆಲವು ದಿನಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗಳ ಬಗ್ಗೆ ಉದ್ರೇಕಕಾರಿ ಹೇಳಿಕೆಯೊಂದನ್ನು ಕೊಟ್ಟರು. ಮುಖಂಡರು ಎಂದರೆ ಜನಗಳನ್ನು ಸೂಕ್ತವಲ್ಲದ ದಿಕ್ಕುಗಳಲ್ಲಿ ನೇತೃತ್ವ ನಿಡುವವರು ಅಲ್ಲ. ಬಹಳಷ್ಟು ವಿಶ್ವವಿದ್ಯಾಲಯ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ನೋಡುತ್ತಿದ್ದೇವೆ-ನಗರಗಳಲ್ಲಿ, ಪಟ್ಟಣಗಳಲ್ಲಿ ಅವರು ಜನಗುಂಪುಗಳ ದಾಂಧಲೆ , ಹಿಂಸಾಚಾರಗಳಿಗೆ ನೇತೃತ್ವ ನೀಡುತ್ತಿದ್ದಾರೆ- ಇದು ನಾಯಕತ್ವವಲ್ಲ ಎಂದು ಅವರು ಹೇಳಿದರು.

ಇಂತಹ ಒಂದು ಆಂತರಿಕ ರಾಜಕೀಯ ಪ್ರಶ್ನೆಯ ಮೇಲಿನ ಹೇಳಿಕೆ, ಈ ಮೊದಲು ವಿವಾದಾಸ್ಪದ ಹೇಳಿಕೆಗಳನ್ನು ಕೊಟ್ಟಿದ್ದ ಸೇನಾಮುಖ್ಯಸ್ಥರಿಂದ ಬಂತು. ಜನರಲ್ ರಾವತ್‌ರಿಗೆ ಅವರಿಗಿಂತ ಹೆಚ್ಚಿನ ಸೇವಾಹಿರಿತನ ಇದ್ದ ಇಬ್ಬರು ಸೇನಾಧಿಕಾರಿಗಳನ್ನು ಬದಿಗೊತ್ತಿ ಸೇನಾಮುಖ್ಯಸ್ಥರನ್ನಾಗಿ ಬಡ್ತಿ ನೀಡಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸರಕಾರ ಎಂದೂ ಆತನ ರಾಜಕೀಯ ಟಿಪ್ಪಣಿಗಳನ್ನು ಟೀಕಿಸುವ, ಅಥವ ಆತನ ಮೇಲೆ ಕಡಿವಾಣ ಹಾಕುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ.

ಜನರಲ್ ರಾವತ್ ಪ್ರಸಂಗ ಒಂದು ಅಪವಾದವಷ್ಟೇ ಆಗಿಲ್ಲ ಎಂಬುದು ಆತನ ಹೇಳಿಕೆಯ ಕೆಲವು ದಿನಗಳ ಮೊದಲು ಇನ್ನೊಬ್ಬ ಸೇನಾಧಿಕಾರಿ ಸಿಎಎ ವಿವಾದದಲ್ಲಿ ಕೈಯಾಡಿಸಿದ ರೀತಿಯಲ್ಲಿ ಸ್ಪಷ್ಟವಾಗಿತ್ತು. ಪೂರ್ವ ಕಮಾಂಡಿನ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಪ್ರಸಕ್ತ ಸರಕಾರ ದೀರ್ಘ ಕಾಲದಿಂದ ಮಾಡದೇ ಉಳಿದಿರುವ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಉತ್ಸುಕವಾಗಿದೆ ಎಂದು ಡಿಸೆಂಬರ್ 14, 2019ರಂದು ಕೊಲ್ಕತಾದಲ್ಲಿ ಹೇಳಿದರು. ಸಿಎಎ ಯನ್ನು ಒಂದೆರಡು ಈಶಾನ್ಯ ರಾಜ್ಯಗಳ ಸಮ್ಮತಿ ಇಲ್ಲದಿದ್ದರೂ ಪಾಸು ಮಾಡಿದ್ದಾರೆ ಎಂದೂ ಅವರು ಸೇರಿಸಿದರು.

ಸಿಎಎ ಸಂವಿಧಾನದ ಅಡಿಯಲ್ಲಿ ಪೌರತ್ವದ ಮೂಲ ಪರಿಕಲ್ಪನೆಯ ಮೇಲೆಯೇ ಮಾಡಿರುವ ಒಂದು ಪ್ರಹಾರ ಎಂದು ಕಾಣುತ್ತಿರುವಾಗ, ಒಬ್ಬ ಉನ್ನತ ಸೇನಾಧಿಕಾರಿ ಅದನ್ನು ಸಮರ್ಥಿಸಿಕೊಳ್ಳಲು ಬರುವುದು ದುರದೃಷ್ಟಕರ ಸಂಗತಿ.

ಹೊಸದಾಗಿ ನೇಮಿಸಲ್ಪಟ್ಟಿರುವ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಣೆ ಒಂದು ಮಹತ್ವದ ಹೇಳಿಕೆ ನೀಡಿದರು; ಸೇನಾದಿನದ ಮುನ್ನಾದಿನ ಜನವರಿ 11, 2020ರಂದು ತನ್ನ ಪತ್ರಿಕಾಗೋಷ್ಠಿಯಲ್ಲಿ ಸಶಸ್ತ್ರ ಪಡೆಗಳ ವಿಧೇಯತೆ ಯಾವುದರ ಮೇಲೆ ಪ್ರತಿಜ್ಞೆ ಕೈಗೊಳ್ಳಲಾಗಿದೆಯೋ ಅದಕ್ಕೇ ಮಾತ್ರ ಇರುತ್ತದೆ ಎಂದರು. ಇದರರ್ಥ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಷ್ಠಾಪಿಸಿರುವ ಮೂಲ ಮೌಲ್ಯಗಳಿಗೆ, ಅರ್ಥಾತ್ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವಕ್ಕೆ ಎಂದು.

ಈ ಮಾದರಿ ಸಂದೇಶವನ್ನು ನೀಡಿದ ಕೆಲವು ದಿನಗಳ ನಂತರ, ಸೇನಾ ದಿನದಂದು ಭಾಷಣ ಮಾತಾಡುತ್ತ ತನಗೆ ವಿಧಿಸಿದ ದಾರಿಯಿಂದ ಸರಿದು ಕಲಮು 370ರ ರದ್ಧತಿ ಒಂದು ಚಾರಿತ್ರಿಕ ಹೆಜ್ಜೆ, ಇದು ಜಮ್ಮು ಮತ್ತು ಕಾಶ್ಮೀರವನ್ನು ಮುಖ್ಯಧಾರೆಯೊಂದಿಗೆ ಸಮಗ್ರಗೊಳಿಸಲು ನೆರವಾಗುತ್ತದೆ ಎಂದರು. ಇಲ್ಲಿಯೂ ಮತ್ತೆ ಸೇನಾಧಿಕಾರಿ ರಾಜಕೀಯ ಜಲಧಾರೆಯಲ್ಲಿ ಕಾಲಿಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಒಳಗೆ ಮತ್ತು ಹೊರಗೆ ಜನರು ಕಲಮು 370ರ ರದ್ಧತಿಯನ್ನು ಸಂವಿಧಾನದ ಜಾತ್ಯತೀತ ಮತ್ತು ಒಕ್ಕೂಟ ಸ್ವರೂಪದ ಮೇಲೊಂದು ಪ್ರಹಾರ ಎಂದು ಕಾಣುತ್ತಿದ್ದಾರೆ. ವಿಷಯ ಈಗ ಸುಪ್ರಿಂ ಕೋರ್ಟಿನ ಮುಂದಿದೆ, ಅದು ಇದರ ಸಂವಿಧಾನ ಬದ್ಧತೆ ಮತ್ತು ಕಾನೂನುಬದ್ಧತೆಯನ್ನು ಘೋಷಿಸಬೇಕಾಗಿದೆ. ಅಧಿಕಾರಸ್ಥ ಮುಖಂಡರ ಮೇಲೆ ಎಂತಹ ಒತ್ತಡವಿದೆಯೆಂದರೆ, ಅವರು ಇಂತಹ ಸಾರ್ವಜನಿಕ ಅಧಿಕಾರಯುಕ್ತ ಹೇಳಿಕೆಗಳನ್ನು ಕೊಡಬೇಕಾಗುತ್ತದೆ ಎಂದು ಭಾವಿಸುತ್ತಿರುವುದು ಸ್ವಯಂವೇದ್ಯ.

ಜನವರಿ 26 ರಂದು ಗಣತಂತ್ರ ಸಂವಿಧಾನವನ್ನು ಅಂಗೀಕರಿಸಿ 70 ವರ್ಷಗಳಾಗುತ್ತಿವೆ. ಭಾರತ ಸಂವಿಧಾನಿಕ ಯೋಜನೆಯ ಪ್ರಕಾರ ಒಂದು ಸಂಸದೀಯ ಪ್ರಜಾಪ್ರಭುತ್ವವಾಗಿದೆ ಮತ್ತು ಸಶಸ್ತ್ರ ಪಡೆಗಳು ನಾಗರಿಕ ಕಾರ್ಯಾಂಗದ ಅಡಿಯಲ್ಲಿ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲು ಬದ್ಧವಾಗಿರುವ ಒಂದು ವೃತ್ತಿಪರ ಪಡೆಯಾಗಿ ಸೇವೆ ಸಲ್ಲಿಸಬೇಕು.

ಸಶಸ್ತ್ರ ಪಡೆಗಳಿಗೆ ವಿಧಿಸಿರುವ ಈ ಸಂವಿಧಾನಿಕ ಪಾತ್ರವನ್ನು ಶಿಥಿಲಗೊಳಿಸುವುದು ಮತ್ತು ರಾಜಕೀಯಕರಣಗೊಳಿಸುವುದು ಗಣತಂತ್ರಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯದ ಲಕ್ಷಣ. ಸಶಸ್ತ್ರ ಪಡೆಗಳ ಪಾತ್ರ ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಪ್ರಜಾಸತ್ತಾತ್ಮಕ ತಪಾಸಣೆಗೆ ಒಳಗಾಗಬೇಕು. ಸಶಸ್ತ್ರ ಪಡೆಗಳ ಮುಖಂಡರಿಂದ ರಾಜಕೀಯ ವಿಷಯಗಳಲ್ಲಿ ಅಧಿಕಾರಯುಕ್ತ ಹೇಳಿಕೆಗಳು ತಕ್ಷಣವೇ ನಿಲ್ಲಬೇಕು.

ಕೃಪೆ : ಜನಶಕ್ತಿ ಮೀಡಿಯಾ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version