ಲೋಕಾರೂಢಿ
ಹುಲಿಯಂತಿರಬೇಕಾದ ನಾವು ಮಂದೆಯ ಕುರಿಗಳಾದೆವೇ? ಇದು ಅರಣ್ಯ ಹಕ್ಕಿನ ಕಥೆ
‘ದೇಶ ಬದಲಾಗಬೇಕು’! ಹೌದು, ಬದಲಾವಣೆಯ ಪರ್ವ ಆರಂಭವಾಗಬೇಕು. ಆದರೆ ಎಂತಹ ಬದಲಾವಣೆ ಬೇಕು? ಬದಲಾವಣೆ ಎಲ್ಲಿಂದ ಆರಂಭವಾಗಬೇಕು ಮತ್ತು ಯಾವ ರೀತಿಯಲ್ಲಿ ಆರಂಭವಾಗಬೇಕು? ಎನ್ನುವ ಪ್ರಶ್ನೆಗಳಿಗೆ ದೇಶದ ಬದಲಾವಣೆಗೆ ತುಡಿಯುವ ವ್ಯಕ್ತಿಗಳ ಬಳಿ ಉತ್ತರವಿಲ್ಲ. ಹಾಗಾದರೆ ಇದು ಉತ್ತರವಿಲ್ಲದ ಪ್ರಶ್ನೆಯೇ? ಎಂದು ಯೋಚಿಸಿದಾಗ ಉತ್ತರರೂಪಕವಾಗಿ ಘೋಷಣೆಯಾಗುವ ಸರ್ಕಾರಿ ಕಾಯ್ದೆಗಳು ಮತ್ತು ಕಾರ್ಯಕ್ರಮಗಳು ಸೂಕ್ತ ವ್ಯಕ್ತಿಗಳನ್ನು ಸೂಕ್ತ ರೀತಿಯಲ್ಲಿ ತಲುಪುತ್ತಿಲ್ಲ ಎನ್ನುವ ಅಂಶ ಅರಿವಾಗುತ್ತದೆ. ಅಂತಹ ಒಂದು ಮಹತ್ವವಾದ ಕಾಯ್ದೆಯ ಕುರಿತು ನಾವಿಂದು ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ.
ಪಾರಂಪರಿಕವಾಗಿ ವನವಾಸಿಗಳಾದ ಬುಡಕಟ್ಟು ಜನಾಂಗದವರು ಮತ್ತು ಇತರೆ ಅರಣ್ಯವಾಸಿಗಳಿಗೆ ತಾವು ವಾಸಿಸುತ್ತಿರುವ ಅರಣ್ಯ ಕ್ಷೇತ್ರಗಳ ಸಂರಕ್ಷಣೆ, ನಿರ್ವಹಣೆ ಮತ್ತು ಬಳಕೆಗೆ ಸಂಬಂಧಪಟ್ಟಂತೆ 2006ರಲ್ಲಿ ‘ಅರಣ್ಯ ಹಕ್ಕು ಅಧಿನಿಯಮ 2006’ ಅಂಗೀಕೃತಗೊಂಡು, 2008ರಲ್ಲಿ ಜಾರಿಗೆ ಬಂತು. ವಿಪರ್ಯಾಸವೆಂದರೆ, ಯಾವ ಅಧಿನಿಯಮ ಅರಣ್ಯವಾಸಿಗಳ, ಬುಡಕಟ್ಟು ಜನಾಂಗದವರ ಸರ್ವತೋಮುಖ ಏಳಿಗೆಗೆ ಕಾರಣವಾಗಬೇಕಿತ್ತೋ ಅದಿಂದು ಕೇವಲ ‘ಅತಿಕ್ರಮಣ ಮಂಜೂರಾತಿ ಕಾಯ್ದೆ’ ಎಂದು ಜನಸಾಮಾನ್ಯರ ಗ್ರಹಿಕೆಗೊಳಗಾಗಿದೆ. ಕಾರಣ, ‘ಅರಣ್ಯ ಹಕ್ಕು ಕಾಯ್ದೆ 2006’ರಡಿ ಕಳೆದ ಮೂರು ತಲೆಮಾರುಗಳಿಂದಲೂ ವಾಸಿಸುತ್ತ ಬಂದವರು ಸಾಗುವಳಿ ಮಾಡಿರುವ ಕ್ಷೇತ್ರಗಳ ಮಂಜೂರಾತಿ ನಿಯಮಗಳನ್ನೂ ಒಳಗೊಂಡಿರುವುದು. ಆದರೆ ಈ ಕಾಯ್ದೆಯ ಮೂಲ ಉದ್ದೇಶ ಸ್ಥಳೀಯ ಜನರ ಸಹಭಾಗಿತ್ವದಲ್ಲಿ ಅರಣ್ಯ ಕ್ಷೇತ್ರವನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವುದಾಗಿದೆ.
ಸಹ್ಯಾದ್ರಿಯ ಹಸಿರನ್ನು ಉಸಿರಾಡುತ್ತಿರುವ ನಮಗೆ, ಸುತ್ತಮುತ್ತಲಿನ ಅರಣ್ಯದ ಸಂರಕ್ಷಣೆ ಮತ್ತು ಸಂವರ್ಧನೆಯು ನಮ್ಮ ಹಕ್ಕು, ಜವಾಬ್ದಾರಿ ಮತ್ತು ಕರ್ತವ್ಯವಾಗಿದ್ದು ನಮ್ಮ ಬದುಕಿನ ಅಗತ್ಯಗಳಲ್ಲೊಂದಾಗಿದೆ. ‘ಅರಣ್ಯ ಹಕ್ಕು ಕಾಯ್ದೆ 2006’ನ್ನು ಸದುಪಯೋಗ ಪಡಿಸಿಕೊಳ್ಳಲು, ನಮ್ಮ ಹಕ್ಕನ್ನು ಸಮಾಜಮುಖಿಯಾಗಿ ಉಪಯೋಗಿಸಿಕೊಂಡು ಅರಣ್ಯದ ಮೂಲ ಸಂಪತ್ತಿಗೆ ಹಾನಿಯಾಗದಂತೆ ಅದನ್ನೂ ಕೂಡ ನಮ್ಮ ಸಾಗುವಳಿ ಕ್ಷೇತ್ರದಂತೆ ಅಭಿವೃದ್ಧಿಪಡಿಸಿಕೊಂಡು ಅಲ್ಲಿನ ಆದಾಯವನ್ನು ಗ್ರಾಮ ಸಭೆಯ ಮೂಲಕ ಗ್ರಾಮದ ಸಾಮೂಹಿಕ ಅಗತ್ಯತೆಗಳಿಗೆ ಬಳಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ.
ಈ ಸಂದರ್ಭದಲ್ಲಿ ಕತೆಯೊಂದನ್ನು ಉಲ್ಲೇಖಿಸುವುದು ಸಮಯೋಚಿತ ಎಂದೆನಿಸುತ್ತದೆ–
‘ಅದೊಂದು ಕುರಿ ಮಂದೆ. ಅದೊಮ್ಮೆ ತುಂಬು ಗರ್ಭದ ಹುಲಿಯೊಂದು ಹಸಿವಿನಿಂದ ಬಳಲಿ ಆ ಕುರಿಮಂದೆಯ ಮೇಲೆ ದಾಳಿಯಿಡುತ್ತದೆ. ಮೊದಲೇ ಹಸಿದು ಬಸವಳಿದ ಗರ್ಭಿಣಿ ಹುಲಿ, ಕುರಿ ಮಂದೆಯ ಮೇಲೆ ದಾಳಿ ಮಾಡಿದಾಗ ಆಯತಪ್ಪಿ ಮರದ ಚೂಪಾದ ಮೊನೆಯ ಮೇಲೆ ಬಿದ್ದು ಅಸುನೀಗುತ್ತದೆ. ಹುಲಿ ಸಾಯುವ ಅರೆಘಳಿಗೆ ಮೊದಲು ಗರ್ಭದಿಂದ ಜಾರಿ ಹುಲಿಮರಿಯ ಜನನವಾಗುತ್ತದೆ. ನಂತರದ ದಿನಗಳಲ್ಲಿ ಕುರಿ ಮಂದೆಯೊಡನೆಯೇ ಬೆಳೆಯುವ ಹುಲಿಮರಿ ತಾನೂ ಕುರಿಯಂತೆ ‘ಮೇ..ಮೇ..’ ಎನ್ನುತ್ತಾ, ಮಾನಸಿಕವಾಗಿ ತನ್ನನ್ನು ತಾನು ಕುರಿಯೆಂದೇ ಭಾವಿಸಿ ಬದುಕು ಸಾಗಿಸುತ್ತಿರುತ್ತದೆ. ಹೀಗೆ ದಿನಗಳು ಉರುಳುತ್ತಿರುವಾಗ ಮತ್ತೊಂದು ಹುಲಿಯೊಂದು ಇದೇ ಕುರಿ ಮಂದೆಯ ಮೇಲೆ ದಾಳಿ ಮಾಡುತ್ತದೆ. ದಾಳಿ ಮಾಡಿದ ವ್ಯಾಘ್ರನಿಗೆ ಅತ್ಯಾಶ್ಚರ್ಯ! ಹುಲಿಯೊಂದು ಕುರಿಮಂದೆಯ ಮಧ್ಯೆ ಕುರಿಯಂತೆಯೇ ಬದುಕುತ್ತಿದೆ! ತಕ್ಷಣ ಅದು ಹುಲಿರೂಪದ ಕುರಿಯನ್ನು ‘ಹುಲಿಯಾಗಿಯೂ ಕುರಿಗಳ ಮಧ್ಯೆ ಏಕಿದ್ದೀಯ?’ ಎಂದು ಪ್ರಶ್ನಿಸುತ್ತದೆ. ತಾನು ಹುಲಿ ಎಂದು ನಂಬದ ಹುಲಿರೂಪದ ಕುರಿಯನ್ನು ಒಯ್ದು ನೀರಿನಲ್ಲಿ ಪ್ರತಿಬಿಂಬವನ್ನು ತೋರಿಸುತ್ತದೆ. ಆಗ ಆ ಕುರಿಮಂದೆಯ ಹುಲಿಗೆ ತನ್ನ ನಿಜ ಸಾಮಥ್ರ್ಯದ ಅರಿವಾಗುತ್ತದೆ, ತನ್ನ ವ್ಯಾಪ್ತಿಯ ಅಗಾಧತೆ ಅರ್ಥವಾಗುತ್ತದೆ.’
ಈ ಮೇಲಿನ ಕಥೆ ಹಕ್ಕುಗಳ ಗಂಭೀರತೆಯನ್ನು ಮರೆತು, ನಮ್ಮತನವನ್ನು ಬಿಟ್ಟು ಬದುಕುತ್ತಿರುವ ನಮ್ಮಗಳ ಈಗಿನ ಸ್ಥಿತಿಯ ಪ್ರತಿರೂಪದಂತಿದೆ. ಎಲ್ಲಿಯವರೆಗೆ ನಾವು ನಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಮುಂದಾಗುವುದಿಲ್ಲವೋ, ಅಲ್ಲಿಯವರೆಗೆ ನಾವು ಕುರಿಮಂದೆಯಲ್ಲಿನ ಹುಲಿಯಂತೆಯೇ ಇರಬೇಕಾಗುತ್ತದೆ. ಆದ್ದರಿಂದ ನಮ್ಮ ಹಕ್ಕುಗಳ ಪ್ರತಿಪಾದನೆಗಾಗಿ ಆ ಕುರಿತಾದ ವಿಷಯ ಶೇಖರಣೆ ಮತ್ತು ವಿಷಯದ ಒಳಸಾರ ನಮಗರ್ಥವಾಗಿರಬೇಕು.
ಅರಣ್ಯ ಸಂರಕ್ಷಣೆಯ ಕುರಿತಂತೆ ಅಧಿಕಾರಿಶಾಹಿ ಹಾಗೂ ಸಾರ್ವಜನಿಕರ ಒಳಗೊಳ್ಳುವಿಕೆಯಿಂದ ‘ಜಾಯಿಂಟ್ ಫಾರೆಸ್ಟ್ ಮ್ಯಾನೇಜ್‍ಮೆಂಟ್ ಕಮಿಟಿ’ ಅಥವಾ ‘ಗ್ರಾಮ ಅರಣ್ಯ ಸಮಿತಿ’ಯಂತವು ರೂಪಿತಗೊಂಡಿದ್ದವು. ಆದರೆ ಯಾವಾಗ ‘ಅರಣ್ಯ ಹಕ್ಕು ಸಮಿತಿ’ ರಚಿತವಾದವೋ ಸಾಂವಿಧಾನಿಕವಾಗಿ ‘ಗ್ರಾಮ ಅರಣ್ಯ ಸಮಿತಿ’ಗಳು ಅಸ್ತಿತ್ವ ಕಳೆದುಕೊಂಡವು. ದುರಂತವೆಂದರೆ, ಈಗಲೂ ಕೂಡ ‘ಅರಣ್ಯ ಹಕ್ಕು ಸಮಿತಿ’ಗಿಂತ ‘ಗ್ರಾಮ ಅರಣ್ಯ ಸಮಿತಿ’ಗಳ ಕೈ ಮೇಲಾಗಿರುವುದು. ಅರಣ್ಯ ಹಕ್ಕು ಸಮಿತಿ ಇರುವೆಡೆ ಗ್ರಾಮ ಅರಣ್ಯ ಸಮಿತಿಗಳಿಗೆ ಅಸ್ತಿತ್ವವಿಲ್ಲ ಎಂದಾದ ಮೇಲೆ ಅವುಗಳ ಕಾರ್ಯಾಚರಣೆ ಮುಂದುವರೆಯಲು ಕುಮ್ಮಕ್ಕು ಯಾರದ್ದು? ಇದು ಈ ಹೊತ್ತಿನ ಬಹುದೊಡ್ಡ ಪ್ರಶ್ನೆ.
ಕಾನೂನಿನನ್ವಯ ಗ್ರಾಮ ಸಭೆ ಅತಿ ಹೆಚ್ಚು ಜವಾಬ್ದಾರಿ ಮತ್ತು ಹಕ್ಕನ್ನು ಹೊಂದಿದ ಗ್ರಾಮ ಮಟ್ಟದ ಸಂಸ್ಥೆ. ಇದು ಪಂಚಾಯತ ಗ್ರಾಮ ಸಭೆಯಲ್ಲ. ಬದಲಿಗೆ ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದ ಮತದಾರರ ಯಾದಿಯನ್ವಯ ಗ್ರಾಮದಲ್ಲಿನ ಎಲ್ಲ ಮತದಾರರನ್ನೂ ಒಳಗೊಂಡ ಸಭೆ . ಅರಣ್ಯ ಹಕ್ಕು ಸಮಿತಿ ಎನ್ನುವುದು ಗ್ರಾಮ ಸಭೆಯ ನಿಯಂತ್ರಣಕ್ಕೆ ಒಳಪಟ್ಟ ಸಮಿತಿ. ಈ ಸಮಿತಿಯಲ್ಲಿ ಗ್ರಾಮ ಸಭೆಯ ಸದಸ್ಯರಾಗಿರುವ ಮತ್ತು ಗ್ರಾಮ ಸಭೆಯಲ್ಲಿ ಆಯ್ಕೆಗೊಂಡವರು ಮಾತ್ರ ಸದಸ್ಯರಾಗಿರಲು ಸಾಧ್ಯ. ಪ್ರಮುಖ ಅಂಶವೆಂದರೆ, ಇದು ರಾಜ್ಯಾಂಗದತ್ತ ಅಧಿಕಾರವಾಗಿದೆ. ಗ್ರಾಮದ ಅರಣ್ಯದಲ್ಲಿ ಲಭ್ಯವಿರುವ ಕಿರು ಉತ್ಪನ್ನಗಳು ಈ ಗ್ರಾಮ ಸಭೆಯ ಒಡೆತನಕ್ಕೆ ಒಳಪಟ್ಟವು . ಇದಲ್ಲದೇ ತಮ್ಮ ಗ್ರಾಮದ ಪರಿಧಿಯಲ್ಲಿರುವ ಅರಣ್ಯಕ್ಷೇತ್ರದ ನಿರ್ವಹಣೆಯ ಹಕ್ಕು ಮತ್ತು ಜವಾಬ್ದಾರಿ ಗ್ರಾಮ ಸಭೆಯದ್ದಾಗಿದೆ .
ಬಿದಿರು, ಜೇನು, ಮಾವು, ಹಲಸು, ಮುರುಗಲು ಮತ್ತು ಇತರೆ ಔಷಧೀಯ ಉತ್ಪನ್ನಗಳು ಸೇರಿದಂತೆ, ಜಲಮೂಲದ ಮೇಲೂ ಸಹ ಗ್ರಾಮ ಸಭೆಗೆ ಅಧಿಕಾರಯುತವಾದ ಹಕ್ಕಿದೆ. ನಾಟಾ ಅಥವಾ ಕೊರೆದ ಕಟ್ಟಿಗೆ (ಟಿಂಬರ) ಮತ್ತು ವನ್ಯ ಜೀವಿಗಳ ಹೊರತಾಗಿ ಉಳಿದೆಲ್ಲ ಅರಣ್ಯೋತ್ಪನ್ನಗಳೂ ಉಪ ಅರಣ್ಯ ಉತ್ಪನ್ನಗಳೆಂದು ಪರಿಗಣಿಸಲ್ಪಟ್ಟಿವೆ. ಬಿದಿರು ಹುಲ್ಲಿನ ವರ್ಗಕ್ಕೆ ಸೇರಿದ್ದರಿಂದ ಅದು ನಾಟಾ ಅಥವಾ ಟಿಂಬರ ಎಂದು ಪರಿಗಣಿತವಾಗಿಲ್ಲ. ಆದ್ದರಿಂದ ಇದು ಕಿರು ಅರಣ್ಯ ಉತ್ಪನ್ನವೆಂದು ಪರಿಗಣಿತವಾಗಿದೆ . ಗ್ರಾಮ ಸಭೆಯ ಅನುಮತಿಯಿಲ್ಲದೇ ಇಲಾಖೆಯೂ ಸೇರಿದಂತೆ ಯಾರೊಬ್ಬರೂ ಈ ಉತ್ಪನ್ನಗಳನ್ನು ಮುಟ್ಟುವಂತಿಲ್ಲ . ಇವುಗಳ ಬಹಿರಂಗ ಹರಾಜನ್ನು ಗ್ರಾಮ ಸಭೆಯ ನೇತೃತ್ವದಲ್ಲಿ ನಡೆಸಿ, ಅದರಿಂದ ಬರುವ ಆದಾಯವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ .
‘ಅರಣ್ಯ ಹಕ್ಕು ಅಧಿನಿಯಮ 2006’ರ ಯಶಸ್ಸಿನ ಕುರಿತು ತಿಳಿಯಲು ಗುಜರಾತ್‍ನ ದೆಡಿಯಾಪಾಡಾ ತಾಲೂಕಿನ ಗ್ರಾಮಗಳನ್ನು ಭೇಟಿ ಮಾಡಬೇಕು. ಕೆಲವೇ ಕೆಲವು ವರ್ಷಗಳ ಹಿಂದೆ ಅಕ್ಷರಶಃ ಕಡುಬಡವರಾಗಿದ್ದವರೆಲ್ಲ ಇಂದು ಶ್ರೀಮಂತಿಕೆಯತ್ತ ಮುಖ ಮಾಡಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ಟ್ರ್ಯಾಕ್ಟರ್, ಬೈಕ್‍ಗಳಿವೆ! ಇದಕ್ಕೆ ಕಾರಣವಾಗಿದ್ದು ಗ್ರಾಮ ಸಭೆ. ಅರಣ್ಯ ಉತ್ಪನ್ನಗಳ ಮಾರಾಟದಿಂದ ಗ್ರಾಮ ಸಭೆಗೆ ಬಂದ ಆದಾಯ 12 ಕೋಟಿ, ಎಲ್ಲಾ ಖರ್ಚನ್ನು ಕಳೆದು ಗ್ರಾಮ ಸಭೆ ಪಡೆದ ಲಾಭ ಬರೋಬ್ಬರಿ 6.5 ಕೋಟಿ! ಗ್ರಾಮ ಸಭೆಯ ಮಹತ್ವವನ್ನು ಅರಿತಲ್ಲಿ ಇಂತಹ ಬದಲಾವಣೆ ದೇಶದ ಪ್ರತಿಯೊಂದು ಗ್ರಾಮದಲ್ಲೂ ಸಾಧ್ಯ, ಪ್ರತಿಯೊಂದು ಗ್ರಾಮಗಳೂ ಬದಲಾವಣೆಯಾದಾಗ ದೇಶದ ಸಮಗ್ರ ಬದಲಾವಣೆ ಸಾಧ್ಯ!
ಕೊನೆಯದಾಗಿ, ಈ ಕಾನೂನಿನ ಪೀಠಿಕೆಯಲ್ಲಿ ‘ಅರಣ್ಯವಾಸಿಗಳಿಗಾದ ಐತಿಹಾಸಿಕ ಅನ್ಯಾಯವನ್ನು ನಿವಾರಿಸುವ ಬಗ್ಗೆ ಈ ಕಾನೂನನ್ನು ಜಾರಿಗೊಳಿಸಲಾಗುತ್ತಿದೆ’ ಎಂದಿದೆ. ಆದರೆ ದಶಕಕ್ಕೂ ಹೆಚ್ಚು ಕಾಲ ಈ ಕಾನೂನನ್ನು ಮುಚ್ಚಿಡುವುದು ಈ ಅನ್ಯಾಯವನ್ನು ಉದ್ದೇಶಪೂರ್ವಕವಾಗಿ ಮುಂದುವರಿಸಿದಂತಾಗುವುದಿಲ್ಲವೆ? ಗ್ರಾಮೀಣ ಜನರಿಗೆ ಲಭ್ಯವಾಗಲಿರುವ ಕೋಟ್ಯಂತರ ರೂಪಾಯಿ ಹಾನಿಯಾಗಲು ಕಾರಣ ಯಾರು? ಇದು ಜನಸಾಮಾನ್ಯನ ಪ್ರಶ್ನೆ. ಇದಕ್ಕೆ ವ್ಯತಿರಿಕ್ತವಾಗಿ ಈ ಹತ್ತು ವರ್ಷಗಳಲ್ಲಿ ‘ಪಾಲಿಸಿದವರಿಗೆ ಪಾಲು’ ಎಂಬ ಹೆಸರಿನಲ್ಲಿ ಕಾನೂನಿನಂತೆ ಅಸ್ತಿತ್ವದಲ್ಲೇ ಇರಲಾರದ ಸಂಸ್ಥೆಗಳಿಗೆ ಗ್ರಾಮ ಸಭೆಯ ಗಮನಕ್ಕೂ ತಾರದೆ ಕೋಟ್ಯಂತರ ರೂಪಾಯಿಗಳನ್ನು ಹಂಚಲಾಗಿದೆ . ಈ ಹಕ್ಕನ್ನು ಇಲಾಖೆಗೆ ದಯಪಾಲಿಸಿದವರು ಯಾರು? ಉತ್ತರ ಹುಡುಕುವ ಜರೂರತ್ತಿದೆ. ಮೇಲಿನ ವಿಷಯಗಳನ್ನು ಗಮನದಲ್ಲಿರಿಸಿಕೊಂಡು ಈ ಕೆಲವೊಂದು ಅಂಶಗಳನ್ನು ಸ್ಪಷ್ಟೀಕರಣಕ್ಕಾಗಿ ನೀಡಲಾಗಿದೆ.
1. ಗ್ರಾಮ ಸಭೆಗೆ ಆಯಾ ಗ್ರಾಮಕ್ಕೆ ಸಂಬಂಧಪಟ್ಟಂತೆ ಅರಣ್ಯಕ್ಷೇತ್ರದ ಸಂರಕ್ಷಣೆ ಮತ್ತು ನಿರ್ವಹಣೆಯ ಹೊಣೆಗಾರಿಕೆ ಕೊಡಲ್ಪಟ್ಟಿದೆ.
2. ಸಾಮುದಾಯಿಕ ಹಕ್ಕನ್ನು ಗ್ರಾಮ ಸಭೆ ಅಥವಾ ಅದರ ಅಂಗ ಸಭೆಗೆ ದೊರಕಿಸಿಕೊಡುವುದು ಜಿಲ್ಲಾ ಮಟ್ಟದ ಸಮಿತಿಯ ಹೊಣೆಗಾರಿಕೆಯಾಗಿರುತ್ತದೆ.
3. ಅಗತ್ಯವಾದಲ್ಲಿ ಅರಣ್ಯಕ್ಕೆ ಹಾನಿಯಾಗಬಹುದಾದ ಸಂದರ್ಭದಲ್ಲಿ ಅರಣ್ಯ ಪ್ರವೇಶವನ್ನು ನಿರ್ಬಂಧಿಸುವ ಹಕ್ಕು ಗ್ರಾಮ ಸಭೆಗೆ ಇರುತ್ತದೆ. ಈ ವರ್ಷದ ಸಂದರ್ಭದಲ್ಲಿ ಬಿದಿರಿನ ತುಂಡುಗಳನ್ನು ಅರಣ್ಯದಲ್ಲಿ ಹಾಗೇ ಬಿಟ್ಟಿರುವುದರಿಂದ ಬರಲಿರುವ ಬೇಸಿಗೆಯಲ್ಲಿ ಅರಣ್ಯದಲ್ಲಿ ಬೆಂಕಿ ಅನಾಹುತವೇನಾದರೂ ಸಂಭವಿಸಿದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವ ಈ ಕ್ಷೇತ್ರ ಬೆಂಗಾಡಾಗುವ ಭಯವಿದೆ.
4.ಕಿರುಅರಣ್ಯ ಉತ್ಪನ್ನಗಳ ಸಾಗಾಣಿಕೆಯ ಬಗ್ಗೆ ಸಾಗಾಣಿಕೆ ಪರವಾನಿಗೆಯನ್ನು ನೀಡುವ ಹಕ್ಕು ಗ್ರಾಮ ಸಭೆಗೆ ಇದೆ.
5.ಕಿರು ಅರಣ್ಯ ಉತ್ಪನ್ನಗಳನ್ನು ಜಾಹೀರ ಲಿಲಾವು ಮಾಡುವ ಹಕ್ಕು ಗ್ರಾಮ ಸಭೆಗೆ ಇದೆ.
6.ಅರಣ್ಯ ಹಕ್ಕು ಸಮಿತಿ ಬಂದ ಮೇಲೆ ‘ಜಾಯಿಂಟ್ ಫಾರೆಸ್ಟ್ ಮ್ಯಾನೇಜ್‍ಮೆಂಟ್ ಕಮಿಟಿ’ ಅಥವಾ ‘ಗ್ರಾಮ ಅರಣ್ಯ ಸಮಿತಿ’ ಮುಂತಾದ ಸಮಿತಿಗಳಿಗೆ ಅಸ್ತಿತ್ವವಿರುವುದಿಲ್ಲ. ಇವುಗಳಿಗೆ ಇಲಾಖೆಯ ವತಿಯಿಂದ ಪಾಲು ಅಥವಾ ಇತರ ಸಹಾಯಧನವನ್ನು ಕೊಡಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಒಂದು ವೇಳೆ ಕೊಟ್ಟರೂ ಅದನ್ನು ಗ್ರಾಮ ಸಭೆಯ ಗಮನಕ್ಕೆ ತರಬೇಕಾಗುವುದು.
7. ರಾಜ್ಯ ಮತ್ತು ಕೇಂದ್ರದ ಕಾನೂನಿನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ, ಕೇಂದ್ರದ ಕಾನೂನನ್ನೇ ಅನುಸರಿಸಬೇಕಾಗುತ್ತದೆ.
8. ಮಾರ್ಗದರ್ಶಿ ಸೂತ್ರ 6ರನ್ವಯ ಗ್ರಾಮ ಸಭೆ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಗೆ ವಿನಂತಿಸುವ ಹಕ್ಕನ್ನು ಹೊಂದಿದೆ.
9. ಗೌರವಾನ್ವಿತ ರಾಷ್ಟ್ರಪತಿಗಳ ಅಭಿಭಾಷಣದಲ್ಲಿ ಈ ಕಾಯ್ದೆಯ ಕುರಿತು ಪ್ರಸ್ತಾಪಿಸಲಾಗಿದೆ. ಅಂದರೆ ಸರಕಾರ ಈ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದರ ದ್ಯೋತಕವಾಗಿದೆ (31 ಜನವರಿ 2017ರಂದು ಗೌರವಾನ್ವಿತ ರಾಷ್ಟ್ರಪತಿಗಳು ಜಂಟಿ ಸಂಸತ್ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣ).
ಈ ಮೇಲಿನ ಎಲ್ಲಾ ಸಂಗತಿ-ವಿಷಯಗಳನ್ನು ಗಮನಿಸಿದಾಗ ಈ ನಿಟ್ಟಿನಲ್ಲಿ ಗ್ರಾಮೀಣ ಹಕ್ಕುದಾರರಾದ ನಮ್ಮ ಹಾಗೂ ನಮ್ಮ ಪ್ರತಿನಿಧಿಗಳ ಹೊಣೆಗಾರಿಕೆ ಏನು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇನ್ನಾದರೂ ಕೂಡ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಮುಕ್ತ ಚರ್ಚೆಯನ್ನು ನಡೆಸಿ, ಮುಂದಿನ ಕ್ರಮಗಳು ಎಂತಿರಬೇಕು ಎಂಬ ಬಗ್ಗೆ ನಿರ್ಧಾರಕ್ಕೆ ಬರುವ ಅವಶ್ಯಕತೆಯಿದೆ.