ಲೋಕಾರೂಢಿ

ರಾಷ್ಟ್ರೀಯವಾದದ ಅನಶ್ತೇಶಿಯಾ

Published

on

ಕಳೆದ ಕೆಲವು ವರ್ಷಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಐಟಿ ಸೆಲ್ ಗಳು ಹೇಗೆ ಕೆಲಸ ಮಾಡಿವೆ ಎಂಬ ಒಂದು ಸಮೀಕ್ಷೆ ಮತ್ತು ಅವಲೋಕನ ನಡೆಸಿದರೆ ಕರ್ನಾಟಕದಲ್ಲಿ ಬಿಜೆಪಿ ಹೇಗೆ ಈ ಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭ.

ಬಿಜೆಪಿ ಮತ್ತು ಸಂಘ ಪರಿವಾರ ತನ್ನ ಐಟಿ ಸೆಲ್ ನ್ನು ಪಕ್ಷದ ಅಂಗಸಂಘಟನೆಗಳಿಂದ ಹೊರತಾದ ವಿಷಯವಾಗಿ ನೋಡಲಿಲ್ಲ ಹಾಗೆಯೇ ಇದು ಐಟಿ ಸೆಲ್ ಎಂದರೆ ಪಕ್ಷ ಸಂಘಟನೆಗಿಂತ ಹೊರತಾದ ಒಂದು ವಿಷಯವಾಗಿಯೂ ನೋಡಲಿಲ್ಲ. ಬದಲಿಗೆ ಬದಲಾಗಿರುವ ಕಾಲಘಟ್ಟದಲ್ಲಿ ಸಂಘಪರಿವಾರ ಕಟ್ಟುವ ಹೊಸ ಹೊಸ ನರೇಟಿವ್ ಗಳನ್ನು ದೊಡ್ಡ ಮಟ್ಟದಲ್ಲಿ ಯುವ ಸಮೂಹಕ್ಕೆ ತಲುಪಿಸುವ ದಾರಿಯಾಗಿ ಅದು ಐಟಿ ಸೆಲ್ ನ್ನು ನೋಡಿತು. ಹೀಗಾಗಿ ಪಕ್ಷ ಸಂಘಟನೆಯ ಜೊತೆಜೊತೆಗೆ 24×7 ಆಧಾರದಲ್ಲಿ ವ್ಯವಸ್ಥಿತ, ಕೇಂದ್ರೀಕೃತ ಹಾಗೂ ಸಂಯೋಜಿತ ಐಟಿಸೆಲ್ ಕಟ್ಟಿತು.

ಅದು ಎಷ್ಟು ಪರಿಣಾಮಕಾರಿಯಾಗಿ ಇದನ್ನು ಮಾಡಿತು ಎನ್ನಲು ಒಂದು ಉದಾಹರಣೆ ನೀಡುವುದಾದರೆ, ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಮತದಾರರ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಖಾತ್ರಿಯಾದಾಗ ಬಿಜೆಪಿ ಐಟಿಸೆಲ್ “ಅನ್ನಭಾಗ್ಯದಲ್ಲಿ ಕೇಂದ್ರ ಸರ್ಕಾರದ ಹಣವಿದೆ” ಎಂಬ ಸುಳ್ಸುದ್ದಿಯನ್ನು ಅಥವಾ ಕಟ್ಟುಕಥೆಯನ್ನು ರಾತ್ರೋರಾತ್ರಿ ಹರಿಬಿಟ್ಟಿತು. ಹಾಗೂ ಬಹುಪಾಲು ಯುವ ಸಮೂಹ ಇದನ್ನು ನಿಜ ಎಂದೇ ನಂಬಿಸುವಲ್ಲಿ ಐಟಿಸೆಲ್ ಯಶಸ್ವಿಯಾಯಿತು. ಇದನ್ನು ಹಾಗಲ್ಲ ಹೀಗೆ ಎಂದು ತಮ್ಮ ಕಾರ್ಯಕರ್ತರಿಗೆ ತಿಳಿಹೇಳುವ ಕನಿಷ್ಟ ಯಂತ್ರಾಂಗ ಕಾಂಗ್ರೆಸ್ ಬಳಿ ಇರಲಿಲ್ಲ.

ಹಾಗೆಯೇ ಬಿಜೆಪಿಯ ಇತ್ತೀಚಿನ ನುಡಿಗಟ್ಟುಗಳಾದ “ಹೊಸ ಭಾರತ” “ಗುಲಾಮರು” “ಲುಟಾಯೆನ್ ಗ್ಯಾಂಗ್” “ತುಕಡೇ ತುಕಡೇ ಗ್ಯಾಂಗ್” ಇತ್ಯಾದಿ ಪದಪುಂಜವನ್ನು ಬಹಳ ಯೋಜಿತ ರೀತಿಯಲ್ಲಿ ಯುವಜನರ ಮನಸ್ಸಿನಲ್ಲಿ ಚುಚ್ಚಿದ್ದು ಐಟಿಸೆಲ್.

ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಮತ್ತಿತರ ಪಕ್ಷಗಳ ಐಟಿ ಸೆಲ್ ಗಳು ಹೇಗೆ ಕೆಲಸ ಮಾಡಿದವೆಂದರೆ ಅವರ ಐಟಿ ಸೆಲ್ ಗಳಿಗೂ ಪಕ್ಷ ಸಂಘಟನೆಗೂ ಸ್ವಲ್ಪವೂ ಸಂಬಂಧವಿರಲಿಲ್ಲ, ಸಂಯೋಜನೆಯಿರಲಿಲ್ಲ, ಪರಸ್ಪರ ಸಹಕಾರವಿರಲಿಲ್ಲ. ಕರ್ನಾಟಕದ ಐಟಿ ಸೆಲ್ ಹೊಣೆ ವಹಿಸಿಕೊಂಡವರು ಟ್ವಿಟರ್ ಮೂಲಕ ಟ್ವೀಟ್ ಮಾಡುವುದೇ ಐಟಿ ಸೆಲ್ ಕೆಲಸ ಅಂದುಕೊಂಡರೇ ವಿನಃ ಹಳ್ಳಿಗಳಲ್ಲಿ ಇರುವ ಟ್ವಿಟರ್ ಗೊತ್ತಿರದ, ಕೇವಲ ವಾಟ್ಸಾಪ್ ಇರುವ ಯುವ ಕಾರ್ಯಕರ್ತರಿಗೆ ರಾಹುಲ್ ಗಾಂಧಿಯ ವಿಚಾರಗಳನ್ನು ತಲುಪಿಸಬೇಕು ಎನ್ನುವ ಯಾವ ಅಂದಾಜೂ ಹೊಂದಿರಲಿಲ್ಲ.

ಅಸಲಿಗೆ ಕಾಂಗ್ರೆಸ್ ನಲ್ಲಿ ಒಂದು ಐಟಿ ಸೆಲ್ ಇರಲಿಲ್ಲ. ಪರಸ್ಪರ ಕಚ್ಚಾಡುವ ಹಲವಾರು ಐಟಿ ಸೆಲ್ ಬಣಗಳು ಇದ್ದವು. ತಮ್ಮ ತಮ್ಮ ಬಣಗಳ ಮುಖಂಡರು ಹೇಳಿದ್ದಷ್ಟೇ ಮುಖ್ಯವಾಗಿತ್ತು. ಫೇಸ್‌ಬುಕ್‌ ನಂತಹ ಮಾಧ್ಯಮದಲ್ಲಿ ಕಾಂಗ್ರೆಸ್ ನಾಯಕರ ಅನುಯಾಯಿಗಳ ಹಲವಾರು ಪಡೆಗಳಿದ್ದವೇ ವಿನಃ ಅವುಗಳಿಗೆ ಯಾವ ಕೇಂದ್ರವೂ ಇರಲಿಲ್ಲ ಕಂಟ್ರೋಲೂ ಇರಲಿಲ್ಲ.
ಚುನಾವಣೆ ತಿಂಗಳಿದ್ದಾಗ ಮಾತ್ರ ಐಟಿ ಸೆಲ್ ಕೆಲಸಕ್ಕೆಂದು ಒಂದಷ್ಟು ಹಣ ನೀಡಿಬಿಟ್ಟರೆ, ಒಂದಷ್ಟು ಕಾರ್ಯಕರ್ತರನ್ನು ನಿಯೋಜಿಸಿದರೆ ಸಾಕು ಎಂಬಂತೆ ಕಾಂಗ್ರೆಸ್ ಭಾವಿಸಿತ್ತೆಂದರೆ ಅದಕ್ಕೆ ತಾವು ಯಾವುದರ ವಿರುದ್ಧ ಹೋರಾಡುತ್ತಿದ್ದೇವೆ ಎಂಬ ಪ್ರಜ್ಞೆ ಇತ್ತೇ?
ಇದರ ಪರಿಣಾಮ ಏನಾಯಿತೆಂದರೆ, ಮತದಾರರಲ್ಲಿ ಸಾಕಷ್ಟು ಸಂಚಲನ ಉಂಟು ಮಾಡಬಹುದಾಗಿದ್ದ “ನ್ಯಾಯ್” ನಂತಹ, ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಅಂಶ ಕೇವಲ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಉಳಿಯಿತೇ ಹೊರತು ಹಳ್ಳಿಗಳ, ನಗರಗಳ ಯುವಕರಿಗಾಗಲೀ, ಇತರ ಮತದಾರರಿಗಾಗಲೀ ತಲುಪಲೇ ಇಲ್ಲ.

ಅಕಸ್ಮಾತ್ ಇದೇ ನ್ಯಾಯ್ ಯೋಜನೆ ಮೋದಿಯದ್ದಾಗಿದ್ದರೆ ಕೇವಲ ಎರಡು ದಿನ ಸಾಕಾಗಿತ್ತು ಅವರು ಅದನ್ನು ಮನೆಮನೆಗೆ ಕೇವಲ ಐಟಿಸೆಲ್ ಮೂಲಕ ತಲುಪಿಸಿಬಿಡುತ್ತಿದ್ದರು… ಅಂತಹ ಡಿಮಾನಿಟೈಸೇಶನ್ ನಂತಹ ಅನಾಹುತಕಾರಿ ಯೋಜನೆಯನ್ನೇ ದೇಶಕ್ಕೆ ಒಳ್ಳೆಯದು ಮಾಡುತ್ತದೆ ಎಂದು ಮೋದಿ ನಂಬಿಸಿದ್ದೇ ಐಟಿ ಸೆಲ್ ಮೂಲಕ ಅಲ್ಲವೇ?
ಇನ್ನು ಜೆಡಿಎಸ್ ಐಟಿ ಸೆಲ್ ವಿಷಯಕ್ಕೆ ಬಂದರೆ ಅದು ಪಕ್ಷ ಸಂಘಟನೆಗೆ ಪೂರಕವಾಗಿ ಕಾಂಗ್ರೆಸ್ ಗಿಂತಲೂ ಪರಿಣಾಮಕಾರಿಯಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಕೆಲಸ ಮಾಡಿತ್ತು. ಆದರೆ ವ್ಯಕ್ತಿ ನಿಷ್ಠೆ ಮಾತ್ರವೇ ಮುಖ್ಯವಾಗಿಸಿಕೊಂಡ ಜೆಡಿಎಸ್ ಐಟಿಸೆಲ್ ರಾಷ್ಟ್ರದ ಹಿತಾಸಕ್ತಿಯಿಂದ ಬಿಜೆಪಿಯ ಯಾವುದೇ ನರೇಟಿವ್ ನ್ನು ಸೈದ್ಧಾಂತಿಕವಾಗಿ ಪ್ರತಿರೋಧಿಸುವ ಕೆಲಸ ಮಾಡಲೇ ಇಲ್ಲ. ಹೆಚ್ಚೆಂದರೆ ಅದು ಕುಮಾರಣ್ಣನನ್ನು, ನಿಖಿಲ್ ಕುಮಾರಸ್ವಾಮಿಯನ್ನು ಸಮರ್ಥಿಸುವುದೇ ರಾಷ್ಟ್ರೀಯ ಹಿತಾಸಕ್ತಿ ಆಗಿ ಮಾಡಿಕೊಂಡಿತ್ತು.

ಹೀಗೆ ಒಂದು ಕಡೆ ಬಿಜೆಪಿ ಐಟಿ ಸೆಲ್ ಮೊದಲಿಂದಲೂ ಆಕ್ರಮಣಕಾರಿ ನಿಲುವಿನಿಂದ ಕೆಲಸ ಮಾಡುತ್ತಿದ್ದರೆ ಮಿಕ್ಕ ಪಕ್ಷಗಳು ಪ್ರತಿ-ದಾಳಿ ದೂರದ ಮಾತು ಆತ್ಮ ರಕ್ಷಣೆಯನ್ನೂ ಸರಿಯಾಗಿ ನಡೆಸಲು ಸಾಧ್ಯವಿರದ ಸ್ಥಿತಿ ಉಂಟಾಗಿತ್ತು.

ಇದರ ನಡುವೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರಲ್ಲದ ನೂರಾರು ಜನರು ಸಾಮಾಜಿಕ ಮಾಧ್ಯಮದಲ್ಲಿ ನಿರ್ವಹಿಸಿರುವ ಪಾತ್ರ ಶ್ಲಾಘನೀಯವಾದುದು… ಅತ್ಯಂತ ಕ್ರಿಯೇಟಿವ್ ಆದಂತಹ ಬರೆಹಗಳು, fact ಗಳು , ವ್ಯಂಗ್ಯಚಿತ್ರಗಳು ಸಂಘಪರಿವಾರದ ಹುನ್ನಾರಗಳನ್ನು ಬಯಲುಗೊಳಿಸಿವೆ.

ಆದರೆ ಇದ್ಯಾವುದೂ ಸಾಮಾನ್ಯ ಮತದಾರರನ್ನು ತಲುಪಲೇ ಇಲ್ಲ. ಮತದಾರರನ್ನು ತಲುಪಿದ್ದು “ಮತ್ತೊಮ್ಮೆ ಮೋದಿ” ಗುಂಪಿನ ವಿಚಾರಗಳು, ಪೋಸ್ಟರ್, ವಿಡಿಯೋಗಳು ಮಾತ್ರ.

ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಮತದಾರರನ್ನು ಪ್ರಜೆಗಳ ಸ್ಥಾನದಿಂದ ಕಿತ್ತು ಲಕ್ಷಾಂತರ ಮೋದಿಗಳನ್ನಾಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಯಲಿದೆ. ಪ್ರಜಾಪ್ರಭುತ್ವವನ್ನು ಜನಪ್ರಿಯ ಸರ್ವಾಧಿಕಾರಿ ವ್ಯವಸ್ಥೆಯಾಗಿ ಮಾರ್ಪಡಿಸುವ, ಚಾಕುವಿನಿಂದ ಜನರ ಹೊಟ್ಟೆಗೆ ಇರಿಯುವುದೂ ಸಹ ವೈದ್ಯರ ಅಪರೇಶನ್ ನಂತೆ ಭಾಸವಾಗಿಸುವ ಕೆಲಸ ಐಟಿ ಸೆಲ್ ನೀಡುವ “ರಾಷ್ಟ್ರೀಯವಾದದ ಅನಶ್ತೇಶಿಯಾ”ದ ಮೂಲಕವೇ ನಡೆಯಲಿದೆ…

ಈಗಲೇ ಎಚ್ಚೆತ್ತುಕೊಂಡರೆ ದೇಶದ ಭವಿಷ್ಯವನ್ನು ಕಾಪಾಡುವ ಅವಕಾಶ ಅಲ್ಪ ಸ್ವಲ್ಪ ಉಳಿದುಕೊಂಡಿದೆ.

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version