ಲೈಫ್ ಸ್ಟೈಲ್
ಪಕ್ಷಿ ಪರಿಚಯ | ಚಿಟ್ಟು ಮಡಿವಾಳ
- ಭಗವತಿ ಎಂ.ಆರ್
ಬಾಲವನ್ನು ನಿಮಿರಿಸಿಕೊಂಡು ನೆಲಮಟ್ಟದಲ್ಲಿ, ಮತ್ತು ಕುರುಚಲು ಗಿಡಗಳ ಮೇಲೆ ಓಡಾಡಿಕೊಂಡಿರುವ ಚಿಟ್ಟು ಮಡಿವಾಳ (Indian Robin) ಹಕ್ಕಿಯನ್ನು ನೀವು ನೋಡಿರಬಹುದು. ಈ ಹಕ್ಕಿಗಳಿಗೆ ಹಣ್ಣು, ಕೀಟಗಳೆ ಮುಖ್ಯ ಆಹಾರ. ಇವು ಆಹಾರ ಹುಡುಕುವಾಗ ಬಹಳ ಚುರುಕಿನಿಂದ ಅತ್ತಿಂದಿತ್ತ ನೆಲಮಟ್ಟದಲ್ಲಿ ಓಡಾಡುತ್ತವೆ.
ಗಂಡು ಮಡಿವಾಳ ಹಕ್ಕಿಗೆ ನೀಲಿ ಮಿಶ್ರಿತ ಕಪ್ಪು, ಬಣ್ಣವಿದ್ದು , ಬಾಲದ ಬುಡದಲ್ಲಿ ಇಟ್ಟಿಗೆಯ ಬಣ್ಣವಿದ್ದು,, ರೆಕ್ಕೆಯ ಭಾಗದಲ್ಲಿ ಬಿಳಿಯ ಪಟ್ಟೆಯಿದೆ. ಇವು ಕಡು ನೀಲಿ ಬಣ್ಣದಾಗಿರುವುದರಿಂದ ಸಂಸ್ಕೃತದಲ್ಲಿ ಇದಕ್ಕೆ ಕೃಷ್ಣ ಪಕ್ಷಿ ಎಂಬ ಹೆಸರಿದೆ. ಹೆಣ್ಣು ಚಿಟ್ಟು ಮಡಿವಾಳ ಹಕ್ಕಿಗೆ ಕಂದು ಮಿಶ್ರಿತ ಕಪ್ಪು ಬಣ್ಣವಿದ್ದು, ಬಾಲದ ಅಂಚು ಕಪ್ಪಾಗಿರುತದೆ. ಇದಕ್ಕೆ ರೆಕ್ಕೆಯ ಮೇಲೆ ಬಿಳಿ ಪಟ್ಟೆಗಳಿಲ್ಲ.
ಚಿಟ್ಟು ಮಡಿವಾಳ ಹಕ್ಕಿ ಏಪ್ರಿಲ್ ನಿಂದ ಜೂನ್ ತಿಂಗಳ ನಡುವೆ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಇವು ಸಾಮಾನ್ಯವಾಗಿ ಎರಡರಿಂದ ಮೂರು ಮೊಟ್ಟೆ ಇಡುತ್ತವೆ. ಇವು ಗೂಡನ್ನು ನೆಲ ಮಟ್ಟದಲ್ಲಿಯೇ ಕಟ್ಟುತ್ತವೆ. ಕಲ್ಲುಗಳನ್ನು ಕೆದರಿ ದೂರ ಸರಿಸಿ ನೆಲದಲ್ಲಿ ಬಟ್ಟಲಿನಾಕಾರದಲ್ಲಿ ಗುಂಡಿ ಮಾಡಿ, ಅದರಲ್ಲಿ ಒಣಗಿದ ಹುಲ್ಲು, ನಾರು, ಜೇಡರ ಬಲೆ, ಪುಕ್ಕ ಮುಂತಾದ ಮೃದುವಾದ ವಸ್ತುಗಳನ್ನು ಬಳಸಿ ಗೂಡು ಕಟ್ಟುತ್ತವೆ.
ಮಡಿವಾಳ ಹಕ್ಕಿಯ ಗೂಡು ಟಿಟ್ಟಿಭ ಮುಂತಾದ ಹಕ್ಕಿಗಳು ಕಟ್ಟುವಂತೆ ನೆಲಕ್ಕೆ ಸಮಾನಂತರವಾಗಿ ಇರುವುದಿಲ್ಲ. ಹೆಣ್ಣು ಚಿಟ್ಟು ಮಡಿವಾಳ ಮೊಟ್ಟೆಯ ಮೇಲೆ ಕೂತಾಗ ಗಂಡು ಹಕ್ಕಿ ದೂರದಲ್ಲಿ ಇದ್ದು ಗೂಡನ್ನು ಕಾಯುತ್ತದೆ. ಯಾರಾದರೂ ಹತ್ತಿರ ಹೋದರೆ ಕೂಗು ಹಾಕಿ ಎಚ್ಚರಿಸಿದಾಗ, ಹೆಣ್ಣು ಹಕ್ಕಿ ಗೂಡಿನಿಂದ ಆಚೆ ಬರುತ್ತದೆ. ಇವುಗಳ ಸಂತಾನೋತ್ಪತ್ತಿ ಕಾಲವು ಭಾರತ ಮತ್ತು ಬೇರೆಯೇ ದೇಶಗಳಲ್ಲಿ ಬೇರೆಬೇರೆಯಾಗಿದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಹಕ್ಕಿಯು ತನ್ನ ಮಧುರವಾದ ಕಂಠದಿಂದ ಶಿಳ್ಳೆ ಹಾಕುತ್ತಾ ಹೆಣ್ಣು ಹಕ್ಕಿಗಳನ್ನು ಆಕರ್ಷಿಸುತ್ತವೆ.
ಇವು ಮನುಷ್ಯರನ್ನು ಕಂಡ ಕೂಡಲೆ ಹೆದರಿ ದೂರ ಹೋಗುವುದಿಲ್ಲ. ಮನುಷ್ಯರ ವಾಸದ ಸುತ್ತಲೂ ಧೈರ್ಯವಾಗಿ ಎಚ್ಚರಿಕೆಯಿಂದ ಅವರ ಸುತ್ತಮುತ್ತ ಹಾರಾಡಿಕೊಂದಿರುತ್ತವೆ. ಹೆಣ್ಣು ಮಡಿವಾಳಗಳಿಗಿಂತ ಗಂಡು ಮಡಿವಾಳ ಹಕ್ಕಿ ಮನುಷ್ಯರಿಗೆ ಸಮೀಪದಲ್ಲೇ ಇರುತ್ತವೆ. ಗುಬ್ಬಚ್ಚಿ, ಕಾಗೆ, ಪಾರಿವಾಳದ ಹಾಗೇ ಚಿಟ್ಟು ಮಡಿವಾಳಗಳು ಕೂಡ ಮನುಷ್ಯನ ನೆಲೆಗೆ ಸಮೀಪದಲ್ಲೇ ಇರುತ್ತವೆ. ಆದರೂ, ಸುರಕ್ಷಿತ ಅಂತರವನ್ನು ಸದಾಕಾಲವೂ ಕಾಯ್ದುಕೊಂಡಿರುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243