Connect with us

ರಾಜಕೀಯ

99% ಭಾರತೀಯರು V/S 1% ಕೋಮುವಾದಿಗಳು

Published

on

  • 8.1.2020ರಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಬೆಂಗಳೂರಿನಲ್ಲಿ ಕೇಂದ್ರದ ಜನವಿರೋಧಿ ಪೌರತ್ವ ಕಾಯ್ದೆ[CAA, NRC, NPR] ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ ಇಲ್ಲಿದೆ.

–ದೇವನೂರ ಮಹಾದೇವ

ಭಾರತ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ, ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ಬಂದಾಗಲೆಲ್ಲ, ಭಾರತ ತನ್ನ ಅಂತಃಸತ್ವದ ಭವ್ಯತೆಯನ್ನು ಬೆಳಗುತ್ತದೆ ಎಂದು ಕಾಣುತ್ತದೆ. ಆ ಬೆಳಗುವಿಕೆ ಇಂದು ನಿಚ್ಚಳವಾಗಿ ಕಾಣುತ್ತಿದೆ. ಹೃದಯ, ಮಿದುಳು, ಹೊಟ್ಟೆ ತುಂಬ ಗಣಿ ಲೂಟಿ ದುಡ್ಡನ್ನೆ ತುಂಬಿಕೊಂಡ ಮದದ ಸೋಮಶೇಖರರೆಡ್ಡಿ ಎಂಬ ಬಿಜೆಪಿ ಶಾಸಕ ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿಸುವವರಿಗೆ ‘ನೀವು 20% ಇದ್ದೀರಿ, ನಾವು 80% ಇದ್ದೇವೆ.

ಜೋಕೆ’ ಎಂದು ಹೇಳಿದ್ದಕ್ಕೆ ಭವ್ಯ ಎಂಬ ತರುಣಿ ಹೇಳುವುದು ಹೀಗೆ- “ರೆಡ್ಡಿ, ನೆನಪಿರಲಿ, ಸಿಎಎ ಮತ್ತು ಎನ್‍ಆರ್‍ಸಿ ವಿರೋಧಿಸುವ ನಾವು ಭಾರತೀಯರು 99% ಇದ್ದೇವೆ. ನೀವು ಕೋಮುವಾದಿಗಳು 1% ಇದ್ದಿರಿ” ಈ ಮಾತಲ್ಲಿ ಭಾರತದ ಭವ್ಯತೆ ಪ್ರಕಾಶಗೊಳ್ಳುತ್ತದೆ. ಇಂದು ಸಂಘರ್ಷ ನಡೆಯುತ್ತಿರುವುದು 99% We the people of India V/s 1% ಕೋಮುವಾದಿ ಗ್ಯಾಂಗ್ ನಡುವೆ.

ಹೀಗೆ ಭವ್ಯ ಥರಾನೇ ಉನ್ನತ ಅಧಿಕಾರಿಗಳಾಗಿದ್ದ ಸಸಿಕಾಂತ್ ಸೆಂಥಿಲ್ ಹಾಗೂ ಕಣ್ಣನ್ ಗೋಪಿನಾಥ್ ನಡೆನುಡಿ ನೋಡಿದಾಗಲೂ ಭಾರತಕ್ಕೆ ಭವಿಷ್ಯವಿದೆ ಅನ್ನಿಸುತ್ತದೆ. ಎಲ್ಲಕ್ಕಿಂತ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಿಂದು ಹಾಕುತ್ತಿದ್ದ ಇಲಿ ಹೆಗ್ಗಣಗಳ ವಿರುದ್ಧವಾಗಿ ವಿದ್ಯಾರ್ಥಿ ಯುವಜನರ ಸ್ಫೋಟ ಕಂಡಾಗ ಈ ವಿದ್ಯಾರ್ಥಿ ಯುವಜನರ ನಾಯಕತ್ವಕ್ಕೆ ಭಾರತವನ್ನು ಕಾಪಾಡುವ ಶಕ್ತಿ ಇದೆ ಎಂದು ಅನ್ನಿಸುತ್ತದೆ.

ಇಂದು ದೇಶದ ತುಂಬಾ ಸಿಎಎ, ಎನ್‍ಆರ್‍ಸಿ ಎನ್‍ಪಿಆರ್ ಬಗ್ಗೆ ಭೀತಿ ತುಂಬಿದೆ. ಎಷ್ಟೆಂದರೆ ಇತ್ತೀಚೆಗೆ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ಮಾಹಿತಿಗಳನ್ನು ಸಂಗ್ರಹಿಸಲು ಬಂದಾಗ ಅಲ್ಲಿನ ಜನರು ಆ ಗಣತಿಯು ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಬಲೆ ಇರಬೇಕೆಂದು ಭಾವಿಸಿ ಆ ಗಣತಿ ಫಾರಂಗಳನ್ನು ಹರಿದೆಸೆದು ಹಿಂದಕ್ಕೆ ಕಳಿಸಿದ್ದಾರೆ. ಅಷ್ಟೊಂದು ಭೀತಿ ಹರಡಿದೆ.

ಈಗ, ನನ್ನ ಹುಟ್ಟಿದ ದಿನಾಂಕ ಕೇಳಿದರೆ ನನ್ನ ಅವ್ವ ಹೇಳಿದಂತೆ-ಅದು ಸೋಮವಾರ ಸಂಜೆ ರೈಲು ಕವಲಂದೆ ಸ್ಟೇಷನ್‍ನಲ್ಲಿ ನಿಂತು ಹೊರಡುವ ಸಮಯವಂತೆ. ಹೀಗಿರುವಾಗ ದಿನಾಂಕ ಹೇಗೆ ಹೇಳಲಿ? ನನ್ನ ಮೊಮ್ಮಗಳಿಗೆ ನನಗೆ ಬರ್ತ್‍ಡೇ ಇಲ್ಲ ಎಂದು ತಿಳಿದು ಅವಳು ಬೇಜಾರು ಮಾಡಿಕೊಂಡು ‘ನನ್ನ ಹುಟ್ಟಿದ ದಿನವೇ ನಿನ್ನ ಹುಟ್ಟಿದ ದಿನ’ ಎಂದು ನನಗೆ ಸಮಾಧಾನ ಮಾಡಿದ್ದಾಳೆ! ನನಗೇ ಹೀಗಿರುವಾಗ, ಇನ್ನು ನಮ್ಮ ಅಪ್ಪನ ಹುಟ್ಟಿದ ದಿನಾಂಕ ಕೇಳಿದರೆ ಏನು ಹೇಳಲಿ? ಇರುವುದನ್ನು ಹೇಳಿದರೆ ನಾನು ಅನುಮಾನಾಸ್ಪದ [Doughtful] ವ್ಯಕ್ತಿಯಾಗುತ್ತೇನೆ.

ಏನು ಹೇಳಲಿ? ಮೋದಿಯವರ ಅಪ್ಪ ಹುಟ್ಟುವ ಐದು ವರ್ಷಕ್ಕೆ ಮೊದಲು ಎನ್ನಲೆ? ಅಥವಾ ಅಮಿತ್‍ಷಾರ ಅಪ್ಪ ಹುಟ್ಟುವ 20 ವರ್ಷಕ್ಕೆ ಮೊದಲು ಎನ್ನಲೆ? ಬಹುಶಃ ನನ್ನ ಮೂಲ ಇರುವುದು ಹರಪ್ಪ-ಮಹೆಂಜೋದಾರೋದಲ್ಲಿ. ಅದು ಇಂದು ಪಾಕಿಸ್ತಾನದಲ್ಲಿದೆ ಏನು ಮಾಡಲಿ? ಈಗ ಮೊದಲು ಎನ್‍ಪಿಆರ್ ಬಲೆ ಹಾಕುತ್ತಾರೆ. ಇದರ ಆಧಾರದ ಮೇಲೆ ಎನ್‍ಆರ್‍ಸಿ ಆವರಿಸಿ ಅನುಮಾನಾಸ್ಪದ [Doughtful] ಮಾಡುತ್ತಾರೆ. ಆಮೇಲೆ ಈ ಅನುಮಾನಾಸ್ಪದ ‘ಡಿ’ ಗೆ ಸಿಎಎ[ಕಾ] ಯಮಪಾಶ ಹಾಕುತ್ತಾರೆ. ಇದನ್ನೇ ಐತಿಹಾಸಿಕ ಎನ್ನುತ್ತಿದ್ದಾರೆ.

ಇಂತಹವುಗಳನ್ನೆಲ್ಲಾ ಮಾಡಲು ಹೊರಟವರು ಹೇಗೆ ಮಣ್ಣು ಮುಕ್ಕಿದರು ಎಂದು ನಾವು ಅಕ್ಕಪಕ್ಕ ನೋಡಿಯಾದರೂ ಕಲಿಯಬೇಕಾಗಿದೆ. ಪತ್ರಕರ್ತ ಕೆ.ಎಸ್.ದಕ್ಷಿಣಾಮೂರ್ತಿಯವರು ತಮ್ಮ ಲೇಖನವೊಂದರಲ್ಲಿ ಹೇಗೆ ಕೆಲವು ದೇಶಗಳು ತಂತಮ್ಮ ದೇಶದ ರಾಜಧರ್ಮ ಹಾಗೂ ಸಂವಿಧಾನದಲ್ಲಿ ಹಸ್ತಕ್ಷೇಪ ಮಾಡಲು ಹೋಗಿ ಏನೆಲ್ಲಾ ದುರಂತಕ್ಕೆ ತುತ್ತಾದವು ಎಂಬುದನ್ನು ವಿವರಿಸುತ್ತಾರೆ.

1956ರಲ್ಲಿ ಶ್ರೀಲಂಕಾ ‘ಸಿಂಹಳದವರಿಗೆ ಮಾತ್ರ’ ಎಂದು ಮಾಡಲು ಹೋಗಿ ಎಲ್‍ಟಿಟಿಇ ಹುಟ್ಟಿಗೆ ಕಾರಣವಾಯ್ತು. ಧ್ವಂಸ, ಹಿಂಸೆ, ಸಾವು, ನೋವು ರಾಜೀವ್‍ಗಾಂಧಿಯವರನ್ನು ಬಲಿ ತೆಗೆದುಕೊಂಡಿತು. ರುವಾಂಡಾದಲ್ಲಿ ಅಲ್ಪಸಂಖ್ಯಾತ ಟುಟ್ಸಿ ಮತ್ತು ಬಹುಸಂಖ್ಯಾತ ಹುಟುಗಳ ಮಧ್ಯೆ ಸರ್ಕಾರವೇ ಬತ್ತಿ ಇಟ್ಟಿತು. ಐ.ಡಿ ಕಾರ್ಡ್ ಕಡ್ಡಾಯ ಮಾಡುತ್ತದೆ. ಕೇವಲ ನೂರು ದಿನಗಳಲ್ಲಿ 8 ಲಕ್ಷ ಜನ ಹತರಾಗುತ್ತಾರೆ.

ಸಾಯುವಾಗ ಒಂದೇ ಗುಂಪಿನವರು ಸಾಯುವುದಿಲ್ಲ. ಅಮಾಯಕರು ಹೆಚ್ಚು ಸಾಯುತ್ತಾರೆ. ಇದನ್ನೀಗ ಭಾರತ ಸರ್ಕಾರ ಮಾಡಲು ಹೊರಟಿದೆ. ಪಾಕಿಸ್ಥಾನದಲ್ಲಿ ಕೂಡ ಉರ್ದು ಭಾಷೆ ಮತ್ತು ಲಿಪಿಯನ್ನು ಬೆಂಗಾಲಿ ಮುಸ್ಲಿಮರ ಮೇಲೆ ಹೇರಲು ಹೋಗಿ ಇಡೀ ರಾಷ್ಟ್ರವೇ ಹೋಳಾಯ್ತು.

ಯುಗೊಸ್ಲಾವಿಯದಲ್ಲಿ ಎಂದೋ ಮುಚ್ಚಿಹೋಗಿದ್ದ ಜನಾಂಗೀಯ/ ಧಾರ್ಮಿಕ ಬಿರುಕನ್ನು ಮತ್ತೆ ಕೆದಕಲು ಹೋಗಿ ಕ್ರಿಶ್ಚಿಯನ್‍ರ ವಿರುದ್ಧ ಮುಸ್ಲಿಮರು, ಸರ್ಬರ ವಿರುದ್ಧ ಬೊಸ್ನಿಯನ್ನರು, ಕ್ರೊವೇಷಿಯನ್ನರ ವಿರುದ್ಧ ಸರ್ಬರು ಪರಸ್ಪರ ಶತ್ರುಗಳಾಗಿ ಈಗಲೂ ಅಲ್ಲಿ ಹಿಂಸೆ ತಾಂಡವವಾಡುತ್ತಿದೆ.

ಈ ರೀತಿಯಾಗುವುದು ಭಾರತಕ್ಕೆ ಬೇಕಾಗಿದೆಯೆ? ಸರ್ಕಾರಕ್ಕೇ ತನ್ನ ವಿಫಲತೆ ಮುಚ್ಚಿಕೊಳ್ಳಲು ಬೇಕಾಗಿರಬಹುದು. ಜನರು ಪೌರತ್ವ ರುಜುವಾತು ಪಡಿಸಲು ಅಲೆಯುತ್ತಿರಲಿ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಕ್ಕೆ ತಲೆ ಕೆಡಿಸಿಕೊಳ್ಳದಿರಲಿ ಎಂದು ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿದೆ ಎಂದು ಕಾಣುತ್ತದೆ.

ನನ್ನ ಪೌರತ್ವದ ಬಗ್ಗೆ ಅನುಮಾನವಿರಬಹುದು ಆದರೆ ಸರ್ಕಾರವೇ ಪೌರತ್ವದ ಬೆಂಕಿ ಹಚ್ಚಿರುವುದರಲ್ಲಿ ಅನುಮಾನವೇ ಇಲ್ಲ. ಇದೆಲ್ಲಾ ಜನಸಮುದಾಯಕ್ಕೆ ಬೇಕಾಗಿದೆಯೆ? ಇದನ್ನೆಲ್ಲಾ ಪ್ರಶ್ನಿಸಬೇಕಾದ ಸಂಸತ್‍ನಲ್ಲಿ ಅಪರಾಧಿಗಳು, ಕೋಟ್ಯಾಧಿಪತಿಗಳು ಹೆಚ್ಚಾಗಿದ್ದು ಸಂಸತ್‍ನಿಂದ ಏನನ್ನೂ ನಿರೀಕ್ಷಿಸಲಾಗದು ಎನ್ನುವಂತಾಗಿದೆ. ಹಾಗೂ ರಾಜಕೀಯ ಪಕ್ಷಗಳ ಸ್ಥಿತಿಗತಿಯೂ ದಯನೀಯವಾಗಿದೆ.

ಕಮ್ಯುನಿಸ್ಟರು ಸ್ಥಗಿತವಾಗಿದ್ದಾರೆ. ಆಮ್‍ಆದ್ಮಿ, ಸ್ವರಾಜ್‍ಇಂಡಿಯಾದಂತಹ ಪ್ರಯೋಗಶೀಲ ಪಕ್ಷಗಳು ವ್ಯಾಪಕವಾಗುತ್ತಿಲ್ಲ. ಮೋದಿಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿದೆ. ವಿಪರ್ಯಾಸವೆಂದರೆ ಈ ಮೋದಿಶಾ ಆಡಳಿತವು ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳನ್ನು ತೆವಳುವಂತೆ ಮಾಡಿಬಿಟ್ಟಿವೆ.

ವಿಪರ್ಯಾಸವೆಂದರೆ ಈ ಮೊದಿಶಾ ಆಡಳಿತವು ಸ್ವತಃ ತನ್ನ ಪಕ್ಷ ಬಿಜೆಪಿಯನ್ನೇ ಧ್ವಂಸ ಮಾಡಿಬಿಟ್ಟಿದೆ. ಅತಿ ದೊಡ್ಡ ಪಕ್ಷ ಎನಿಸಿಕೊಂಡಿರುವ ಬಿಜೆಪಿಗೆ ಒಂದು ರಾಜಕೀಯ ಪಕ್ಷಕ್ಕೆ ಇರಬೇಕಾದ ಯಾವ ಚಹರೆಯೂ ಇಂದು ಉಳಿದಿಲ್ಲ. ಜೀವ ಇಲ್ಲದ ಸತ್ತ ದೇಹದಂತೆ ಇದೆ. ಬಿಜೆಪಿ ಪಕ್ಷದ ಹೆಸರಿನಲ್ಲಿ ಮೋದಿ-ಶಾ ಗ್ಯಾಂಗ್ ಆಡಳಿತ ನಡೆಸುತ್ತಿದೆ.

ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಅವರು ಸಂವಿಧಾನದ ಸಭೆಯಲ್ಲಿ, ಜಾತಿ ಮತ ಭೇದದ ಕಾರಣವಾಗಿ ಭಾರತವು ಹೇಗೆ ಗುಲಾಮಗಿರಿಗೆ ತುತ್ತಾಯಿತು ಎಂಬ ಸಂಗತಿಗಳನ್ನು ವಿವರಿಸಿ ಹೇಳುತ್ತ ನೀಡುವ ಎಚ್ಚರಿಕೆಯನ್ನು ನಾವಿಂದು ಕೇಳಿಸಿಕೊಳ್ಳಬೇಕಾಗಿದೆ- “ಚರಿತ್ರೆ ಮತ್ತೆ ಮರುಕಳಿಸುತ್ತದೆಯೇ? ಈ ಯೋಚನೆ ನನ್ನಲ್ಲಿ ಆತಂಕ ಮೂಡಿಸುತ್ತದೆ.

ನಮಗೆ ಈಗಾಗಲೇ ಇದ್ದ ಹಳೆಯ ಶತ್ರುಗಳಾದ ಜಾತಿ, ಧರ್ಮಗಳ ಜೊತೆಗೆ ವಿಭಿನ್ನ ಮತ್ತು ವಿರೋಧೀ ರಾಜಕೀಯ ಸಿದ್ಧಾಂತಗಳ ಹಲವು ರಾಜಕೀಯ ಪಕ್ಷಗಳೂ ಸೇರಿಕೊಳ್ಳುತ್ತವೆ. ಈ ವಾಸ್ತವ ಅರಿವಾದ ಕೂಡಲೆ ನನ್ನ ಆತಂಕ ಇನ್ನೂ ತೀವ್ರವಾಗುತ್ತದೆ. ಭಾರತೀಯರು ದೇಶವನ್ನು ತಮ್ಮ ಮತಧರ್ಮಗಳಿಗಿಂತ ಮುಖ್ಯವೆಂದು ಭಾವಿಸುತ್ತಾರೆಯೋ ಅಥವಾ ಅವರಿಗೆ ತಮ್ಮ ದೇಶಕ್ಕಿಂತ ತಮ್ಮ ಮತಧರ್ಮಗಳೇ ಹೆಚ್ಚು ಮುಖ್ಯವಾಗುತ್ತದೋ? ನನಗೆ ಗೊತ್ತಾಗುತ್ತಿಲ್ಲ. ಆದರೆ ಇಷ್ಟಂತೂ ಖಚಿತ.

ರಾಜಕೀಯ ಪಕ್ಷಗಳು ಜಾತಿಧರ್ಮವನ್ನೇ ದೇಶಕ್ಕಿಂತ ಮುಖ್ಯ ಎಂದು ಭಾವಿಸಿದರೆ ನಮ್ಮ ಸ್ವಾತಂತ್ರ್ಯಕ್ಕೆ ಎರಡನೇ ಬಾರಿ ಗಂಡಾಂತರ ಬಂದಂತೆ. ಹಾಗೇನಾದರೂ ಆದರೆ ಬಹುಶಃ ಸ್ವಾತಂತ್ರ್ಯ ಅನ್ನುವುದು ನಮಗೆ ಮತ್ತೆ ಸಿಗುವುದಿಲ್ಲ. ಅದನ್ನು ಶಾಶ್ವತವಾಗಿ ಕಳೆದುಕೊಂಡುಬಿಡುತ್ತೇವೆ. ಇದರ ವಿರುದ್ಧ ನಾವೆಲ್ಲರೂ ಅಚಲವಾಗಿ ನಿಲ್ಲಬೇಕು. ನಮ್ಮಲ್ಲಿ ಕೊನೆಯ ಹನಿ ರಕ್ತ ಇರುವವರೆಗೆ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ದೃಢಸಂಕಲ್ಪ ಮಾಡಬೇಕು.”

ಈ ಕಾಲ ಈಗ ಬಂದಿದೆ. ಭಾರತದ ಪೌರತ್ವ ನಿರ್ಧಾರಕ್ಕೆ ಮತಧರ್ಮಗಳನ್ನೂ ಪರಿಗಣಿಸಿ ಸಂವಿಧಾನದ ಮೌಲ್ಯಕ್ಕೆ ಬಿಲ ತೋಡಿ ತಂತಾನೇ ಸಂವಿಧಾನದ ಆಸೆಗಳು ಕುಸಿಯುವಂತೆ ಮಾಡಲಾಗುತ್ತಿದೆ. ಹೌದು, ಇಂದು ಭಾರತ ಎರಡನೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಯಾಚಿಸುತ್ತಿದೆ.

ಕೊನೆಯದಾಗಿ, ಇಷ್ಟಿದ್ದೂ ಹೀಗಿದ್ದೂ ಆದರೂ ಮೋದಿಯವರಿಗೆ ಒಂದು ಪ್ರಾರ್ಥನೆ ಮಾಡುವೆ. ನಿಮ್ಮ ಕಣ್ಗಳ ಕೆಳಗೆ ನಡೆದ ಜೆಎನ್‍ಯು ಘಟನೆಯನ್ನು ನೋಡಿ ತತ್ತರಿಸಿ ಹೋದೆ. ಗುಂಪು ಥಳಿತ ನೋಡಿದಾಗಲು ಈ ದೇಶದಲ್ಲಿ ರಾಜನಿಲ್ಲ (ರೂಲರ್ ಇಲ್ಲ), ಅರಾಜಕತೆ ಇದೆ ಅನ್ನಿಸುತ್ತದೆ. ಪೊಲೀಸ್ ವ್ಯವಸ್ಥೆ ಕಳಂಕಿತವಾಗಿ ಬಿಟ್ಟಿತು.

ಇನ್ನು ಮಿಲ್ಟ್ರಿಕತೆ ಏನೋ ಗೊತ್ತಿಲ್ಲ. ಇದು ಪ್ರಧಾನಿಯ ಬುಡವನ್ನೆ ಬುಡಮೇಲು ಮಾಡುತ್ತದೆ. ಮಾಂತ್ರಿಕರು ಭೂತ ಪಿಶಾಚಿಗಳನ್ನು ವಶಪಡಿಸಿಕೊಂಡು ಒಂದು ಬಾಟಲ್‍ನಲ್ಲಿ ಕೂಡಿ ಭದ್ರವಾಗಿ ಮುಚ್ಚಳ ಹಾಕಿ ಇಟ್ಟುಕೊಂಡಿರುತ್ತಾರಂತೆ. ಅವರೇನಾರು ರಾಗದ್ವೇಷಕ್ಕೆ ಒಳಗಾಗಿ ಮುಚ್ಚಳ ತೆಗೆದು ಪಿಶಾಚಿಗಳನ್ನು ತನ್ನ ಹಗೆ ಮೇಲೆ ಛೂ ಬಿಟ್ಟರೆ ಅವು ಎಲ್ಲವನ್ನೂ ತಿಂದು ಹಾಕಿ ಕೊನೆಗೆ ವಶಪಡಿಸಿಕೊಂಡಿರುವ ಮಾಂತ್ರಿಕನ ಬಳಿಗೆ ಬಂದು ಮಾಂತ್ರಿಕನನ್ನೇ ತಿಂದು ಹಾಕುತ್ತವಂತೆ.

ಒಬ್ಬ ರೂಲರ್ Negative ಆದಾಗ ಇದು ಆಗುತ್ತಾ ಬಂದಿದೆ. ಇಂಥವರಿಗೆ ಅವರ ಪಕ್ಕದಲ್ಲಿ ಇರುವವರೇ ಮೃತ್ಯು ಆಗುತ್ತಾರೆ. ತಾವು ಗುಹೆಯಲ್ಲಿ ಧ್ಯಾನ ಮಾಡುತ್ತಿರುವುದನ್ನು ಟಿವಿಯಲ್ಲಿ ನೋಡಿದ್ದರಿಂದ ಇದನ್ನು ಹೇಳಬೇಕಾಯ್ತು, ಕ್ಷಮೆ ಇರಲಿ. ತಮ್ಮ ಧ್ಯಾನವು ರಾಗದ್ವೇಷ ಇಲ್ಲದ ಮನಸ್ಸನ್ನು ಪಡೆಯುವಂತಾಗುವುದಕ್ಕೆ ಕಾರಣವಾಗಿ ಅದರಿಂದ ಆರ್ಥಿಕ ಚೇತರಿಕೆ, ಬೆಲೆ ಏರಿಕೆಯ ನಿಯಂತ್ರಣ, ಉದ್ಯೋಗ ಹೆಚ್ಚಳಕ್ಕೆ ಕಾರಣವಾದರೆ ದೇಶಕ್ಕೆ ಒಳ್ಳೆಯದು, ತಮಗೂ ಕೂಡ. ನಮಸ್ಕಾರ.

ಕೃಪೆ : ನಮ್ಮ ಬನವಾಸಿ.ಕಾಂ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.

ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.

ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.

ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.

ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.

ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending