ನೆಲದನಿ

“ಟುಕ್ಡೇ ಗ್ಯಾಂಗ್” ನ ಅಸಹ್ಯ ಅಟ್ಟಹಾಸದಲ್ಲಿ..!

Published

on

ಬರಹ : ಸಂಜ್ಯೋತಿ ವಿ.ಕೆ
  • ಸಂಜ್ಯೋತಿ ವಿ. ಕೆ, ಬೆಂಗಳೂರು

ಚಂದಿರನು ಜೊತೆಗಿರುವುದನ್ನೂ ಸಹಿಸದವರು ಎಲ್ಲೆಲ್ಲರನ್ನೂ ದೂರದೂರ ತಳ್ಳುವ ದ್ವೇಷಪ್ರೇಮಿಗಳೇ ಹೊರತು, ಸಾಮರಸ್ಯ, ಸಹಬಾಳ್ವೆಯಿಂದ ದೇಶ ಬೆಳಗುವುದನ್ನು ಬಯಸುವ ದೇಶಪ್ರೇಮಿಗಳಂತೂ ಅಲ್ಲ. ನಿಜದ ಭಾರತ ಛಿದ್ರ ಛಿದ್ರವಾಗುತ್ತಿದೆ, ಈ “ಟುಕ್ಡೇ ಗ್ಯಾಂಗ್” ನ ಅಸಹ್ಯ ಅಟ್ಟಹಾಸದಲ್ಲಿ.

ಎಲ್ಲರೂ ಎಲ್ಲರನ್ನೂ ಯಾವುದಾದರೊಂದು ಕಾರಣಕ್ಕೆ, ಯಾವುದಾರೊಂದು ಸ್ಥರದಲ್ಲಿ ‘ಅನ್ಯ’ರನ್ನಾಗಿ ಕಾಣುತ್ತಲೇ, ಭಾವಿಸುತ್ತಲೇ ಭಗಭಗನೆ ಉರಿಯುತ್ತಲೇ ಇರಬೇಕು. ಹಿಂದೂಗಳೆನಿಸಿಕೊಂಡವರು(?) ಮುಸ್ಲಿಮರನ್ನು, ಕ್ರೈಸ್ತರನ್ನು; ‘ಹುಟ್ಟಿನಿಂದ ತಮ್ಮದು ಶ್ರೇಷ್ಟ ಜಾತಿ’ ಎಂದು ಸುಳ್ಳೇ ಬೀಗುವವರು ಇತರರೆಲ್ಲರನ್ನೂ ಅನ್ಯರಾಗಿ ಕೀಳಾಗಿ ಕಾಣುತ್ತಾ; ಆ ಕೆಳಗೆ ನಿಂತವರು ತಮ್ಮ ಮೇಲಾಗುತ್ತಿರುವ ಶೋಷಣೆಯನ್ನು ಗುರಿತಿಸಲಾಗದಂತೆ ಅವರವರಲ್ಲೇ ಶ್ರೇಷ್ಟ-ಕನಿಷ್ಟಗಳೆಂದು ಕಿತ್ತಾಡುತ್ತಾ ಒಬ್ಬರನ್ನೊಬ್ಬರು ಅನ್ಯರಾಗಿ ಕಾಣುತ್ತಲೇ ಇರಬೇಕೆನ್ನುವುದು ಮನುವಾದಿಗಳ ಸಂಹಿತೆಯಾಗಿದೆ.

ಇಷ್ಟು ಸಾಲದೆಂಬಂತೆ ಯಾವುದು ನಮ್ಮ ಅನನ್ಯತೆ, ಅಸ್ಮಿತೆಯೋ, ಯಾವುದು ಈ ದೇಶದ ಬಹುತ್ವದ ಮೂಲಸೆಲೆಯೋ ಅಂತಹವುಗಳ ನಡುವೆಯೂ ಅನ್ಯತೆಯ ಭೇದ, ದ್ವೇಷ ಹುಟ್ಟುಹಾಕಲಾಗುತ್ತಿದೆ. ಭಾಷೆ-ಭಾಷೆಗಳ ನಡುವೆ, ಉತ್ತರ-ದಕ್ಷಿಣಗಳ ನಡುವೆ ಅನ್ಯತೆಯ ಬೆಂಕಿ ಹಚ್ಚಿ ಉರಿ ಹೆಚ್ಚಾಗಿಸಲು ನಿರಂತರ ತುಪ್ಪ ಸುರಿಯುತ್ತಲೇ ಇದ್ದಾರೆ. ಈ ಅನ್ಯತೆ, ಅಸಹಿಷ್ಣುತಯೇ ಸದಾ ಜನರ ಮನಸ್ಸು ಭಾವಗಳನ್ನು ಆಕ್ರಮಿಸಿರಬೇಕು.

ಯಾವ ಮಟ್ಟಿಗೆ ಇವು ಜನರನ್ನು ಅನ್ಯದ್ವೇಷದ ವಿಷವರ್ತುಲದಲ್ಲಿ ಮುಳುಗಿಸಿದೆಯೆಂದರೆ ಅವರಿಗೆ ತಮ್ಮ ಕುಸಿಯುತ್ತಿರುವ ಜೀವನಮಟ್ಟ
(ಕುಸಿಯುತ್ತಿರುವ ಭಾರತದ ಆರ್ಥಿಕತೆ, , ಏರುತ್ತಲೇ ಇರುವ ಜೀವನಾವಶ್ಯಕ ವಸ್ತುಗಳ ಬೆಲೆಗಳು, ಹಬ್ಬುತ್ತಿರುವ ನಿರುದ್ಯೋಗ, ಮಾಯವಾಗುತ್ತಿರುವ ದುಡಿಮೆಯ ಅವಕಾಶಗಳು…) ಕಸಿದುಕೊಳ್ಳುತ್ತಿರುವ ತಮ್ಮ ಹಕ್ಕುಗಳು (ಸರ್ವರಿಗೂ ಸಮಾನ ಶಿಕ್ಷಣಕ್ಕಾಗಿ ಇರಬೇಕಾದ ಸರ್ಕಾರಿ ಶಾಲೆಗಳು; ಸರ್ವರಿಗೂ ಮೂಲಭೂತ ಆರೋಗ್ಯಕ್ಕಾಗಿ ಇರಬೇಕಾದ ಸರ್ಕಾರಿ ಆಸ್ಪತ್ರೆಗಳು.

ಸಾರ್ವಜನಿಕ ಆಹಾರ ಧಾನ್ಯ ವಿತರಣೆಯ ಮೂಲಕ ಆಹಾರ ಭದ್ರತೆ; ಸಾಮಾಜಿಕ ನ್ಯಾಯಕ್ಕಾಗಿ ತಂದ ಮೀಸಲಾತಿಯನ್ನು ಹೀಯಾಳಿಸುವಂತೆ ಮುಚ್ಚುತ್ತಿರುವ ಸರ್ಕಾರಿ ಉದ್ಯಮಗಳು, ಸಾಲದೆಂಬಂತೆ ಮೀಸಲಾತಿಯ ಮೂಲ ತತ್ವಕ್ಕೇ ಕೊಳ್ಳಿ ಇಡುವಂತ ಆರ್ಥಿಕತೆ ಆಧಾರಿತ ಮಿಸಲಾತಿ; ಕುಡಿಯುವ ನೀರಿನ ಸರಬರಾಜಿನಿಂದಿಡಿದು, ವಿದ್ಯತ್, ರಸ್ತೆ, ರೈಲು, ರೈಲ್ವೆ ನಿಲ್ದಾಣದಾದಿಯಾಗಿ ಸಾರ್ವಜನಿಕ ಸೇವೆಗಳೆಲ್ಲವನ್ನೂ ಖಾಸಗಿಯ ಸ್ವತ್ತಾಗಿಸುತ್ತಾ, ಅವರ ಹೊಟ್ಟೆ ಜೇಬುಗಳನ್ನು ಭರ್ತಿ ಮಾಡುತ್ತಾ, ಬಡವರಿಗೆ ಕನಿಷ್ಟ ಸೌಲಭ್ಯಗಳೂ ಕೈಗೆಟುಕುತ್ತಿಲ್ಲ.

ಉಳ್ಳವರು ಮಾತ್ರವೇ ಬದುಕವ ಹಕ್ಕುಳ್ಳವರೆಂಬಂತೆ ಬಡವರ ಬವಣೆಗಳನ್ನು ಗೇಲಿ ಮಾಡುವಂತ ಸರ್ಕಾರದ ನೀತಿಗಳು) ಇವುಗಳ ಬಗೆಗೆ ಚಿಂತಿಸುವುದಿರಲಿ, ಗಮನಿಸಲೂ ಸಾಧ್ಯವಾಗದಂತೆ ಇಂತಹ ಪರಸ್ಪರ ದ್ವೇಷ ಮೇಲಾಟಗಳಲ್ಲೇ ಪತನಗೊಳ್ಳಬೇಕು.

ಹಾಗಿದ್ದರೆ ಮಾತ್ರವೇ ತಾವು ಪೊಳ್ಳೇ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಿರಂತರ ಸರ್ವಾಧಿಕಾರದ ಗದ್ದುಗೆಯಲ್ಲಿ ಬೀಗುತ್ತಿರಬಹುದೆಂಬ ಹುನ್ನಾರ ಹೂಡಿರುವ ಆಳುವವರ ಕ್ಷದ್ರತೆ ಇಂದು ದೇಶವನ್ನು ಯಾವ ಹೀನಾಯ ಸ್ಥಿತೆಗೆ ತಂದಿದೆಯೆಂದರೆ;

ಜನರು ಜೊತೆಯಲ್ಲಿ ಆಡುತ್ತಾ ಬೆಳೆದ ಅಕ್ಕಪಕ್ಕದವರನ್ನೂ, ತಾವು ಎಂದೂ ನೋಡಿರದ ಅರಿತಿರದವರನ್ನೂ ಜಾತಿ, ಮತ ಧರ್ಮಗಳ ಹೆಸರಲ್ಲಿ ದ್ವೇಷಿಸುತ್ತಿದ್ದಾರೆ. ತಮ್ಮ ತಮ್ಮ ಕುಟುಂಬ, ಸ್ನೇಹವಲಯದಲ್ಲೂ ತಮ್ಮ ವಾದ ಒಪ್ಪದವರನೆಲ್ಲ ಸಾರಾಸಗಟಾಗಿ ದ್ವೇಷಿಸುವ, ತಿರಸ್ಕರಿಸುವಂತ ಮನಸ್ಥಿತಿ ಬೆಳೆಯುತ್ತಿದೆ.

ಈ ದ್ವೇಷಪ್ರೇಮಿಗಳಿಗೆ ‘ಸರ್ಕಾರವೇ ತಮ್ಮ‌ಪರ’ವೆಂಬ ಹುಂಬತನ ಯಾವ ಕೇಡನ್ನಾದರೂ ಮಾಡಬಲ್ಲ ದುಷ್ಟ ಧೈರ್ಯವನ್ನು ತುಂಬುತ್ತಿದೆ. ಪ್ರತಿದಿನದ ಬದುಕಿಗಾಗಿ ದುಡಿಯುವ, ಉಡುವ, ಉಣ್ಣುವ ವಿಷಯಗಳಿಂದ ಹಿಡಿದು, ನಾವು ನೋಡುವ, ಹಾಡಿ ಆಡಿಕೊಳ್ಳುವ ಕಲೆಯವರಗೆ ತಾವು ವಿಧಿಸಿದ ನಿಯಮದಂತೆ ಎಲ್ಲರೂ ನಡೆಯಬೇಕೆಂಬ ದಾಷ್ಟ್ರ್ಯ ತೋರುವಲ್ಲಿಗೆ ಅವರನ್ನು ತಂದು ನಿಲ್ಲಿಸಿದೆ.

ಜನರ ಸಾಂವಿಧಾನಿಕ ಹಕ್ಕುಗಳನ್ನು ಕಾವಲು ಕಾಯಬೇಕಾದ ಪೋಲಿಸ್ ವ್ಯವಸ್ಥೆ, ಸರ್ಕಾರ, ಕೊನೆಗೆ ನ್ಯಾಯಾಂಗ ಎಲ್ಲವೂ ಈ ದುಷ್ಟತನದ ಮಾಯಕದೊಳಗೆ ಕರಗಿಹೋದಂತೆ ಭಾಸವಾಗುತ್ತಿದೆ. ಇವೆಲ್ಲದರ ಮುಂದುವರಿದ ಭಾಗವೇ ನಿನ್ನೆ ಆನವಟ್ಟಿಯಲ್ಲಿ ನಡೆಯಬೇಕಿದ್ದ ‘ಜತೆಗಿರುವನು ಚಂದಿರ’ ನಾಟಕ ಪ್ರದರ್ಶನಕ್ಕೆ ಮತೀಯ ತೀವ್ರವಾದಿಗಳು ತಡೆಯೊಡ್ಡಿರುವ ಘಟನೆ.

ಆದರೆ ಇದು ಹಿಗೆಯೇ ಸಾಗುತ್ತಲೇ ಇರಬಹುದೆಂಬ ಭ್ರಮೆ ಚೂರಾಗುವ ದಿನಗಳೂ ಬರಲಿವೆ. ಎಲ್ಲರನ್ನೂ ಎಲ್ಲ ಕಾಲದಲ್ಲೂ ಮರುಳು ಮಾಡುತ್ತಲೇ ಇರುವುದು ಸಾಧ್ಯವಿಲ್ಲದ ವಿಷಯ. ಈಗಾಗಲೇ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಅದರ ವೇಗವನ್ನು ಹೆಚ್ಚಿಸುವಲ್ಲಿ ಈ ದ್ವೇಷ ಪ್ರೇಮಿಗಳ ಹೆಚ್ಚುತ್ತಿರುವ ಮದವೂ ಕೊಡುಗೆ ನೀಡಲಿದೆ.

ಜನಸಾಮಾನ್ಯರು ತಾವು ತಮ್ನಷ್ಟಕ್ಕೆ ನೆಮ್ಮದಿಯ ಬದುಕು ಕಟ್ಟಿಕೊಂಡು, ಉಂಡುಟ್ಟು ಕಲೆ ಇತ್ಯಾದಿಗಳನ್ನು ಆಸ್ವಾಧಿಸುತ್ತಾ ನೆಮ್ಮದಿಯಾಗಿ ಜೀವಿಸಲು ಕಂಟಕರಾಗುತ್ತಿರುವ ಈ ನೀಚರನ್ನು ನೆಲಕ್ಕೊಗೆಯುವ ಕಾಲ ಬೇಗ ಬರಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version