ಬಹಿರಂಗ
‘ಯೆಹೂದಿ ನರಮೇಧ 75’ : 60 ಲಕ್ಷ ಯೆಹೂದಿಗಳ ನರಮೇಧ 1933-45 ಅವಧಿಯಲ್ಲಿ ಹೇಗಾಯಿತು?
- ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ ಬಂದ ಸಮಯದಿಂದ, ಅದಕ್ಕಾಗಿ ಸೂಕ್ತ ನೀತಿಗಳ, ಕ್ರಮಗಳ ಮತ್ತು ಕಾನೂನುಗಳ ಒಂದು ಸರಣಿಯನ್ನು ರೂಪಿಸಿ ಜಾರಿಗೊಳಿಸಿದರು.ಇದರ ಭಾಗವಾಗಿ ಯೆಹೂದಿಯರನ್ನು ಮೊದಲು ಹೇಗೆ ಪ್ರತ್ಯೇಕಿಸಲಾಯಿತು, ನಂತರ ಬಹಿಷ್ಕರಿಸಲಾಯಿತು ಮತ್ತು ಆನಂತರ ‘ಅಮಾನವೀಯ’ಗೊಳಿಸಲಾಯಿತು, ಕೊನೆಗೆ ಹೇಗೆ ಕೊಲ್ಲಲಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. ಒಂದು ಸಮುದಾಯದ ನರಮೇಧದ ಹಲವು ಹಂತಗಳ ಈ ಭೀಕರ ಚರಿತ್ರೆ ಮರೆಯುವಂತಹದ್ದಲ್ಲ. ಇದು ಯಾವುದೇ ಇತರ ಸಮುದಾಯಕ್ಕೆ ಮರುಕಳಿಸಬಾರದು. ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಮಾತ್ರ ‘ಯೆಹೂದಿ ನರಮೇಧ’ದಲ್ಲಿ ಬಲಿಯಾದವರ ನೆನಪಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ.
–ನಾಗರಾಜ ನಂಜುಂಡಯ್ಯ
ಈ ಜನವರಿ 27 ರಂದು, ಪೊಲೆಂಡಿನಲ್ಲಿರುವ ‘ಆಶ್ವಿಟ್ಜ್’ ಯಾತನಾ ಶಿಬಿರವಾಸಿಗಳು ಸೋವಿಯೆಟ್ ಕೆಂಪು ಸೇನೆಯಿಂದ, ವಿಮೋಚನೆ ಹೊಂದಿದ ದಿನದ 75ನೇ ವಾರ್ಷಿಕೋತ್ಸವವನ್ನು ಆಚÀರಿಸಲಾಯಿತು. ಈಗ ಅದನ್ನು ‘ಅಂತರರಾಷ್ಟ್ರೀಯ ಯೆಹೂದಿ ನರಮೇಧ ನೆನಪಿನ ದಿನ” ವೆಂದು ಆಚರಿಸಲಾಗುತ್ತಿದೆ. ಸುಮಾರು 55 ರಿಂದ 60 ಲಕ್ಷ ಜನ ಈ ಯೆಹೂದಿ ನರಮೇಧದಲ್ಲಿ ಕೊಲ್ಲಲ್ಪಟ್ಟರು. ಆಶ್ವಿಟ್ಜ್ ಸಂಕೀರ್ಣದ ಯಾತನಾ ಶಿಬಿರ (ಕಾನ್ಸೆಂಟ್ರೇಶನ್ ಕ್ಯಾಂಪ್) ವೊಂದರಲ್ಲೇ ಸುಮಾರು 9.6 ಲಕ್ಷ ಜನರು, ಅದರಲ್ಲಿ ಬಹುತೇಕ ಎಲ್ಲರೂ ಯೆಹೂದಿ ಸಮುದಾಯುದವರೇ ಸಾವನ್ನಪ್ಪಿದ್ದರು ಎಂದು ದಾಖಲಾಗಿದೆ.
ಲಕ್ಷಾಂತರ ಯೆಹೂದಿಗಳನ್ನು ನಾಜಿಗಳು ‘ನಿರ್ಮೂಲನ’ (ಸಾಮಾನ್ಯವಾಗಿ ವಿನಾಶಕಾರಿ ಕೀಟಗಳಿಗೆ ಬಳಸುವ ಶಬ್ದ) ಮಾಡಿದ್ದರ ಕುರಿತು ಅರಿಯಲು, ಯೆಹೂದಿಗಳನ್ನು ಮೊದಲು ಹೇಗೆ ಪ್ರತ್ಯೇಕಿಸಲಾಯಿತು, ನಂತರ ಬಹಿಷ್ಕರಿಸಲಾಯಿತು ಮತ್ತು ಆನಂತರ ಅಮಾನವೀಯ ಗೊಳಿಸಲಾಯಿತು, ಕೊನೆಗೆ ಹೇಗೆ ಕೊಲ್ಲಲಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು.
1945ರ ಹೊತ್ತಿಗೆ ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ ಬಂದ ಸಮಯದಿಂದ, ಅದಕ್ಕಾಗಿ ಸೂಕ್ತ ನೀತಿಗಳ, ಕ್ರಮಗಳ ಮತ್ತು ಕಾನೂನುಗಳ ಒಂದು ಸರಣಿಯನ್ನು ರೂಪಿಸಿ ಜಾರಿಗೊಳಿಸಿದರು. ಈ ನೀತಿಗಳು ಹಂತ ಹಂತವಾಗಿ ಹೊಮ್ಮುತ್ತಾ ಹೋದಂತೆ, ಅವುಗಳ ಭೀಕರತೆ ಜರ್ಮನಿಯ ಹೊರಗೂ ಒಳಗೂ ಸ್ಪಷ್ಟವಾಗಿ ಗೋಚರಿಸಿದರೂ ಅದನ್ನು ನಿರ್ಲಕ್ಷಿಸಲಾಯಿತೆಂದೇ ಹೇಳಬೇಕು.
ನ್ಯೂರೆಂಬರ್ಗ್ ಕಾನೂನುಗಳು
ಇಂತಹ ಸರಣಿಯ ಮೊದಲ ಹಂತವೆಂದರೆ, ಎಲ್ಲಾ ಯೆಹೂದಿಗಳ ಗುರುತಿಸುವಿಕೆ ಮತ್ತು ಅವರ ನೊಂದಾಣಿ. ಇದನ್ನು ನಂತರ ಅವರ ಆಸ್ತಿಯನ್ನು ವಿವಿಧ ರೀತಿಯಲ್ಲಿ ಮುಟ್ಟು ಗೋಲು ಹಾಕಿಕೊಳ್ಳುವುದಕ್ಕೆ ಬಳಸಲಾಯಿತು. ಆ ನಂತರ ಅವರ ಪೌರತ್ವ, ಜೀವನೋಪಾಯದ ವಿಧಾನಗಳು ಮತ್ತು ಕಾನೂನುಬದ್ಧ ಪರಿಹಾರಗಳನ್ನು ತಡೆಯುವ ಕಾನೂನುಗಳನ್ನು ಅಂಗೀಕರಿಸಲಾಯಿತು.
ಈ ಎಲ್ಲಾ ಪ್ರಭುತ್ವ-ಪ್ರಾಯೋಜಿತ ಕ್ರಮಗಳ ಮೂಲಕ ಯೆಹೂದಿಯರಿಗೆ ಬೆದರಿಕೆಗಳನ್ನು ಒಡ್ಡಲಾಯಿತು, ಅವರ ಮೇಲೆ ಹಿಂಸಾಚಾರ ವೆಸಗಲಾಯಿತು. ಅವರನ್ನು ಇನ್ನಷ್ಟು ಬಡತನದತ್ತ ಮತ್ತು ಪರಕೀಯಭಾವದತ್ತ ತಳ್ಳಲಾಯಿತು. ಇವೆಲ್ಲದರ ಫಲವಾಗಿ 1933 ಒಂದು ವರ್ಷದಲ್ಲೇ ಸುಮಾರು 37 ಸಾವಿರ ಯೆಹೂದಿಯರು ಜರ್ಮನಿ ಬಿಟ್ಟು ವಲಸೆ ಹೋದರು.
“ನ್ಯೂರೆಂಬರ್ಗ್ ಕಾನೂನುಗಳು” ಎಂದು ಕುಪ್ರಸಿದ್ಧವಾದ 1935ರಲ್ಲಿ ತರಲಾದ ಕಾನೂನಿನಲ್ಲಿ ಎರಡು ಅಂಶಗಳಿದ್ದವು. ಮೊದಲನೆಯದು “ಯೆಹೂದಿ” ಯಾರೆಂದು ಪ್ರತ್ಯೇಕವಾಗಿ ಗುರುತಿಸುವುದು. ಮತ್ತೊಂದು, “ಜರ್ಮನ್ ಪೌರತ್ವದ ” ಪ್ರತ್ಯೇಕತೆಯನ್ನು ವ್ಯಾಖ್ಯಾನಿಸಿದ ರೀತಿ. ಈ ಎರಡು ಕಾನೂನುಗಳಲ್ಲಿ ಮೊದಲನೆಯದರಲ್ಲಿ, ಯೆಹೂದಿ ಯಾರೆಂದು ಸ್ಪಷ್ಟಿಕರಿಸಲಾಗಿತ್ತು. ಎರಡನೆಯದರಲ್ಲಿ ‘ಜರ್ಮನ್ ಪೌರತ್ವ’ ಯಾರಿಗೆ ಕೊಡಲಾಗುವುದು ಎಂದು ಸ್ಪಷ್ಟಪಡಿಸಲಾಯಿತು.
ಮೊದಲನೆಯ ಕಾನೂನಿನಲ್ಲಿ ‘ಯೆಹೂದಿ’ ಮತ್ತು ‘ಜರ್ಮನ’ರ ನಡುವಿನ ವಿವಾಹವನ್ನು ನಿಷೇಧಿಸಲಾಯಿತು. ಜೊತೆಗೆ, ಯೆಹೂದಿಯರ ಮನೆಗಳಲ್ಲಿ 45 ವರ್ಷದೊಳಗಿನ ಜರ್ಮನ್ ಮಹಿಳೆಯರು ಕೆಲಸ ಮಾಡುವುದನ್ನು ನಿóಷೇಧಿಸಲಾಯಿತು. ಜರ್ಮನ ರ ಪೌರತ್ವವನ್ನು ‘ರಕ್ತದ’ ಮತ್ತು ‘ನಡವಳಿಕೆಯ ನಿರಂತರತೆ’ಗಳ ಮೂಲಕ ಸಾಬೀತು ಪಡಿಸಬೇಕೆಂದು ಕಾನೂನು ಹೇಳಿತು. ಪೌರತ್ವ ಹೊಂದಿದವರು ” ಕಡ್ಡಾಯವಾಗಿ ಜರ್ಮನ್ ಜನರು ಮತ್ತು ರೀಚ್ ‘ ಗೆ ಸೇವೆ ಸಲ್ಲಿಸಲು ಸಿದ್ದರಿರಬೇಕು. ಒಟ್ಟಿನಲ್ಲಿ ‘ನ್ಯೂರೆಂಬರ್ಗ್ ಕಾನೂನುಗಳು’ ಯೆಹೂದಿಯರ ಸಾಮಾಜಿಕ ಮತ್ತು ಆರ್ಥಿಕ ಪ್ರತ್ಯೇಕತೆ ಮತ್ತು ಕಳಂಕಿತತೆಯನ್ನು ಪೂರ್ಣಗೊಳಿಸಿದವು.
ಈ ಪ್ರತ್ಯೇಕತೆ ಮತ್ತು ಕಳಂಕಿತತೆಗಳು 1938 ರಲ್ಲಿ, ಕುಖ್ಯಾತ ‘ಕ್ರಿಸ್ಟಾಲ್ನಕ್ತ್’ (ಒಡೆದ ಗಾಜುಗಳ ರಾತ್ರಿ) ನಲ್ಲಿ ಪರಿಸಮಾಪ್ತಿಯಿತು. ಈ ಕಾನೂನನ್ನು ಬಳಸಿಕೊಂಡು, ಪ್ರಭುತ್ವ ಪ್ರಾಯೋಜಿತ ಹಿಂಸಾತ್ಮಕ ಕೃತ್ಯಗಳು ಮತ್ತು ಕಿರುಕುಳಗಳನ್ನು ನಡೆಸಲಾಯಿತು. ನಾಜಿ ಅರೆ ಸೈನಿಕರು, ನಾಗರಿಕರು ಒಟ್ಟಾಗಿ ಯೆಹೂದಿ ಮನೆಗಳು, ಅವರ ವ್ಯಾಪಾರ ವಹಿವಾಟುಗಳು, ಆಸ್ಪತ್ರೆಗಳು ಮತ್ತು ಅವರ ಪೂಜಾಮಂದಿರ(ಸಿನೆಗಾಗ್) ಗಳ ಮೇಲೆ ದಾಳಿ ನಡೆಸಿದರು. ಇದನ್ನು ಜರ್ಮನ್ ಆಡಳಿತ ಪೋಲಿಸಿನ ಎದುರೇ ನಡೆಸಿದ್ದು, ಅವರು ಅದಕ್ಕೆ ಮೂಕಸಾಕ್ಷಿಗಳಾಗಿದ್ದರು.
ಸತತ ‘ರಾಕ್ಷಸೀಕರಣ’
ಆನಂತರವೂ ವಲಸೆ ಹೋಗದ ಯೆಹೂದಿಗಳನ್ನು 1939ರಲ್ಲಿ ನಾಜಿ ಆಕ್ರಮಣ ನಡೆಸಿ ವಶಪಡಿಸಿಕೊಂಡ ಪೆÇೀಲೆಂಡಿನ ಕೊಳೆಗೇರಿ (ಘೆಟ್ಟೋಸ್) ಗಳಿಗೆ ಓಡಿಸಲಾಯಿತು. ಹೀಗೆ ಒಂದೇ ಸ್ಥಳದಲ್ಲಿ ಅವರನ್ನು ಕೂಡಿಹಾಕಿದ್ದು, ಮುಂದೆ 1941ರ ಹೊತ್ತಿಗೆ ನಾಜಿ ಕಾರ್ಯಕರ್ತರು ಇಡೀ ಯೆಹೂದಿ ಕುಟುಂಬಗಳನ್ನು ಸಮರ್ಥವಾಗಿ ಸುತ್ತುವರಿದು ಯಾತನಾ (ಕಾನ್ಸಂಟ್ರೇಶನ್ ಕ್ಯಾಂಪ್)ಗಳಿಗೆ ಕಳಿಸುವುದನ್ನು ಸುಗಮಗೊಳಿಸಿತು.
ಈ ಇಡೀ ಅವಧಿಯಲ್ಲಿ ಯೆಹೂದಿಗಳ (ಅವರನ್ನು ರಾಕ್ಷಸರಂತೆ ಬಿಂಬಿಸುವ) ‘ರಾಕ್ಷಸಿಕರಣ’ ಸತತವಾಗಿ ಮುಂದುವರೆದಿತ್ತು. 1941 ರಲ್ಲಿಯೇ ಫೀಲ್ಡ್ ಮಾರ್ಷಲ್ ವಾಲ್ಟರ್ ವಾನ್ ರೀಚೆನೌ ಯೆಹೂದಿಯರನ್ನು ಮನುಷ್ಯರೇ ಅಲ್ಲದ ಕೀಳು ಪ್ರಾಣಿಗಳೆಂದು ಪರಿಗಣಿಸುವ ‘ಕಠೋರ ಆಜ್ಞೆ’ ಹೊರಡಿಸಿದ್ದ. ಯೆಹೂದಿಯರನ್ನು ಮನುಷ್ಯರೇ ಅಲ್ಲದ ಕೀಳುಪ್ರಾಣಿಗಳೆಂದು ಪರಿಗಣಿಸಿದ ಮೇಲೆ, ನಿರ್ಲಿಪ್ತ ದಕ್ಷತೆಯಿಂದ ಅವರ ನಿರ್ಮೂಲನೆಗೆ ಮುಂದಾದರು.
ಫೀಲ್ಡ್ ಮಾರ್ಷಲ್ ರೀಚೆನೌ ರವರ ಆಜ್ಞೆಯಲ್ಲಿ ‘ಕಠೋರ ಆದರೆ, ನ್ಯಾಯಯುತ ಪ್ರತಿಕಾರ” ಎಂದು ಎಚ್ಚರಿಕೆಯಿಂದ ಕೊಡಲಾದ ಸಂದೇಶ ಯೆಹೂದಿ ಗಳನ್ನು ಕೊಲ್ಲುವ ಸಂಕೇತವಾಗಿತ್ತು. ಇಂತಹುದೇ ಸಂದೇಶವನ್ನು ಇತರ ಆಜ್ಞೆಗಳಲ್ಲೂ ಕೊಡಲಾಯಿತು. ಇದು ಜರ್ಮನಿ ವಶಪಡಿಸಿಕೊಂಡ ಪೋಲೆಂಡ್ ಮತ್ತು ಸೋವಿಯೆಟ್ ಒಕ್ಕೂಟದ ಪ್ರದೇಶಗಳಲ್ಲಿ ನರಮೇಧಧ ಅತ್ಯಂತ ಕ್ರೂರವಾದ ಹಂತವಾಗಿತ್ತು.
ನಾಜಿ ‘ಕೊಲೆಗಡುಕ ದಳ’ಗಳು, ಜರ್ಮನ್ ಮಿಲಿಟರಿ ಪಡೆ ಮತ್ತು ಸ್ಥಳೀಯ ಸಹಾಯಕ ಪಡೆಗಳೊಂದಿಗೆ 13 ಲಕ್ಷ ಯೆಹೂದಿಯರನ್ನು ಸುತ್ತುವರೆದು ಸಾಮೂಹಿಕವಾಗಿ ಗುಂಡುಹೊಡೆದು ಕೊಲೆ ಮಾಡಿದರು. ಮೊದ ಮೊದಲು ಯೆಹೂದಿ ಹುಡುಗರು ಮತ್ತು ಪುರುಷರು, ಬುದ್ಧಿಜೀವಿಗಳು ಮತ್ತು ವಿರೋಧಿ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು (ಅವರು ಯೆಹೂದಿ ಅಲ್ಲದಿದ್ದರೂ) ವಿವಿಧ ಬೊಗಳೆ ಆಪಾದನೆಗಳ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಯಿತು. ಕ್ರಮೇಣ ಈ ಕಾನೂನುಗಳ ನೆನಪಗಳನ್ನು ಬದಿಗಿಡಲಾಯಿತು ಮತ್ತು ಹೆಣ್ಣು ಮಕ್ಕಳನ್ನು ಹೆಂಗಸರನ್ನು ಸಹ ಗುಂಡಿಕ್ಕಿ ಕೊಲ್ಲಲಾಯಿತು.
ದುರಂತವೆಂದರೆ ನಾಜಿ ‘ಕೊಲೆಗಡುಕ ದಳ’ಗಳಿಗೆ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಸಹಾಯಕ ಪಡೆಗಳು ಬೆಂಬಲ ನೀಡಿದವು. ಒಬ್ಬ ನಾಜಿ ‘ಕೊಲೆಗಡುಕ ದಳ’ದ ಸದಸ್ಯನಿಗೆ 10 ಸ್ಥಳೀಯ ಸಹಾಯಕರು ಬೆಂಬಲ ನೀಡುತ್ತಿದ್ದರು. ಆಕ್ರಮಣಕೋರ ಜರ್ಮನಿಯ ಮಿಲಿಟರಿ ಪಡೆಗಳು ಹೊಸ ಹೊಸ ಪ್ರದೇಶಗಳಿಗೆ ದಾಳಿ ಮಾಡುವಾಗ, ಯೆಹೂದಿಯವರ ಮೇಲೆ ದಾಳಿ ಮಾಡಲು ಸ್ಥಳೀಯರನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದ್ದರು.
1941 ರ ಜೂನ್ ನಲ್ಲಿ ಸೋವಿಯೆತ್ ಒಕ್ಕೂಟದ ಆಕ್ರಮಣದ ನಂತರದ 6 ತಿಂಗಳಲ್ಲಿ, ಲಾಟ್ವಿಯಾ, ಲಿಥುವೇನಿಯಾ, ಮತ್ತು ಉಕ್ರೇನ್ ನಲ್ಲಿ, 60 ಕ್ಕೂ ಹೆಚ್ಚು ಹತ್ಯಾಕಾಂಡಗಳು ನಡೆದು, ಸುಮಾರು 24,000 ಯೆಹೂದಿ ಜೀವಗಳನ್ನು ಬಲಿ ಪಡೆದವು. ‘ನಾಜಿ ಕೊಲೆಗಡುಕ ದಳ’ಗಳÀ ಅತ್ಯಂತ ಕುಖ್ಯಾತ ನರಮೇಧಗಳಲ್ಲಿ ಒಂದು ಕೀವ್ ಬಳಿಯ ಬಾಬಿಯಾರ್ ನಲ್ಲಿ ನಡೆಯಿತು. ಅಲ್ಲಿ 33 ಸಾವಿರಕ್ಕೂ ಹೆಚ್ಚು ಯೆಹೂದಿಗಳನ್ನು ಕೊಲ್ಲಲಾಯಿತು. ಹಾಗೆಯೇ, 1941 ರ ನವೆಂಬರ್ ಮತ್ತು ಡಿಸೆಂಬರ್ ನ ಎರಡು ದಿನಗಳಲ್ಲಿ, ರಿಗಾ ಬಳಿಯ ರುಂಬುಲಾ ದಲ್ಲಿ ಸುಮಾರು 25 ಸಾವಿರ ಯೆಹೂದಿಗಳನ್ನು ಬಲಿ ತೆಗೆದು ಕೊಳ್ಳಲಾಗಿದೆ. ಆದಾಗ್ಯೂ, ಈ ಸಾಮೂಹಿಕ ಕೊಲೆಗಳು ಅಸಮರ್ಪಕ ಮತ್ತು ದುಬಾರಿಯಾಗಿದ್ದವು. ಇದು ಸೈನಿಕರ ಸ್ಥೈರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಮಿಲಿಟರಿ ಕಮಾಂಡರುಗಳು ದೂರುತ್ತಿದ್ದರು.
ಈ ಹಿನ್ನೆಲೆಯಲ್ಲಿ ಜನವರಿ 1942ರಲ್ಲಿ ಯೆಹೂದಿಗಳ ‘ಸಮಸ್ಯೆ’ಯ ‘ಅಂತಿಮ ಪರಿಹಾರ’ದ ಯೋಜನೆ ರೂಪಿಸಲಾಯಿತು. ಸಾಧ್ಯವಿರುವ (ವಿಶೇಷವಾಗಿ ಯುರೋಪಿನ) ಎಲ್ಲಾ ಯೆಹೂದಿಯರನ್ನು ನಿರ್ಮೂಲನ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಯೆಹೂದಿಗಳ ಸಂಖ್ಯೆ ಸಾಕಷ್ಟು ದೊಡ್ಡದಿದ್ದು ಸಾಮೂಹಿಕ ಗುಂಡೇಟು ‘ದಕ್ಷ’ ವಿಧಾನವಲ್ಲ ಎಂದು ನಾಜಿUಳು ಪರಿಗಣಿಸಿದರು.
ಆದ್ದರಿಂದ ನರಮೇಧವನ್ನು ದೊಡ್ಡ ಪ್ರಮಾಣದ ‘ಕೈಗಾರಿಕೀಕರಣ’ದ ವಿಧಾನ ಬಳಸಿ ಮಾಡುವುದು ‘ಅಂತಿಮ ಪರಿಹಾರ’ದ ಯೋಜನೆಯ ಭಾಗವಾಗಿತ್ತು. ದೊಡ್ಡ ಪ್ರಮಾಣದಲ್ಲಿ ಕೆಲವೇ ಕ್ಷಣಗಳಲ್ಲಿ ಕೊಲ್ಲುವ ‘ಗ್ಯಾಸ್ ಕೋಣೆ’ಗಳನ್ನು ಹೊಂದಿದ್ದ ಜರ್ಮನಿಯ ಆಶ್ವಿಟ್ಝ್ ಯಾತನಾ ಶಿಬಿರವನ್ನು ಇದಕ್ಕಾಗಿ ಸಜ್ಜುಗೊಳಿಸಲಾಯಿತು. ‘ಗ್ಯಾಸ್ ಕೋಣೆ’ಗಳು ಸ್ನಾನದ ಕೋಣೆಯ ಹಾಗೆ ಕಾಣುತ್ತಿತ್ತು. ಶಿಬಿರವಾಸಿಗಳನ್ನು ಸರದಿಯಲ್ಲಿ ಸ್ನಾನಕ್ಕೆಂದು ಕಳಿಸಿ ಸೈನೈಡ್ ವಿಷ ಗ್ಯಾಸ್ ಬಿಟ್ಟು ಅವರನ್ನು ಕೊಲ್ಲಲಾಗುತ್ತಿತ್ತು. ಕೆಲವು ನಿಮಿಷಗಳ ಭೀಕರ ಯಾತನೆಯ ನಂತರ ಅವರ ಹೆಣ ಬೀಳುತ್ತಿತ್ತು. ಈ ಯಾತನಾ ಶಿಬಿರಕ್ಕೆ ರೈಲುಗಳಲ್ಲಿ ಸಾಮಾಹಿಕವಾಗಿ ಕಳಿಸಲಾದ 13 ಲಕ್ಷ ಯೆಹೂದಿಯರಲ್ಲಿ 11 ಲಕ್ಷ ಬಲಿಯಾದರು.
ಹೆಚ್ಚಿನವರು ‘ಗ್ಯಾಸ್ ಕೋಣೆ’ಗಳಲ್ಲಿ ಬಲಿಯಾದರು. ಉಳಿದವರು ಹಸಿವಿಗೆ, ಹಸಿವಿನಿಂದ ಉಂಟಾದ ನಿಶ್ಶಕ್ತಿಗೆ, ರೋಗಗಳಿಗೆ ಬಲಿಯಾದರು. ‘ಗ್ಯಾಸ್ ಕೋಣೆ’ಗಳ ಹೆಣಗಳ ಬೆಲೆಬಾಳುವ ವಸ್ತುಗಳನ್ನು ಕಿತ್ತು ಹಾಕಲಾಗುತ್ತಿತ್ತು. ಮಹಿಳೆಯರ ಕೂದಲು ಕತ್ತರಿಸಲಾಗುತ್ತಿತ್ತು. ಚಿನ್ನದ ಹಲ್ಲುಗಳನ್ನು ದಂತವೈದ್ಯರುಗಳು ಚಿನ್ನವನ್ನು ಪ್ರತ್ಯೇಕಿಸುತ್ತಿದ್ದರು.
1944ರ ವರೆಗೆ ಈ ರೀತಿಯಲ್ಲಿ 10-12 ಕೆ.ಜಿ ಚಿನ್ನ ಸಂಗ್ರಹಿಸಲಾಗಿತ್ತು ಎಂದು ದಾಖಲಾಗಿದೆ.
ಯೆಹೂದಿಯರ ಹೆಣಗಳನ್ನೂ ಸಹ ಪೂರ್ಣವಾಗಿ ಈ ರೀತಿ ‘ಅಮಾನವೀಯ’ಗೊಳಿಸಲಾಗಿತ್ತು. ನಾಜಿ ಸೈನ್ಯವನ್ನು ಸೋವಿಯೆಟ್ ಕೆಂಪು ಸೈನ್ಯ ಸೋಲಿಸಿ ಆಶ್ವಿಟ್ಝ್ ತಲುಪಿ ಅಲ್ಲಿರುವ ಶಿಬಿರವಾಸಿಗಳನ್ನು ಬಿಡುಗಡೆ ಮಾಡದಿದ್ದರೆ ಎಷ್ಟು ಕಾಲ ಈ ನರಮೇಧ ಮುಂದುವರೆಯುತ್ತಿತ್ತೋ ಗೊತ್ತಿಲ್ಲ.
ಒಂದು ಸಮುದಾಯದ ನರಮೇಧದ ಹಲವು ಹಂತಗಳ ಈ ಭೀಕರ ಚರಿತ್ರೆ ಮರೆಯುವಂತಹದ್ದಲ್ಲ. ಇದು ಯಾವುದೇ ಇತರ ಸಮುದಾಯಕ್ಕೆ ಮರುಕಳಿಸಬಾರದು. ಅದಕ್ಕಾಗಿ ಈ ವಾರ್ಷಿಕವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಆದರೆ ಹಿಟ್ಲರನ ಸಂತಾನ ಕೊನೆಗೊಂಡಿಲ್ಲ. ಬದಲಾಗಿ ಕಳೆದ ಒಂದೆರಡು ದಶಕಗಳಲ್ಲಿ ನಮ್ಮ ದೇಶ ಸೇರಿದಂತೆ ಇಡೀ ಜಗತ್ತಿನಲ್ಲಿ ಬೆಳೆಯುತ್ತಿದೆ. ಅವರು ಈ ಚರಿತ್ರೆಯನ್ನು ಅರಗಿಸಿಕೊಂಡು ಅದನ್ನು ಮರುಕಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ತಡೆಯುವತ್ತ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ‘ಯೆಹೂದಿ ನರಮೇಧ’ದಲ್ಲಿ ಬಲಿಯಾದವರ ನೆನಪಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ.
(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243