ಲೋಕಾರೂಢಿ
ಕಾಡುಗೊಲ್ಲರ ಹಟ್ಟಿ ಮತ್ತು ದೇಶಕಾಲದ ಸಂಕಷ್ಟ
- ಕೇಸರಿ ಹರವೂ
ಕಾಡುಗೊಲ್ಲರಹಟ್ಟಿಗೆ ಸಂಸದರೊಬ್ಬರು ಪ್ರವೇಷಿಸಲು ಹೊರಟಾಗ ಅವರನ್ನು ಆ ಹಟ್ಟಿಯ ಗೊಲ್ಲರು ತಡೆದರು. ಆಗ ವರದಿಯಾಗಿರುವಂತೆ ಅದಕ್ಕೆ ಮುಖ್ಯ ಕಾರಣ ಆ ಸಂಸದರು ಪರಿಶಿಷ್ಠ ಜಾತಿಗೆ ಸೇರಿದ ಅಸ್ಪೃಶ್ಯರು ಎನ್ನುವುದು. ಇದು ಜಾತಿವ್ಯವಸ್ಥೆಯ ಕರಾಳ ನಿದರ್ಶನ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸಂಘರ್ಷ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಆಮೇಲೆ ಅವರೇ ಆ ಸಂಸದರಿಗೆ ಪೂರ್ಣಕುಂಭ ಸ್ವಾಗತ ನೀಡಿದರು ಎನ್ನುವುದು ಬೇರೇ ವಿಷಯ. ಆದರೆ ಈ ಪ್ರಕರಣ ಅಷ್ಟಕ್ಕೇ ನಿಲ್ಲದೇ ಹಲವು ಆಯಾಮಗಳ ಚರ್ಚೆಗೆ ಆಸ್ಪದ ನೀಡುತ್ತದೆ.
ಸಾಮಾಜಿಕ ಮಾಧ್ಯಮಗಳಲ್ಲಿಯೂ ಸೇರಿದಂತೆ ಈ ಸುದ್ದಿಯ ಬೆನ್ನುಹತ್ತಿ ವಿವಿಧ ಬಗೆಯ ಚರ್ಚೆಗಳು ಆರಂಭವಾದವು. ಸಂಪ್ರದಾಯ, ನಂಬಿಕೆಗಳು, ಆಧುನಿಕತೆ, ಅಭಿವೃದ್ಧಿ, ಅಸ್ಪೃಷ್ಯತೆ ಮತ್ತು ನಿವಾರಣೆ, ಜಾತಿ ವ್ಯವಸ್ಥೆ ಮತ್ತು ನಿರ್ಮೂಲನ, ಸಮಸಮಾಜ, ಹೀಗೆ ಬೇರೆಬೇರೇ ನೆಲೆಗಳಲ್ಲಿ ಈ ಚರ್ಚೆಗಳು ಸಾಗಿದವು. ಇವು ಚರ್ಚಾರ್ಥಿಗಳ ನಿಲುವುಗಳ ಅನುಸಾರ ಸಾಮಾಜಿಕ, ರಾಜಕೀಯ ಬಣ್ಣಗಳನ್ನೂ ಪಡೆದಿವೆ. ಬಹುಶಃ ನಾವು ಯಾವ ಭೂಪ್ರದೇಶದ ಯಾವ ಕಾಲದಲ್ಲಿ ನಿಂತು ಮಾತಾಡುತ್ತಿದ್ದೇವೆ ಎಂದು ನೋಡಿಕೊಂಡು ಚರ್ಚೆ ಮುಂದುವರಿಸಬೇಕು ಎನಿಸುತ್ತದೆ.
ಬುಡಕಟ್ಟು ಸಮುದಾಯವೊಂದು ತನ್ನ ಲೋಕಕಾಣ್ಕೆಗೆ (worldview) ಇಂದಿಗೂ ಅಂಟಿಕೊಂಡು ತನ್ನ ಮೂಲ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯಗಳನ್ನು ಪಾಲಿಸುತ್ತಿದೆಯಾದರೆ ಈ ಚರ್ಚೆ ಒಂದು ರೂಪ ಪಡೆಯುತ್ತದೆ. ತನ್ನತನಗಳಲ್ಲಿ ಕೆಲವನ್ನು ಉಳಿಸಿಕೊಂಡು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ತನಗೆ ಅನುಕೂಲವಾಗುವಷ್ಟರ ಮಟ್ಟಿಗೆ ಆಧುನಿಕತೆಗೆ, ನಾಗರೀಕತೆಗೆ ಮುಕ್ತವಾಗಿದೆ ಎಂದಾದರೆ ಇದೇ ಚರ್ಚೆ ಮತ್ತೊಂದು ಧಾಟಿಯಲ್ಲಿ ಸಾಗುತ್ತದೆ. ಆಧುನಿಕ ಸಮಾಜದಲ್ಲಿ ಮೊದಲನೆಯ ಸಾಧ್ಯತೆ ತೀರಾ ಕಡಿಮೆ. ಕಾಡುಗೊಲ್ಲ ಹಟ್ಟಿಯ ಜನ ಕೃಷಿ, ಆಹಾರ ಪದ್ಧತಿ, ಉಡುಗೆ, ವಸತಿ, ಶಿಕ್ಷಣ, ನಾಗರೀಕ ಸರಬರಾಜು, ಆರೋಗ್ಯ, ನೈರ್ಮಲ್ಯ, ಮೀಸಲಾತಿ ಮುಂತಾದ ಆಧುನಿಕ ನಾಗರೀಕ ವ್ಯವಸ್ಥೆಗಳಿಗೆ ಮತ್ತು ದೇಶದ ಸಾಮಾಜಿಕ-ಆರ್ಥಿಕ-ರಾಜಕೀಯ ವ್ಯವಸ್ಥೆಗೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ ಎಂದರೆ, ಅವನ್ನೇ ಅವಲಂಬಿಸಿದ್ದಾರೆ ಎಂದರೆ ಇವರ ಸ್ಪೇಸ್ ಯಾವುದು? ಇವರ ತಾಣ ಈಗಲೂ ಕಾಡೇ ಮತ್ತು ಕಾಡಿನ ಅಂಚೇ? ಇವರು ನೆಚ್ಚಿಕೊಂಡಿದ್ದ ಕಾಡು ಮತ್ತು ಅಂಚು ಹಾಗೇ ಉಳಿದುಕೊಂಡು ಇವರ ಸ್ವಾವಲಂಬೀ ಬದುಕನ್ನು ಸಂಪೂರ್ಣ ಪೋಷಿಸುತ್ತಿದೆಯೇ? ಆಧುನಿಕ ಜಗತ್ತು ಅದನ್ನು ಹಾಗೆ ಉಳಿಸಿದೆಯೇ? ಇವರ ಜೀವನಕ್ರಮ ಈಗಲೂ ಇವರಿಗೇ ಸಲ್ಲುವಷ್ಟು ನಿಸರ್ಗ ವಿಶಿಷ್ಟವಾಗಿಯೇ ಇದೆಯೇ? ಇದ್ಯಾವುದೂ ಅಲ್ಲ ಎನ್ನುವುದಾದರೆ ಆಗ ಇವರು ನಿಶ್ಚಿತವಾಗಿಯೂ ತಮ್ಮ ಸ್ಪೇಸ್ ಅನ್ನು ಕಳಕೊಂಡು ಅಥವಾ ಬಿಟ್ಟುಕೊಟ್ಟು ಆಧುನಿಕ, ನಾಗರೀಕ ಸ್ಪೇಸ್ ಗೆ ಸ್ಥಳಾಂತರವಾಗಿದ್ದಾರೆ, ನಾಗರೀಕ ಕಾಲಕ್ಕೆ ಕಾಲಾಂತರಗೊಂಡಿದ್ದಾರೆ. ಈ ಸ್ಥಿತ್ಯಂತರಗಳು ಈ ಸಮುದಾಯಗಳಲ್ಲಿ ಜಾತಿವ್ಯವಸ್ಥೆಯ ಕೆಲವು ಕಟ್ಟುಪಾಡುಗಳೂ ಸೇರಿದಂತೆ ಹಲವು ರೀತಿಯ ಕೊಡುಕೊಳ್ಳುವಿಕೆಗಳನ್ನು ತಂದಿವೆ. ಇದನ್ನು ದೇಶವೂ, ಜನಾಂಗವೂ, ನಾಗರಿಕ ಸಮಾಜವೂ ಗುರುತಿಸಿಕೊಳ್ಳಬೇಕಾಗುತ್ತದೆ. ಇದು ಬುಡಕಟ್ಟು ಸಮಾಜಕ್ಕೆ ಮಾತ್ರವಲ್ಲ, ಸಾಂಪ್ರದಾಯಿಕ ಮತ್ತು ಆಧುನಿಕ ತಾಕಲಾಟಗಳಲ್ಲಿ ತೊಡಗಿರುವ ಎಲ್ಲ ಸಮಾಜಗಳಿಗೂ ಇದು ಅನ್ವಯಿಸುತ್ತದೆ.
ಅಂಡಮಾನಿನ ಸೆಂಟೆನೆಲೀಸ್ ಜನರಂತಹ ಸಮಾಜಗಳು ಮತ್ತು ಅವರ ಲೋಕಕಾಣ್ಕೆಗಳು ನಮ್ಮ ಆಧುನಿಕ ನಾಗರೀಕತೆಯ ಸ್ಪೇಸ್ ಅನ್ನೇ ಒಪ್ಪಿಕೊಳ್ಳುವುದಿಲ್ಲ. ಇವು ನಾಗರೀಕ ಮನುಷ್ಯನ ನವ್ಯಪೂರ್ವ ಮತ್ತು ನವ್ಯ ಜೀವನಕ್ರಮಗಳ ಕುರಿತ ಚರ್ಚೆಗೆ ತೆರೆದುಕೊಡುತ್ತವೆ. ನವೋತ್ತರ ಚಿಂತನೆಗಳಿಗೆ ಅಡಿಪಾಯ ಹಾಕುತ್ತವೆ. ಅದು ಬೇರೆಯೇ ಚರ್ಚೆ. ಅದನ್ನು ಚರ್ಚಿಸುವುದು ಇಲ್ಲಿಯ ಉದ್ದೇಶವಲ್ಲ. ಆದರೆ ನಾಗರೀಕತೆಗೆ ಅತ್ಯಂತ ನಿಕಟವಾಗಿ ಬದುಕುತ್ತಿರುವ ಕಾಡುಗೊಲ್ಲರಂಥಾ ಸಮಾಜಗಳ ವಿಷಯ ಬೇರೆಯೇ. ನಾಗರೀಕತೆಯ ನಿರಂತರ ವಿಸ್ತಾರದ ಹಂಬಲ ಹೊತ್ತ ಆಧುನಿಕ ಸಾಮಾಜಿಕ-ಅರ್ಥ ರಾಜಕೀಯ ಈ ಸಮುದಾಯಗಳನ್ನು ತಮ್ಮಷ್ಟಕ್ಕೆ ತಾವು ಇರಲು ಬಿಟ್ಟಿಲ್ಲ ಎನ್ನುವುದು ಒಂದು ಮಾತು. ಮಾನವನ ನಿರಂತರ ಆವಿಷ್ಕಾರ ಮತ್ತು ಪ್ರಗತಿಯ ಸಹಜ ವಾಂಛೆಯ ಕಾರಣದಿಂದಾಗಿ ಕೂಡ ಜನಾಂಗವೊಂದು ಆಂತರಿಕವಾಗಿಯೂ ತಾನಿರುವಂತೆಯೇ ಇರಲು ಬಯಸಿಲ್ಲ ಎನ್ನುವುದು ಅದರ ಹಿಂದೆಯೇ ಬರುವ ಮಾತು. ಕಾಡು ನಿರ್ವಹಣೆಗೆ ಮತ್ತು ಖೆಡ್ಡಾಕ್ಕೆ ಅನುಕೂಲವಾಗುವಂತೆ ಸೋಲಿಗರನ್ನು ಮತ್ತು ಜೇನುಕುರುಬರನ್ನು ಮೈಸೂರು ಅರಸರು ಒಲಿಸಿಕೊಂಡ ಬಗೆ ಅಲ್ಪಸ್ವಲ್ಪ ದ್ರವ್ಯ, ಸವಲತ್ತುಗಳನ್ನು ಕೊಡಮಾಡುವುದೇ ಆಗಿತ್ತು. ಹಾಗೆಯೇ, ತೀರಾ ಸಣ್ಣ ಸವಲತ್ತು ಕೂಡಾ ಈ ಜನಗಳನ್ನು ಅರಸರ ಲಾಭಾಸಕ್ತಿಗಳೊಂದಿಗೆ ಸಹಕರಿಸುವಂತೆ ಮಾಡಿತ್ತು.
ಈಗ ಕಾಡುಗೊಲ್ಲರ ಹಟ್ಟಿಯೊಳಕ್ಕೆ ಹೋಗಲು ಹೊರಟಿದ್ದ ಜನಪ್ರತಿನಿಧಿಯನ್ನು ಹಟ್ಟಿಯೊಳಕ್ಕೆ ಬಿಟ್ಟುಕೊಳ್ಳಲಿಲ್ಲ ಎನ್ನುವುದನ್ನು ಪ್ರಗತಿಪರ ಸಮಾಜ ಬಹುವಾಗಿ ಜಾತಿ ವ್ಯವಸ್ಥೆ, ನಾಗರೀಕತೆ ಮತ್ತು ಸಂವಿಧಾನ – ಈ ಅಂಶಗಳ ಮೂಲಕವೇ ಅರ್ಥೈಸಲು ಯತ್ನಿಸಿತು. ಸಮುದಾಯ ಸುಧಾರಣೆಯ ಆಶಯ ಹೊತ್ತು ಹೋದಾಗಲೂ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಗಳೇ ಹೆಚ್ಚಾಗಿ ಪ್ರಗತಿಯನ್ನು ದೂರತಳ್ಳಿವೆ ಎನ್ನುವ ಆತಂಕವನ್ನೂ ಅದು ಹೊರಹಾಕಿತು. ಇಲ್ಲಿ ಆ ಜನಪ್ರತಿನಿಧಿ ಯಾವ ಪಕ್ಷ, ಸಿದ್ಧಾಂತಕ್ಕೆ ಸೇರಿದವರು ಎನ್ನುವುದಾಗಲೀ, ಸ್ಥಳೀಕರೇ, ಹೊರಗಿನವರೇ ಎನ್ನುವುದಾಗಲೀ ಅಷ್ಟು ಮುಖ್ಯವಲ್ಲ. ಬಹುಶಃ ಬೇರಾವುದೇ ಪಕ್ಷದ, ಪರಿಶಿಷ್ಠ ಜಾತಿಗೆ ಸೇರಿದ ಜನಪ್ರತಿನಿಧಿಯೊಬ್ಬರಿಗೆ ಈ ರೀತಿ ಆಗಿದ್ದರೂ ಸಮಾಜದ ಪ್ರತಿಕ್ರಿಯೆ ಇದೇ ರೀತಿ ಇರುತ್ತಿತ್ತು.
ಆದರೆ ನಾಗರೀಕ ಸಮಾಜದ ವ್ಯವಸ್ಥೆ ಇಂದು ದೇಶದಲ್ಲಿ ಯಾವ ರೀತಿ ಇದೆ? ನಮ್ಮಲ್ಲಿನ ಅನೇಕ ಹಳ್ಳಿಗಳಲ್ಲಿ ಇಂದಿಗೂ ದಲಿತರನ್ನು ದೇಗುಲಗಳಲ್ಲಿ ಬಿಟ್ಟುಕೊಳ್ಳುವುದಿಲ್ಲ. ಕೆಲವು ರಸ್ತೆಗಳಲ್ಲಿಯೂ ಬಿಟ್ಟುಕೊಳ್ಳುವುದಿಲ್ಲ. ಮನೆಗಳ ಒಳಕ್ಕೆ ಬಿಟ್ಟುಕೊಳ್ಳುವುದಿಲ್ಲ. ಮೇಲ್ಜಾತಿಯ ಮನೆಗಳಲ್ಲಿ ದಲಿತರನ್ನು ಬಿಡಿ, ಮಧ್ಯಮ ಜಾತಿಯವರನ್ನು ನಡುಮನೆಯೊಳಕ್ಕೂ ಬಿಟ್ಟುಕೊಳ್ಳುವುದಿಲ್ಲ. ಮಧ್ಯಮ ಜಾತಿಯವರು ದಲಿತರನ್ನು ಕೊಟ್ಟಿಗೆ, ಹಿತ್ತಲಲ್ಲಿ ಕೆಲಸ ಮಾಡಿಸಿಕೊಂಡು, ಮನೆಯ ಹೊರಗೇ ಮಾತಾಡಿಸಿ ಸಾಗಹಾಕುತ್ತಾರೆ. ದಲಿತರ ಮನೆಗಳಲ್ಲಿ ಇವರು ಯಾರೂ ಊಟಮಾಡುವುದಿಲ್ಲ. ಮಡಿ-ಮೈಲಿಗೆಗಳ ನಿರ್ಬಂಧ ಜಾತಿವ್ಯವಸ್ಥೆಯ ಯಾವ ಸ್ತರವನ್ನೂ ಬಿಟ್ಟಿಲ್ಲ ನಮ್ಮ ದೇಶದಲ್ಲಿ. ಭಾರತೀಯ ಮಾನವಶಾಸ್ತ್ರ ಅಧ್ಯಯನಗಳ ಪ್ರಕಾರ ಬುಡಕಟ್ಟು ಜನಾಂಗಗಳು ವರ್ಣಾಶ್ರಮ ವ್ಯವಸ್ಥೆಯೊಳಗೆ ಬರುವುದಿಲ್ಲ. ಅವರು ಜಾತಿಯ ಯಾವ ಸ್ತರಕ್ಕೂ ಸೇರಿರದೇ ಹೊರಗೇ ಉಳಿದವರು. ಆದರೆ ದೇಶ ಅವರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಪರಿಶಿಷ್ಠ ವರ್ಗವೆಂದು ಗುರುತಿಸಿದಾಗಿನಿಂದಲೂ ಅವರನ್ನು ಜಾತಿವ್ಯವಸ್ಥೆಯ ಒಂದು ಸ್ತರಕ್ಕೆ ತಂದು ನಿಲ್ಲಿಸುವ ಪ್ರಯತ್ನಗಳನ್ನು ನಮ್ಮ ಹಿಂದೂ ಸಮಾಜ ಸಡಗರದಿಂದ ಮಾಡುತ್ತಲೇ ಬಂದಿದೆ. ಜಾತಿವ್ಯವಸ್ಥೆಯೊಳಕ್ಕೆ ತಂದು ಸೇರಿಸಿದಾಗಷ್ಟೇ ಅವರು ಮುಖ್ಯವಾಹಿನಿಗೆ ಬಂದಂತಾಗುತ್ತದೆ ಎನ್ನುವುದು ಆ ಸಮಾಜದ ಅಘೋಷಿತ ಸಂಕಲ್ಪ. ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವ ನವರಾಜಕೀಯ ತವಕ ಈ ಹುನ್ನಾರಗಳನ್ನು ಇನ್ನಷ್ಟು ತ್ವರಿತಗೊಳಿಸುತ್ತಿದೆ.
ನಾಗರೀಕ ನೋಂದಣಿ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ವಿಸ್ತರಿಸುವ ಮಾತುಗಳು ಕೇಳಿಬರುತ್ತಿರುವ, ಸಂವಿಧಾನವನ್ನೂ ಉಲ್ಲಂಘಿಸಿ ಒಂದು ರಾಜ್ಯವನ್ನೇ ವಿಸರ್ಜಿಸಿ, ಅಲ್ಲಿಯ ಜನರನ್ನೇ ನಿರ್ಬಂಧಿಸಿ ಇಟ್ಟಿರುವ ಈ ಕಾಲದಲ್ಲಿ, ದೇಶಕ್ಕೊಂದೇ ಸಂವಿಧಾನ, ಧ್ವಜ, ಭಾಷೆ, ಧರ್ಮ ಎನ್ನುವ ಮನಸ್ಥಿತಿಯಿರುವ ಪ್ರಭುತ್ವವೇ ಇವನು ನಮ್ಮವ, ಅವನು ನಮ್ಮವನಲ್ಲ ಎನ್ನುತ್ತಿದೆ. ಇನ್ನು ಸಮಾಜದ ಅತ್ಯಂತ ತಳಸ್ತರದಲ್ಲಿರುವ ಸಮುದಾಯವೊಂದು ಹೀಗೆ ವರ್ತಿಸಿದರೆ ಅದರಲ್ಲಿ ಆಶ್ಚರ್ಯ ಪಡುವುದೇನಿದೆ?
ಈ ಘಟನೆಯಲ್ಲಿ ನೋಡಬೇಕಾದ ಮತ್ತೊಂದು ಕುತೂಹಲಕರ ಅಂಶವೆಂದರೆ, ಸರ್ಕಾರಗಳು ಸಮುದಾಯ ಸುಧಾರಣೆಗಾಗಿ ವ್ಯಯ ಮಾಡುವ ಬದಲಿಗೆ ಅದನ್ನು ಕಾರ್ಪೋರೇಟ್ ಸಂಸ್ಥೆಗಳ ತಲೆಗೆ ಕಟ್ಟುತ್ತಿವೆ. ಆ ಸಂಸ್ಥೆಗಳು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ (Corporate Social Responsibility) ಹೆಸರಲ್ಲಿ ತಮ್ಮ ಲಾಭದ ಅತ್ಯಲ್ಪ ಹಣವನ್ನು ಖರ್ಚುಮಾಡುತ್ತವೆ. ಆದರೆ ಅವು ತಮಗೆ ನಾಳೆ ಆಗಬೇಕಿರುವ ದೊಡ್ಡಲಾಭದ ಮುಂಗಾಣ್ಕೆಯಿಲ್ಲದೇ ಖರ್ಚು ಮಾಡುತ್ತವೆಯೇ? ಭೂಮಿ, ನೈಸರ್ಗಿಕ ಸಂಪನ್ಮೂಲ, ಮಾನವ ಸಂಪತ್ತು, ಇಲ್ಲವೇ ಸಾಮುದಾಯಿಕ ಪ್ರತಿರೋಧಕ್ಕೆ ತಡೆ – ಹೀಗೆ ಯಾವುದೋ ಒಂದರ ಅನುಕೂಲವನ್ನು ಪಡೆಯುವ ಅಥವಾ ಪ್ರತಿಕೂಲತೆಯನ್ನು ನಿವಾರಿಸಿಕೊಳ್ಳುವ ಬಯಕೆಯಿಲ್ಲದಿದ್ದರೆ ಕಾಡುಗೊಲ್ಲರಹಟ್ಟಿಯ ಸುಧಾರಣೆಗೆ ಏಕೆ ಕೈಹಾಕುತ್ತವೆ ಎನ್ನುವುದನ್ನು ನಾವು ಗ್ರಹಿಸಬೇಕಾಗುತ್ತದೆ. ಸಮುದಾಯ ಜವಾಬ್ದಾರಿಯ ನೆಪವೊಡ್ಡಿ ತನ್ನ ದೀರ್ಘಕಾಲೀನ ಲಾಭವನ್ನು ಬಯಸುವ CSR, ಸುಧಾರಣೆಯ ನೆಪವೊಡ್ಡಿ ಕಾರ್ಪೋರೇಟುಗಳಿಗೆ ಲಾಭಮಾಡಿಕೊಡಲು ಯತ್ನಿಸುವ ಜನಪ್ರತಿನಿಧಿ, ಪಾವಿತ್ರ್ಯದ ನೆಪವೊಡ್ಡಿ ಜನಪ್ರತಿನಿಧಿಯೊಬ್ಬರು ತಮ್ಮ ಹಟ್ಟಿಯೊಳಕ್ಕೆ ಬರದಂತೆ ತಡೆದು ಆ ಮೂಲಕ ತಮ್ಮ ಮೇಲುಸ್ತರವನ್ನು ದಾಖಲಿಸ ಬಯಸುವ ಒಂದು ಜನಸಮುದಾಯ, ಹೀಗೆ ತಳಕು ಹಾಕಿಕೊಂಡಿರುವ ಇವೆಲ್ಲ ನಾವು ಇಂದು ಬದುಕುತ್ತಿರುವ ದೇಶಕಾಲದ ದೊಡ್ಡ ಪ್ರತಿಮೆಯಾಗಿ ಕಾಣುತ್ತದೆ. ನೈತಿಕ ಅದಃಪತನದ ತ್ರಿಕೋನದಲ್ಲಿ ಸಿಲುಕಿರುವ ದೇಶವನ್ನು ಸೂಚಿಸುತ್ತದೆ. ನಾವು ಒಂದು ದೇಶವಾಗಿ ಎಂತಹ ಎರಡು ತಲೆ ಬದುಕನ್ನು ಬದುಕುತ್ತಿದ್ದೇವೆ ಎನ್ನುವುದನ್ನು ಸಾರಿ ಹೇಳುತ್ತದೆ. ನಮ್ಮ ಪ್ರಗತಿಪರ ಸಮಾಜ ಈ ಸಂಕೀರ್ಣ ಆಯಾಮಗಳನ್ನು ಕಾಣದ ಹೊರತು, ಅವುಗಳ ಸಮಗ್ರ ಸುಧಾರಣೆಯ ಚರ್ಚೆಯನ್ನು ಮುನ್ನೆಲೆಗೆ ತರದ ಹೊರತು, ಗೊಲ್ಲರಹಟ್ಟಿಯ ಘಟನೆಯೊಂದನ್ನೇ ಪ್ರತ್ಯೇಕಿಸಿ ನೋಡಿ, ಅದನ್ನು ಖಂಡಿಸುವ ಅಥವಾ ಸಮರ್ಥಿಸುವ ಕೆಲಸಕ್ಕೆ ಇಳಿಯಲಾಗುವುದಿಲ್ಲ.
ತೀವ್ರ ಆರ್ಥಿಕ ಹಿಂಜರಿತದಲ್ಲಿ ದೇಶ ಕಾಣತೊಡಗಿದ್ದ ಆರ್ಥಿಕ ಪ್ರಗತಿ ಕರಗಿಯೇ ಹೋಗುತ್ತಿರುವ ಕಾಲದಲ್ಲಿ, ದೇಶದ ಬಹುತ್ವಕ್ಕೇ ಆತಂಕ ಆವರಿಸುತ್ತಿದೆ. ಬರ, ನೆರೆಗಳಿಂದ ತತ್ತರಿಸಿಹೋಗಿರುವ ಜನರ ಸಹಾಯಕ್ಕೆ ಸರ್ಕಾರಗಳು ನಿಲ್ಲುತ್ತಿಲ್ಲದ ಕಾಲದಲ್ಲಿ, ಎಲ್ಲ ಚಟುವಟಿಕೆಗಳಲ್ಲೂ ರಾಜಕೀಯ ಲಾಭವನ್ನೇ ಎದುರುನೋಡುವ ಜನಪ್ರತಿನಿಧಿಗಳಿಂದ ದೇಶ ತುಂಬಿಹೋಗಿದೆ. ಎಲ್ಲ ನೈಸರ್ಗಿಕ ಸಂಪತ್ತೂ, ಕೌಶಲ್ಯವೂ ಕರಗಿಹೋಗುತ್ತಿರುವ ಕಾಲದಲ್ಲಿ, ಅರ್ಥವ್ಯವಸ್ಥೆ ಬಂಡವಾಳಶಾಹಿಯನ್ನು ಉತ್ತೇಜಿಸುತ್ತಾ, ಬಡವನನ್ನು ದೂರವೇ ಇಡುತ್ತಿವೆ. ದೇಶದ ಸಾರ್ವಭೌಮತ್ವವನ್ನೇ ಜಾಗತೀಕರಣಕ್ಕೆ ಒತ್ತೆಯಿಡುತ್ತಿರುವ ಕಾಲದಲ್ಲಿ, ನಿಜ ಸಮಸ್ಯೆಗಳಿಂದ ಜನರನ್ನು ಬೇರೆಯೇ ಅಕಲ್ಪಿತ ಚರ್ಚೆಗೆ ಎಳೆದೊಯ್ಯುತ್ತಿರುವ ಸ್ಪಿನ್ ಡ್ರೈವರುಗಳು ಉಛ್ರಾಯ ಮೆರವಣಿಗೆಯಲ್ಲಿದ್ದಾರೆ. ಇಂತಹ ವಿಷಮ ದ್ವಂದ್ವಗಳ ನಡುವೆಯೇ ನಮ್ಮದು ಹಿಂದೂರಾಷ್ಟ್ರವಾಗಬೇಕೆಂಬ ಹಂಬಲದಿಂದ ಹೊರಟಿರುವ ಈ ದೇಶದ ಜನ ಈ ಘಟನೆಯ ಬಗ್ಗೆ ಚರ್ಚಿಸುವ ಅರ್ಹತೆ ಮತ್ತು ಯೋಗ್ಯತೆಯನ್ನು ಖಂಡಿತಾ ಕಳಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243