ಸಿನಿ ಸುದ್ದಿ

ಕನ್ನಡಿಗರ ಹೆಮ್ಮೆಯ ಸಿನಿಮಾ ‘ಆಕ್ಟ್ 1978’

Published

on

  • ಜಗದೀಶ್ ಕೊಪ್ಪ

ನ್ನಡ ಸಿನಿಮಾಗಳ ಕುರಿತಂತೆ ಒಂದು ಬಗೆಯ ನೆಗೆಟಿವ್ ಧೋರಣೆ ಬೆಳೆಸಿಕೊಂಡಿರುವ ನಾನು 1970 ದಶಕದಲ್ಲಿ ರಾಜಕುಮಾರ್ ಬದುಕಿರುವಾಗಲೇ ಅವರ ಸಿನಿಮಾ ಜೀವನದ ಕೊನೆಯ ಸಿನಿಮಾಗಳನ್ನು ನೋಡಲು ನಿರಾಕರಿಸಿದವನು. ಹಾಗಾಗಿ ಕಳೆದ 25 ವರ್ಷಗಳಿಂದ ನಾನು ನೋಡಿರುವ ಕನ್ನಡದ ಸಿನಿಮಾ ಕೇವಲ ಬೆರಳಣಿಕೆಯಷ್ಟು.

ಇನ್ನು ಮೈ ತುಂಬಾ ಸ್ಟಾರ್ ಗಿರಿ ಮತ್ತು ಸಿಕ್ಸ್ ಪ್ಯಾಕ್ ಹೊಂದಿರುವ ತೊಗಲು ಬೊಂಬೆಯಂತಿರುವ ನಾಯಕರ ಚಿತ್ರಗಳನ್ನು ಭಾಷೆಯ ಹಂಗಿಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡವನ್ನು ಒಳಗೊಂಡಂತೆ ಎಲ್ಲಾ ಭಾಷೆಯಲ್ಲಿ ತಿರಸ್ಕರಿಸಿದವನು.

ಇದಕ್ಕೆ ಮುಖ್ಯಕಾರಣ, ಎಪ್ಪತ್ತರ ದಶಕದಲ್ಲಿ ಹಿಂದಿಯಿಂದ ಸತ್ಯಜಿತ್ ರಾಯ್, ಹೃಷಿಕೇಶ್ ಮುಖರ್ಜಿ, ಶ್ಯಾಂಬೆನಗಲ್ ತಮಿಳಿನ ಕೆ.ಬಾಲಚಂದರ್, ಬಾರತಿರಾಜ, ಬಾಲುಮಹೇಂದ್ರ ಹಾಗೂ ತೆಲುಗು ಭಾಷೆಯ ಕೆ.ವಿಶ್ವನಾಥ್ ಮುಂತಾದ ಸಿನಿಮಾ ನಿರ್ದೇಶಕರ ಮೂಲಕ ನಾವು ನೋಡುವ ಸಿನಿಮಾ ಹೇಗಿರಬೇಕು ಎಂಬ ಸದಬಿರುಚಿಯನ್ನು ಬೆಳೆಸಿಕೊಂಡಿದ್ದು ಕಾರಣ ಎಂದು ಕೊಂಡಿದ್ದೇನೆ. ಹಾಗಾಗಿ ಕನ್ನಡ ಸಿನಿಮಾಗಳನ್ನು ನೋಡುವುದು ಕೂಡ ತೀರಾ ಅಪರೂಪ ಎಂದು ಹೇಳಬಹುದು.

ನಿನ್ನೆ ಸಂಜೆ ನನ್ನ ಕಿರಿಯ ಮಿತ್ರ ಮನ್ಸೋರೆ ನಿರ್ದೇಶನದ ಆಕ್ಟ್ 1978 ಎಂಬ ಕನ್ನಡ ಸಿನಿಮಾ ನೋಡಿದ ನಂತರ ಸಿನಿಮಾ ವ್ಯಾಖ್ಯಾನ ಕುರಿತಂತೆ ಬದ್ಧತೆ ಇರುವ ಪ್ರತಿಭಾವಂತ ಯುವಕರ ತಂಡ ವಿಶೇಷವಾಗಿ ಮನ್ಸೋರೆ, ಟಿಕೆ.ದಯಾನಂದ್ ಹಾಗೂ ಮಲ್ಲಣ್ಣರಂತಹ ಯುವಕರು ನಿಜಕ್ಕೂ ಕನ್ನಡದ ಚಿತ್ರರಂಗದತ್ತ ಭಾರತೀಯ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಬಲ್ಲರು ಎನಿಸಿತು.

ವರ್ತಮಾನದ ಒಂದು ಜ್ವಲಂತ ಸಮಸ್ಯೆಯನ್ನು ಸಮರ್ಥ ಚಿತ್ರಕಥೆಯಾಗಿ ರೂಪಿಸಿಕೊಂಡು, ಅದಕ್ಕೆ ಯಾವುದೇ ಕಮರ್ಷಿಯಲ್ ಬಣ್ಣ ನೀಡದೆ, ಅಥವಾ ಹೆಸರಾಂತ ನಾಯಕ ಅಥವಾ ನಟ,ನಟಿಯರ ಹಂಗಿಗೆ ಬೀಳದೆ ಚಿತ್ರದ ಕಥೆಯೇ ನಿಜವಾದ ನಾಯಕ ಎಂದು ಬಲವಾಗಿ ನಂಬಿಕೊಂಡು ಚಿತ್ರ ನಿರ್ಮಾಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.

ಕಿತ್ತುಹೋದ ಕನ್ನಡ ಭಾಷೆಯ ಹಾಡು, ಅದ್ದೂರಿ ದೃಶ್ಯ, ಹಾಗೂ ಕಿವಿಯಲ್ಲಿ ರಕ್ತ ಹರಿಸುವ ಸಂಗೀತ ಮತ್ತು ನಾಯಕನ ಇಮೇಜಿಗೆ ತಕ್ಕಂತೆ ಡೈಲಾಗ್ ಹೊಸೆಯುವ ಸಿನಿಮಾ ನಿರ್ದೇಶಕರೆಂಬ ತಗಡು ಗಿರಾಕಿಗಳು ಒಮ್ಮೆ ಈ ಸಿನಿಮಾವನ್ನು ನೋಡಿ, ದೃಶ್ಯ ಮಾಧ್ಯಮ ಕೂಡ ಒಂದು ಕಾವ್ಯ ಎಂಬುದನ್ನು ಕಲಿಯಬೇಕು. ನಾನು ಕಳೆದ ಎರಡು ವರ್ಷಗಳ ಅವಧಿಯಲ್ಲಿ ತಮಿಳು ಚಿತ್ರರಂಗದ ಮೂವರು ಹೊಸ ನಿರ್ದೇಶಕರ ಸಿನಿಮಾಗಳನ್ನು ನೋಡಿ ಆಶ್ಚರ್ಯಪಟ್ಟಿದ್ದೆ.

ಅವರುಗಳು ಕಟ್ಟಿಕೊಟ್ಟ ಕಥೆ ಅವರ ಬದುಕಿನ ನೈಜ ಘಟನೆಗಳಾಗಿದ್ದವು. ತಮಿಳಿನ 96 ಎಂಬ ನವಿರಾದ ಪ್ರೇಮ ಕಥೆ ಸಿನಿಮಾ ಛಾಯಾಗ್ರಾಗಕನಾಗಿದ್ದ ಸಿ.ಪ್ರೇಮಕುಮಾರ್ ಎಂಬಾತನ ಹೈಸ್ಕೂಲು ದಿನಗಳಲ್ಲಿ ತನ್ನ ಜೀವನದಲ್ಲಿ ಘಟಿಸಿದ ಕಥೆಯಾಗಿತ್ತು. ಅದನ್ನು ಓರ್ವ ನಿರ್ದೇಶಕನಾಗಿ ಪ್ರೇಮಕುಮಾರ್ ರೂಪಿಸಿರುವ ಪರಿ ಅಚ್ಚರಿ ಮೂಡಿಸುತ್ತದೆ.
ಅದೇ ರೀತಿ ಪಣ್ಣೆಯೋರಂ, ಪದ್ಮಿನಿಯುಂ ಎಂಬ ಸಿನಿಮಾ ಕೂಡ ಆನಂದ್ ಕುಮಾರ್ ಎಂಬ ಯುವ ನಿರ್ದೇಶಕನ ನೈಜ ಕಥೆಯಾಗಿದೆ.

ತನ್ನೂರಿನ ಜಮೀನ್ದಾರನ ಮನೆಯಲ್ಲಿದ್ದ ಪ್ರೀಮಿಯಂ ಪದ್ಮಿನಿ ಎಂಬ ಹಾಗೂ ಊರಿನ ಜನತೆಯ ಕಷ್ಟ ಸುಖಗಳಿಗೆ ಬಳಕೆಯಾಗುತ್ತಿದ್ದ ಹಳೆಯ ಕಾರಿನಲ್ಲಿ ಕೂರಬೇಕೆಂಬ ಕನಸು ಕಾಣುತ್ತಿದ್ದ ಬಡ ಬಾಲಕನೊಬ್ಬ ಎಂದಿಗೂ ಕೂರಲಾಗದೆ ನಿರಾಸೆಗೊಳ್ಳುತ್ತಾನೆ. ಮುಂದೆ ಆತ ಕಾರು ತೆಗೆದುಕೊಂಡಾಗ ತನ್ನ ಊರಿಗೆ ಹೋಗಿ ಊರಿನ ಯಜಮಾನನ ಮನೆಯ ಮುಂದೆ ನಿಂತು ತನ್ನ ಬಾಲ್ಯದ ಕಥನವನ್ನು ನೆನಪಿಸಿಕೊಳ್ಳುವ ಪರಿ ನಿಜಕ್ಕೂ ಅದ್ಭುತವಾದದ್ದು.

ಇದನ್ನೂ ಓದಿ | ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮಯೂರಿ

ಪರಿಯೂರಂ ಪೆರುಮಾಳ್ ಎಂಬ ಜಾತಿ ದೌರ್ಜನ್ಯದ ಕಥೆಯುಳ್ಳ ಸಿನಿಮಾ. ಜಾತಿಯತೆಯನ್ನು ಸದಾ ಉಸಿರಾಡುವ ದಕ್ಷಿಣ ತಮಿಳುನಾಡಿನ ಮೇರಿ ಸೆಲ್ವರಾಜ್ ಎಂಬ ನಿರ್ದೇಶಕನ ಮೊದಲ ಚಿತ್ರ ಹಾಗೂ ಆತನ ಕಾಲೇಜ್ ದಿನಗಳ ಅಪಮಾನದ ನೋವಿನ ಚಿತ್ರ. 2018 ರಿಂದ ಈಚೆಗೆ ಬಿಡುಗಡೆಯಾದ ಮೂರು ಚಿತ್ರಗಳು ತಮ್ಮ ವಿಭಿನ್ನ ಕಥಾ ಹಂದರದಿಂದಾಗಿ ಅತ್ಯಂತ ಜನಪ್ರಿಯ ಚಿತ್ರಗಳಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು.

ಈ ಮೂರು ಸಿನಿಮಾಗಳಲ್ಲಿ ಎದ್ದು ಕಾಣುವ ಪ್ರಮುಖ ಅಂಶವೆಂದರೆ, ನೂರಾರು ಕೋಟಿ ಬಂಡವಾಳ ಹೂಡಿಕೆ ಮಾಡಿ ಗೆಲ್ಲುವ ಸಿನಿಮಾ ನಿರ್ದೇಶಕ ಮತ್ತು ನಾಯಕರಿಗೆ ಮುಖಕ್ಕೆ ಹೊಡೆದಂತೆ ಹೊಸಬರ ತಂಡ ಸೀಮಿತ ಬಜೆಟ್ ನಲ್ಲಿ ಸಿನಿಮಾಗಳನ್ನು ಮಾಡಿ ತಮಿಳು ಸಿನಿಮಾ ಭಾಷೆಯೆಂದರೆ ರಜನಿಕಾಂತ್, ವಿಜಯ್,ಅಥವಾ ಶಂಕರ್ ಎಂಬ ನಿರ್ದೇಶಕನ ಭಾಷೆಯಲ್ಲ, ಇಂತಹದ್ದೊಂದು ಭಾಷೆ ಕೂಡ ಇದೆ ಎದು ತೋರಿಸಿದ್ದಾರೆ.

ಈ ಸಿನಿಮಾಗಳನ್ನು ನೋಡುವಾಗ ಕನ್ನಡದಲ್ಲಿ ಇದು ಏಕೆ ಸಾಧ್ಯವಾಗಿಲ್ಲ ಎಂದು ಪದೇ ಪದೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಈಗ ಕಿರಿಯ ಮಿತ್ರರಾದ ಮನ್ಸೊರೆ, ಕೆ.ಟಿ. ದಯಾನಂದ್ ಮೂಲಕ ಇದಕ್ಕೆ ಉತ್ತರ ಸಿಕ್ಕಿದೆ. ಗುಜರಾತಿ ಭಾಷೆಯಲ್ಲಿ ಇತ್ತೀಚೆಗೆ ತಯಾರಾದ ಹೆಲ್ಲೋರ ಎಂಬ ಸಿನಿಮಾ ಕೂಡ ಹೊಸ ಭಾಷ್ಯವನ್ನು ಬರೆದಿದೆ. ಅದು ಕೂಡ ಹೊಸ ಪ್ರತಿಭೆಗಳಿಂದ ನಿರ್ಮಾಣವಾದ ಚಿತ್ರ.ಜೊತೆಗೆ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರ

ಆಕ್ಟ್ 1978 ಸಿನಿಮಾ ಮೊದಲ ನಾಲ್ಕೈದು ದೃಶ್ಯಗಳಾದ ನಂತರ ತಂದೆ ಮತ್ತು ಮಗಳು ಸರ್ಕಾರಿ ಕಚೇರಿಗೆ ಪ್ರವೇಶಿಸಿ, ಅಲ್ಲಿನ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುವುದರೊಂದಿಗೆ ಚಿತ್ರಕತೆಯ ಹಂದರ ನಿಧಾನವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅತ್ಯಂತ ಬಿಗಿಯಾದ ಚಿತ್ರಕಥೆ ಮತ್ತು ಅತಿರೇಕ ಅಥವಾ ಅಸಹ್ಯ ಎನಿಸದ ಸಂಭಾಷಣೆ ಈ ಸಿನಿಮಾದ ಹೈಲೈಟ್ ಎಂದರೆ ತಪ್ಪಾಗಲಾರದು.

ಸಿನಿಮಾದ ಪ್ರತಿ ದೃಶ್ಯವೂ ಪ್ರೇಕ್ಷಕರನ್ನುತುದಿಗಾಲಿನಲ್ಲಿ ನಿಲ್ಲಿಸುತ್ತದೆ. ಸೀಮಿತವಾದ ಬಜೆಟ್ ನಲ್ಲಿ ವಿಧಾನಸಭೆಯ ದೃಶ್ಯಗಳನ್ನು ತೋರಿಸುವಾಗ ಮತ್ತು ವಿಧಾನಸಭಾಧ್ಯಕ್ಷರ ಕೊಠಡಿ ಮುಂತಾದವುಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ನೈಜತೆಗೆ ಧಕ್ಕೆ ಭಾರದಂತೆ ಚಿತ್ರಕರಿಸಿರುವ ಮನ್ಸೋರೆಯ ಜಾಣ್ಮೆಯನ್ನು ನಾವು ಮೆಚ್ಚಲೇಬೇಕು.

ಅದೇ ರೀತಿ ಚಿತ್ರಕಥೆ ಬೇಡುವ ಸಂವಿಧಾನದ ವಿಧಿಗಳು, ಮಾನವ ಹಕ್ಕುಗಳ ಕಾನೂನು ಕುರಿತ ಅಂಶಗಳು, ಬಾಂಬ್ ನಿಷ್ಕ್ರಿಯಾ ದಳದ ಉಡುಪು, ವೈದ್ಯಕಿಯ ಚಿಕಿತ್ಸೆಯಲ್ಲಿ ಅನುಸರಿಸಬೇಕಾದ ಪ್ರಕ್ರಿಯೆ ಹೀಗೆ ಅದ್ದೂರಿತನದಲ್ಲಿ ಜಾರಿ ಹೋಗಬಹುದಾದ ಅನೇಕ ಅಂಶಗಳು ಈ ಸಿನಿಮಾದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿವೆ.

ಚಿತ್ರದ ನಟರ ನೈಜ ಅಭಿನಯ ಕೂಡಾ ಮನಸ್ಸಿಗೆ ನಾಟುತ್ತದೆ. ನಾಯಕಿ ಯಜ್ಞಾಶೆಟ್ಟಿಯವರ ಹದವರಿತ ಅಭಿನಯ ಹಾಗೂ ನಾಟಕರಂಗದಲ್ಲಿ ಪಳಗಿದ ಹುಲಿಯಂತಿರುವ ಬಿ.ಸುರೇಶ್ ಒಂದೇ ಒಂದು ಮಾತು ಇರದ ಕೇವಲ ಕಣ್ಣು ಮತ್ತು ಮುಖಭಾವದಿಂದ ಅಭಿನಯಿಸಬೇಕಾದ ಸವಾಲನ್ನು ಸ್ವೀಕರಿಸಿ ಯಶಸ್ವಿಯಾಗಿದ್ದಾರೆ.

ಈ ಸಿನಿಮಾ ಈಗ ಕೇವಲ ಕನ್ನಡಿಗರು ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಮಂದಿ ನೋಡಬೇಕಾದ ಸಿನಿಮಾ. ಮಲೆಯಾಳಂ ಭಾಷೆಯಲ್ಲಿ ಆರು ವರ್ಷಗಳ ಹಿಂದೆ ಬಂದಿದ್ದ ದೃಶ್ಯಂ ಎಂಬ ಸಿನಿಮಾ ಯಶಸ್ವಿಯಾಗಿತ್ತು. ಈಗ ಅದರ ಎರೆಡನೇ ಭಾಗ ಬಂದಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ. ಆ ಮಟ್ಟದಲ್ಲಿ ಆಕ್ಟ್ 1978 ಬೆಳೆದು ನಿಂತಿರುವದು ಹೆಮ್ಮೆಯ ಸಂಗತಿ.

ಮನ್ಸೋರೆಯಾಗಲಿ, ಟಿ.ಕೆ. ದಯಾನಂದ್ ರಾಗಲಿ ಆಕಸ್ಮಿಕ ಪ್ರತಿಭೆಯ ಕೂಸುಗಳಲ್ಲ. ಕಳೆದ ಏಳೆಂಟು ವರ್ಷಗಳಿಂದ ನನಗೆ ವೈಯಕ್ತಿಕವಾಗಿ ಪರಿಚಯ ಇರುವವರು. ಅವರ ಪ್ರತಿಭೆಯನ್ನು ಹತ್ತಿರದಿಂದ ಗಮನಿಸುತ್ತಾ ಬಂದಿದ್ದೀನಿ.

ಮನ್ಸೋರೆ ಈಗಾಗಲೇ ಹರಿವು ಮತ್ತು ನಾತಿಚರಾಮಿ ಸಿನಿಮಾಗಳ ಮೂಲಕ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು, ಮೂರನೇ ಸಿನಿಮಾವಾದ ಆಕ್ಟ್ 1878 ಅನ್ನು ವಿಭಿನ್ನವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಈಗ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದ್ದು ಎಲ್ಲರೂ ವೀಕ್ಷಿಸಬಹುದಾಗಿದೆ.

ಇಂತಹ ಸಿನಿಮಾ ನೀಡಿದ ಚಿತ್ರತಂಡಕ್ಕೆ ಮತ್ತೊಮ್ಮೆ ಹೃದಯ ತುಂಬಿದ ಅಭಿನಂದನೆಗಳು.

ಕೃಪೆ : ಫೇಸ್ ಬುಕ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version