ಬಹಿರಂಗ
ಪತ್ರಿಕೆ ಒಂದು ನಾಡಿನ ಸಾಕ್ಷಿ ಪ್ರಜ್ಞೆ..!
ಪತ್ರಿಕೆ ಎನ್ನುವುದು ಒಂದು ನಾಡಿನ ಸಾಕ್ಷಿ ಪ್ರಜ್ಞೆ.ಹೃದಯಗಳ ಪಿಸುಮಾತಿಗು ಹಾಗೂ ದೌರ್ಜನ್ಯದ ವಿರುದ್ಧ ಧ್ವನಿ ಒಗ್ಗೂಡಿಸಲು ಮತ್ತು ದಾಖಲಿಸಲು ಇರುವ ವೇದಿಕೆ. ಸಮೃದ್ಧ ಪತ್ರಿಕೆಗಳು ಆ ನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಮೃದ್ಧಿಯ ಪ್ರತೀಕ. ಒಂದು ನಾಡಿನ ಸಮೃದ್ಧತೆ ಕೇವಲ ಭೌತಿಕ ವಸ್ತುಗಳಲ್ಲಿರುವುದಿಲ್ಲ. ಅದು ಆ ನಾಡಿನ ಸಾಂಸ್ಕೃತಿಕ ಸಮೃದ್ಧತೆಯನ್ನು ಒಳಗೂಂಡಿರುತ್ತದೆ. ಪತ್ರಿಕೆಗಳು ಸಂಪೂರ್ಣವಾಗಿ ನಿಂತು ಹೋಗುವುದು ಒಂದು ರೀತಿಯಲ್ಲಿ ಸಾಂಸ್ಕೃತಿಕ ಆತ್ಮಹತ್ಯೆಯೆ ಸರಿ.
ಇತ್ತೀಚಿನ ದಿನಗಳಲ್ಲಿ ಕನ್ನಡದ ಪ್ರಮುಖ ದೈನಿಕಗಳಲ್ಲಿ ಭಾನುವಾರದ ಪುರವಣಿಗಳು ಬರುತ್ತಿಲ್ಲ. ಅಲ್ಲಿ ಸಾಹಿತ್ಯಿಕ ಚರ್ಚೆಗಳಿಗೆ ಮೀಸಲಾಗಿದ್ದ ಸ್ಥಳ ಮಾಯವಾಗಿದೆ. ಅನೇಕ ಬರಹಗಾರರನ್ನು ರೂಪಿಸಿದ ಪ್ರಜಾವಾಣಿ ಪತ್ರಿಕೆಯಲ್ಲಿ ಭಾನುವಾರದ ಸಂಪಾದಕೀಯ ಪುಟ ಬರುತ್ತಿಲ್ಲ. ಈ ಕುರಿತು ಅಲ್ಲಿನ ಪತ್ರಕರ್ತ ಮಿತ್ರರು ಕತೆ ಹೇಳುತ್ತಾರೆ, ಮಾನ್ಸಂಟೊ ಕಂಪನಿಯಿಂದ ಬಂದಿರುವ CEO ಅಲ್ಲಿನ ವರದಿಗಾರರಿಗೆ ಅವರ ಬರಹಗಳು light reading ಇರಲಿ, ಗಂಭೀರ ಬರಹಗಳು ಬೇಡ , ಪತ್ರಿಕೆ ಹೆಚ್ಚು ಪ್ರಸಾರವಾಗಿ, ಹೆಚ್ಚು ಲಾಭಗಳಿಸಲಿ ಎನ್ನುತ್ತಿದ್ದಾರಂತೆ, ಇನ್ನೂ ಈ ಕುರಿತು ಸಂಪಾದಕರಾದ ಶಾಂತ ಕುಮಾರ ಅವರನ್ನು ಪ್ರಶ್ನಿಸಿದರೆ ನೋಡೋಣ, ಮಾಡೋಣ ಎನ್ನುವ ಉತ್ತರ ಕೊಡುತ್ತಾರೆ.
ಇವು ನಮ್ಮ ದುರ್ದಿನಗಳಲ್ಲದೆ ಮತ್ತೇನಲ್ಲ. ನಾಡಿನ ಆಗು ಹೋಗುಗಳನ್ನು, ನೊಂದವರ ನೋವಗಳನ್ನು ಕಟ್ಟಿಕೊಡಬೇಕಾದ ಪತ್ರಿಕೆಗಳು ಲಾಭದ ಆಸೆಗೆ ನಿಂತರೆ ಅದು ಸಾಂಸ್ಕೃತಿಕ ಅಧಃಪತನವೆ ಸರಿ. ಜೊತೆಗೆ ಪತ್ರಿಕೆಗಳು ಜನರ ಅಭಿರುಚಿಯನ್ನು ತಿದ್ದಿ,ತೀಡುವ ಕೇಲಸ ಮಾಡಬೇಕು ಆದರೆ ಸಧ್ಯ ಅದು ಕನಸು ಮಾತ್ರ. ಚರ್ಚೆಗೆ ,ಸಂವಾದಕ್ಕೆ ಅವಕಾಶಗಳು ಕ್ಷೀಣಿಸುತ್ತಿರುವ ಕಾಲದಲ್ಲಿ ವಿಶ್ವಾಸಾರ್ಹ ಅಭಿವ್ಯಕ್ತಿ ಮಾಧ್ಯಮಗಳು ಕಡಿಮೆಯಾಗುವುದು ದುರಂತ.
ಇನ್ನೂ ನೇರವಾಗಿ ಶುದ್ಧ ಸಾಹಿತ್ಯಿಕ ಪತ್ರಿಕೆಗಳ ಕಡೆ ಕಣ್ಣು ಹಾಯಿಸಿದರೆ ಕಾಣುವ ಪರಿಸ್ಥಿತಿ ಗಂಭೀರವಾಗಿದೆ. ಸದ್ಯ ಕನ್ನಡದಲ್ಲಿ ಮನೋಹರ ಗ್ರಂಥಮಾಲೆಯ ಸಮಾಹಿತ, ಗೋರವರವರ ಸಂಗಾತ ಉಸಿರಾಡುತ್ತಿವೆ. ಸಂಕಥನದ ಪಡಿಪಾಟಲನ್ನು ಹಾಗೂ ಶುದ್ಧ ಸಾಹಿತ್ಯಿಕ ಪತ್ರಿಕೆಯ ಕಷ್ಟಗಳನ್ನು ರಾಜೇಂದ್ರ ಪ್ರಸಾದ್ ಸ್ವತಃ ಹೇಳಿದರು. ಅದು ಇನ್ನು ಕೇವಲ ಹಳೆಯ ಮೂರು ಸಂಚಿಕೆ ಕಳಿಸಿ ನಿಂತು ಹೋಗುತ್ತದೆ, ಆದರೆ online ಪತ್ರಿಕೆ ಬರುತ್ತದೆ, ಇನ್ನು ಚಂಪಾ ಅವರ ಪತ್ರಿಕೆ ಸಂಕ್ರಮಣ ಚಂದಾಹಣ ಸರಿಯಾಗಿ ನೀಡದ ಕಾರಣ ನಿಂತುಹೋಗಿದೆ.
ಹಳಬರ ಮಾರ್ಗದರ್ಶನಕ್ಕೆ ಹಾಗೂ ಹೊಸಬರಿಗೆ ವೇದಿಕೆ ಕಲ್ಪಿಸಲು ಖಂಡಿತ ಸಾಹಿತ್ಯಿಕ ಪತ್ರಿಕೆಗಳು ಅವಶ್ಯಕ. ಆದರೆ ಅವುಗಳ ಮಹತ್ವ ಗೊತ್ತಿಲ್ಲದ ನಾವುಗಳು( ಎಲ್ಲರೂ ಅಲ್ಲ) ಪ್ರತಿಸ್ಪಂದಿಸುತ್ತಿಲ್ಲ. ಕನ್ನಡ ಪ್ರಾಧ್ಯಾಪಕ ಒಬ್ಬ ಸಾಂಸ್ಕೃತಿಕ ರಾಯಭಾರಿ. ಅವರಿಗೆ ಸಕಲ ಶಾಸ್ತ್ರಗಳ ಪರಿಚಯ ಸ್ವಲ್ಪವಾದರೂ ಇರಬೇಕಾದದ್ದೂ ಅಪೇಕ್ಷಣೀಯ.
ಸಾಹಿತ್ಯಿಕ ಪತ್ರಿಕೆಗಳಲ್ಲಿ ಸಹಜವಾಗಿ ರಂಗ ಭೂಮಿ, ನೃತ್ಯ, ಸಂಗೀತ, ವಾಸ್ತುಶಿಲ್ಪ, ಶಿಲ್ಪ ಕಲೆ, ಚಿತ್ರ ಕಲೆ, ಸಿನೆಮಾ ಕುರಿತು ಬರಹಗಳು ಇರುತ್ತವೆ, ( ಬಹುಶಃ ಅಲ್ಲು ಈಗ ಕೆಲವು ಕಣ್ಮರೆಯಾಗಿವೆ). ಈ ಎಲ್ಲಾ ಅಂಗಗಳೂ ಕ್ಷೀಣಿಸಿತ್ತಿರುವ ಸಮಾಜ ರಸಹೀನ, ಅದಕ್ಕೆ ಆತ್ಮವೇ ಇರುದಿಲ್ಲ, ಇನ್ನು ಈ ಪ್ರತ್ಯೇಕ ಶಾಖೆಗಳಿಗೆ ಕನ್ನಡದಲ್ಲಿ ಪತ್ರಿಕೆಗಳು ಬರುವುದು ನನಸಾಗದ ಕನಸು. ಹಾಗಾಗಿ ಸ್ನೇಹಿತರೆ ಸಾಹಿತ್ಯಿಕ ಪತ್ರಿಕೆಗಳಿಗೆ ಬೆಂಬಲವಾಗಿ ನಿಲ್ಲುವುದು ನಮ್ಮ ಅಭಿರುಚಿಯನ್ನು ಕಾಯ್ದುಕೊಳ್ಳುವ ಪ್ರಯತ್ನ. ಜೊತೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ದೃಷ್ಟಿಯಿಂದ ನಮ್ಮ ಆದ್ಯ ಕರ್ತವ್ಯ.
– ಸಂತೋಷ ಉಂಡಾಡಿ
ಕನ್ನಡ ಉಪನ್ಯಾಸಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಪಾಶ್ಚಪೂರ
ಹುಕ್ಕೇರಿ ತಾಲ್ಲೂಕು
ಬೆಳಗಾವಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401