ದಿನದ ಸುದ್ದಿ
ಕನ್ನಡವನ್ನು ವರ್ತಮಾನದೊಂದಿಗೆ ಬೆಸೆಯಬೇಕಿದೆ : ಡಾ. ಮೆಹಮೂದ್ ಖಾನ್
ಸುದ್ದಿದಿನ, ಚನ್ನಗಿರಿ : ಆಲೂರು ವೆಂಕಟರಾಯರು ಮೊದಲಾದ ಕನ್ನಡದ ಪ್ರಾತಃಸ್ಮರಣೀಯರ ಅವಿರತ ಪ್ರಯತ್ನದಿಂದ,ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಮೈಸೂರು ರಾಜ್ಯವು ಏಕೀಕರಣಗೊಂಡಿತು ಎಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮೆಹಮೂದ್ ಖಾನ್ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಶ್ರೀ ಶಿವಲಿಂಗೇಶ್ವರಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವದ 50ನೇ ವರ್ಷಾಚರಣೆಯ ‘ಕರ್ನಾಟಕ ಸಂಭ್ರಮ-50’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕ ರಾಜ್ಯ ಎಂದು ಹೆಸರು ಪಡೆದು, ಅದರ 50ನೇ ವರ್ಷದ ಸಂಭ್ರಮವನ್ನು ನಾವು ಇಂದು ಆಚರಿಸುತ್ತಿದ್ದೇವೆ. ಈ ಸಂಭ್ರಮದ ಜೊತೆಗೆ ಕನ್ನಡವನ್ನು ವರ್ತಮಾನದ ಸವಾಲುಗಳೊಡನೆ ಬೆಸೆಯಬೇಕಾದ ಸಂಕ್ರಮಣ ಕಾಲದಲ್ಲಿ ನಾವಿದ್ದೇವೆ. ಅದನ್ನು ಮನಗಂಡು ನಾವು ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರವಿಯವರು, ಕನ್ನಡದ ವಿವೇಕವು, ಕ್ರಿ.ಶ.850ರ ಕವಿರಾಜಮಾರ್ಗ ಕಾಲದಿಂದಲೂ, ವಿಭಿನ್ನ ಅಭಿಮತಗಳು, ವಿಚಾರಗಳನ್ನು ಇಟ್ಟುಕೊಂಡೇ, ಏಕತೆ ಹಾಗೂ ಅಖಂಡತೆಯನ್ನು, ಸಹಿಷ್ಣುತೆಯನ್ನು ಪ್ರತಿಪಾದಿಸುತ್ತಾ ಸಹಕಾರ, ಸಹಬಾಳ್ವೆಯೊಂದಿಗೆ ಸಾಗುವುದೇ ನಮ್ಮ ನಿಜವಾದ ಸಂಪತ್ತು ಎಂದು ಪ್ರತಿಪಾದಿಸಿದೆ ಎಂದರು.
ಬಹುತನ, ಒಳಗೊಳ್ಳುವಿಕೆ, ಕೈ ಹಿಡಿದು ನಡೆಸಿಕೊಂಡು ಹೋಗುವ ಗುಣವನ್ನು ಕನ್ನಡತ್ವವು ಸದಾ ಜಾಗೃತವಾಗಿರಿಸಿಕೊಂಡೇ ಇದೆ. ಇದೇ ವಿವೇಕ, ಅಸ್ಮಿತೆ, ಸರ್ವ ಜನಾಂಗದ ತೋಟದ ರೂಪಕವಾಗಿ, ಕನ್ನಡದ ಸಾಂಸ್ಕೃತಿಕ ಪ್ರಜ್ಞೆಯಾದ, ರಾಷ್ಟ್ರಕವಿ ಕುವೆಂಪು ಅವರ ಬರೆವಣಿಗೆಯಲ್ಲಿ ಮುಂದುವರೆದಿದೆ ಎಂದು ಹೇಳಿ, ಈ ವಿವೇಕವನ್ನು ಜತನದಿಂದ ಕಾಪಿಟ್ಟುಕೊಂಡು ವರ್ತಮಾನದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅಮೃತೇಶ್ವರ ಬಿ. ಜಿ. ಇವರು ಕ್ರಿ.ಶ. 320ರ ತಾಳಗುಂದದ ವಜಿನಾಗನ ಕಾಲದಿಂದಲೂ ಕನ್ನಡ ದಾಖಲೆ ದೊರೆತಿದ್ದು, ಭಾರತದ ಪುರಾತನ ಭಾಷೆಗಳಲ್ಲಿ ಇದು ಒಂದು ಎಂಬುದಕ್ಕೆ ನಿದರ್ಶನವಾಗಿದೆ ಎಂದರು.
ಶಾಸ್ತ್ರೀಯ ಭಾಷೆಯ ಸ್ಥಾನವನ್ನು ಪಡೆದಿರುವ ಕನ್ನಡ ಭಾಷೆಯು ಹಲವು ಸವಾಲುಗಳನ್ನು ಎದುರಿಸಿ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಉಳಿಸಿಕೊಂಡು ನಿಂತಿದೆ. ಇದಕ್ಕೆ ಕಾರಣ, ಕನ್ನಡದ ಸಾಮಾನ್ಯ ಜನತೆ, ಕಾಯಕ ಜೀವಿಗಳು ತಮ್ಮ ದಿನನಿತ್ಯದ ಬದುಕಿನಲ್ಲಿ ಕನ್ನಡ ಭಾಷೆಯನ್ನು ಬಳಸುತ್ತಿರುವುದೇ ಹೊರತು ಅನ್ಯಥಾ ಅಲ್ಲ ಎಂದು ನುಡಿದರು.
ನಮ್ಮ ದಿನನಿತ್ಯದ ಎಲ್ಲ ಕ್ಷೇತ್ರಗಳಲ್ಲಿ ಕನ್ನಡವನ್ನು ಬಳಸಿ, ಬೆಳೆಸಿದರೆ ಮಾತ್ರ ಕನ್ನಡ ಭಾಷೆ, ಸಂಸ್ಕ್ರತಿ ಉಳಿಯುತ್ತದೆ
ಮತ್ತು ಇದನ್ನು ನಮ್ಮ ಮುಂದಿನ ಪೀಳಿಗೆಗೆ ರವಾನಿಸಲು ಸಾಧ್ಯ. ಹಾಗಾಗಿ ನಮ್ಮ ದಿನನಿತ್ಯದ ಎಲ್ಲಾ ಚಟುವಟಿಕೆಗಳಲ್ಲೂ ಕನ್ನಡವನ್ನು ಬಳಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕರಾದ ವಿಜಯ್ ಕುಮಾರ್ ಕೆ. ರಾಷ್ಟ್ರೀಯ ಸೇವಾ ಯೋಜನೆಯ ಸಂಚಾಲಕರಾದ ಡಾ. ಪಾರ್ವತಮ್ಮ, ಹಾಗೂ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಷಣ್ಮುಖಪ್ಪ ಕೆ.ಹೆಚ್. ಅವರು ಹಾಗೂ ಕಾಲೇಜಿನ ಅಧ್ಯಾಪಕರು, ಕಛೇರಿ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಪಾರ್ವತಮ್ಮ ಅವರು ಪ್ರಾರ್ಥಿಸಿದರು. ರವಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ರಾಷ್ಟ್ರಗೀತೆ, ನಾಡಗೀತೆ, ಹಾಗೂ ಕನ್ನಡ ಗೀತ ಗಾಯನವನ್ನು ಸಮಾರಂಭದಲ್ಲಿ ಆಯೋಜಿಸಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243