ಸಿನಿ ಸುದ್ದಿ

ಬಾಲಿವುಡ್‍ನಲ್ಲಿ ಬದಲಾವಣೆ ಗಾಳಿ ಬೀಸಲಿದೆಯೇ ‘ಕರ್ವಾನ್’..?

Published

on

ಸುದ್ದಿದಿನ ಡೆಸ್ಕ್ |ಸಿನಿಮ್ಯಾಟಿಕ್, ಸೈನ್ಸ್ ಫಿಕ್ಷನ್, ಫ್ಯಾಂಟಸಿ ವಿಷಯಾಧಾರಿತ ಸಾಲು ಸಾಲು ಹಿಟ್ ಸಿನಿಮಾಗಳನ್ನು ಮೆಚ್ಚಿದ ಬಾಲಿವುಡ್ ಸಿನಿ ಪ್ರಿಯರು ಕಲಾತ್ಮಕ ಎಲಿಮೆಂಟ್‍ಗಳುಳ್ಳ ಸಿನಿಮಾವನ್ನು ಮೆಚ್ಚುತ್ತಾರೆಯೇ ಎಂಬ ಪ್ರಶ್ನೆಯನ್ನು ಕರ್ವಾನ್ ಸಿನಿಮಾ ಹುಟ್ಟುಹಾಕಿದೆ.

ಮಲೆಯಾಳಂನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಅವರು ಈ ಸಿನಿಮಾ ಮೂಲಕ ಎಂಟ್ರಿ ಪಡೆದಿದ್ದಾರೆ. ಈಗಾಗಲೇ ತಮಿಳು ಹಾಗೂ ತೆಲಗು ಸಿನಿಮಾಗಳಲ್ಲಿ ನಟಿಸಿದ್ದ ದುಲ್ಕರ್ ಅವರು ಈ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಮಾಲಿವುಡ್ ಸೂಪರ್ ಸ್ಟಾರ್ ಮಮ್ಮೂಟಿ ಅವರ ಪುತ್ರ ದುಲ್ಕರ್ ನಟನಾ ಚಾತುರ್ಯವು ಬಾಲಿವುಡ್‍ನಲ್ಲಿ ಫಲಿಸಲಿದೆಯೇ ಎಂಬುದಕ್ಕೂ ಈ ಸಿನಿಮಾ ಉತ್ತರ ಕೊಡಲಿದೆ. ಈಗಾಗಲೇ ಲಕ್ಷಾಂತರ ಜನ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಬುಕ್ ಮೈ ಶೋ, ಜಸ್ಟ್ ಟಿಕೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಭವಿಷ್ಯದಲ್ಲಿ ಕರ್ವಾನ್ ತರದ ಸಿಂಪಲ್ ಕತೆಗಳುಳ್ಳ ಸಿನಿಮಾವನ್ನು ಉತ್ತರ ಭಾರತೀಯರು ಒಪ್ಪುತ್ತಾರೋ ಇಲ್ಲವೋ ಎಂಬುದು ಈಗ ಉದ್ಭವಿಸಿರುವ ಪ್ರಶ್ನೆ.

ಕರ್ವಾನ್ ಸಿನಿಮಾ ಬಗ್ಗೆ ಹೇಳುವುದಾದರೆ ಇದೊಂದು ದಕ್ಷಿಣ ಭಾರತದ ಅಭಿರುಚಿ ಹೊಂದಿರುವ ಬಾಲಿವುಡ್ ಸಿನಿಮಾ, ಅವಿನಾಶ್ ಚಿತ್ರದ ನಾಯಕ ಸಾಫ್ಟ್‍ವೇರ್ ಉದ್ಯೋಗಿ. ಖ್ಯಾತ ಫೋಟೊಗ್ರಾಫರ್ ಆಗಬೇಕೆಂದು ಕನಸು ಹೊತ್ತಿರುವ ಹುಡುಗ ಅಪ್ಪನ ಬಲವಂತಕ್ಕಾಗಿ ಸಾಫ್ಟ್‍ವೇರ್ ಕೆಲಸಕ್ಕೆ ಸೆರುತ್ತಾನೆ. ಕೆಲಸದಲ್ಲಿ ನಿರಾಸಕ್ತಿ, ರೋಟೀನ್ ಲೈಫ್‍ನಿಂದ ಬೇಸತ್ತಿರುವ ನಾಯಕ ಹೇಗಾದರೂ ಮಾಡಿ ತನ್ನ ಕನಸಿನಂತೆ ಫೋಟೊಗ್ರಾಫರ್ ಆಗುವಂತೆ ಹಂಬಲಿಸುತ್ತಾನೆ.
ಈ ನಡುವೆ ಗಂಗೋತ್ರಿಗೆ ಪ್ರವಾಸ ಹೋಗುವ ಅವಿನಾಶ್‍ನ ತಂದೆ ಸಾವಿಗೀಡಾಗುತ್ತಾರೆ. ಅಪ್ಪನ ಸಾವನ್ನು ಹಗುರವಾಗಿ ಸ್ವೀಕರಿಸುವ ಅವಿನಾಶ್‍ಗೆ ಈಗಲಾದರೂ ತಾನು ಫೋಟೊಗ್ರಾಫರ್ ಆಗಬಹುದೆಲ್ಲ ಎಂದು ಸಮಾಧಾನ ಪಟ್ಟಿಕೊಳ್ಳುತ್ತಾನೆ.

ಏರ್‍ಪೋರ್ಟ್‍ಗೆ ತನ್ನ ತಂದೆಯ ದೇಹದ ಬದಲು ಮಹಿಳೆಯೊಬ್ಬರ ಮೃತ ದೇಹ ಬರುತ್ತದೆ. ಅಕಸ್ಮಾತಾಗಿ ಅದು ಕೊಚ್ಚಿನ್‍ನವರದ್ದಾಗಿರುತ್ತದೆ. ತನ್ನ ತಂದೆ ದೇಹ ಅಲ್ಲಿಗೆ ಸೇರಿರುತ್ತದೆ. ಶವಪೆಟ್ಟಿಗೆಗಳನ್ನು ಬದಲಾಯಿಸುವ ಸಲುವಾಗಿ ಸ್ನೇಹಿತ ಶೌಕತ್ (ಇರ್ಫಾನ್ ಖಾನ್) ಜತೆ ಬೆಂಗಳೂರಿನಿಂದ ಕೊಚ್ಚಿನ್‍ಗೆ ಪ್ರಯಾಣ ಬೆಳೆಸುವ ಅವಿನಾಶ್‍ಗೆ, ದಾರಿ ಮಧ್ಯೆ ನಾಯಕಿ ಪರಿಚಯವಾಗುತ್ತದೆ. ಆಕೆಯ ಚೆಲ್ಲಾಟ, ಅವಳಿಷ್ಟದಂತೆ ಬದುಕುವ ರೀತಿ ನೋಡಿ ತಾನು ಬದಲಾಗಬೇಕೆನಿಸುತ್ತದೆ. ಮಾರ್ಗ ಮಧ್ಯೆ ಎದುರಾಗುವ ಸವಾಲುಗಳು ಹಾಗೂ ಸಿನಿಮೀಯ ಸನ್ನವೇಶಗಳೇ ಸಿನಿಮಾದ ಜೀವಾಳ.

ಸಿನಿಮಾ ಒಂದು ಸರಳ ಕತಾವಸ್ತು, ನಿರೂಪಣೆ ಹೊಂದಿದೆ ಈ ವಿಷಯದಲ್ಲಿ ನಿರ್ದೇಶಕರು ಗೆಲ್ಲುತ್ತಾರೆ. ಇರ್ಫಾನ್ ಖಾನ್ ಅವರ ಮಾತಿನ ಶೈಲಿಯೇ ನಗೆಯ ಬುಗ್ಗೆ ಹೊಮ್ಮಿಸುತ್ತದೆ. ಬೆಂಗಳೂರು, ಮೈಸೂರು, ನಂಜನಗೂಡಿನಲ್ಲೂ ಚಿತ್ರ ಶೂಟ್ ಆಗಿರುವುದು ವಿಷೇಶದ ಜತೆ ಕನ್ನಡಿಗರಿಗೂ ಹತ್ತರಿವಾಗುತ್ತದೆ. ಒಟ್ಟಾರೆ ಹೇಳುವುದಾದರೆ ಆಫ್ ಬೀಟ್ ಸಿನಿಮಾ ಪ್ರಿಯರು ತಪ್ಪದೇ ನೋಡಬೇಕಿರುವ ಸಿನಿಮಾ ಇದು. ಬಾಲಿವುಡ್‍ನಲ್ಲಿ ಒಂದು ಬದಲಾವಣೆ ಗಾಳಿ ಬೀಸಿ ಕರ್ವಾನ್ ರೀತಿಯ ಸಿನಿಮಾಗಳು ಮೂಡಿಬಂದರೆ ಸಿನಿಮಾ ಪ್ರಿಯರಿಗೆ ಹಬ್ಬದೂಟವೇ ಸರಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version