ಅಂಕಣ

ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ

Published

on

ವಿದ್ಯಾನಾಯ್ಕ್ ಅರೇಹಳ್ಳಿ

ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.

ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.

ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.

ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ನಾಯಕ ನಟನಾಗಿ ​ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.

ಇನ್ನು 2022ರಲ್ಲಿ ​ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ​ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪರಿಶ್ರಮ ಮತ್ತು ಫಿಟ್ನೆಸ್

ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.

ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್

ಕುಚುಕು ನಾಯಕ ನಟ ಚೌಹಾಣ್

ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
​ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ

ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.

ಬಂಜಾರ ಹವೇಲಿಯ ಹರಿಕಾರ

ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.

​ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.

ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version