ಲೈಫ್ ಸ್ಟೈಲ್

ಕುಷ್ಠರೋಗ; ಕಡೆಗಣಿಸದಿರಿ

Published

on

ಕೆಲವೊಂದು ರೋಗಗಳು ಮನುಷ್ಯನ ದೇಹ ಆಕ್ರಮಿಸಿಕೊಂಡ ನಂತರ ಅವನನ್ನು ಮಾನಸಿಕವಾಗಿ ಕುಗ್ಗಿಸುವುದುಂಟು, ಅದಕ್ಕೆ ಕಾರಣ ನಿರಂತರ ಸಾಮಾಜಿಕ ಅಪಮಾನಕ್ಕೊಳಗಾಗುವುದು. ಆ ರೀತಿಯ ರೋಗಗಳಲ್ಲಿ ಕುಷ್ಠರೋಗವೂ ಒಂದು. ಕುಷ್ಠರೋಗವೆಂದರೆ ಶುಚಿತ್ವವಿಲ್ಲದವನು, ದೇವರ ಶಾಪಕ್ಕೊಳಗಾದವನು ಎಂಬ ಅನೇಕ ರೀತಿಯ ಅಪಮಾನಗಳನ್ನು ಹೊರಿಸುವುದುಂಟು.

ಒಬ್ಬ ವ್ಯಕ್ತಿಗೆ ಕುಷ್ಠರೋಗವಿದೆಯೆಂದು ಆತ ನಂಬಿ ಅದನ್ನು ಸ್ವೀಕರಿಸುವುದರಲ್ಲೇ ಆ ರೋಗವು ಕೈಮೀರಿ ಹೋಗಿರುತ್ತದೆ. ಇದಕ್ಕೆಲ್ಲಾ ಕಾರಣ ಈ ರೋಗವು ಮೊದಮೊದಲು ದೇಹ ಆಕ್ರಮಿಸಿಕೊಂಡರೂ ನಮ್ಮ ನಿಜ ಜೀವನಕ್ಕೆ ಯಾವುದೇ ತೊಂದರೆ ನೀಡದು. ಆದರೆ ರೋಗಾಣುಗಳು ದೇಹದಲ್ಲಿ ಅತಿ ಹೆಚ್ಚು ಉತ್ಪತ್ತಿಯಾದಂತೆ ವ್ಯಕ್ತಿಯ ಚರ್ಮ, ನರ, ಕೈಕಾಲು ಹಾಗೂ ಕಣ್ಣುಗಳಿಗೆ ಹಾನಿಯುಂಟುಮಾಡುತ್ತವೆ. ಆಗ ಎಷ್ಟೇ ಪಕ್ವತೆಯಿಂದ ಚಿಕಿತ್ಸೆ ನೀಡಿದರೂ ಸಮರ್ಥವಾಗಿ ರೋಗ ಗುಣವಾಗಲೊಲ್ಲದು.

ಕುಷ್ಠರೋಗ ಅಥವಾ ಹ್ಯಾನ್ಸೆನ್ಸ್ ಖಾಯಿಲೆ ಎಂದು ಕರೆಯಲ್ಪಡುವ ಈ ಖಾಯಿಲೆ, ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಬ್ಯಾಕ್ಟೀರಿಯಾ ದಿಂದ ಬರುತ್ತದೆ.

ರೋಗ ಹರಡುವಿಕೆ

• ಒಬ್ಬ ಕುಷ್ಠರೋಗಕ್ಕೊಳಪಟ್ಟ ವ್ಯಕ್ತಿಯ ಸ್ಪರ್ಷದಿಂದ, ಮೂಗು ಮತ್ತು ಬಾಯಿಯಿಂದ ಬರುವ ಲೋಳೆದ್ರವದ ಸಂಪರ್ಕದಿಂದ, ಈ ರೋಗ ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಗೆ ಹರಡಬಹುದು.

• ಈ ರೋಗ ಎಲ್ಲಾ ವಯಸ್ಸಿನವರಿಗೂ ಹರಡಬಲ್ಲದು.

• ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆ ಮಾಡುವ (ಹೆಚ್.ಐ.ವಿ.ಯಂಥ) ಯಾವುದೇ ಖಾಯಿಲೆಯು, ಕುಡಿಯುವ ನೀರಿನ ಕಲುಷಿತವಾಗಿರುವವರು, ಮಲಗುವ ಹಾಸಿಗೆ ಶುಚಿತ್ವವಿಲ್ಲದವರು, ಪೌಷ್ಟಿಕವಲ್ಲದ ಆಹಾರ ಸೇವಿಸುವವರು ಈ ಖಾಯಿಲೆಗೆ ಹೆಚ್ಚು ಆಸ್ಪದಕ್ಕೊಳಗಾಗಬಹುದು.

ರೋಗದ ಲಕ್ಷಣಗಳು

ಇದರಲ್ಲಿ ಪ್ರಾಥಮಿಕ ಹಂತದ ರೋಗದಲ್ಲಿ ಚರ್ಮದ ಮೇಲೆ ಅರಿವಳಿಕೆ ತೇಪೆಗಳು ಅಂದರೆ, ಸ್ಪರ್ಷಜ್ಞಾನವಿಲ್ಲದ ಕೆಂಪು ಅಥವಾ ಕಂದು ಬಣ್ಣದ ತೇಪೆಗಳು ಮೂಡುತ್ತವೆ.
ಕುಷ್ಠರೋಗವನ್ನು ತನ್ನ ಗುಣ ಲಕ್ಷಣಗಳಲ್ಲಿ ನೋಡುವುದಾದರೆ ಎರಡು ಪ್ರಮುಖ ವಿಧಗಳಲ್ಲಿ ವಿಂಗಡಿಸಬಹುದು

1)Paucibacillary leprosy: ಇದರಲ್ಲಿ ಚರ್ಮದ ಮೇಲೆ 1 ರಿಂದ 5 ಅರಿವಳಿಕೆ ತೇಪೆಗಳನ್ನು ಉಂಟಾಗುತ್ತವೆ ಮತ್ತು/ಅಥವಾ ಕೇವಲ ಒಂದು ನರ ತನ್ನ ಶಕ್ತಿಯನ್ನು ಕಳೆದುಕೊಂಡಿರುತ್ತದೆ.

2)Multibacillary leprosy: ಇದರಲ್ಲಿ ಚರ್ಮದ ಮೇಲೆ 5ಕ್ಕಿಂತ ಹೆಚ್ಚು ಅರಿವಳಿಕೆ ತೇಪೆಗಳನ್ನು ಉಂಟಾಗುತ್ತವೆ ಮತ್ತು/ಅಥವಾ ಒಂದಕ್ಕಿಂತ ಹೆಚ್ಚು ನರಗಳು ತನ್ನ ಶಕ್ತಿಯನ್ನು ಕಳೆದುಕೊಂಡಿರುತ್ತವೆ.

ಆದರೆ ರೋಗದ ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಚಿಕಿತ್ಸೆಯ ದೃಷ್ಟಿಯಿಂದ ಭಾರತೀಯ(5 ಪ್ರಕಾರಗಳು) ಮತ್ತು ಮ್ಯಾಡ್ರಿಡ್ (4 ಪ್ರಕಾರಗಳು) ಎಂದು ಮತ್ತೆ ವಿಂಗಡಿಸಲಾಗುತ್ತದೆ.
ರೋಗವು ಸುದೀರ್ಘ ಕಾಲ ಚಿಕಿತ್ಸೆ ಪಡೆಯದೇ ಇದ್ದಲ್ಲಿ ಮುಂದೆ ಕೈಕಾಲುಗಳು ಸ್ವಾಧೀನ ಕಳೆದುಕೊಳ್ಳುತ್ತವೆ,
ಕಣ್ಣುಗಳೊಳಗಿರುವ ನರವೂ ರೋಗಕ್ಕೊಳಪಟ್ಟು ದೃಷ್ಟಿ ಕುರುಡು ಸಂಭವಿಸಬಹುದು.

ಆದರೆ ಕೆಲವೊಮ್ಮೆ ಚರ್ಮವು ಯಾವುದೇ ಹಾನಿಗೊಳಗೊಳ್ಳದೇ ಒಳಗಿನ ನರವ್ಯೂಹವು ಕುಷ್ಠಕ್ಕೊಳಗಾಗಬಹುದು.

ರೋಗ ಪರೀಕ್ಷೆಗಳು

ಲೆಪ್ರೊಮಿನ್ ಪರೀಕ್ಷೆ: ರೋಗಿಯು ರೋಗದ ಯಾವ ಹಂತದಲ್ಲಿದ್ದಾನೆ ಮತ್ತು ರೋಗವು ಎಷ್ಟರ ಮಟ್ಟಿಗೆ ಶಮನವಾಗುತ್ತದೆ ಎಂದು ತಿಳಿದುಕೊಳ್ಳಲು

• ಎಲಿಸಾ

• ರೇಡಿಯೋ ಇಮ್ಮ್ಯೂನೋ ಅಸ್ಸೇ
ಸೇರಿದಂತೆ ಇನ್ನು ಕೆಲವು ಪರೀಕ್ಷೆಗಳಿಂದ ಕುಷ್ಟರೋಗವನ್ನು ನಿರ್ಣಯ ಮಾಡಬಹುದಾಗಿದೆ.

ಚಿಕಿತ್ಸೆ

1) ಪಾಸಿಬ್ಯಾಸಿಲ್ಲರಿ ಲೆಪ್ರೊಸಿ: ರಿಫಾಂಪಿಸಿನ್ (ತಿಂಗಳಿಗೊಮ್ಮೆ ವೈದ್ಯಕೀಯ ಪರಿವೀಕ್ಷಣೆಯಲ್ಲಿ) ಮತ್ತು ಡ್ಯಾಪ್ಸೋನ್ ಪ್ರತಿದಿನದಂತೆ ಈ ಮಾತ್ರೆಗಳನ್ನು 6 ತಿಂಗಳ ಕಾಲ ಸೇವಿಸಬೇಕಾಗುತ್ತದೆ.

2) ಮಲ್ಟಿಬ್ಯಾಸಿಲ್ಲರಿ ಲೆಪ್ರೊಸಿ: ರಿಫಾಂಪಿಸಿನ್ (ತಿಂಗಳಿಗೊಮ್ಮೆ ವೈದ್ಯಕೀಯ ಪರಿವೀಕ್ಷಣೆಯಲ್ಲಿ) ಮತ್ತು ಡ್ಯಾಪ್ಸೋನ್ ಪ್ರತಿದಿನದಂತೆ ಜೊತೆಗೆ ಕ್ಲೊಫಾಝಿಮಿನ್ ತಿಂಗಳಿಗೊಮ್ಮೆ ವೈದ್ಯಕೀಯ ಪರಿವೀಕ್ಷಣೆಯಲ್ಲಿ ಹಾಗೂ ಇದೇ ಮಾತ್ರೆಯನ್ನು ಪ್ರತಿದಿನದಂತೆಯೂ ಒಟ್ಟು 12 ತಿಂಗಳ ಕಾಲ ಸೇವಿಸಬೇಕಾಗುತ್ತದೆ.

ಈ ಚಿಕಿತ್ಸೆಗೆ Multi Drug Therapy ಎಂದು ಕರೆಯಲಾಗುತ್ತದೆ. ಈ ಮಾತ್ರೆಗಳು ಕುಷ್ಠರೋಗ ನಿರ್ಣಯಗೊಂಡ ಯಾವುದೇ ರೋಗಿಗೆ ಅಲ್ಲಿನ ವ್ಯಾಪ್ತಿಗೊಳಪಡುವ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ.

ರೋಗ ತಡೆಗಟ್ಟುವಿಕೆ

• ಮಗು ಹುಟ್ಟಿದಾಗ ಕೊಡುವ ‘ಬಿಸಿಜಿ’ ಚುಚ್ಚುಮದ್ದು ಕುಷ್ಠರೋಗದಿಂದ ಶೇ.20 ರಿಂದ 40ರಷ್ಟು ಸಂರಕ್ಷಣೆಯನ್ನು ನೀಡುತ್ತದೆ.

• ಯಾವುದೇ ಕುಷ್ಠರೋಗಿಯ ಸಂಪರ್ಕವುಂಟಾದಲ್ಲಿ, ತಕ್ಷಣವೇ ವೈದ್ಯರ ಸಮಾಲೋಚನೆ ಪಡೆದು ಚಿಕಿತ್ಸೆ ಪಡೆಯುವುದು.

• ಮೇಲೆ ತಿಳಿಸಿರುವ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ವೈದ್ಯರ ಸಲಹೆ ಪಡೆದು, ಅವಶ್ಯಕತೆಯಿದ್ದರೆ ರೋಗ ಪರೀಕ್ಷೆಗಳನ್ನೂ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ.

• ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಯ ಎಲ್ಲಾ ಅಂಶಗಳನ್ನೂ ಅನುಸರಿಸುವುದು.

– ಡಾ. ಸಂತೋಷ್ ಕೆ.ಬಿ

Leave a Reply

Your email address will not be published. Required fields are marked *

Trending

Exit mobile version