ದಿನದ ಸುದ್ದಿ
ಎಲ್ಐಸಿಯಿಂದ 21 ಸಾವಿರ ಕೋಟಿ ರೂ ಮೌಲ್ಯದ ಆರಂಭಿಕ ಷೇರು ಬಿಡುಗಡೆ; ಮೇ 9ರ ವರೆಗೆ ಖರೀದಿಗೆ ಅವಕಾಶ
ಸುದ್ದಿದಿನ ಡೆಸ್ಕ್ : ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮವು ಸುಮಾರು 21 ಸಾವಿರ ಕೋಟಿ ರೂಪಾಯಿ ಮೌಲ್ಯದ ಆರಂಭಿಕ ಷೇರುಗಳನ್ನು ಬುಧವಾರ ಬಿಡುಗಡೆ ಮಾಡಿದ್ದು, ಸಾರ್ವಜನಿಕ ಚಂದಾದಾರರು ಮೇ 9ರವರೆಗೆ ಈ ಷೇರುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ.
ದೇಶದಲ್ಲೇ ಅತಿ ದೊಡ್ಡ ಆರಂಭಿಕ ಷೇರು ಬಿಡುಗಡೆ ಇದಾಗಿದೆ. ಡಿಮ್ಯಾಟ್ ಖಾತೆ ಹೊಂದಿರುವ ಹರಾಜುದಾರರಿಗೆ ಮೇ 16ರಂದು ಷೇರುಗಳು ಹಂಚಿಕೆಯಾಗಲಿವೆ. ಮೇ 17ರಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಆರಂಭಿಕ ಷೇರುಗಳ ವ್ಯಾಪಾರ ನೋಂದಾಣಿ ಆಗಲಿದೆ.
ಎಲ್‌ಐಸಿ ಪ್ರತಿ ಷೇರಿಗೆ 902 ರಿಂದ 949 ರೂಪಾಯಿ ದರ ನಿಗದಿಪಡಿಸಲಾಗಿದೆ. ಹೂಡಿಕೆದಾರರು ಕನಿಷ್ಠ 15ಈಕ್ವಿಟಿ ಷೇರುಗಳನ್ನು ಹರಾಜು ಮಾಡಬಹುದು. ನಂತರ 15 ಷೇರುಗಳನ್ನು ಗುಣಿಸಿಯೂ ಖರೀದಿಸಬಹುದು.
ಎಲ್‌ಐಸಿಯ ಆರಂಭಿಕ ಷೇರು ಬಿಡುಗಡೆ ಮೂಲಕ ಕೇಂದ್ರ ಸರ್ಕಾರವು ಹೊಂದಿರುವ ಒಟ್ಟು ಪಾಲಿನಲ್ಲಿ ಶೇಕಡ3.5ರಷ್ಟು ಬಂಡವಾಳ ಹಿಂತೆಗೆಯುವ ಉದ್ದೇಶ ಹೊಂದಿದೆ. ಅಂದರೆ, ಭಾರತೀಯ ಜೀವ ವಿಮಾ ನಿಗಮವು 22 ಕೋಟಿ 13 ಲಕ್ಷ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಿದೆ.
ಕೇಂದ್ರ ಸರ್ಕಾರ ಒಟ್ಟಾರೆ ಐಪಿಒ ಪ್ರಕ್ರಿಯೆ ಮೂಲಕ ಸುಮಾರು 21ಸಾವಿರ ಕೋಟಿ ರೂಪಾಯಿ ಬಂಡವಾಳ ಕ್ರೋಡಿಕರಣ ಉದ್ದೇಶ ಹೊಂದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243