ನೆಲದನಿ
ನುಡಿಯ ಒಡಲು 11 | ನುಡಿಯರಿಮೆ (ಲಿಂಗ್ವಿಸ್ಟಿಕ್ಸ್) ಹಾಗೆಂದರೇನು..?
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿಯರಿಮೆ (ಲಿಂಗ್ವಿಸ್ಟಿಕ್ಸ್) ಹಾಗೆಂದರೇನು? ಎಂಬ ತಿಳಿವನ್ನು ಅರಿಯುವ ಮೊದಲೇ, ನುಡಿ ಬಗೆಗಿನ ಮೂಲಗುಣಗಳನ್ನು ತಿಳಿದುಕೊಳ್ಳುವ ಜರೂರಿದೆ. ನುಡಿಯರಿಮೆ ನುಡಿಯನ್ನು ಕುರಿತು ಓದುವ ವಲಯ ದಿಟ. ಆದರೆ ಇಂತಹ ಓದಿನ ವಲಯಗಳಿಗೆ ಒಳಗಾಗುವ ಸಂಗತಿಗಳ ಮೂಲಸ್ವರೂಪ, ಲಕ್ಷಣ, ವ್ಯಾಖ್ಯಾನಗಳನ್ನು ತಿಳಿವುದರಿಂದ, ಆಯಾ ಓದಿಗೆ ಸಂಬಂಧಿಸಿದ ಶಾಸ್ತ್ರಗಳನ್ನು ಇಡಿ ಹಾಗೂ ಬಿಡಿ ನೆಲೆಯಿಂದ ಅರಿಯಲು ಸಾಧ್ಯ. ಹಾಗಾಗಿ ನುಡಿ ಕುರಿತ ಅತ್ಯಂತ ಪ್ರಾಥಮಿಕ ಮಾಹಿತಿಯನ್ನು ಪಡೆಯುವ ಅಗತ್ಯವಿದೆ.
ಚರಿತ್ರೆಯ ಪುಟಗಳನ್ನು ತಿರಿವಿದರೇ, ಸಾವಿರಾರು ಮಂದಿ ತಿಳಿವಿಗರು ಬೇರೆ ಬೇರೆ ನೆಲೆಯಿಂದ ನುಡಿ ಕುರಿತು ಚಿಂತಿಸಿದ್ದನ್ನು ಕಾಣಬಹುದು. ಈ ಚಿಂತನೆಗಳು ಹೊಸ ಅರಿವಿಗೆ ಕಾರಣವಾದಂತೆ, ಸಾಕಷ್ಟು ತಕರಾರುಗಳಿಗೂ ಹಾಗೂ ಮತ್ತೇ ಹೊಸ ಚಿಂತನೆಗಳನ್ನು ಕಟ್ಟಲೂ ಇವು ಕಾರಣವಾಗಿವೆ. ಈ ಎಲ್ಲ ವಿವರಗಳನ್ನು ಒಂದೇ ಪಟ್ಟಿನಲ್ಲಿ ಇಲ್ಲಿ ಚರ್ಚಿಸುವುದು ದುಸ್ತರವೇ ಸರಿ. ಹಾಗಾಗಿ ಕನ್ನಡ ನುಡಿ ಬಗೆಗಿನ ತಿಳಿವು ಪಡೆಯುವುದಕ್ಕೆ ಬೇಕಾಗುವ ಕೆಲವಾರು ಚಿಂತನೆಗಳನ್ನು ಚರ್ಚಿಸಬಹುದು. ಹಾಗೂ ನುಡಿಯರಿಮೆಯನ್ನು ಅರಿಯುವ ಬಯಕೆಯನ್ನು ಹೊಂದಿದವರಿಗೆ ಬೇಕಾಗುವ ಕೆಲವು ಮುಖ್ಯ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗುತ್ತದೆ.
ನುಡಿಯೆಂದರೇನು ಎಂಬ ಕೇಳ್ವಿಗೆ ಸುಳುವಾದ ಉತ್ತರಗಳು ಬಿಡಿ ಬಿಡಿಯಾಗಿ ಸಿಗುತ್ತವೆ. ಈ ಬಿಡಿ ವಿವರಗಳಿಂದ ನುಡಿಯ ಇಡೀ ಸ್ವರೂಪವನ್ನು ಪಡೆಯುವುದು ದುಸ್ತರ. ಏಕೆಂದರೆ ಲೋಕದಲ್ಲಿರುವ ಬಹುತೇಕ ಸಂಗತಿಗಳನ್ನು ಕೆಲವು ಆಯ್ದ ವ್ಯಾಖ್ಯಾನಗಳ ಮೂಲಕ ಹಾಗೆಂದರೇನು ಎಂಬ ಕೇಳ್ವಿಗಳಿಗೆ ಅತ್ಯಂತ ಸುಳುವಾಗಿ ಉತ್ತರಗಳನ್ನು ಪಡೆಯುತ್ತೇವೆ.
ಕೇವಲ ಒಂದು ವಸ್ತು, ವಿಷಯ ಇಲ್ಲವೇ ಯಾವುದೆ ಮನೋಧರ್ಮವನ್ನು ಅರಿಯಲು ಬೇಕಾಗುವ ಪ್ರಾಥಮಿಕ ತಿಳಿವಳಿಕೆಯನ್ನು ರೂಪಿಸಲು ವ್ಯಾಖ್ಯಾನುಗಳು ಅಗತ್ಯ ಸರಿ, ಹಾಗಂತ ಅವುಗಳೇ ಅನಿವಾರ್ಯವಲ್ಲ. ಅವುಗಳ ಮೂಲಕವೇ ಯಾವ ಸಂಗತಿಯನ್ನಾದರೂ ಇಡಿಯಾಗಿ ಪರಿಚಯ ಮಾಡಿಕೊಳ್ಳುತ್ತೇವೆ ಎಂಬ ನೆಲೆಯೇ ಅಚ್ಚರಿ ಪಡುವಂತಹದು. ವ್ಯಾಖ್ಯಾನಗಳು ತೊಡಕಾಗುತ್ತವೋ ಇಲ್ಲವೆ ಬೆಳಕಾಗುತ್ತವೋ ಎಂಬ ಅನುಮಾನವು ಯಾವುದೇ ತಿಳಿವಿನ ದಿಟರೂಪವನ್ನು ತಿಳಿಯ ಬಯಸುವವರಲ್ಲಿ ಹುಟ್ಟಿಕೊಳ್ಳುತ್ತವೆ.
ನುಡಿಯನ್ನು ವಿವರಿಸುವ ವ್ಯಾಖ್ಯಾನಗಳು ಯಾವುದೆ ಒಂದೇ ಕಣ್ನೋಟದಿಂದ ಹುಟ್ಟಿಕೊಂಡಿಲ್ಲ. ಅವು ಹಲವು ತಿಳಿವಿನ ಮಾದರಿಗಳಿಂದ ರೂಪುಗೊಂಡಿರುತ್ತವೆ. ಎತ್ತುಗೆಗಾಗಿ ಸಾಂಪ್ರದಾಯಿಕ-ವರ್ತನವಾದಿ ನುಡಿಯರಿಮೆ, ರಾಚನಿಕ ನುಡಿಯರಿಮೆ, ಗ್ರಹಿಕಾ (ಕಾಗ್ನೇಟಿವ್) ನುಡಿಯರಿಮೆ ಎಂಬಿತ್ಯಾದಿಗಳನ್ನು ಇಲ್ಲಿ ಹೆಸರಿಸಬಹುದು. ನುಡಿಯನ್ನು ವಿವರಿಸುವ, ಚರ್ಚಿಸುವ, ಬಿಡಿಸಿ ನೋಡುವ, ವ್ಯಾಖ್ಯಾನಿಸುವ ಬಗೆಗಳ ನಡುವಿನ ವ್ಯತ್ಯಾಸಕ್ಕೆ ಕಾರಣವೇ ಅವುಗಳನ್ನು ಹುಟ್ಟುಹಾಕಿದ ಚಿಂತನಾ ಮಾದರಿಗಳು.
ನುಡಿಯರಿಮೆ ಎಂಬುದು ಎಲ್ಲ ಅರಿವಿನ ವಲಯಗಳಂತೆ ಇದೂ ಒಂದು ಅರಿವಿನ ವಲಯ. ಎತ್ತುಗೆಗಾಗಿ ಪ್ರಾಣಿಶಾಸ್ತ್ರ ಪ್ರಾಣಿಗಳ ಕುರಿತ ತಿಳಿವನ್ನು ಅರಿಯುವ ಬಗೆಯಾದರೆ, ಸಸ್ಯಶಾಸ್ತ್ರ ಸಸ್ಯಗಳನ್ನು ಕುರಿತು ಅರಿವನ್ನು ಪಡೆಯುವ ಹಾಗೂ ಅಂತಹ ಅರಿವನ್ನು ಮತ್ತಷ್ಟೂ ಆಳವಾಗಿ ಪಡೆಯುವುದಕ್ಕೆ ಮತ್ತು ನೀಡುವುದಕ್ಕೆ ಇರುವಂತಹದು. ಹಾಗೇನೆ ನುಡಿಯರಿಮೆಯು ನುಡಿಯನ್ನು ಕುರಿತ ತಿಳಿವನ್ನು ಪಡೆಯುವ, ನೀಡುವ ಹಾಗೂ ನುಡಿಯನ್ನು ಕುರಿತ ಓದು ಆಗಿರುತ್ತದೆ. ಹಾಗಾದರೆ, ಈಗ ನಮಗೆದುರಾಗುವ ಕೇಳ್ವಿಯೇನೆಂದರೆ? ನುಡಿಯೆಂದರೇನು? ಈ ಕೇಳ್ವಿಗೆ ಹಲವು ತಾತ್ವಿಕ ನೆಲೆಗಳಿಂದ ಉತ್ತರಗಳನ್ನು ಪಡೆಯಬಹುದಾಗಿದೆ.
ಇಂತಹ ತಾತ್ವಿಕ ನೆಲೆಗಳಿಗೆ ಸಾವಿರಾರು ವರುಷಗಳ ಚರಿತ್ರೆಯಿದೆ. ಅಷ್ಟು ವರುಷಗಳ ಚರಿತ್ರೆಯನ್ನು ಹೊಂದಿರುವ ಆ ಎಲ್ಲ ತಾತ್ವಿಕ ಸಿದ್ಧಾಂತಗಳನ್ನು ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಆದರೆ ಹತ್ತೊಂಬತ್ತು ಹಾಗೂ ಇಪ್ಪತ್ತನೇ ಶತಮಾನಗಳಲ್ಲಿ ನುಡಿ ಕುರಿತು ನಡೆದಿರುವ ಚಿಂತನೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗುತ್ತದೆ. ಕೇವಲ ಕೆಲವಾರು ವ್ಯಾಖ್ಯಾನುಗಳನ್ನು ಪಟ್ಟಿಮಾಡಿ ನುಡಿಯ ಬಗೆಗಿನ ತಿಳಿವನ್ನು ಪಡೆಯುವುದಕ್ಕಿಂತ ಬದಲಾಗಿ, ನುಡಿಯನ್ನೇ ಚಿಂತನೆಯ ನೆಲೆಯಾಗಿಸಿ ಬೆಳೆದು ಬಂದಿರುವ ಚರ್ಚೆಗಳ ಮೂಲಕ ನುಡಿಯ ಸ್ವರೂಪ ಎಂತಹದು? ಅದರ ಗುಣಗಳೇನು? ಅದು ಹೇಗೆ ಸಾಮಾಜಿಕ, ಮಾನಸಿಕ ಹಾಗೂ ಸಾಂಸ್ಕೃತಿಕ ಚಿಂತನೆಗಳಿಗೆ ನೆಲೆಯಾಗಿರುತ್ತದೆ? ಎಂಬಿತ್ಯಾದಿ ಸಂಗತಿಗಳನ್ನು ತಿಳಿಯೋಣ.
ಜಗತ್ತಿನ ಬಹುಮಂದಿ ನುಡಿಯರಿಗರು, ಚಿಂತಕರು, ತತ್ವಶಾಸ್ತ್ರಜ್ಞರು ನುಡಿಯನ್ನು ಕುರಿತು ನಿರ್ವಚಿಸಿದ ಬಗೆಗಳನ್ನು ಈ ಕೆಳಗಿನಂತೆ ಗುರುತಿಸಬಹುದು;
- ನುಡಿಯೆಂದರೆ ಸಂವಹನಕ್ಕಾಗಿ ಬಳಸುವ ಒಂದು ಸಾಧನ.
- ನುಡಿಯೆಂದರೆ ಯಾದೃಚ್ಛಿಕ ಸಂಕೇತಗಳ ವ್ಯವಸ್ಥೆ.
- ನುಡಿಯೆಂದರೆ ಶ್ರೇಣೀಕೃತ ನೆಲೆಗಳ ಸಂಘಟನೆ.
- ಮಾನವರ ಶ್ರವಣ, ದೃಶ್ಯ ಹಾಗೂ ಇನ್ನೂ ಕೆಲವು ಅಮೂರ್ತ ಬಗೆಗಳಲ್ಲಿ ನುಡಿ ಪಾಲ್ಗೊಂಡು, ಆ ಮೂಲಕ ಅದೊಂದು ತಿಳಿವನ್ನು ಉತ್ಪಾದಿಸುವ ಮತ್ತು ಗ್ರಹಿಸುವ ಕ್ರಿಯೆಯಾಗಿ ಹೇಗೆ ರೂಪುಗೊಳ್ಳುತ್ತೆ ಎಂಬುದನ್ನು ಅರಿಯುವ ಬಗೆ.
- ನುಡಿಯೆಂಬುದು ಮಾನವರಿಗೆ ಒದಗಿರುವ ಒಂದು ವಿಶಿಷ್ಟ ಬಗೆ.
- ಮಾನವರಲ್ಲಿ ಜನ್ಮಜಾತವಾಗಿ ದತ್ತವಾಗಿರುವ ಅಂತಸ್ಥ ಸಾಮರ್ಥ್ಯವೇ ನುಡಿ.
ಈ ಚಿಂತನೆಗಳನ್ನು ಈಗಾಗಲೇ ಹೇಳಿದಂತೆ ಬೇರೆ ಬೇರೆ ತಾತ್ವಿಕ ಪಂಥಗಳು ಹುಟ್ಟುಹಾಕಿವೆ. ನುಡಿ ಬಗೆಗಿನ ಈ ಆರು ಗುಣಗಳನ್ನು, ಮುಖ್ಯವಾಗಿ ಮೂರು ಬೇರೆ ಬೇರೆ ತಾತ್ವಿಕ ನೆಲೆಗಳನ್ನಾಗಿ ವಿಂಗಡಿಸಿ ಚರ್ಚಿಸುವುದು ಸೂಕ್ತವೆಂದು ಕಾಣುತ್ತದೆ.
- ನುಡಿಯೆಂಬುದು ಒಂದು ಸಂವಹನ ಸಾಧನ
- ನುಡಿಯೆಂಬುದು ವರ್ತನೆ
- ನುಡಿಯೆಂಬುದು ಒಂದು ಸಾಮರ್ಥ್ಯ
ನುಡಿಯೆಂಬುದು ಒಂದು ಸಂವಹನ ಸಾಧನವೇ?
ಮೊದಲನೇ ವಾದದ ಪ್ರಕಾರ ನುಡಿಯೆಂದರೆ ಮನುಷ್ಯರು ತಮ್ಮ ಸಂವಹನಕ್ಕಾಗಿ ಬಳಸುತ್ತಿರುವ ಒಂದು ಸಾಧನ ಇಲ್ಲವೇ ಉಪಕರಣವೆಂದು ಮಾತ್ರ ಒಪ್ಪಲಾಗಿತ್ತು. ನುಡಿಯನ್ನು ಧ್ವನಿ-ಸಂಕೇತಗಳ ವ್ಯವಸ್ಥೆಯೆಂದು ನಿರ್ವಚಿಸಿದ್ದರೂ ಅದೊಂದು ಮಾಧ್ಯಮ ಮಾತ್ರವಾಗಿ ನೆಲೆಗೊಂಡಿತ್ತು.
ಈಗಾಗಲೇ ಹೇಳಿದಂತೆ ನುಡಿಯೆಂಬುದು ಸತತವಾಗಿ ಧ್ವನಿಗಳನ್ನು ಹೊರಡಿಸಿದರೂ, ಆ ಧ್ವನಿಗಳು ಸಂಯೋಜನೆಗೊಂಡು ಮಾತಾಗುವುದು, ಆ ಮಾತುಗಳು ಸನ್ನಿವೇಶಕ್ಕೆ ಅನುಗುಣವಾಗಿ ಅರ್ಥಗಳನ್ನು ಕಟ್ಟಿಕೊಡುತ್ತವೆ. ಹೀಗೆ ಏನನ್ನು ಮಾತನಾಡಿದರೂ ಅದು ಒಂದೇ ಸಮನೆ ಧ್ವನಿಗಳನ್ನು ಹೊರಡಿಸುವುದಾಗಿರುತ್ತದೆ. ಒಟ್ಟಾರೆ ನುಡಿ ಯಾಂತ್ರಿಕ ಸ್ವರೂಪದಲ್ಲಿ ಒಂದು ಉಪಕರಣ ಇಲ್ಲವೇ ಸಾಧನವಾಗಿ ಕೆಲಸ ಮಾಡುತ್ತದೆ ಎಂದು ಒಪ್ಪಿಕೊಂಡಾಗಿತ್ತು.
ನುಡಿಯರಿಮೆ ಮುಖ್ಯವಾಗಿ ಮಾತನ್ನು ಮಾತ್ರ ಕುರಿತು ಯೋಚಿಸುವುದಾಗಿದೆ ಹೊರತು ಬರೆಹವನ್ನಲ್ಲ ಎಂಬದು ಗಮನಾರ್ಹ. ಇಂತಹ ಧ್ವನಿ ಸಂಕೆತಗಳಿಗೆ ಸಂಬಂಧಿಸಿರುವುದನ್ನೇ ನುಡಿಯೆಂದು ಕರೆಯುತ್ತಾರೆ. ಈ ಧ್ವನಿ – ಸಂಕೇತಗಳ ವ್ಯವಸ್ಥೆಗೆ ಎರಡೂ ಸ್ತರಗಳಿರುತ್ತವೆ. ಒಂದು ಧ್ವನಿಸ್ತರ ಮತ್ತೊಂದು ಅರ್ಥಸ್ತರ ಇವೆರಡರ ಸಂಯೋಜನೆಯನ್ನು ನುಡಿಯೆಂದು ಕರೆಯಲು ಕಾರಣ ಇಂತಹ ಸಂಯೋಜನೆಗೆ ಆರ್ಥ ಪರಂಪರೆ ಇರುತ್ತದೆ.
ಎತ್ತುಗೆಗಾಗಿ ಮ್+ಅ+ರ್+ಅ = ಮರ, ನ್+ಆ+ಯ್+ಇ = ನಾಯಿ, ಕ್+ಐ = ಕೈ ಮುಂತಾಗಿ ಹೇಳಬಹುದು. ಈ ಎಲ್ಲ ಧ್ವನಿಗಳ ಸಂಯೋಜನೆಯನ್ನು ಉಚ್ಚರಿಸುವಾಗ ಕನ್ನಡವನ್ನು (ಎಲ್ಲ ನುಡಿಗಳ ಸನ್ನಿವೇಶಕ್ಕೂ ಈ ಮಾತು ಸರಿ) ಮಾತುನಾಡುವವರಿಗೆ ಬಹುತೇಕ ಒಂದು ನಿಚ್ಚಳ ತಿಳಿವು ಅವರಿಗೆ ಗೊತ್ತಾಗುತ್ತದೆ. ಪ್ರತೀ ನುಡಿಯು ಹೊರಡಿಸುವ ಧ್ವನಿ ಸಂಕೇತಗಳ ಸಂಯೋಜನೆಗೆ ಒಂದು ಅರ್ಥ ಪರಂಪರೆ ಇರುತ್ತದೆ. ಈ ಧ್ವನಿ-ಸಂಕೇತಗಳ ವ್ಯವಸ್ಥೆಗೂ ಹಾಗೂ ಅವುಗಳಿಂದ ರೂಪುಗೊಳ್ಳುವ ಅರ್ಥಕ್ಕೂ ಯಾವುದೇ ಬಗೆಯ ತಾರ್ಕಿಕ ನಂಟಸ್ತಿಕೆ ಇರುವುದಿಲ್ಲ.
ಈ ಅರ್ಥ ಪರಂಪರೆ ಕೇವಲ ಆಯಾ ಸಂಸ್ಕೃತಿಗಳು ಮಾಡಿಕೊಂಡಿರುವ ಒಪ್ಪಂದಗಳು ಮಾತ್ರ. ಇಂತಹ ಒಪ್ಪಂದಗಳು ಒಂದು ನುಡಿ ಸಮುದಾಯದಿಂದ ಮತ್ತೊಂದು ನುಡಿ ಸಮುದಾಯಕ್ಕೆ ಬೇರೆ ಬೇರೆಯಾಗಿರುತ್ತವೆ. ಎತ್ತುಗೆಗಾಗಿ ಕನ್ನಡದಲ್ಲಿ ಮರ ಮತ್ತು ನೀರು ಎಂದು ಹೇಳುವ ವಸ್ತುಗಳಿಗೆ ಅನುಕ್ರಮಾಗಿ ತಮಿಳಿನಲ್ಲಿ ಮರಮ್, ತನ್ನಿ ತೆಲುಗುವಿನಲ್ಲಿ ಚೆಟ್ಟು, ನಿಳ್ಳು ಹಿಂದಿಯಲ್ಲಿ ಪೇಡ್, ಪಾನಿ ಸಂಸ್ಕೃತದಲ್ಲಿ ವೃಕ್ಷ ಹಾಗೂ ಜಲ ಎಂಬಿತ್ಯಾದಿಯಾಗಿ ಹೇಳುತ್ತಾರೆ.
ಅಚ್ಚರಿಯ ಸಂಗತಿ ಏನಂದರೆ ಒಂದೇ ನುಡಿಯಲ್ಲೂ ಧ್ವನಿ-ಸಂಕೇತ ಇಲ್ಲವೇ ಅರ್ಥದ ನಡುವಿನ ಒಪ್ಪಂದಗಳು ಕೂಡ ಎಲ್ಲ ಕಾಲಕ್ಕೂ ನಿಯಮಿತವಾಗಿರುವುದಿಲ್ಲ. ಅವು ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಕನ್ನಡದಲ್ಲಿ ಒಂದು ಕಾಲಘಟ್ಟದಲ್ಲಿ ತೋಂಟಂ ಎಂಬುದು ಈಗ ತೋಟವಾದರೆ, ಪಾಲು ಎಂಬುದು ಹಾಲಾಗಿದೆ. ಒಂದು ಕಾಲದಲ್ಲಿ ಹೀಗೆ ನೆಲೆನಿಂತಿರುವ ಈ ಅರ್ಥಗಳು ಮತ್ತೊಂದು ಕಾಲಕ್ಕೆ ಅವುಗಳಲ್ಲಿ ವ್ಯತ್ಯಾಸವನ್ನು ಪಡೆದುಕೊಳ್ಳುತ್ತವೆ.
ಎತ್ತುಗೆಗಾಗಿ ಒಂದು ಕಾಲದಲ್ಲಿ ಕೂಳು ಎಂಬ ಧ್ವನಿ ಸಂಕೇತಗಳ ವ್ಯವಸ್ಥೆ ಅನ್ನವನ್ನು ಸೂಚಿಸುತ್ತಿತ್ತು. ಆದರೆ ಈಗ ಅದು ಹೀನಾರ್ಥವನ್ನು ಪಡೆದುಕೊಂಡಿದೆ. ನುಡಿಯರಿಗರು ಇಂತಹ ವ್ಯತ್ಯಾಸಗಳನ್ನು ಯಾವುದೆ ನುಡಿಯಲ್ಲಿ ನಡೆಯಬಹುದಾದ ಸಹಜ ಭಾಷಿಕ ಕ್ರಿಯೆಗಳೆಂದು ಹೇಳುತ್ತಾರೆ. ಇಂತಹ ಭಾಷಿಕ ಕ್ರಿಯೆಗಳು ನಿಯಮಿತವಾಗಿ ನಡೆದರೂ, ಅವು ಕಲ್ಪಿಸುವ ಅರ್ಥಗಳಿಗೆ ಮಾತ್ರ ಒಂದ ನಿರ್ದಿಷ್ಟ ಬಗೆಯ ನಿಯಮಿತತೆ ಎಂಬುದು ಎಲ್ಲ ಕಾಲಕ್ಕೂ ಇರುವುದಿಲ್ಲ.
ಈ ಹಿಂದೆ ಹೇಳಿದಂತೆ ನುಡಿಯನ್ನು ಸಂವಹನವನ್ನು ಈಡೇರಿಸುವ ಒಂದು ಸಾಧನವನ್ನಾಗಿ ನಿರ್ವಚಿಸಲಾಗಿದೆ. ನುಡಿಯೆಂಬುದು ಅದು ಹೇಗೆ ಸಾಧನವಾಗಬಲ್ಲದು ಎಂಬ ಸಂಗತಿಗಳನ್ನು ಕುರಿತು ಚರ್ಚಿಸುವುದು ಸೂಕ್ತವೆಂದು ತೋರುತ್ತದೆ. ಹಾಗಾದರೆ ಸಂವಹನವೆಂದರೇನು? ಎಂಬ ಕ್ವೇಳಿಯು ನಮಗೀಗ ಎದುರಾಗುತ್ತದೆ. ಈ ಮುಂದಿನ ರೇಖಾಚಿತ್ರದ ಮೂಲಕ ಸಂವಹನದ ಸ್ವರೂಪವನ್ನು ವಿವರಿಸಲು ಮುಂದಾಗೋಣ. ಸಂವಹನಕ್ಕೆ ಮುಖ್ಯವಾಗಿ ನಾಲ್ಕು ನೆಲೆಗಳಿರುತ್ತವೆ. ಅವುಗಳನ್ನು ಈ ಕೆಳಗಿನಂತೆ ತೋರಿಸಬಹುದು;
ಸಂವಹನ
———————————-
|
ಆಡುಗರು | ಕೇಳುಗರು | ಮಾಧ್ಯಮ ಸಂದೇಶ (ಅರ್ಥ)
ಚಿತ್ರ 1
ಆಡುಗರ ಮತ್ತು ಕೇಳುಗರ ನಡುವೆ ಒಂದು ನಿರಂತರ ಮಾಧ್ಯಮವಿರುತ್ತದೆ ಆ ಮೂಲಕ ಸಂವಹನ ನೆರವೇರುತ್ತದೆ. ಪರಿಣಾಮವಾಗಿ ಸಂದೇಶವನ್ನು ತಲುಪಿಸಲು ಇಲ್ಲವೇ ಅರ್ಥಗಳನ್ನು ಹುಟ್ಟಿಸಲೂ ಸಾಧ್ಯವಾಗುತ್ತದೆ. ಒಂದುಪಕ್ಷ ಒಂದು ನಿರಂತರವಾದ ಮಾಧ್ಯಮವಿಲ್ಲದೇ ಹೋದರೆ ಅಂತಹ ಸನ್ನಿವೇಶದಲ್ಲಿ ಯಾವ ಬಗೆಯ ಸಂವಹನವೂ ನಡೆಯುವುದಿಲ್ಲ.
ಎತ್ತುಗೆಗಾಗಿ ನೀರಲ್ಲಿ ಯಾರಾದರು ಮುಳಿಗಿ ಧ್ವನಿಗಳನ್ನು ಹೊರಡಿಸಿದರೆ ಅಂತಹ ನಿರ್ವಾತ ಪ್ರದೇಶದಲ್ಲಿ ಆ ಧ್ವನಿಗಳು ಕೇಳುಗರಿಗೆ ಕೇಳಿಸುವುದಿಲ್ಲ ಹಾಗೂ ಆಡುಗರ ಮತ್ತು ಕೇಳುಗರ ನಡುವೆ ಗೋಡೆ ಇಲ್ಲವೇ ಅಂತಹದೇ ಇನ್ನಿತರ ಬಗೆಯ ಅಡ್ಡಿಗಳು ಬಂದರೂ ಆವಾಗಲೂ ಸಂವಹನ ನಡೆಯುವುದಿಲ್ಲ. ಅಂದರೆ ಆಡುಗ ಮತ್ತು ಕೇಳುಗರ ನಡುವೆ ಸಂದೇಶವು ರವಾನೆಯಾಗಬೇಕಾದರೆ ಗಾಳಿಯಂತಹ ಮಾಧ್ಯಮದ ಅಗತ್ಯವಿರುತ್ತದೆ.
ಇವತ್ತಿನ ಈ ಹೊಸಗಾಲದ ಸನ್ನಿವೇಶದಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನದ ನೆರವಿನಿಂದ ಸಂವಹನವು ಬೇರೆ ಬೇರೆ ಸ್ವರೂಪದಲ್ಲಿ ನಡೆಯುತ್ತದೆ. ಆದಾಗ್ಯೂ ಇಲ್ಲಿಯೂ ಗಾಳಿ ಬದಲಾಗಿ ಎಲೆಕ್ಟ್ರಾನಿಕ್ ತಂತುಗಳು ಮಾಧ್ಯಮಗಳಾಗಿ ಕೆಲಸ ಮಾಡುತ್ತವೆ. ಸಂವಹನ ನಡೆಯುವ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಂಡರೂ, ಸಂವಹನ ಪ್ರಕ್ರಿಯೆಯ ರಾಚನಿಕ ಸ್ವರೂಪದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಗಮನಾರ್ಹ ಸಂಗತಿ.
ಯಾವುದೋ ಕಾಲದ ಮಾಹಿತಿಯನ್ನು ಮುಂದಿನ ತಲೆಮಾರಿಗೆ ರವಾನಿಸಲು ನೆನಪು, ಕಲ್ಬರೆಹ, ಕೆತ್ತನೆ, ಬರೆಹ, ಇಲ್ಲವೇ ಧ್ವನಿಮುದ್ರಿಕೆ ಎಂಬಿತ್ಯಾದಿಗಳು ಇಲ್ಲಿ ಮಾಧ್ಯಮಗಳಾಗುತ್ತವೆ. ಇದನ್ನು ಇನ್ನೂ ನಿಚ್ಚಳವಾಗಿ ಹೇಳಬೇಕೆಂದರೆ, ಸಿನೆಮಾ, ನಾಟಕ, ಸಾಹಿತ್ಯ, ಪತ್ರಿಕೆ, ಇಂಟರ್‍ನೆಟ್, ಮೊಬೈಲ್‍ಗಳೆಲ್ಲವೂ ಬೇರೆ ಬೇರೆ ಬಗೆಯ ಸಂವಹನವನ್ನು ನೆರವೇರಿಸಲು ಮಾಧ್ಯಮಗಳಾಗಿ ಕೆಲಸ ಮಾಡುತ್ತವೆ.
ಆಡುಗ, ಕೇಳುಗ, ಸಂದೇಶ ಹಾಗೂ ಮಾಧ್ಯಮಗಳೆಂಬ ಸಂವಹನದ ಈ ನಾಲ್ಕು ಆಯಾಮಗಳ ಸ್ವರೂಪವು ಹಿಂದಿನ ಕಾಲದ ಚೌಕಟ್ಟಿಗೆ ಮಾತ್ರ ಸೀಮಿತಗೊಳ್ಳದೇ ಇವು ಇನ್ನಷ್ಟೂ ವ್ಯಾಪಕವಾಗಿ ಹರಡಿಕೊಂಡಿವೆ. ಸಂವಹನವನ್ನು ನೆರವೇರಿಸುವಲ್ಲಿ ನುಡಿಯೇ ಒಂದು ಸಾಧನವೆಂದು ತಮ್ಮ ನಿಲುವುಗಳನ್ನು ಮಂಡಿಸಿದವರಿದ್ದಾರೆ. ಅವರ ಆ ಚರ್ಚೆಗಳು ಕಟ್ಟಿಕೊಡುವ ಸಂವಹನದ ಸ್ವರೂಪವನ್ನು ಈ ಮೇಲಿನಂತೆ ಮಾತ್ರ ವಿವರಿಸಿ ತಿಳಿಯಲು ಸಾಧ್ಯ. ನುಡಿಯ ಮತ್ತೊಂದು ಆಯಾಮವನ್ನು ಕುರಿತು ಮುಂದಿನ ಅಂಕಣ ಚರ್ಚಿಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243