ದಿನದ ಸುದ್ದಿ

ಕರ್ತವ್ಯ ಲೋಪ ; ಪಿ.ಮಣಿವಣ್ಣನ್, ಕ್ರೈಸ್ ಇ.ಡಿ ಕಾಂತರಾಜು ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ವ್ಯಾಪ್ತಿಯ ವಸತಿ ಶಾಲೆ(ಕ್ರೈಸ್)ಗಳಿಗೆ ನೇರವಾಗಿ ಆಹಾರ ಸರಬರಾಜು ಮಾಡದೆ ವಂಚಿಸಿರುವ ಅಧಿಕೃತ ಟೆಂಡರುದಾರರಾದ ಮೇ|| ಎಲ್.ವಿ.ಟ್ರೇರ‍್ಸ್, ಸಾಗರ, ಶಿವಮೊಗ್ಗ ಜಿಲ್ಲೆ ಇವರನ್ನು ಕಪ್ಪುಪಟ್ಟಿಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್, ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಎಸ್ ಕಾಂತರಾಜು ಅವರಿಗೆ ವಕೀಲ ಡಾ.ಕೆ.ಎ.ಓಬಳೇಶ್ ದೂರು ನೀಡಿರುತ್ತಾರೆ.

ದೂರು ನೀಡಿ 4 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಕಾರಣ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಾದ ಪಿ.ಎಸ್.ಕಾಂತರಾಜು ಇವರುಗಳ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಶಿಸ್ತುಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯಾದ್ಯಂತ ಒಟ್ಟು 23 ವಸತಿ ಶಾಲೆ(ಕ್ರೈಸ್)ಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ವಸತಿ ಶಾಲೆಗಳಿಗೆ 2022ನೇ ಸಾಲಿನಿಂದ 2025ರ ಪ್ರಸ್ತುತದವರೆಗೂ ಮೇ||ಎಲ್.ವಿ ಟ್ರೇರ‍್ಸ್, ಸಾಗರ, ಶಿವಮೊಗ್ಗ ಜಿಲ್ಲೆ ಇವರು ಅಧಿಕೃತ ಆಹಾರ ಸರಬರಾಜುದಾರರಾಗಿರುತ್ತಾರೆ. ಅಧಿಕೃತ ಟೆಂಡರುದಾರರು ಯಾವುದೇ ವಸತಿ ಶಾಲೆಗಳಿಗೆ ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ವಿತರಿಸದೆ ತಮಗೆ ಬರಬೇಕಾದ 40% ಕಮೀಷನ್ ಹಣವನ್ನು ಪಡೆದುಕೊಂಡು ಉಳಿದ ಹಣವನ್ನು ಪ್ರಾಂಶುಪಾಲರುಗಳಿಗೆ ನೀಡುತ್ತ ಬಂದಿರುವುದು ನಿರಂತರವಾಗಿ ನಡೆದುಕೊಂಡು ಬಂದಿರುತ್ತದೆ.

ಈ ಹಣದಲ್ಲಿ ಪ್ರಾಂಶುಪಾಲರು ಹಾಗೂ ನಿಲಯ ಪಾಲಕರು ತಮ್ಮ ಶಾಲಾ ಮಕ್ಕಳಿಗೆ ಅಗತ್ಯವಿರುವ ಕನಿಷ್ಠ ಮಟ್ಟದ ಆಹಾರ ಸಾಮಾಗ್ರಿಗಳನ್ನು ಆಯಾ ಶಾಲಾ ವ್ಯಾಪ್ತಿಯ ಸಮೀಪದ ಅಂಗಡಿಗಳಿಂದ ಆಹಾರ ಸಾಮಾಗ್ರಿಗಳನ್ನು ಖರೀದಿಸುತ್ತ ಬಂದಿರುತ್ತಾರೆ. ಹೀಗಾಗಿ ಬೇಡಿಕೆಯ ಪಟ್ಟಿಗೆ ಅನುಗುಣವಾಗಿ ಆಹಾರ ಸಾಮಾಗ್ರಿಗಳು ವಸತಿ ಶಾಲೆಗಳಿಗೆ ಸರಬರಾಜು ಆಗುತ್ತಿಲ್ಲ ಎಂಬ ಮಾಹಿತಿ ಆಧರಿಸಿ, ಡಾ.ಕೆ.ಎ.ಓಬಳೇಶ್ ಅವರು ಮಾಹಿತಿಹಕ್ಕು ಅಡಿಯಲ್ಲಿ ಅಧಿಕೃತ ದಾಖಲೆಗಳನ್ನು ಪಡೆದಿರುತ್ತಾರೆ.

ಮಾಹಿತಿಹಕ್ಕು ಅಡಿಯಲ್ಲಿ ಪಡೆದ ದಾಖಲೆ ಅಧಿಕೃತ ಟೆಂಡರುದಾರರು ಆಹಾರ ಸಾಮಾಗ್ರಿಗಳನ್ನು ನಿಯಮಾನುಸಾರ ಸರಬರಾಜು ಮಾಡದೆ ಇರುವ ಅಂಶಗಳು ಕಂಡುಬಂದಿರುತ್ತವೆ. ಹೀಗಾಗಿ ತನಿಖೆಗೆ ಒಳಪಡಿಸಿ, ಆಹಾರ ಸರಬರಾಜು ಮಾಡದೆ ವಂಚಿಸಿರುವ ಟೆಂಡರುದಾರರನ್ನು ಕಪ್ಪುಪಟ್ಟಿಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕೋರಿ ದಾಖಲೆ ಸಹಿತ ಇಲಾಖೆಯ ಮೇಲಾಧಿಕಾರಿಗಳಾದ ಪಿ.ಮಣಿವಣ್ಣನ್ ಹಾಗೂ ಪಿ.ಎಸ್.ಕಾಂತರಾಜು ಇವರಿಗೆ ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ದೂರು ನೀಡಿರುತ್ತಾರೆ.

ಆದರೆ ದೂರು ನೀಡಿ 4 ತಿಂಗಳು ಕಳೆದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಲೋಪ ಎಸಗಿರುವುದು ಮಾತ್ರವಲ್ಲದೆ, ಆಹಾರ ಸರಬರಾಜು ಮಾಡದೆ ವಂಚನೆಯ ಆರೋಪ ಹೊತ್ತಿರುವ ಟೆಂಡರುದಾರರಿಗೆ ಪುನಃ ಆಹಾರ ಸರಬರಾಜು ಆದೇಶವನ್ನು ನೀಡುವ ಮೂಲಕ ಭ್ರಷ್ಟರ ಪರವಾಗಿ ಮೇಲಾಧಿಕಾರಿಗಳು ಕಾರ್ಯನಿರ್ವಹಿಸಿರುತ್ತಾರೆ. ಹೀಗಾಗಿ ವಕೀಲ ಡಾ.ಕೆ.ಎ.ಓಬಳೇಶ್ ಅವರು ಲೋಕಾಯುಕ್ಕೆ ದೂರು ನೀಡಿರುತ್ತಾರೆ.

ವಕೀಲ ಡಾ.ಕೆ.ಎ.ಓಬಳೇಶ್

“ಪ್ರತಿಷ್ಠಿತ ವಸತಿ ಶಾಲೆಗಳಿಗೆ ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಸುಸಜ್ಜಿತ ಕಟ್ಟಡ ಹಾಗೂ ಪೌಷ್ಠಿಕ ಆಹಾರದ ವ್ಯವಸ್ಥೆ ಕಲ್ಪಿಸಿದೆ. ಅದರೆ ಅಧಿಕಾರಿಗಳ ಧನದಾಹಿತ್ವದಿಂದ ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳಿಗೆ ಕಳಪೆ ಆಹಾರ ನೀಡುತ್ತ ಬಂದಿರುತ್ತಾರೆ. ನಮಗೆ ಬಂದಿರುವ ಅಧಿಕೃತ ಮಾಹಿತಿ ಪ್ರಕಾರ ಟೆಂಡರುದಾರರಿಗೆ 40% ಕಮೀಷನ್ ಹೋಗುತ್ತದೆ. ಉಳಿದ 60% ಹಣದಲ್ಲಿ ಮೇಲಾಧಿಕಾರಿಗಳಿಂದ ನಿಲಯ ಪಾಲಕರವರೆಗೆ 40% ಕಮೀಷನ್ ರೂಪದಲ್ಲಿ ಹಂಚಿಕೆಯಾಗುತ್ತದೆ. ಉಳಿದ 20% ಹಣದಲ್ಲಿ ಮಕ್ಕಳಿಗೆ ಅನ್ನ ಹಾಕುತ್ತಾರೆ. ಇದಕ್ಕೆ ನಮ್ಮ ಬಳಿ ಅಧಿಕೃತ ದಾಖಲೆಗಳಿವೆ.”

| ವಕೀಲ ಡಾ.ಕೆ.ಎ.ಓಬಳೇಶ್

ಸುದ್ದಿದಿನ|ವಾಟ್ಸಾಪ್|9980346243

Trending

Exit mobile version