ದಿನದ ಸುದ್ದಿ

ಸಾಮಾಜಿಕ ಸಂವರ್ಧನೆಗೆ ಸಾಹಿತ್ಯಿಕ ಚರ್ಚೆ ಅವಶ್ಯ : ಹಿರಿಯ ಸಾಹಿತಿ ಡಾ. ಎಂ. ಜಿ. ಈಶ್ವರಪ್ಪ

Published

on

ಸುದ್ದಿದಿನ,ದಾವಣಗೆರೆ : ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯದ ಕೊಡುಗೆ ಅಪಾರ. ಹಾಗಾಗಿ ಹೊಸತನದ ಹುಟ್ಟಿಗೆ ಮತ್ತು ಸಾಮಾಜಿಕ ಸಂವರ್ಧನೆಗೆ ಆಗಾಗ್ಗೆ ಆರೋಗ್ಯಕರ ಸಾಹಿತ್ಯಿಕ ಚರ್ಚೆ ನಡೆಯುತ್ತಿರಬೇಕು ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸರಾದ ಡಾ. ಎಂ.ಜಿ ಈಶ್ವರಪ್ಪ ಅಭಿಪ್ರಾಯಿಸಿದರು.

ದಾವಣಗೆರೆ ತಿಂಗಳ ಅಂಗಳ ಸಾಹಿತ್ಯ – ಸಾಂಸ್ಕೃತಿಕ ಬಳಗದ ವತಿಯಿಂದ ಕವಯಿತ್ರಿ ಶ್ರೀಮತಿ ಚಂದ್ರಿಕಾ ಜಗನ್ನಾಥ್ ಅವರ ಹುಟ್ಟು ಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ನಗರದ ತರಳಬಾಳು ಬಡಾವಣೆಯ ಚಂದ್ರಿಕಾ ಅವರ ನಿವಾಸದಲ್ಲಿ ಏಪ್ರಿಲ್ 17 ರ ಶನಿವಾರ ಸಂಜೆ 4 ಗಂಟೆಗೆ ಆಯೋಜಿಸಲಾಗಿದ್ದ ಕವಿ ಕಾವ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಹಿತ್ಯ ಸರ್ವರ ಹಿತವನ್ನು ಬಯಸುತ್ತದೆ. ಸರ್ವ ರಂಗಗಳ ಅಭಿವೃದ್ಧಿಯನ್ನು ಆಶಿಸುತ್ತದೆ. ಆ ದಿಸೆಯಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳ ಆಯೋಜನೆ ಮನುಕುಲದ ಮನಪರಿವರ್ತನೆಗೆ ಪುಷ್ಠಿ ನೀಡುತ್ತದೆ. ಸುಂದರ ವ್ಯಕ್ತಿತ್ವಗಳ ಉದಯಕ್ಕೆ ನಾಂದಿ ಹಾಡುತ್ತದೆ. ಇಂತಹ ಉತ್ಕೃಷ್ಟ ಆಶಯಕ್ಕೆ ಪೂರಕವಾಗಿ ತಿಂಗಳ ಅಂಗಳ ಬಳಗ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

” ಕನ್ನಡದ ಮಹಿಳಾ ಸಾಹಿತಿಗಳು ಮತ್ತು ಸ್ತ್ರೀ ಸಂವೇದನೆ ” ವಿಷಯ ಕುರಿತು ಮಾತನಾಡಿದ ಲೇಖಕಿ ಹಾಗೂ ವಾಗ್ಮಿ ಶ್ರೀಮತಿ ಸುಭಾಷಿಣಿ ಅವರು ಮಹಿಳಾ ಲೇಖಕಿಯರ ಸಾಹಿತ್ಯಿಕ ಒಳತೋಟಿಯನ್ನು ಸ್ವಾರಸ್ಯಕರವಾಗಿ ವಿವರಿಸಿದರು.

ಆಹ್ವಾನಿತ ಕವಿಮಿತ್ರರಾದ ರಾಜಶೇಖರ್ ಗುಂಡಗಟ್ಟಿ, ಮಹಾಂತೇಶ್ ಬಿ ನಿಟ್ಟೂರು, ಗಂಗಾಧರ ಬಿ ಎಲ್ ನಿಟ್ಟೂರ್, ತಾರೇಶ್ ಅಣಬೇರು, ಪಾಪುಗುರು, ಶ್ರೀ ವೀರೇಶ್ ಬಿ ಜಿ ಎಂ , ಅಂಜಿನಪ್ಪ, ಕೊಟ್ರೇಶ್ ಎನ್. ಕೆ, ಪ್ರಭು ಗೊಲ್ಲರಹಳ್ಳಿ, ಪರಮೇಶ್ ನೆಲ್ಲಿಕಟ್ಟೆ, ಶ್ರೀಮತಿ ಮಲ್ಲಮ್ಮ ನಾಗರಾಜ್ , ಶ್ರೀಮತಿ ಸಂಧ್ಯಾ ಸುರೇಶ್, ಶ್ರೀಮತಿ ಸುಕನ್ಯಾ ತ್ಯಾವಣಗಿ, ಶ್ರೀಮತಿ ಅನ್ನಪೂರ್ಣ ಪಾಟೀಲ್ , ಡಾ. ಅನಿತಾ ದೊಡ್ಡಗೌಡರ್, ಶ್ರೀಮತಿ ಬಿ. ಹೆಚ್. ಉಮಾ ಮಹೇಶ್ವರಿ, ಶ್ರೀಮತಿ ಶೋಭಾ ಮಂಜುನಾಥ್ , ಶ್ರೀಮತಿ ಉಮಾದೇವಿ ಹಿರೇಮಠ ಅವರು ಕನ್ನಡ ನಾಡಿನ ಹಿರಿಯ ಪ್ರಸಿದ್ಧ ಕವಿಗಳ ಕವನ ವಾಚನ ಮಾಡಿದರು.

ನಂತರ ಡಾ. ಎಂ. ಜಿ. ಈಶ್ವರಪ್ಪ ಹಾಗೂ ಆತಿಥ್ಯ ವಹಿಸಿದ್ದ ಶ್ರೀಮತಿ ಚಂದ್ರಿಕಾ ಜಗನ್ನಾಥ್ ಅವರಿಗೆ ತಿಂಗಳ ಅಂಗಳ ಬಳಗದಿಂದ ಗೌರವಿಸಿ ಸನ್ಮಾನಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version