ದಿನದ ಸುದ್ದಿ
ಮಂಡ್ಯ | ಕಬ್ಬಿನ ಬಾಕಿ ಹಣ ತಕ್ಷಣ ಪಾವತಿಗೆ ಸೂಚನೆ: ಜಿಲ್ಲಾಧಿಕಾರಿ ಎನ್.ಮಂಜುಶ್ರೀ
ಸುದ್ದಿದಿನ,ಮಂಡ್ಯ : ರೈತರ ಶ್ರಮದ ಫಲವಾಗಿ ಕಾರ್ಖಾನೆಗಳಿಗೆ ಸಾಕಷ್ಟು ಕಬ್ಬು ಪೂರೈಕೆ ಆಗುತ್ತಿದ್ದು, ಕಾರ್ಖಾನೆಗಳು ಇದನ್ನು ಮನಗಂಡು ಕಬ್ಬು ಪೂರೈಸಿದ ರೈತರಿಗೆ ತಕ್ಷಣ ಬಾಕಿ ಹಣವನ್ನು ನೀಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಖಾನೆಗಳು ರೈತರ ನೋವಿಗೆ ಸ್ಪಂದಿಸಬೇಕು. ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಉಳಿಸಿಕೊಂಡಿರುವುದರಿಂದ ಒಂದು ತಿಂಗಳ ಒಳಗಾಗಿ ಪಾವತಿಗೆ ಕ್ರಮವಹಿಸಬೇಕು ಇಲ್ಲದಿದ್ದರೆ ಬಾಕಿ ಉಳಿಸಿಕೊಂಡ ಕಾರ್ಖಾನೆಗಳ ದಾಸ್ತನಿನಲ್ಲಿರುವ ಸಕ್ಕರೆಯನ್ನು ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚಾಮುಂಡೇಶ್ವರಿ ಷುಗರ್ ಕಾರ್ಖಾನೆಯು ರೂ.33.81 ಕೋಟಿ, ಎನ್.ಎಸ್.ಎಲ್, ಕೊಪ್ಪ ಸಕ್ಕರೆ ಕಾರ್ಖಾನೆಯು ರೂ 67.06 ಕೋಟಿ, ಐ.ಸಿ.ಎಲ್ ಷುಗರ್ಸ್, ಮಾಕವಳ್ಳಿ ಕಾರ್ಖಾನೆಯು ರೂ 17.60 ಕೋಟಿ ಹಾಗೂ ಮೈ ಷುಗರ್ ಮಂಡ್ಯ ಕಾರ್ಖಾನೆಯು ರೂ 7.64 ಕೋಟಿ ಸೇರಿದಂತೆ ಒಟ್ಟು ರೂ 126.11 ಕೋಟಿ ಕಬ್ಬಿನ ಬಾಕಿ ಹಣವನ್ನು ರೈತರಿಗೆ ಪಾವತಿಸಬೇಕಾಗಿದ್ದು ತಕ್ಷಣವೇ ಸಕ್ಕರೆ ಕಾರ್ಖಾನೆಗಳು ಪಾವತಿಗೆ ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಸಕ್ಕರೆ ಕಾರ್ಖಾನೆಯವರು ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಅಲ್ಲದೆ ರೈತರ ಹಿತದೃಷ್ಠಿಯಿಂದ ಕಬ್ಬಿನ ಬಾಕಿ ಹಣವನ್ನು ತಿಂಗಳ ಒಳಗಾಗಿ ಪಾವತಿ ಮಾಡಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಇಲ್ಲದಿದ್ದರೆ ಸಕ್ಕರೆ ಜಪ್ತಿಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಉಪನಿರ್ದೇಶಕರಾದ ಕುಮುದಾ ಹಾಗೂ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.