ಲೈಫ್ ಸ್ಟೈಲ್
ಮಾವು ಬೆಳೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ
ಸುದ್ದಿದಿನ,ಶಿವಮೊಗ್ಗ : ತೋಟಗಾರಿಕೆ ಇಲಾಖೆಯು ಶಿವಮೊಗ್ಗ ಜಿಲ್ಲೆಯಲ್ಲಿನ ಮಾವು ಬೆಳೆಗೆ ಬೂದಿ ರೋಗ, ಮತ್ತು ಜಿಗಿ ಹುಳುಗಳ ಬಾಧೆ ಕಂಡುಬರುವ ಸಾಧ್ಯತೆಯಿರುವುದರಿಂದ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುವ ಸಾಧ್ಯತೆಗಳು ಇರುತ್ತವೆ, ಆದ್ದರಿಂದ ಮುಂಜಾಗ್ರತ ಕ್ರಮವಾಗಿ ಮಾವು ಬೆಳೆ ಕೃಷಿಕರು ಈ ಕೆಳಗೆ ಸೂಚಿಸಿರುವ ಔಷಧಿಗಳನ್ನು ಸಿಂಪಡಣೆ ಮಾಡುವುದರಿಂದ ಹತೋಟಿ ಮಾಡುವಂತೆ ಸೂಚನೆ ನೀಡಿದೆ.
ಬೂದಿ ರೋಗಕ್ಕೆ ತುತ್ತಾದ ಗಿಡದ ಎಲೆಗಳು, ಹೂಗೊಂಚಲುಗಳ ಮೇಲೆ ಬೂದಿಯಂತಹ ಬೆಳವಣಿಗೆ ಕಂಡು ಬಂದು ಹೂಗಳು ಉದುರುತ್ತವೆ ಹಾಗೂ ಎಲೆಗಳು ಮುರುಟಿ ನಂತರದ ದಿನಗಳಲ್ಲಿ ಎಳೆಯ ಕಾಯಿಗಳು ಉದುರುತ್ತವೆ. ಬೂದಿ ರೋಗದ ನಿರ್ವಹಣೆಗೆ ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು ಈ ಕೆಳಗಿನಂತಿರುತ್ತದೆ.
ರೋಗಕ್ಕೆ ತುತ್ತದಾದ ಮರದ ಭಾಗಗಳನ್ನು ತೆಗೆದು ನಾಶಪಡಿಸುವುದು, ಮರಗಳ ತಳ ಭಾಗದಲ್ಲಿ ಉದುರಿದ ಒಣಗಿದ ಎಲೆ, ಹೂ ಗೊಂಚಲುಗಳು ಹಾಗೂ ಬಟಾಣಿ ಹೀಚುಗಳನ್ನು ಆರಿಸಿ ಸುಡುವುದು. ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್‍ಡೈಜಿಂ ಅಥವಾ 400 ಮಿ.ಲೀ. ಹೆಕ್ಸಾಕೋನಜೋಲ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸುವುದು. 15 ರಿಂದ 20 ದಿವಸಗಳ ಅಂತರದಲ್ಲಿ 2 ಬಾರಿ ಸಿಂಪಡಿಸುವುದು ಸೂಕ್ತ.
ಜಿಗಿ ಹುಳು ಕೀಟದ ಹಾನಿಯ ಲಕ್ಷಣಗಳು
ಜಿಗಿಹುಳು ಕೀಟಗಳು ಅಂಟು ಪದಾರ್ಥವನ್ನು ಸ್ರವಿಸುವುದರಿಂದ ಹೂ ಗೊಂಚಲಿನಲ್ಲಿ ಕಪ್ಪು ಬೂಸ್ಟ್ ಬೆಳವಣಿಗೆಕಂಡುಬರುತ್ತದೆ. ಕೀಟದ ನಿರ್ವಹಣೆಗೆ ಅಝಾಡಿರೆಕ್ಟಿನ್ 7 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಪ್ರತಿ 200 ಲೀಟರ್ ನೀರಿಗೆ 500 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 200 ಗ್ರಾಂ ಕಾರ್ಬನ್‍ಡೈಜಿಂ ಜೊತೆಗೆ ಪ್ರತಿ 200 ಲೀಟರ್ ನೀರಿಗೆ 400 ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಅಥವಾ 100 ಮಿ.ಲೀ.ಇಮಿಡಾಕ್ಲೋಪಿಡ್ ಅನ್ನು ಸೂಕ್ತ ಅಂಟಿನೊಂದಿಗೆ ಮಿಶ್ರಮಾಡಿ ಗೊಂಚಲುಗಳಿಗೆ ಸಿಂಪಡಿಸುವಂತೆ ತೋಟಗಾರಿಕೆ ಇಲಾಖೆಯು ಮಾವು ಬೆಳೆಗಾರರಿಗೆ ಸಲಹೆ ಸೂಚನೆ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243