ನೆಲದನಿ
ಮಾಸ್ಟರ್ಗೊಂದು ಸಲಾಂ
ನಾಟಕ ಮಾಧ್ಯಮದ ಮೂಲಕ ತಮ್ಮ ಹಾಸ್ಯಮಿಶ್ರಿತ ಮೊನಚು ಮಾತುಗಳಿಂದ ಭ್ರಷ್ಟರಾಜಕಾರಣಿ ಹಾಗೂ ಅಧಿಕಾರಿಗಳನ್ನು ತಿವಿಯತ್ತಾ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತ ಜಗದ್ವಿಖ್ಯಾತಿಯಾದವರು ನಟರತ್ನಾಕರ ಡಾ. ಮಾಸ್ಟರ್ ಹಿರಣ್ಣಯ್ಯ. ಸುಮಾರು 6 ದಶಕಗಳ ಕಾಲ ನಾಟಕದ ಮೂಲಕವೇ ಭ್ರಷ್ಟಾರದ ವಿರುದ್ಧ ಹೋರಾಡಿದವರು.
ಮಾತಿನಲ್ಲೇ ಮೋಡಿ ಮಾಡುವ ಮಾಸ್ಟರ್ ಹಿರಣ್ಣಯ್ಯನವರು ಹುಟ್ಟಿದ್ದು ಮೈಸೂರು. ತಂದೆ ನಟ, ಕಲ್ಚರ್ಡ್ ಕಮೆಡಿಯನ್ ಎನಿಸಿದ್ದ ಕೆ. ಹಿರಣ್ಣಯ್ಯ, ತಾಯಿ ಶಾರದಮ್ಮ. ತಂದೆಯೊಡನೆ ಮದರಾಸಿಗೆ ಪಯಣ. ಶಾಲೆಗೆ ಸೇರಿ ಕಲಿತದ್ದು ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳು. ಕನ್ನಡದ ಬಾಯಿಪಾಠ. ಸ್ತೋತ್ರ ಪಾಠಗಳು ತಂದೆಯಿಂದ. ಮೈಸೂರಿಗೆ ಬಂದು ಸೇರಿದ್ದು ಬನುಮಯ್ಯ ಮಾಧ್ಯಮಿಕ ಶಾಲೆ. ಓದುತ್ತಲೇ ಹಿಡಿದ ಸಂಪಾದನೆಯ ದಾರಿ. ಸಾಧ್ವಿ, ಮೈಸೂರು ಪತ್ರಿಕೆಯ ಮಾರಾಟದ ಹಣದಿಂದ ಫೀಸಿಗೆ ದಾರಿ. ಮುಂದೆ ಸೇರಿದ್ದು ಇಂಟರ್ ಮೀಡಿಯೆಟ್ ಕಾಲೇಜಿಗಾಗಿ ಶಾರದಾವಿಲಾಸ ಕಾಲೇಜು.
ತಂದೆ ಕೆ. ಹಿರಣ್ಣಯ್ಯನವರು 1940ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯಲ್ಲಿ ಬಾಲನಟನಾಗಿ ಪಾದಾರ್ಪಣ. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತದ್ದು. ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ ಪ್ರದರ್ಶಿಸಿದ್ದು ‘ಆಗ್ರಹ’ ನಾಟಕ. ಅದ್ಭುತ ಅಭಿನಯದ ನಾಟಕ ಗೆದ್ದರೂ ಅಭಿನಯಿಸಿದವರೆಲ್ಲರೂ ತರಗತಿಯಲ್ಲಿ ನಪಾಸು.
ತಂದೆಯ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ಸ್ಥಾಪಿಸಿದ ನಾಟಕ ಕಂಪನಿ. ಅನುಭವಿಸಿದ ನಷ್ಟ. ಪುನಃ ಆರಂಭಿಸಿದ್ದು ಹಿರಣ್ಣಯ್ಯ ಮಿತ್ರ ಮಂಡಲಿ. ಲಂಚಾವತಾರ ರಚಿಸಿ ಪ್ರಯೋಗ ಪ್ರಾರಂಭ (ಶಿವಮೊಗ್ಗ). 1962ರಲ್ಲಿ ಮೈಸೂರು ಮಹಾರಾಜರಿಂದ ಸನ್ಮಾನ. ನಟರತ್ನಾಕರ ಬಿರುದು. ಜಯಚಾಮರಾಜೇಂದ್ರ ಒಡೆಯರ ಸಮ್ಮುಖದಲ್ಲಿ ಜಗನ್ಮೋಹನ ಅರಮನೆಯಲ್ಲಿ ನಾಟಕ. ನಂತರ ನಡುಬೀದಿ ನಾರಾಯಣದಲ್ಲಿ ತೀರ್ಥರೂಪುವಾಗಿ, ಭ್ರಷ್ಟಾಚಾರದಲ್ಲಿ ಧಫೇದಾರ್ ಮುರಾರಿಯಾಗಿ, ಸದಾರಮೆಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ಕಪಿಮುಷ್ಠಿಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ಮಕ್ಮಲ್ ಟೋಪಿಯಲ್ಲಿ ನಾಣಿಯಾಗಿ, ಹೀಗೆ ಹಲವಾರು ನಾಟಕಗಳನ್ನು ರಂಗಕ್ಕೆ ತಂದು ಗಳಿಸಿದ ಕೀರ್ತಿ. ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ಬರೆದು ಪ್ರದರ್ಶಿಸಿ ಬಾರಿಸಿದ ಜಯಭೇರಿ. ಸಮಾಜದ ಓರೆಕೋರೆಗಳನ್ನು ತಿದ್ದುವುದೇ ಪ್ರತಿ ನಾಟಕದ ಪ್ರಮುಖ ವಸ್ತು. ಹಲವಾರು ಬಾರಿ ವಿದೇಶದಲ್ಲೂ ನಾಟಕಗಳ ಪ್ರದರ್ಶನ.
ಸಂದ ಪ್ರಶಸ್ತಿ ಗೌರವಗಳಿಗೆ ಲೆಕ್ಕವಿಲ್ಲ-ನಟರತ್ನಾಕರ, ಕಲಾಗಜಸಿಂಹ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ, ನೂಜೆರ್ಸಿ, ವಾಷಿಂಗ್‌ಟನ್ ಡಿ.ಸಿ., ಬಾಸ್ಟನ್, ಹೂಸ್ಟನ್, ನೂಯಾರ್ಕ್ ಮುಂತಾದೆಡೆಗಳಿಂದ ಸಂದ ಸನ್ಮಾನ, ನವರತ್ನಾರಾಂ ಪ್ರಶಸ್ತಿ, ಮದರಾಸು, ಹೈದರಾಬಾದು ಕನ್ನಡ ಸಂಘಗಳಿಂದ ಸನ್ಮಾನ, ಲಂಚಾವತಾರ ನಾಟಕವನ್ನು10.000 ಪ್ರದರ್ಶನವಿತ್ತು ಮಾಡಿದ ವಿಶ್ವದಾಖಲೆ.
ಮಾಸ್ಟರ್ ಹಿರಣ್ಣಯ್ಯನವರು ನಾಟಕಗಳಲ್ಲಿ ಪ್ರಖ್ಯಾತರಾಗಿ, ತಮ್ಮ ನಾಟಕಗಳ ಮೂಲಕ ಸಾರ್ವಜನಿಕ ವಲಯದಲ್ಲಿ, ಸಮಾಜದ ರಾಜಕೀಯದ ಅಂಕು ಡೊಂಕುಗಳ ಬಗ್ಗೆ ವಿಚಾರ ಕ್ರಾಂತಿ ಮೂಡಿಸಿದವರು. ಅದಕ್ಕೂ ಮಿಗಿಲಾಗಿ ಅವರ ವಿರುದ್ಧ ಕಿರುಕುಳ ನೀಡಲು ನಿಂತವರ ಮುಂದೆ ಸೊಪ್ಪು ಹಾಕದೆ ತಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಿದವರು. ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧೀ ಜೊತೆಗೆ ಅನೇಕ ರಾಜಕೀಯ ನಾಯಕರು, ವಿವಿಧ ಹಂತಗಳ ಪುಡಾರಿಗಳು ಇವರ ಟೀಕಾ ಪ್ರಹಾರವನ್ನು ತಡೆದುಕೊಳ್ಳಲಾರದೆ ಅವರ ಚಟುವಟಿಕೆಗಳನ್ನು ಮಟ್ಟ ಹಾಕಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಧೈರ್ಯವಾಗಿ ಮೆಟ್ಟು ನಿಂತ ಧೀರರಾಗಿ ಅವರು ತಮ್ಮ ಕಲೆಯನ್ನು ಬೆಳಗಿದ ರೀತಿ ಅನನ್ಯ. ಅದೆಷ್ಟು ಬಾರಿ ಕೋರ್ಟ್ ಹತ್ತಿದರೋ ಈ ಪುಣ್ಯಾತ್ಮ. ಸುಪ್ರೀಂ ಕೋರ್ಟಿಗೆ ಹೋಗಿ ನ್ಯಾಯ ಪಡೆದರು. ಆದರೆ ಅನ್ಯಾಯವಂತರೆದುರು ಎಂದೂ ತಲೆತಗ್ಗಿಸಲಿಲ್ಲ. ಅವರ ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು, ಅಂತೆಯೇ ಕನ್ನಡದ ಬಗ್ಗೆ, ಕನ್ನಡದ ಸಾಮಾನ್ಯ ಜನತೆಗೆ ಅವರು ತೋರುತ್ತ ಬಂದಿರುವ ಪ್ರೀತಿ, ಸರಳ ಸಜ್ಜನಿಕೆ, ಇವೆಲ್ಲಾ ಅನುಪಮವಾದದ್ದು.
ಅವರ ಒಂದು ವಿಡಂಭನೆಯ ತುಣುಕು ಹೀಗಿದೆ: “ಈ ಅಮೇರಿಕಾದವರಿಗೆ ಒಂದು ಚೂರು ಕೂಡಾ ಹಣ ಉಳಿಸೋದ್ರ ಬಗ್ಗೆ ಕಾಳಜಿ ಇಲ್ಲ. ದುಡ್ಡಿದೆ ಅಂತ ಅವರು ಮಾಡೋ ಕೆಲಸ ನೋಡಿದ್ಯಾ. ಕುಡಿಯೋ ನೀರ್ಗೇ ಬೇರೆ ಪೈಪಂತೆ. ಕೊಳಚೆ ನೀರು ಹೋಗೋಕ್ಕೆ ಮತ್ತೊಂದು ಪೈಪಂತೆ. ಮಾತಿಗೆ ಹೇಳ್ತೀನಿ. ಆ ಮುಂಡೆ ಮಕ್ಳಿಗೆ ಕಿಂಚಿತ್ತೂ ಬುದ್ಧಿ ಇಲ್ಲ, ದುಡ್ಡು ಹೇಗೆ ಉಳಿಸ್ಬೇಕು ಅಂತ ಗೊತ್ತಿಲ್ಲ. ಅದೇ ನಮ್ಮ ಬೆಂಗಳೂರಲ್ಲಿ ನೋಡು, ಎರಡೂ ಒಂದೇ ಪೈಪಲ್ಲಿ ಬರುತ್ತೆ. ನಮ್ಮ ಬುದ್ಧಿವಂತಿಕೆ ಆ ಅಮೆರಿಕಾದವರಿಗೆ ಎಲ್ಲಿಂದ ಬರಬೇಕು!”
ಇದನ್ನೆಲ್ಲಾ ಅವರು ನಮ್ಮ ಜನರ ಬಗ್ಗೆ ಅವಹೇಳನ ಮಾಡಿ ಮಾತನಾಡಬೇಕು ಎಂಬುದಕ್ಕಿಂತ ನಮ್ಮ ಸಮಾಜದಲ್ಲಿನ ಕಾಳಜಿಯಾಗಿ ಕಾಣುತ್ತಾರೆ. ಹೀಗೆ ಮಾತನಾಡಿ ಅದರ ರಾಜಕೀಯ ದುರ್ಲಾಭ ಪಡೆದ ಯಾವುದೇ ಘಟನೆಯೂ ಅವರ ಇಷ್ಟು ವರ್ಷದ ಕಾಯಕದಲ್ಲಿ ನಡೆಯದಿಲ್ಲ ಎಂಬುದು ಕೂಡಾ ನೆನಪಿನಲ್ಲಿಡಬೇಕಾದ ಅಂಶ. ತಾವು ಅಷ್ಟು ದೊಡ್ಡವರಾದರೂ, ದೊಡ್ಡವರು ಸಾಮಾನ್ಯರೂ ಎಂಬ ಭೇದವಿಲ್ಲದೆ ಅವರು ತೋರುವ ಆಪ್ತಗುಣ ಅನುಪಮವಾದದ್ದು. ಈ ಹಿರಿಯ ವಯಸ್ಸಿನಲ್ಲಿಯೂ ಅವರ ಧ್ವನಿ ಮಾಧುರ್ಯ, ಮೊನಚು, ಹಾಸ್ಯಪ್ರಜ್ಞೆ, ಸಾಮಾನ್ಯರಲ್ಲಿ ಪ್ರೇಮಭಾವ, ಕನ್ನಡ ನಾಡು – ನುಡಿಗಳ ಬಗೆಗೆ ಅವರಿಗಿರುವ ಗೌರವ, ತಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಕುರಿತಾದ ಜಾಗೃತಿ ಇವೆಲ್ಲಾ ಅಚ್ಚರಿಮೂಡಿಸುವಂತದ್ದಾಗಿದೆ
ಪ್ರಮುಖ ನಾಟಕಗಳು
- ಮಕ್ಮಲ್ ಟೋಪಿ
- ಕಪಿಮುಷ್ಟಿ
- ದೇವದಾಸಿ
- ನಡುಬೀದಿ ನಾರಾಯಣ
- ಲಂಚಾವತಾರ
- ಪಶ್ಚಾತ್ತಾಪ
- ಭ್ರಷ್ಟಾಚಾರ
- ಚಪಲಾವತಾರ
- ಡಬ್ಬಲ್ ತಾಳಿ
- ಲಾಟರಿ ಸರ್ಕಾರ
- ಸನ್ಯಾಸಿ ಸಂಸಾರ
- ಸದಾರಮೆ
- ಎಚ್ಚಮ ನಾಯಕ
ಹಿರಣ್ಣಯ್ಯ ಮಿತ್ರ ಮಂಡಲಿ ಪ್ರಮುಖ ನಾಟಕಗಳಲ್ಲೊಂದಾದ ದೇವದಾಸಿ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಪಾತ್ರ ವಹಿಸಿದ್ದರು. ಸಂಪ್ರದಾಯ, ಆನಂದ ಸಾಗರ ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಶಸ್ತಿ ಪುರಸ್ಕಾರಗಳು
- ರಾಜ್ಯೋತ್ಸವ ಪ್ರಶಸ್ತಿ
- ನಾಟಕ ಅಕಾಡೆಮಿ ಪ್ರಶಸ್ತಿ
- ರಂಗಭೂಮಿ ಪ್ರಶಸ್ತಿ
- ಗುಬ್ಬಿ ವೀರಣ್ಣ ಪ್ರಶಸ್ತಿ
- ನವರತ್ನ ರಾಂ ಪ್ರಶಸ್ತಿ
- ಕಲಾಗಜ ಸಿಂಹ – ಬಿರುದು
- ನಟ ರತ್ನಾಕರ – ಬಿರುದು
ನಟರತ್ನಾಕರನ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸೋಣ.
(ಸಂಗ್ರಹ:ಸುನೀಲ್ ಹಳೆಯೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243