ಲೈಫ್ ಸ್ಟೈಲ್
ರೆಸಿಪಿ |’ಮೆಂತ್ಯ ಕಡುಬು’ ಮಾಡೋದು ಹೇಗೆ ಗೊತ್ತಾ..?
ಮೆಂತ್ಯೆಕಡುಬು ಮಾಡಲು ಈ ಕೆಳಗೆ ಸೂಚಿಸಿರುವಂತೆ ಹಂತಹಂತವಾಗಿ ಗಮನಿಸಿ. ನೀವೂ ಮೆಂತ್ಯ ಕಡುಬು ರುಚಿಯನ್ನ ಸವಿಯಿರಿ.
ರೆಸಿಪಿ
• 2 ದೊಡ್ಡ ಕಪ್ ಜೋಳದ ಹಿಟ್ಟಿಗೆ 2 ಟೇಬಲ್ ಸ್ಪೂನ್ ಅಜವಾಯಿನ್ (ಓಂಕಾಳು), 2 ಟೇಬಲ್ ಸ್ಪೂನ್ ಎಣ್ಣೆ & ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ತಣ್ಣೀರು ಹಾಕಿಕೊಂಡು ಚೆನ್ನಾಗಿ ನಾದಿ ಕಲಿಸಿ, ಮೆದುವಾಗುವವರೆಗೆ.
• ಅದರ ಮೇಲೆಯೂ ಸಹ ಎಣ್ಣೆ ಸವರಿ ಕೈಗೂ ಎಣ್ಣೆ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಎಣ್ಣೆ ಸವರಿದ ಎತ್ತರದ ಪಾತ್ರೆಯಲ್ಲಿ ಹಾಕಿಕೊಳ್ಳಿ.
• ಕುಕ್ಕರಿನಲ್ಲಿಟ್ಟರೆ 2 ವಿಷಲ್ ಹೊಡಿಸಿ ಗ್ಯಾಸ್ ಆಫ್ ಮಾಡಿ. ಇಡ್ಲಿ ಪಾತ್ರೆಯಲ್ಲಾದರೆ 25-30 ನಿಮಿಷ ಬೇಯಿಸಿರಿ.
• ಈ ಕಡೆಗೆ ಈರುಳ್ಳಿ, ಮೆಂತ್ಯಸೊಪ್ಪು, ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಗ್ಗರಣೆಗೆ ಸ್ವಲ್ಪವೇ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಅರಿಶಿಣ, ಕರಿಬೇವು ಹಾಕಿ, ನಂತರ ಸಣ್ಣಗೆ ಹೆಚ್ಚಿದ್ದನ್ನು ಹಾಕಿ ಮಿಕ್ಸ್ ಮಾಡಿ.( ನೀರು ಸ್ವಲ್ಪವೂ ಹಾಕಬಾರದು) ಮುಕ್ಕಾಲು ಬೆಂದ ಮೇಲೆ ಬೇಯಿಸಿದ ಹಿಟ್ಟಿನ ಗುಂಡುಗಳನ್ನು ಬಿಡಿ ಬಿಡಿಯಾಗಿ ಬಿಡಿಸಿ ಹಾಕಿ ಚೆನ್ನಾಗಿ ಕೈಯಾಡಿಸಿರಿ. ಸ್ವಲ್ಪ ಹೊತ್ತು ಮೇಲೆ ಮುಚ್ಚಿಡಿ.ನಂತರ ಆಫ್ ಮಾಡಿ.ಇಷ್ಟದ ಮೆಂತೆ ಕಡುಬು ಆಗೋಯ್ತು ರೆಡಿ. ರುಚಿ ನೋಡಿ.
ವಿಶೇಷ ಸೂಚನೆ: ಇದೇ ತಯಾರಿಕಾ ವಿಧಾನದಲ್ಲಿ ಜೋಳದ ಹಿಟ್ಟಿನ ಬದಲಾಗಿ ಅಕ್ಕಿಹಿಟ್ಟನ್ನು ಸಹ ಬಳಸಬಹುದು.ತುಂಬಾ ಚೆನ್ನಾಗಿರುತ್ತದೆ.) ಇದನ್ನು ಬಿಸಿ ಬಿಸಿಯಾಗಿ ತಿಂದರೆ ಚೆನ್ನಾಗಿರುತ್ತದೆ. ಗಟ್ಟಿ ಮೊಸರಿನ ಜೊತೆಗೂ ತುಂಬಾ ರುಚಿಯಾಗಿರುತ್ತದೆ.
-ಗೀತ ಗುಡೂರ್ ಮಿರ್ಜಿ