ಲೈಫ್ ಸ್ಟೈಲ್
ಹಾಲು ಸಸ್ಯಾಹಾರವೇ !? ಮಾಂಸಾಹಾರವೇ!? : ಮಿಸ್ ಮಾಡ್ದೆ ಈ ಲೇಖನ ಓದಿ
- ಡಾ: ಎನ್.ಬಿ.ಶ್ರೀಧರ
ಹಾಲು ಕುಡಿಯುವವರು ಈ ಶಿರ್ಷಿಕೆ ನೋಡಿ ನಮಗ್ಯಾಕೆ ಈ ಪ್ರಶ್ನೆ? ಎಂದು ಹೌಹಾರುವುದು ಸಹಜ. ಹಾಲನ್ನು ಅಹಾರವಾಗಿ ಸೇವಿಸುವವರು ತಲೆ ಕೆಟ್ಟಿದೆ ಈ ಮನುಷ್ಯನಿಗೆ ಎಂದುಕೊಂಡರೆ ಮಾಂಸಾಹಾರಿಗಳು ಹಾಲು ಸಸ್ಯಾಹಾರ ಅಂದು ಕೊಂಡು ಸೇವಿಸುತ್ತಿದ್ದೀರಲ್ಲಾ !! ಬನ್ನಿ ನಮ್ಮ ಸಾಲಿಗೆ ಅಂದು ಒಳಗೊಳಗೇ ಖುಷಿ ಪಡುತ್ತಾರೆ..
ವೃತ್ತಿಯಲ್ಲಿ ಪಶುವೈದ್ಯನಾದರೂ ಸಹ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿರುವುದರಿಂದ ಪಾಠ ಮಾಡುವುದು ನನ್ನ ದೈನಂದಿನ ಚಟುವಟಿಕೆ. ಮೊನ್ನೆ ತರಗತಿಯಲ್ಲಿ ಪಾಠ ಮಾಡುತ್ತಾ ಸಾಂಧರ್ಭಿಕವಾಗಿ ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಹಾಕಿದೆ. ಸ್ವಲ್ಪ ಹೊತ್ತು ಗಲಿಬಿಲಿಗೊಂಡ ಅವರಲ್ಲಿ ಕೆಲವರು ಸಸ್ಯಾಹಾರವೇ ಸಾರ್..!! ಸಂಶಯವೇಕೆ? ಅಂದರು.
ಸಸ್ಯಾಹಾರವೆಂದರೆ ಸಸ್ಯಮೂಲದಿಂದ ಬಂದ ವಸ್ತುವಲ್ಲವೇ !? ಇದು ಕ್ಯಾರೇಟ್, ಟೊಮ್ಯಾಟೋ.. ಮೂಲಂಗಿ, ಮಾವು, ಬೇವು, ಸೊಪ್ಪು ಈ ರೀತಿ ಭೂಮಿಯಿಂದ ಬೆಳೆದ ವಸ್ತುಗಳೇ? ಎಂದು ಕೇಳಿದೆ. ಹೌದಲ್ಲ ಸಾರ್. ಸಸ್ಯಾಹಾರ ಅಲ್ಲ.!! ಹಾಗಿದ್ರೆ ಮಾಂಸಾಹಾರವೇ? ಎಂದು ಮುಂದುವರೆದೆ. ವಿದ್ಯಾರ್ಥಿಗಳು ಒಕ್ಕೊರಳಿನಿಂದ ಅಲ್ಲ. ಎಲ್ಲಾ….. ಸಾರ್ ಅಂದ್ರು. ಅಲ್ಲಪ್ಪಾ!!.. ಹಾಲು ಸಸ್ಯಾಹಾರ ಅಲ್ಲ.
ಅಂದರೆ ಅದು ಪ್ರಾಣಿಯ ಜೀವಂತ ಜೀವಕೋಶಗಳು ಅದರಲ್ಲಿ ಇಲ್ಲವೇ? . ಪ್ರಾಣಿಯ ದೇಹದ ಕೆಚ್ಚಲಿನಲ್ಲಿ ಉತ್ಪನ್ನವಾದ ಮತ್ತು ಪ್ರಾಣಿಯ ದೇಹದಿಂದ ಬಂದಿದ್ದು ಅಂದರೆ ಅದು ಮಾಂಸಾಹಾರ! ಅಲ್ಲವೇ ? ಎಂದು ಪ್ರಶ್ನಿಸಿದೆ. ತಲ ತಲಾಂತರದಿಂದ ಬಂದ ನಂಬಿಕೆಯ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದ ಹಾಗೇ ಕೆಲವು “ಹಾಲಾಹಾರಿಗಳು” ಹೌಹಾರಿ ಬಿದ್ದರು.
ಮೂಲತ: ಮಾಂಸಾಹಾರಿಯಾದ ಮತ್ತು ಮನೆಯಲ್ಲಿ ಸಸ್ಯಾಹಾರಿಯಾಗಿದ್ದು ಹಾಸ್ಟೆಲ್ನಲ್ಲಿ ಕಾಲಕಾಲಕ್ಕೆ ತಕ್ಕಂತೆ “ಸೀಸನಲ್” ಮಾಂಸಾಹಾರಿಯಾದ ಕೆಲವು ವಿದ್ಯಾರ್ಥಿಗಳು ಈ “ಹಾಲಾಹಾರಿ” ಗಳನ್ನು ಮನಸ್ಸಿಗೆ ಬಂದಂತೆ ಟೀಕಿಸತೊಡಗಿದರು.
ನಮ್ಮ ಸಮಾಜದಲ್ಲೂ ಸಹ ಮನೆಯವರಿಗೆ, ಸಂಪ್ರದಾಯಕ್ಕೆ, ಹೆಂಡತಿಗೆ ಹೆದರಿ ಸಭೆ ಸಮ್ಮೇಳನದಲ್ಲಿ ಗುಟ್ಟಾಗಿ “ಸೀಸನಲ್” ಮಾಂಸಾಹಾರಿಯಾಗುವ ಮತ್ತು ಅಲ್ಕೋಹಾಲ್ ಸಹವಾಸ ಮಾಡುವ ಎಲ್ಲರಿಗೂ ಸಹ ಈ ಮಾತು ಅನ್ವಯ. ಹಾಗಿದ್ರೆ ಹಾಲು ಸಸ್ಯಾಹಾರವೂ ಅಲ್ಲಾ.. ಮಾಂಸಾಹಾರವೂ ಅಲ್ಲ. ಮತ್ತೇನು ಇದು? ಎಂದು ಪ್ರಶ್ನೆ ಹಾಕಿದೆ.
ಮಾಂಸವೆಂದರೆ ಬಹುಜೀವಕೋಶಗಳ ಗುಚ್ಚವನ್ನು ಹೊಂದಿದ, ಅಸ್ಥಿಪಂಜರಕ್ಕೆ ಅಂಟಿಕೊಂಡ ಒಂದು ಅಂಗಾಂಶ. ಅದನ್ನು ಪ್ರಾಣಿಗಳಿಂದ ತೆಗೆದು ತಿಂದರೆ ಅದು ಮಾಂಸಾಹಾರ. ಹಾಲು ಅಂತಹ ವಸ್ತುವೇ? ಎಂದು ಪ್ರಶ್ನಿಸಿದೆ. ಖಂಡಿತಾ ಅಲ್ಲ ಸಾರ್ ಎಂದು ಒಕ್ಕೊರಳ ಉತ್ತರ ಬಂದಿತು.
ಮಾಂಸವೆಂದರೆ ಪ್ರಾಣಿ ಸತ್ತ ಮೇಲೆ ಅಥವಾ ಪ್ರಾಣಿಯನ್ನು ಸಾಯಿಸಿ ಅದರ ಅಂಗಗಳನ್ನು ಉಪ್ಪು ಕಾರ ಹಾಕಿ ಬೇಯಿಸಿ ತಿನ್ನುವುದಲ್ಲವೇ? ಸತ್ತ ಮೇಲೆ ಪ್ರಾಣಿಯು ಶರೀರವನ್ನು ಶವ ಅಥವಾ ಕಳೆಬರಹ ಅಥವಾ ಹೆಣ ಅಂತ ಕರೆಯಬಹುದಲ್ಲವೇ? ಹಾಗಿದ್ದರೆ ಮಾಂಸಾಹಾರಿಗಳು “ಶವ ಮಾಂಸ ಭಕ್ಷಕರೆ ? ಹೆಣ ತಿನ್ನುವವರೆ? ಕಳೆಬರಹ ಬೇಯಿಸಿ ತಿನ್ನುವವರೇ? ಇತ್ಯಾದಿ ತರಲೆ ಪ್ರಶ್ನೆಗಳು ತೂರಿ ಬಂದವು.
ಮಾಂಸಾಹಾರಿಗಳನ್ನು ಈವತ್ತಿನ ” ಕೋಳಿ ಶವ ಮಾಂಸ ಭಕ್ಷಣೆ” ಕಾರ್ಯ ಸಸೂತ್ರವಾಗಿ ಮುಗಿಯಿತೆ!? ಎಂದು ಕೇಳಿದರೆ ಗೂಸಾ ಖಚಿತ. ಅಥವಾ ಚಿಕನ್ ಮಂಚೂರಿಯನ್ನು “ಮಸಾಲೆ ಪೂರಿತ ಕೋಳಿ ಶವ ಮಾಂಸದ ಖಾದ್ಯ” ಎನ್ನಬಹುದಾದರೆ ಮಟನ್ ಬಿರ್ಯಾನಿಯನ್ನು “ ಬೇಯಿಸಿದ ಕುರಿ ಶವ ಮಾಂಸದ ಅನ್ನ ಖಾದ್ಯ” ಅನ್ನಬಹುದೇನೋ? ಇತ್ಯಾದಿ ಸಲಹೆಗಳು “ಸಸ್ಯಾಹಾರಿ” ವಿದ್ಯಾರ್ಥಿಗಳಿಂದ ಬಂದು “ಮಾಂಸಾಹಾರಿ” ವಿದ್ಯಾರ್ಥಿಗಳನ್ನು ಕೆರಳಿಸಿದವು.
ಮೊಟ್ಟೆ ಸಸ್ಯಾಹಾರವೇ? ಮಾಂಸಾಹಾರವೇ? ಎಂದು ಇನ್ನೂ ಗಲಿಬಿಲಿಗೊಳಿಸಿದೆ. ಹೌದಲ್ಲ !!. ಮೊಟ್ಟೆಯೂ ಸಹ ಸಸ್ಯಾಹಾರಿ ಅಥವಾ ಮಾಂಸಾಹಾರಿ ವಸ್ತು ಅಲ್ಲ.. ಮತ್ತೇನಿದು? ಸ್ವಲ್ಪ ಹೊತ್ತು ತರಗತಿಯಲ್ಲಿ ನೀರವ ಮೌನ. ಅವರಲ್ಲೇ ಗುಜು..ಗುಜು.. ಚರ್ಚೆ ಪ್ರಾರಂಭವಾಯ್ತು.
ಹಾಲು ಮತ್ತು ಮೊಟ್ಟೆ ಸಸ್ಯಾಹಾರವೂ ಅಲ್ಲ.. ಮಾಂಸಾಹಾರವೂ ಅಲ್ಲ.. “ಪ್ರಾಣಿಜನ್ಯ ಶಾಖಾಹಾರಿ” ವಸ್ತು ಅನ್ನಬಹುದೇ? ಅಂದೆ. ಇದು ಸರಿ ಸಾರ್ ಅಂದ್ರು. ಎರಡೂ ಪಾರ್ಟಿಗಳಿಗೂ ತಾತ್ಕಾಲಿಕ ಮಾತಿನ ಸಮರ ನಿಂತು ತರಗತಿ ತಹಬಂದಿಗೆ ಬಂತು.
ಸ್ವಲ್ಪ ವೈಜ್ಞಾನಿಕ ವಿಚಾರಕ್ಕೆ ಬರೋಣ. ಒಂದು ಲೀಟರ್ ಹಾಲಿನಲ್ಲಿ ಸರಾಸರಿ 850 ಗ್ರಾಂ ನೀರು, 50 ಗ್ರಾಂ ಲ್ಯಾಕ್ಟೋಸ್, 50 ಗ್ರಾಮ್ ಕೊಬ್ಬು, 40 ಗ್ರಾಂ ಪ್ರೋಟೀನ್, 10 ಗ್ರಾಂ ಖನಿಜಗಳು, ಜೀವಸತ್ವಗಳು ಮತ್ತಿತರ ಘನ ವಸ್ತುಗಳಿರುತ್ತವೆ. ಈ ಒಂದು ಲೀಟರ್ ಹಾಲನ್ನು ಉತ್ಪಾದಿಸಲು ಕೆಚ್ಚಲಿನ ಹಾಲು ಉತ್ಪಾದಿಸಲೆಂದೇ ಇರುವ ವಿಶೇಷ ಜೀವಕೋಶದ ಮೂಲಕ ಸುಮಾರು 400 ಲೀಟರ್ ರಕ್ತದ ಪರಿಚಲನೆಯಾಗಿ ಈ ಎಲ್ಲ ವಸ್ತುಗಳನ್ನು ಪೂರೈಸಬೇಕಾಗುತ್ತದೆ.
ಅಂದರೆ ಪ್ರತಿದಿನ ಸುಮಾರು 20ಲೀಟರ್ ಹಾಲು ಉತ್ಪಾದಿಸುವ ಹಸುವಿನ ಕೆಚ್ಚಲಿನಲ್ಲಿ 8000 ಲೀಟರ್ ರಕ್ತದ ಪರಿಚಲನೆಯಾಗುತ್ತದೆ. ಪ್ರತಿ ಮಿಲಿ ಹಾಲಿನಲ್ಲಿ ಸುಮಾರು 2 ಲಕ್ಷ ಕೆಚ್ಚಲಿನ ಪದರದ ಜೀವಂತ ಜೀವಕೋಶಗಳು ಬರುತ್ತವೆ ಎಂದರೆ ಕೆಲವರಿಗೆ ಆಶ್ಚರ್ಯವಾದರೂ ಸಹ ಸತ್ಯ. ಇವುಗಳಿಗೆ ಸೊಮ್ಯಾಟಿಕ್ ಸೆಲ್ ಗಳೆಂದೂ ಕರೆಯುತ್ತಾರೆ.
ಕೆಚ್ಚಲು ಬಾವಿನಂತಹ ಖಾಯಿಲೆಗಳನ್ನು ಪತ್ತೆ ಮಾಡುವಾಗ ಇವುಗಳ ಸಂಖ್ಯೆ 10 ಪಟ್ಟು ಜಾಸ್ತಿಯಾಗುವುದರಿಂದ ಇವುಗಳನ್ನು ಮಾಪಕವಾಗಿಯೂ ಸಹ ಬಳಸುತ್ತಾರೆ.ಹಾಲನ್ನು ಸೇವಿಸಿದಾಗ ಇವುಗಳ ಸೇವನೆಯೂ ಅನಿವಾರ್ಯ. ಭಾರತದಲ್ಲಿ ಹಾಲನ್ನು ಬಿಸಿಮಾಡಿ ಅಥವಾ ಕುದಿಸಿ ಕುಡಿಯುವುದರಿಂದ ಇದನ್ನು “ಶಾಖಾಹಾರ” ಅಂದರೆ ಬೇಯಿಸಿ ತಿನ್ನುವ ಅಹಾರವೆನ್ನಬಹುದು. ಅಂದರೆ ಹಾಲಿಗೆ “ಪ್ರಾಣಿಜನ್ಯ ಶಾಖಾಹಾರ”ವೆನ್ನಬಹುದೇ ಹೊರತು ಸಸ್ಯಾಹಾರವಾಗಲು ಸಾಧ್ಯವೇ ಇಲ್ಲ!!.
ಇನ್ನೂ ಮುಂದಕ್ಕೆ ಹೋಗಿ ಹೇಳಬೇಕೆಂದರೆ, ಹಾಲಿನಲ್ಲಿ ಲಕ್ಷಾಂತರ ಪ್ರಾಣಿ ಜೀವಕೋಶಗಳಿದ್ದರೆ, ಕೋಳಿಯಿಂದ ಸಿಗುವ ಮೊಟ್ಟೆ ಏಕಜೀವಕೋಶದಿಂದ ಬಂದಿರುವ ವಸ್ತು. ಮೊಟ್ಟೆಯನ್ನು ಗಂಡುಕೋಳಿಯ ಸಂಪರ್ಕವಿಲ್ಲದೇ ಪಡೆಯುವುದರಿಂದ ಈ ಏಕಜೀವಕೋಶದ ವಸ್ತುವನ್ನು “ಪಕ್ಷಿಜನ್ಯ ಶಾಖಾಹಾರ” ವೆಂದು ಕರೆಯಬಹುದೇನೋ? ಇದು ವಿಚಾರ ಮಾಡುವ ವಿಷಯ.
ತಿನ್ನುವ ವಸ್ತುವಿನ ಆಯ್ಕೆ ಆಯಾ ಮನುಜನ ಹಕ್ಕು ಮತ್ತು ಆತನ ಸಂಪ್ರದಾಯದಂತೆ ಇಚ್ಚೆ ಕೂಡಾ. ಹಾಲನ್ನು ಸಸ್ಯಾಹಾರಿ ಪದಾರ್ಥ ಎನ್ನುವವರು ಅದೇ ಅರ್ಥದಲ್ಲಿ ಮೊಟ್ಟೆಯನ್ನೂ ಸಹ ಸಸ್ಯಾಹಾರ ಎಂದು ಅನಿವಾರ್ಯವಾಗಿ ಒಪ್ಪಲೇ ಬೇಕು.
ಹೊಟೇಲುಗಳಲ್ಲಿ ಗೋಬಿ ಮಂಚೂರಿಯನ್ನು ಇಷ್ಟ ಪಟ್ಟು ಚಪ್ಪರಿಸಿಕೊಂಡು ತಿನ್ನುವ ಅನೇಕರು ಅಣಬೆಯಿಂದ ಮಾಡಿದ “ಮಶ್ರೂಮ್ ಮಂಚೂರಿ”ಯನ್ನು ಸಸ್ಯಾಹಾರವಲ್ಲ ಎಂದು ತಿನ್ನುವುದಿಲ್ಲ. ಅಣಬೆ ತಿಂದರೆ ಮಾಂಸ ತಿಂದಂತೆ ಎಂದು ಅವರ ಅಂಬೋಣ. ಅಣಬೆ ಒಂದು ಶಿಲೀಂದ್ರ ವರ್ಗಕ್ಕೆ ಸೇರಿದ ವಸ್ತು. ಶಿಲೀಂದ್ರ ಸಸ್ಯವಲ್ಲ. ಹಾಗೆಯೇ ಅದು ಪ್ರಾಣಿಣಿಜನ್ಯವೂ ಅಲ್ಲ ಅಥವಾ ಈ ಮೊದಲು ತಿಳಿಸಿದಂತೆ ಮಾಂಸಾಹಾರವೂ ಅಲ್ಲ. ಇದನ್ನು “ಶಾಖಾಹಾರ” ಎಂದು ಕರೆಯಬಹುದು.
ಮುಂದಿನ ಪ್ರಶ್ನೆ ಜೇನುತುಪ್ಪ ಸಸ್ಯಾಹಾರಿಯೇ? ಮೇಲ್ನೋಟಕ್ಕೆ ಇದು ಸಸ್ಯಗಳ ಮಕರಂದದ ಮೂಲದ ವಸ್ತುವಾಗಿ ನಿಜ ಅನ್ನಿಸಿದರೂ ಸಹ, ಜೇನು ತುಪ್ಪ ಜೇನುಹುಳಗಳು ಕಷ್ಠಪಟ್ಟು ಹೂವಿನ ಮಕರಂದವನ್ನು ಅವುಗಳ ಬಾಯಿಯಲ್ಲಿ ಹೀರಿಕೊಂಡು ಬಂದು ಜೇನುಗೂಡಿನಲ್ಲಿ ಇರುವ ಇದಕ್ಕೆಂದೇ ಸಿದ್ಧ ಪಡಿಸಿರುವ ಕೋಶದಲ್ಲಿ ಹಾಕುತ್ತವೆ.
ಇದಕ್ಕೆ ಸತತವಾಗಿ ಅವುಗಳ ರೆಕ್ಕೆಗಳ ಮೂಲಕ ಹಾಕುವ ಗಾಳಿಯ ಮೂಲಕ ಮಕರಂದವನ್ನು ಸಿಹಿಯಾದ ಸುವಾಸನಾ ಯುಕ್ತ ಜೇನುತುಪ್ಪವಾಗಿ ಪರಿವರ್ತಿಸುತ್ತವೆ. ಜೇನುಹುಳಗಳ ಎಂಜಲಿನಿಂದ ಕಲುಷಿತವಾದ ವಸ್ತು ಸಸ್ಯಾಹಾರಿ ಆಗಲು ಸಾಧ್ಯವೇ? ಸಾಧ್ಯವಿಲ್ಲ ಅಲ್ಲವೇ?.
ಇತ್ತೀಚೆಗೆ ಕೆಲವರಲ್ಲಿ “ವೆಗಾನ್” ಪದ್ದತಿಯ ಅಹಾರ ಪದ್ಧತಿ ರೂಢಿಯಲ್ಲಿದೆ. ವೆಗಾನ್ ಅಂದರೆ ಪ್ರಾಣಿ ಅಥವಾ ಕೀಟಮೂಲದ ಯಾವುದೇ ವಸ್ತುಗಳನ್ನು ಹಿಂಸಿಸಿ ಪಡೆಯುವ ಅಹಾರವನ್ನು ತಿನ್ನದೇ ಇರುವುದು. ಇದರಲ್ಲಿ ಹಾಲು, ಮೊಟ್ಟೆ, ಮಾಂಸ, ಜೇನು ತುಪ್ಪ ಇತ್ಯಾದಿ ಅನೇಕ ವಸ್ತುಗಳು ಸೇರುತ್ತವೆ. ಕಠಿಣ ಸಸ್ಯಾಹಾರಿಗಳಾದ ದಿಗಂಬರ ಜೈನ ಮುನಿಗಳು ಸಹ ಈ ರೀತಿಯ ಆಹಾರ ಪದ್ಧತಿ ಅನುಸರಿಸುತ್ತಾರೆ ಎನ್ನುತ್ತಾರೆ.
ಅಹಾರ ಪದ್ದತಿ ಅವರವರ ಪರಂಪರೆ, ಜಾತಿ, ಕುಲ ಇನ್ನೂ ಅನೇಕ ಸಂಕಿರಣ ಸಾಮಾಜಿಕ ಹಿನ್ನೆಲೆಯಲ್ಲಿ ಜೀವನದಲ್ಲಿ ಅಡಕವಾಗಿರುವ ಅಂಶ ಮತ್ತು ತೀರಾ ವೈಯಕ್ತಿಕ ವಿಷಯ. ಯಾವ ಅಹಾರ ಪದ್ದತಿಯಾದರೇನು? ಸರಿಯಾದ ಸಮಯದಲ್ಲಿ, ಶುಚಿಯಾದ, ರುಚಿಯಾದ, ಕಡಿಮೆ ಮಸಾಲೆ, ಕಡಿಮೆ ಕೊಬ್ಬು ಇರುವ ಆರೋಗ್ಯಕಾರಿ ಅಹಾರವನ್ನೇ ಹಿತಮಿತವಾಗಿ ಸೇವಿಸಿ ಆರೋಗ್ಯವಂತರಾಗಿರುವುದೇ ಮುಖ್ಯ. ಏನಂತೀರಿ?
ಸುದ್ದಿದಿನ.ಕಾಂ|ವಾಟ್ಸಾಪ್|9980346243