ಲೈಫ್ ಸ್ಟೈಲ್

ನಮ್ಮ ಮೆದುಳಿನಲ್ಲಿ ಕನ್ನಡಿ ಉಂಟು ಗೊತ್ತಾ..!

Published

on

ಯಾರಾದರೂ ಆಕಳಿಸಿದ್ದನ್ನು ನೋಡಿದಾಗ ನಿಮಗೂ ಸಹ ಆಕಳಿಕೆ ಬಂದಿದೆಯೇ? ಟಿ.ವಿ. ಅಥವಾ ಚಲನಚಿತ್ರವನ್ನು ನೋಡುವಾಗ ಅದರಲ್ಲಿ ಬರುವ ಪಾತ್ರಧಾರಿಗಳು ನಕ್ಕಾಗ ನೀವೂ ಕೂಡ ನಿಮಗರಿವಿಲ್ಲದೆಯೇ, ನಗುವುದು, ಅತ್ತಾಗ ಅಳುವುದು, ಭಯಪಟ್ಟರೆ ಭಯಪಡುವುದು ಇವೆಲ್ಲ ನಿಮ್ಮ ಅನುಭವಕ್ಕೆ ಬಂದಿದೆಯೇ? ನಿಮ್ಮ ಮಗ/ಮಗಳು ಅವರಿಗೆ ಅರಿವಿಲ್ಲದೆಯೇ ನಿಮ್ಮ ಮಾತು, ನಡೆ, ಭಾವ, ಭಂಗಿ ಇತ್ಯಾದಿಗಳನ್ನು ಅನುಕರಣೆ ಮಾಡುತ್ತಿದ್ದಾರೆ ಎಂದು ಅನಿಸಿದೆಯೇ? ಇತರರ ಭಾವನೆಗಳನ್ನು, ಸನ್ನೆಗಳನ್ನು, ಭಂಗಿಗಳನ್ನು ನಾವು ನಮಗೆ ಅರಿವಿಲ್ಲದೆ ಹೇಗೆ ಅನುಕರಣೆ ಮಾಡಲು ಸಾಧ್ಯ? ಇದಕ್ಕೆಲ್ಲ ಕಾರಣ ಮಿರರ್ ನ್ಯೂರಾನ್‍ಗಳು.

ಏನಿದು ಮಿರರ್ ನ್ಯೂರಾನ್‍ಗಳು? ಇವು ನಮ್ಮ ಮೆದುಳಿನಲ್ಲಿ ಇರುವ ನರಕೋಶಗಳು. ನಮ್ಮ ಮೆದುಳಿನಲ್ಲಿ ನೂರಾರು ನರಕೋಶಗಳು ಇರುತ್ತವೆ. ಈ ಮಿರರ್ ನ್ಯೂರಾನ್‍ಗಳ ಕಾರಣದಿಂದಾಗಿ, ನಮ್ಮೆದುರಿಗಿನ ವ್ಯಕ್ತಿಯ ವರ್ತನೆ, ಭಾವನೆಗಳು, ಭಂಗಿಗಳನ್ನು ನಮಗರಿವಿಲ್ಲದ ಹಾಗೇಯೇ ಅಪ್ರಜ್ಞಾಪೂರ್ವಕವಾಗಿ ಅನುಕರಣೆ ಮಾಡುತ್ತೇವೆ. ಈ ಮಿರರ್ ನ್ಯೂರಾನ್‍ಗಳು“ಪರಾನುಭೂತಿ”ಯ ಮೇಲೆ ಆಧಾರಿತವಾಗಿವೆ. ಪರಾನುಭೂತಿ ಎಂದರೆ “ನಾವು ಬೇರೆಯವರ ಭಾವನೆಗಳನ್ನು ಆ ಸಂದರ್ಭದಲ್ಲಿ ನಮಗೇ ಅನುಭವ ಆಗುತ್ತಿರುವ ಹಾಗೆ ಅನುಭವಿಸುವ ಅಥವಾ ಕಲ್ಪಿಸಿಕೊಳ್ಳುವ ಸಾಮಥ್ರ್ಯ”. ಈ ಮಿರರ್ ನ್ಯೂರಾನ್‍ಗಳಿರುವ ಕಾರಣ, ನಾವು ನಮಗೆ ಅರಿವಿಲ್ಲದಂತೆಯೇ ಎಷ್ಟೋ ಚಟುವಟಿಕೆಗಳನ್ನು ಮಾಡುತ್ತೇವೆ. ಮಕ್ಕಳು ಚಿಕ್ಕವಯಸ್ಸಿನಿಂದ ಬೆಳೆಯುವವರೆಗೂ, ದೊಡ್ಡವರು ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ಇರುವುದನ್ನು ನೋಡಿ ಅವರ ಭಾವ, ಭಂಗಿ, ಮಾತು ಎಲ್ಲವನ್ನೂ ಅನುಕರಣೆ ಮಾಡುತ್ತಾ ಬೆಳೆಯುತ್ತಾರೆ. ಈ ನ್ಯೂರಾನ್‍ಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ನಿಯಂತ್ರಣ ಮಾಡಲು ಸಾಧ್ಯವಿಲ್ಲ.

ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಮಿರರ್ ನ್ಯೂರಾನ್‍ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವಾಗ ‘ಆಟಿಸಂ’[ಸ್ವಲೀನತೆ] ಎಂಬ ಕಾಯಿಲೆ ಬರುತ್ತದೆ. ಆಟಿಸಂ ಎಂದರೆ ಮೆದುಳಿನಲ್ಲಿರುವ ನರಗಳಿಗೆ ಸಂಬಂಧಪಟ್ಟಂತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಎದುರಿಗಿರುವ ವ್ಯಕ್ತಿ ಹೇಳುವ ವಿಚಾರ ಮಗುವಿಗೆ ಅರ್ಥವಾಗುತ್ತದೆ. ಆದರೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗುವುದಿಲ್ಲ. ಇವರು ಸಂವಹನ ಕೊರತೆ ಎದುರಿಸುತ್ತಾರೆ ಮತ್ತು ಯಾರೊಂದಿಗೂ ಬೆರೆಯಲು ಹಿಂಜರಿಯುತ್ತಾರೆ. ಮಿರರ್ ನ್ಯೂರಾನ್‍ಗಳನ್ನು ಸಕ್ರಿಯಗೊಳಿಸುವುದರಿಂದ ಆಟಿಸಂ ಅನ್ನು ಗುಣಪಡಿಸಬಹುದು. ಮಿರರ್ ನ್ಯೂರಾನ್‍ಗಳನ್ನು ನಿಯಂತ್ರಿಸಬಹುದೇ? ಇದಕ್ಕೆ ಉತ್ತರ “ಸಾಧ್ಯವಿಲ್ಲ”. ಆದರೆ, ಈ ನ್ಯೂರಾನ್‍ಗಳಿಂದ ನಾವು ಒಳ್ಳೆಯದನ್ನು ಕಲಿಯಬಹುದು ಅಥವಾ ಕೆಟ್ಟದನ್ನು ಸಹಾ ಕಲಿಯಬಹುದು. ಅದುದರಿಂದ ನಾವು ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳನ್ನು ಹಾಗು ಪರಿಸರವನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಸರಿಯಾದ ರೀತಿ ಎಂದರೇ ಸದಾ ಸಂತೋಷದಿಂದ, ಪಾಸಿಟಿವ್ [ಸಕಾರಾತ್ಮಕ]ವಾಗಿ ಯೋಚನೆ ಮಾಡುವವರ ಜೊತೆ ಬೆರೆಯಬೇಕು.

ಹಾಗೇಯೆ, ಸದಾ ದುಖ:ದಿಂದ ಇರುವವರಿಗೆ, ನೆಗೆಟಿವ್ [ನಕಾರಾತ್ಮಕ]ವಾಗಿ ಯೋಚನೆ ಮಾಡುವವರಿಗೆ, ಅಪರಾಧಿಗಳಿಗೆ, ಮಿರರ್ ನ್ಯೂರಾನ್‍ಗಳ ಮುಖಾಂತರ ಸಕಾರಾತ್ಮಕವಾವಾಗಿ ಯೋಚನೆ ಮಾಡುವ ಹಾಗೆ ಸಹಾ ಮಾಡಬಹುದು. ಮಾನವ ಸಂಘಜೀವಿ, ತನ್ನ ಜೊತೆಯಲ್ಲಿರುವವರು ದಾರಿ ತಪ್ಪಿರುವಾಗ, ಕಷ್ಟದಲ್ಲಿದ್ದಾಗ, ಅವರನ್ನು ಮುಖ್ಯವಾಹಿನಿಗೆ ತರಲು ನಮ್ಮ ಕೈಲಾದ ಸಹಾಯವನ್ನು ಮಾಡಬಹುದು.
ನಮ್ಮನ್ನು ನೋಡಿ ಕಲಿಯುವ ಮಕ್ಕಳಿಗೆ, ನಾವು ಅದಷ್ಟೂ ಒಳ್ಳೆಯ ವಿಚಾರಗಳನ್ನು ಹೇಳಿ ಕೊಟ್ಟರೇ, ಆ ಮಕ್ಕಳು ಒಳ್ಳೆ ರೀತಿಯಲ್ಲಿ ಬೆಳೆದು ಸತ್ಪ್ರಜೆಗಳಾಗುವುದರಿಂದ, ದೇಶದ ಪ್ರಗತಿಗೆ ಪರೋಕ್ಷವಾಗಿ ಸೇವೆ ಮಾಡಬಹುದಾಗಿದೆ.

-ಸೌಮ್ಯ ಅಶೋಕ್
ಬೆಂಗಳೂರು

Leave a Reply

Your email address will not be published. Required fields are marked *

Trending

Exit mobile version