ದಿನದ ಸುದ್ದಿ

ಮೇಲ್ಮನೆಯ ಆರು ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಪ್ರಗತಿಯಲ್ಲಿ ; ಕಣದಲ್ಲಿ 103 ಅಭ್ಯರ್ಥಿಗಳು : ಇಲ್ಲಿದೆ ಸಂಪೂರ್ಣ ಮಾಹಿತಿ

Published

on

ಸುದ್ದಿದಿನ ಡೆಸ್ಕ್ : ವಿಧಾನಪರಿಷತ್ತಿನ ಆರು ಸ್ಥಾನಗಳಿಗೆ 103 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಂದು ನಾಮಪತ್ರಗಳ ಪರಿಶೀಲನೆ ಕಾರ್ಯ ಆರಂಭಗೊಂಡಿದೆ.

ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜತೆಗೆ, ದೊಡ್ಡ ಸಂಖ್ಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಿಂದ 24 ನಾಮಮಪತ್ರಗಳು ಸಲ್ಲಿಕೆಯಾಗಿವೆ. ಬೆಂಗಳೂರು ಪದವೀಧರ ಕ್ಷೇತ್ರದಿಂದ 18 ನಾಮಪತ್ರಗಳು ಸಲ್ಲಿಕೆಯಾದರೆ, ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ 11 ನಾಮಪತ್ರಗಳು, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ 7 ನಾಮಪತ್ರಗಳು, ಕರ್ನಾಟಕ ನೈಋತ್ಯ ಪದವೀಧರ ಕ್ಷೇತ್ರದಿಂದ 12ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 13 ನಾಮಪತ್ರಗಳು ನಿನ್ನೆ ಸಲ್ಲಿಕೆಯಾಗಿದ್ದವು.

ಇದುವರೆಗೆ ಒಟ್ಟು 103 ಅಭ್ಯರ್ಥಿಗಳಿಂದ 156 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ. ಸಂಜೆ ವೇಳೆಗೆ ಅಂತಿಮವಾಗಿ ಕಣದಲ್ಲಿರುವವರ ಪಟ್ಟಿ ಬಿಡುಗಡೆ ಮಾಡಲಾಗುವುದು. ನಾಮಪತ್ರ ವಾಪಸ್ ಪಡೆಯಲು ಇದೇ 20ರಂದು ಕೊನೆಯ ದಿನವಾಗಿದೆ.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ಜೂನ್ 3 ರಂದು ಮತದಾನ ನಡೆಯಲಿದೆ. ಮತದಾನದ ಸಂಬಂಧ ಚಿತ್ರದುರ್ಗ ಜಿಲ್ಲೆಯ ಮತದಾನ ಕೇಂದ್ರಗಳ ಪಟ್ಟಿಯನ್ನು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಿಸಿದರು. ಜಿಲ್ಲೆಯಲ್ಲಿ ಒಟ್ಟು 7 ಮತದಾನ ಕೇಂದ್ರಗಳಿವೆ.

ಮೊಳಕಾಲ್ಮೂರು ತಾಲೂಕಿನ ಶಿಕ್ಷಕರ ಮತದಾರರು ಮೊಳಕಾಲ್ಮೂರು ಪಟ್ಟಣದ ತಾಲೂಕು ಆಡಳಿತ ಕೇಂದ್ರದಲ್ಲಿ ಮತ ಚಲಾಯಿಸಬಹುದು. ಚಳ್ಳಕೆರೆ ನಗರದ ಬಿ.ಎಂ.ಜಿ.ಎಚ್.ಎಸ್ ಶಾಲೆ, ಚಿತ್ರದುರ್ಗ ನಗರದ ಬಾಲಕಿಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ 1, ಕೋಠಡಿ 2 ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಹಿರಿಯೂರು ನಗರದ ತಾಲೂಕಿನ ಕಚೇರಿಯಲ್ಲಿ, ಹೊಸದುರ್ಗ ಪಟ್ಟಣ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹೊಳಲ್ಕರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮತಚಲಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಿಕ್ಷಕ ಮತದಾರರು ಯಾವುದೇ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ 4 ಸಾವಿರದ 615 ಶಿಕ್ಷಕ ಮತದಾರರು ಇದ್ದಾರೆ ಎಂದು ಅವರು ಅಂಕಿ-ಅಂಶ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version