ದಿನದ ಸುದ್ದಿ

ಮನರೆಗಾ ಯೋಜನೆಯಡಿ ದಿನಕ್ಕೆ 275 ರೂ. ಕೂಲಿ

Published

on

ಸುದ್ದಿದಿನ,ಯಾದಗಿರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಕೂಲಿಕಾರರ ಒಂದು ಕುಟುಂಬಕ್ಕೆ 100 ದಿನಗಳ ಕೂಲಿ ಕೆಲಸ ನೀಡಲಾಗುತ್ತಿದೆ (ಬರಗಾಲದಲ್ಲಿ 150 ದಿನಗಳು). ಈ ಯೋಜನೆಯಡಿ ಕೆಲಸ ಮಾಡುವ ಪ್ರತಿಯೊಬ್ಬ ಕೂಲಿಕಾರರಿಗೆ ಹೆಣ್ಣು- ಗಂಡು ಎಂಬ ಭೇದವಿಲ್ಲದೆ ದಿನಕ್ಕೆ 275 ರೂ.ಗಳ ಸಮಾನ ಕೂಲಿ ಸಿಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19 ಸಂದರ್ಭದಲ್ಲಿ ಮನರೆಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರಿಗೆ ನೆರಳು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೆಲಸ ಮಾಡಿಸಲಾಗುತ್ತಿದೆ. ಕೂಲಿಕಾರರಿಗೆ ಆಯಾ ಗ್ರಾಮ ಪಂಚಾಯತಿಗಳಿಂದ ಮಾಸ್ಕ್‍ಗಳನ್ನು ಒದಗಿಸಲಾಗುತ್ತಿದೆ ಮತ್ತು ಸ್ಯಾನಿಟೈಸರ್ ಸಿಂಪಡಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೂಲಿಕಾರರು ತಾವು ತರುವ ಗುದ್ದಲಿ, ಹಾರೆ ಮುಂತಾದ ಸಲಕರಣೆಗಳನ್ನು ಹರಿತಗೊಳಿಸಲು ದಿನಗೂಲಿಯ ಜೊತೆಗೆ ಸಲಕರಣೆ ಹರಿತಗೊಳಿಸುವ ವೆಚ್ಚ ಪ್ರತಿದಿನ 10 ರೂ.ನಂತೆ ಪಾವತಿಸಲಾಗುವುದು. ಕೂಲಿಕಾರರಿಗೆ ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯೇ ಕೆಲಸ ಕೊಡಲು ಆದ್ಯತೆ ನೀಡಲಾಗುತ್ತಿದೆ.

ಒಂದು ವೇಳೆ ಅವರ ಗ್ರಾಮದಲ್ಲಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಡಿ ಕೆಲಸ ಸಿಗದಿದ್ದರೆ ಕೂಲಿಕಾರರನ್ನು 5 ಕಿ.ಮೀ ಗಿಂತಲೂ ಹೆಚ್ಚಿನ ದೂರದ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜಿಸಿದರೆ ಕೂಲಿಯ ಮೊತ್ತದ ಶೇಕಡಾ 10 ರಷ್ಟು ಪ್ರಯಾಣ ಮತ್ತು ಪ್ರಾಸಂಗಿಕ ವೆಚ್ಚವನ್ನು ಪಾವತಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version