ದಿನದ ಸುದ್ದಿ
22 ಸಾವಿರ ಕೋಟಿ ರೂ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸುದ್ದಿದಿನ ಡೆಸ್ಕ್ : ಗುಜರಾತ್ನ ದಾಹೋದ್ನಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 22 ಸಾವಿರ ಕೋಟಿ ರೂಪಾಯಿ ಮೊತ್ತದ ನಾನಾ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ದಾಹೋದ್ನ ರೈಲ್ವೆ ಉತ್ಪಾದನಾ ಘಟ ಕದಲ್ಲಿ 9 ಸಾವಿರ ಎಚ್.ಪಿ ಎಲೆಕ್ಟ್ರಿಕ್ ಲೋಕೊಮೋಟಿವ್ಸ್ ಉತ್ಪಾದನಾ ಯೋಜನೆ ಇವುಗಳಲ್ಲಿ ಸೇರಿವೆ. 1926 ರಲ್ಲಿ ಸ್ಥಾಪನೆಯಾಗಿರುವ ದಾಹೋದ್ ರೈಲ್ವೆ ಕಾರ್ಯಾಗಾರವನ್ನು ಸ್ಟೀಮ್ ಲೋಕೊಮೋಟಿವ್ಸ್ನಿಂದ ಎಲೆಕ್ಟ್ರಿಕ್ ಲೋಕೊಮೋಟಿವ್ಸ್ಗೆ ಪರಿವರ್ತಿಸುವ ಉತ್ಪಾದನಾ ಯೋಜನೆಯು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣವಾಗಲಿದೆ. ಈ ಯೋಜನೆಯು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ನೀಡಲಿದೆ.
ನರ್ಮದಾ ಜಲಾನಯನ ಭಾಗದಿಂದ ಕುಡಿಯುವ ನೀರು ಪೂರೈಸುವ 1ಸಾವಿರದ 400 ಕೋಟಿ ರೂಪಾಯಿ ವೆಚ್ಚದ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ದಾಹೋದ್ ಜಿಲ್ಲೆಯ 280 ಹಳ್ಳಿಗಳು ಮತ್ತು ದೇವ್ಗಢ ನಗರಕ್ಕೆ ಈ ಯೋಜನೆಯು ನೀರು ಪೂರೈಸಲಿದೆ.
335 ಕೋಟಿ ರೂಪಾಯಿ ವೆಚ್ಚದ ದಾಹೋದ್ ಸ್ಮಾರ್ಟ್ಸಿಟಿ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು. ದಾಹೋದ್ ಮತ್ತು ಪಂಚಮಹಲ್ ಜಿಲ್ಲೆಗಳ 10 ಸಾವಿರ ಬುಡಕಟ್ಟು ಜನಾಂಗಗಳಿಗೆ 120ಕೋಟಿ ರೂಪಾಯಿ ಮೊತ್ತದ ಪ್ರಯೋಜನಗಳನ್ನು ಒದಗಿಸುವ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಪ್ರಧಾನಿ ಚಾಲನೆ ನೀಡಿದರು.
ಮೂರು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಂದು ದಾಹೋದ್ ಜಿಲ್ಲೆಯಲ್ಲಿ ಮೊದಲ ದಿನದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಾಹೋದ್ ನಗರವು ಮೇಕ್ ಇನ್ ಇಂಡಿಯಾದ ಬಹುದೊಡ್ಡ ಕೇಂದ್ರವಾಗಿ ಬದಲಾಗುತ್ತಿದೆ. 20ಸಾವಿರ ಕೋಟಿ ರೂಪಾಯಿ ವೆಚ್ಚದ ಎಲೆಕ್ಟ್ರಿಕ್ ಲೋಕೊಮೋಟಿವ್ಸ್ ಉತ್ಪಾದನಾ ಕೇಂದ್ರವು ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ನಾಂದಿಯಾಡಲಿದೆ ಎಂದರು.
ನಂತರ ಅವರು, ಆದಿ ಜಾತಿ ಮಹಾಸಮ್ಮೇಳನ ಉದ್ದೇಶಿಸಿ ಮಾತನಾಡಿ, ಹೊರ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ಲೋಕೊಮೋಟಿವ್ಸ್ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ ಹಾಗಾಗಿ, ದಾಹೋದ್ನ ಲೋಕೊಮೋಟಿವ್ಸ್ ಉತ್ಪಾದನಾ ಕೇಂದ್ರವು ಈ ಬೇಡಿಕೆಗಳನ್ನು ಪೂರೈಸುವ ಪ್ರಮುಖ ಕೇಂದ್ರವಾಗಲಿದೆ ಎಂದರು.
ದಾಹೋದ್ ಜಿಲ್ಲೆಯ ಬುಡಕಟ್ಟು ಜನಾಂಗಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನೀರು ಪೂರೈಕೆ ಯೋಜನೆಗಳು ಸಹಾಯಕವಾಗಲಿದೆ. ಕೇಂದ್ರ ಸರ್ಕಾರ ಈ ಬುಡಕಟ್ಟು ಜನಾಂಗಗಳ ಮಕ್ಕಳಿಗೆ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಒದಗಿಸಲು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ತಿಳಿಸಿದರು.
Addressing a programme at launch of development initiatives in Dahod, Gujarat. https://t.co/AK1QGDYDTZ
— Narendra Modi (@narendramodi) April 20, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243