ನೆಲದನಿ
ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮೊಹರಂ
- ಶೇಕ್ಷಾವಲಿ ಮಣಿಗಾರ
ನೆನಪಿರಲಿ ಇದೊಂದು ಹಬ್ಬವಲ್ಲ ಶೋಕಾಚರಣೆ.ಇಸ್ಲಾಮಿಕ್ ಪ್ರಕಾರ ಮೊಹರಂ ಮೊದಲ ತಿಂಗಳು.ಇದನ್ನು ಇಸ್ಲಾಂನಲ್ಲಿ ಹೊಸವರ್ಷ ಎಂದು ಆಚರಣೆ ಮಾಡುತ್ತಾರೆ.ಈ ತಿಂಗಳ 10ನೇ ದಿನವನ್ನು “ರೋಜಾ-ಏ-ಆಶುರಾ” ಎಂದು ಕರೆಯಲಾಗುತ್ತದೆ.ಇದನ್ನೇ ಕ್ಯಾಲೆಂಡರಲ್ಲಿ ಮೊಹರಂ ಕಡೆಯ ದಿನ ಎನ್ನುವರು.
ಈ ತಿಂಗಳ ಹತ್ತನೇ ದಿನ ಇಸ್ಲಾಂ ಧರ್ಮದ ಸಂಸ್ಥಾಪಕ ಪ್ರವಾದಿ ಮೊಹಮ್ಮದ್‌ರವರ ಕಿರಿಯ ಮೊಮ್ಮಗ ಇಮಾಮ್ ಹುಸೇನ್ ಮತ್ತು ಅವರ 72 ಅನುಯಾಯಿಗಳು,ಧರ್ಮದ ಉಳಿವಿಗಾಗಿ ಅರಬ್ ರಾಜ ಯಜೀದ್ ವಿರುದ್ಧ ನಡೆದ ಯುದ್ಧದಲ್ಲಿ ಹೋರಾಡಿ ವೀರಮರಣವನ್ನಪ್ಪಿದ ದಿನ.
ಪ್ರವಾದಿ ಮೊಹಮ್ಮದರ ಕಾಲವಾದ ನಂತರ ಅವರ ಮಗಳು ಬೀಬಿ ಫಾತಿಮಾರವರ ಪತಿ ಹಜರತ್ ಅಲಿ 4ನೇ ಖಲೀಫರಾಗಿದ್ದರು.ಇವರ ಮಕ್ಕಳೇ ಇಮಾಮ್ ಹುಸೇನ್ ಮತ್ತು ಇಮಾಮ್ ಹಸನ್.ಹಜರತ್ ಅಲಿ ತರುವಾಯ ಅವರ ಹಿರಿಯ ಮಗ ಖಲೀಫರಾಗಬೇಕಿತ್ತು. ಆದರೆ ಅಲ್ಲಿಯ ಸರ್ದಾರನಾಗಿದ್ದ ಯಜೀದ್ ತಾನೆ ಖಲೀಫನೆಂದು ಘೋಷಿಸಿಕೊಂಡು ಸರ್ವಾಧಿಕಾರಿಯಾಗಿ ಇಸ್ಲಾಂಮನ್ನು ಮನಸಿಗೆ ಬಂದಂತೆ ತಿದ್ದಿ ಆಡಳಿತ ನಡೆಸುತಿದ್ದ.ಇದನ್ನು ವಿರೋಧಿಸಿದಕ್ಕಾಗಿ ಆಹಾರದಲ್ಲಿ ವಿಷ ಬೆರೆಸಿ ಇಮಾಮ್ ಹಸನ್‌ರನ್ನು ಕೊಂದು ಅವರ ಸಹೋದರ ಇಮಾಮ್ ಹುಸೇನರನ್ನು ಸಂದಾನಕ್ಕಾಗಿ ಆಹ್ವಾನಿಸಿದ.
ಆದರೆ ಅವರು ಸಂದಾನ ನಿರಾಕರಿಸಿ ತನ್ನ 72 ಜನ ಅನುಯಾಯಿಗಳೊಂದಿಗೆ ರಾಜ್ಯ ಬಿಟ್ಟು ಮೆಕ್ಕಾ ಮದೀನದತ್ತ ತೆರಳಿದರು. ಅಲ್ಲಿಗೆ ಬಂದು ಯಜೀದ್ ತನ್ನ ಕೊಂದರೆ ಪವಿತ್ರ ಸ್ಥಳ ಮೆಕ್ಕಾದಲ್ಲಿ ರಕ್ತ ಹರಿಯುತ್ತದೆ ಎಂದು ಭಾವಿಸಿದ ಇಮಾಮ್ ಹುಸೇನರು ಕರಬಲಾದತ್ತ ತಮ್ಮ ಅನುಯಾಯಿಗಳೊಂದಿಗೆ ಪಯಣಿಸುತ್ತಾರೆ.ಆ ವೇಳೆ ಅವರಿಗೆ ಎದುರಾದ ಯಜೀದ್ ಅವರನ್ನೆಲ್ಲಾ ಸೆರೆ ಹಿಡಿದು ತಾನು ಹೇಳಿದಂತೆ ಕೇಳಲು ಒತ್ತಾಯಿಸಿ ಕುಡಿಯಲು ನೀರು ಸಹ ಕೊಡುವುದಿಲ್ಲ.ಇದೇ ವೇಳೆಗೆ ಇಮಾಮ್ ಹುಸೇನರ ಕಿರಿಯ ಮಗ ಸಾವನ್ನಪ್ಪುತ್ತಾನೆ.ಆದರೂ ಹುಸೇನರು ತಮ್ಮ ಹೋರಾಟ ಮುಂದುವರೆಸಿದ್ದರಿಂದ ಕುಪಿತಗೊಂಡ ಯಜೀದ್ ಒಮ್ಮೆ ಡೇರಾದ ಬಳಿ ಮೊಹರಂ ತಿಂಗಳ ಹತ್ತನೇ ದಿನದಂದು ನಮಾಜ್ ಮಾಡುತಿದ್ದ ಇಮಾಮ್ ಹುಸೇನರ ಶಿರಚ್ಛೇದ ಮಾಡುತ್ತಾನೆ.ಇದೇ ಮೊಹರಂ ಕಡೆಯ ದಿನದ ಶೋಕಾಚರಣೆ.ಜೀವನದ ಕೊನೆಯ ಉಸಿರಿನವರೆಗೂ ಧರ್ಮದ ಉಳಿವಿಗಾಗಿ ಹೋರಾಡಿದ ಧರ್ಮಗುರು ಇಮಾಮ್ ಹುಸೇನ್.
ಮೊಹರಂ ಮೂಲತಃ ಹಬ್ಬವಲ್ಲ ಇದೊಂದು ಶೋಕಾಚರಣೆ. ಕಾಲಚಕ್ರ ಉರುಳಿದಂತೆ ಉತ್ಸವವಾಗಿ ಬದಲಾಗಿದೆ.ಇಮಾಮ್ ಹುಸೇನ್ ದುರಂತ ಸಾವಿನ ಸಂತಾಪ ಸೂಚಿಸಲು ಈ ಹಬ್ಬದಲ್ಲಿ ಹಸ್ತ ಸಂಕೇತಗಳನ್ನು ಬಳಸಲಾಗುತ್ತದೆ.ಹಿಂದೂ ಮುಸ್ಲೀಂಮರು ಒಂದಾಗಿ ಭಾವೈಕ್ಯತೆಯಿಂದ ಮೊಹರಂ ಆಚರಿಸುತ್ತಾರೆ.ಬೆನಕನ ಅಮಾವಾಸೆಯ ಮೂರನೇ ದಿನ ಅಶರತ್ ಖಾನಾ ಮುಂದೆ ಆವಾಲ ತೋಡಿ ದೇವರು ಕೂರಿಸುತ್ತಾರೆ.ಅಲಾಯಿ ಕುಣಿತ,ಮೊಹರಂ ಪದ ಹಾಡುವುದು,ದೇವರು ಹಿಡಿದು ಬೆಂಕಿಯಲ್ಲಿ ನಡೆಯುವುದು ಪ್ರಮುಖ ಆಕರ್ಷಣೆಗಳು.
ಮೊಹರಂ ಮಾಸದ ಒಂಬತ್ತನೇ ದಿನ ಖತಲ್ ರಾತ್(ಕತ್ತಲರಾತ್ರಿ) ಆಚರಿಸುತ್ತಾರೆ.ಆ ದಿನ ಆವಾಲದಲ್ಲಿ ಬನ್ನಿ ಮರದ ಕಟ್ಟಿಗೆ ಹಾಕಿ ಬೆಂಕಿ ಹೊತ್ತಿಸಿ ಹರಕೆ ಹೊತ್ತವರು ಉಪ್ಪು ಎರಚಿ ಹರಕೆ ತೀರಿಸುವರು. ಹಿಂದೂಗಳು ಸಹ ಫಕೀರರಾಗುತ್ತಾರೆ.ಈ ದಿನ ಬೆಲ್ಲದ ಪಾನಕ,ಎಳ್ಳು ಹಚ್ಚಿದ ಸೆಜ್ಜೆ ರೊಟ್ಟಿ,ಬದನೆಕಾಯಿ ಸಾರು ಮಾಡುತ್ತಾರೆ.ಹತ್ತನೇ ದಿನ ಚೋಂಗಾ(ಚಾವಂಗಿ) ವಿಶೇಷ ಸಿಹಿ ಭೋಜನ.
ಈ ಆಚರಣೆಯ ಸಂದರ್ಭದಲ್ಲಿ ಅಚ್ಚಳ್ಳಿ ಬಿಚ್ಚಳ್ಳಿ, ಸವ್ವಾಸೇರ್ ಸಿದ್ದು,ಹುಲಿಯ ವೇಷಧಾರಿಗಳು ಜನರನ್ನು ರಂಜಿಸುತ್ತಾರೆ.ಮುಸ್ಲೀಂಮರು ಇಲ್ಲದೇ ಇರುವ ಹಲವಾರು ಗ್ರಾಮಗಳಲ್ಲೂ ಹಿಂದೂಗಳೇ ಶ್ರದ್ಧೆ ಭಕ್ತಿಯಿಂದ ಪಂಜಾ(ದೇವರು) ಕೂರಿಸಿ ನೀರಿಗೆ ಹಾಕುವ ಪದ್ದತಿ ಆಚರಣೆಯಲ್ಲಿದೆ.ಒಟ್ಟಾರೆ ಇದೊಂದು ವಿಶಿಷ್ಟ ಆಚರಣೆಯಾಗಿದ್ದು ಹಿಂದೂ ಮುಸ್ಲಿಂಮರನ್ನು ಒಟ್ಟುಗೂಡಿಸುವ ಉತ್ಸವವಾಗಿದೆ.ಆದರೆ ಹಿಂದೂಗಳಲ್ಲಾಗಲಿ ಮುಸ್ಲೀಂಮರಲ್ಲಾಗಲಿ ಎಲ್ಲರೂ ಮೊಹರಂ ಆಚರಿಸೋಲ್ಲ.ಇಸ್ಲಾಂನಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲದ ಕಾರಣ ಮೇಲ್ಪಂಗಡದವರು(ಹನ್ಫಿ ಹೊರತು ಪಡಿಸಿ) ಮೊಹರಂ ಆಚರಣೆ ಹರಾಮ್ ಎಂದು ದೂರ ಉಳಿಯುತ್ತಾರೆ.ಕೆಳ ಪಂಗಡದವರು(ಪಿಂಜಾರ,ನದಾಫ್)ಮಾತ್ರ ಆಚರಿಸುತ್ತಾರೆ. ಆದರೂ ಬಹಳಷ್ಟು ಕಡೆ ಮೊಹರಂ ಧಾರ್ಮಿಕ ಸೌಹಾರ್ದತೆಯ ಸೇತುವೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243