ದಿನದ ಸುದ್ದಿ
ಹಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಆರಂಭ; ಕೃಷಿ ಚಟುವಟಿಕೆ ಆರಂಭ
ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಮುಂದಿನ ಒಂದು ವಾರ ಮುಂಗಾರು ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಕೊಡಗು, ಮೈಸೂರು, ಹಾಸನ, ಮಂಡ್ಯ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಈ ಜಿಲ್ಲೆಗಳ ಜತೆಗೆ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಪ್ರತಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಸಮೇತ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆ ತೀವ್ರತೆ ಹೆಚ್ಚಾಗಲಿದ್ದು, ಇದೇ 20ರ ವರೆಗೆ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿವೇಳೆ ಹಗುರದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ನಿನ್ನೆ ರಾತ್ರಿ ಶಿವಮೊಗ್ಗ, ದಾವಣಗೆರೆ, ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಕೊಪ್ಪಳ, ಹಾವೇರಿ ಜಿಲ್ಲೆಯಲ್ಲಿಯೂ ಗುಡುಗು ಸಹಿತ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸಿಡಿಲು ಬಡಿದು, ಓರ್ವ ಯುವಕ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗ, ದಾವಣಗೆರೆ, ಹಾಸನ, ಕೊಡಗು ಜಿಲ್ಲೆಗಳಲ್ಲಿ ವರ್ಷಧಾರೆ ಉತ್ತಮವಾಗಿದ್ದು, ರೈತರಲ್ಲಿ ಸಂತಸ ಉಂಟುಮಾಡಿದೆ. ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕು ಗೊಂಡಿರುವ ಬಗ್ಗೆ ನಮ್ಮ ಪ್ರತಿನಿಧಿಗಳು ವರದಿ ಮಾಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಪರಿಹಾರವನ್ನು ಸರ್ಕಾರ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್‌ಗಳಿಗೆ ಭೇಟಿ ನೀಡಿ, ಹಣ ಪಾವತಿಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ತಿಳಿಸಿದ್ದಾರೆ.
ಇದರ ಜತೆಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ರೈತರ ಖಾತೆಗಳಿಗೆ ತಲಾ ಎರಡು ಸಾವಿರ ರೂಪಾಯಿ ವರೆಗೆ ರಾಜ್ಯ ಸರ್ಕಾರದ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಹಾವೇರಿ ಜಿಲ್ಲಿಯಲ್ಲಿ ಒಂದು ಲಕ್ಷ 98 ಸಾವಿರದ 455 ರೈತರಿಗೆ 9 ಹಂತದಲ್ಲಿ 37 ಕೋಟಿ 73 ಲಕ್ಷ ರೂಪಾಯಿ ಪರಿಹಾರದ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಗದಗ ಜಿಲ್ಲೆಯಲ್ಲಿ ಕಳೆದ ಸಾಲಿನ ಹಂಗಾಮಿನಲ್ಲಿ ಬೆಳೆಹಾನಿಗೆ ಒಂದು ಲಕ್ಷದ 13 ಸಾವಿರದ 328 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ತಿಳಿಸಿದ್ದಾರೆ.
ರೈತರು ತಮ್ಮ ಖಾತೆಗೆ ಹಣ ಜಮೆಯಾಗಿರುವ ಬಗ್ಗೆ ಸಹಾಯವಾಣಿಯ ಮೂಲಕ ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243