ಲೋಕಾರೂಢಿ

ಮುಸ್ಲಿಮರೇ ನೀವು ಬದಲಾಗಲೇಬೇಕು ; ಭಾರತವೇ ನಿಮ್ಮ ಮೊದಲ ಧರ್ಮವಾಗಬೇಕು..!

Published

on

ಮುಸ್ಲಿಮರೇ ನೀವು ಬದಲಾಗಲೇಬೇಕು ;
ಭಾರತವೇ ನಿಮ್ಮ ಮೊದಲ ಧರ್ಮವಾಗಬೇಕು..!

ಇಲ್ಲದಿದ್ದರೆ…!?

ನಿಮ್ಮನ್ನು ಅನುಮಾನಿಸುವ , ಅಪಮಾನಿಸುವ ಮನಸ್ಸುಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ, ಎಚ್ಚರವಿರಲಿ. ನಿಮ್ಮ ಧರ್ಮ, ಅದರ ರೀತಿ-ರಿವಾಜುಗಳೆಲ್ಲವೂ ನಿಮ್ಮ-ನಿಮ್ಮ ಮನೆ-ಮಸೀದಿಗಳ ನಾಲ್ಕು ಗೋಡೆಗಳಿಗೆ ಮಾತ್ರವೇ ಸೀಮಿತವಾಗಲಿ. ಹೊರಗೆ ಬಂದೊಡನೆಯೇ ನೀವು ಅಪ್ಪಟ ಭಾರತೀಯರೇ ಆಗುವ ವಾತಾವರಣ ಇನ್ನಷ್ಟು ಹೆಚ್ಚಲಿ.

ನಿಮ್ಮ ದೇಶ ಪ್ರೇಮವನ್ನೇ ಸಂಶಯದ ತಕ್ಕಡಿಯಲ್ಲಿಟ್ಟು ವ್ಯಾಪಾರಕ್ಕೆ ಬಂದ ಜನ, ಈಗ ಅಧಿಕಾರವನ್ನೇ ನಡೆಸುತ್ತಿದ್ದಾರೆ, ಜೋಪಾನ..!

ಎಲ್ಲ ಅಲ್ಲವಾದರೂ ,ಕೆಲವರಲ್ಲಾದರೂ ದೇಶ ಪ್ರೇಮದ ಕೊರತೆ ಇರುವುದಂತೂ ಸತ್ಯಸ್ಯ ಸತ್ಯ ಪಾಕಿಸ್ತಾನವೂ ಒಂದು ರಾಷ್ಟ್ರ. ಅದು ತನ್ನದೇ ಆದ ಧರ್ಮವನ್ನಾಶ್ರಯಿಸಿ, ತಾನಾಗಿಯೇ ಪ್ರತ್ಯೇಕಗೊಂಡ ದೇಶ.

ಭಾರತೀಯ ಮುಸ್ಲಿಮರು ಮತ್ತು ಪಾಕಿಸ್ತಾನದ ಮುಸ್ಲಿಮರು ಪ್ರಾರ್ಥಿಸುವುದು ಏಕ ದೇವನನ್ನೇ ಆದರೂ, ದೇಶ ನಿಷ್ಠೆ ಎಂಬ ಪ್ರಶ್ನೆ ಬಂದಾಗ, ಇಲ್ಲಿನವರು ‘ ಭಾರತೀಯರೇ’ ಆಗಬೇಕು.

ಪಾಕ್ ಕ್ರಿಕೆಟಿಗರು ಗೆದ್ದಾಗ ಪಟಾಕಿ ಸಿಡಿಸಿಸಂಭ್ರಮಿಸುವ ಕೆಲವೇ ಕೆಲವು ಕೊಳಕು ಮನಸ್ಸುಗಳಿಂದಾಗಿಯೇ ಇಂದು ಸಮಸ್ತ ಮುಸಲ್ಮಾನರನ್ನು ಅನುಮಾನದಿಂದ ನೋಡುವ, ಅವರನ್ನು ಈ ನೆಲದಿಂದಲೇ ಓಡಿಸಬೇಕೆಂದು ಬಯಸುವ ಕೆಟ್ಟ – ದುಷ್ಟ ಮನಸ್ಸುಗಳು ‘ಧರ್ಮದ ವಿಷಬೀಜ ಬಿತ್ತಿ , ಅಧಿಕಾರದ ಗದ್ದುಗೆಯನ್ನೇರುವ ಸ್ವಾರ್ಥದ ಬೆಳೆ ಬೆಳೆಯುವ’ ಹುನ್ನಾರದಲ್ಲಿವೆ.

ಪೌರತ್ವ ಕಾಯಿದೆಯನ್ನು ವಿರೋಧಿಸುವ ಕೆಲಸಕ್ಕೆ ಕೈ ಹಚ್ಚುವ ಪ್ರತಿಯೊಬ್ಬ ಅನ್ಯ ಧರ್ಮೀಯರನ್ನೂ ಸಹ ಈಗ ಅನುಮಾನದಿಂದಲೇ ನೋಡಲಾಗುತ್ತಿದೆ. ಅವರೆಡೆಗೆ ನೂರೆಂಟು ಕುಹಕದ ಪ್ರಶ್ನೆಗಳನ್ನು ತೂರಲಾಗುತ್ತಿದೆ.

ಇಲ್ಲಿ ಯಾರೊಬ್ಬರೆಡೆಗೆ ಪ್ರೀತಿಯೂ ಇಲ್ಲ; ಮತ್ತೆ ಕೆಲವರೆಡೆಗೆ ದ್ವೇಷವೂ ಇಲ್ಲ. ನನ್ನ ನೆಲದ ಪರಮ ಪವಿತ್ರ ಧರ್ಮ ಗ್ರಂಥವಾದ ಸಂವಿಧಾನದ ಮೂಲ ತತ್ವಗಳಿಗೆ ಘಾಸಿಯಾಗಬಾರದು, ಸ್ನೇಹ , ಪ್ರೀತಿ, ವಿಶ್ವಾಸ, ಭ್ರಾತೃತ್ವದ, ಸಮಾನತೆಯ
ದ್ಯೋತಕವಾಗಿರುವ ಸಂವಿಧಾನಕ್ಕೆ ಅಪಚಾರವಾಗಕೂಡದು ಎಂಬ ಸದಾಶಯ ಮಾತ್ರವೇ ಮಲಗಿದ್ದ ಭಾರತವನ್ನು ಬಡಿದೆಬ್ಬಿಸಿದೆ.

ಈ ಸತ್ಯವನ್ನು ಮುಸ್ಲಿಮರು ಅರ್ಥ ಮಾಡಿಕೊಂಡು , ಭಾರತೀಯತೆಯೇ ನಮ್ಮ ನೆಲ, ನೆಲೆ, ಮೂಲಸೆಲೆ ಎಂಬುದನ್ನು ಸಾಬೀತು ಮಾಡದಿದ್ದರೆ ಮುಂದಿನ ತಲೆಮಾರುಗಳು ನಿಮ್ಮನ್ನು ಕ್ಷಮಿಸುವುದಿಲ್ಲ.ನನ್ನ ಮಾತುಗಳಿಂದ ಯಾರಿಗಾದರೂ ಘಾಸಿಯಾಗಿದ್ದರೆ, ನಾನಾ ಜವಾಬುದಾರನಲ್ಲ.

ಕೊನೆಯ ಮಾತು – ನಮ್ಮೆಲ್ಲರಲ್ಲೂ ಹೋರಾಟದ ಕೆಚ್ಚು ಹೆಚ್ಚಲಿ. ಕಿಚ್ಚು ಹಚ್ಚುವ ದುಷ್ಟತನ ಹತ್ತಿರಕ್ಕೂ ಸುಳಿಯದಿರಲಿ.  ಅದೇನೇ ಆಗಲಿ, ಏನೇ ಬರಲಿ; ಗಾಂಧೀ ಮಾರ್ಗ ಮಾತ್ರವೇ ನಮ್ಮದಾಗಲಿ, ಮೂಲ ಮಂತ್ರವಾಗಲಿ.

  • ಟಿ. ಗುರುರಾಜ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version