ದಿನದ ಸುದ್ದಿ
ಚಿತ್ರದುರ್ಗ | “ಮದಕರಿ ನಾಯಕ ರಥಯಾತ್ರೆ”ಗೆ ಅನುಮತಿಕೊಡದಂತೆ ಒತ್ತಾಯಿಸಿ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಡಿಸಿ ಗೆ ಮನವಿ
ಸುದ್ದಿದಿನ, ಚಿತ್ರದುರ್ಗ : ಮ್ಯಾಸ ನಾಯಕರ ಐತಿಹಾಸಿಕ ಸಾಂಸೃತಿಕ ಪುರುಷರನ್ನು ಬಿಜೆಪಿ(ಎಸ್‌ಟಿ) ಮೋರ್ಚದ ಸಂಘಟನೆಯು ಒಂದು ಪಕ್ಷ, ಒಂದು ಧರ್ಮಕ್ಕೆ ಸೀಮಿತಗೊಳಿಸಿ ದುರುಪಯೋಗಪಡಿಸಿಕೊಳ್ಳಲು ಉದ್ದೇಶಿಸಿರುವ ಕಾರಣ “ಮದಕರಿ ನಾಯಕ ರಥಯಾತ್ರೆ”ಗೆ ಅನುಮತಿಕೊಡದಂತೆ ಒತ್ತಾಯಿಸಿ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ಮೂಲಕ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಮಿತಿಯು ಮ್ಯಾಸ ಬೇಡ-ಮ್ಯಾಸ ನಾಯಕ ಬುಡಕಟ್ಟು ಜನರ ಸಂಸ್ಕ್ಥತಿ, ಇತಿಹಾಸ, ಹಕ್ಕುಗಳ ರಕ್ಷಣೆ ಮತ್ತು ಮ್ಯಾಸ ಬೇಡರ ಜೀವನೊದ್ದಾರಕ್ಕಾಗಿ ಶ್ರಮಿಸುತ್ತಿದೆ. ಆದರೆ ಬಿಜೆಪಿ (ಎಸ್‌ಟಿ) ಮೋರ್ಚದವರು ನಮ್ಮ ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ನಾಯಕರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ 2011ರಲ್ಲಿ ನಾಯಕ ಸಮಾನಾರ್ಥಕ ಮ್ಯಾಸ ನಾಯಕ ಪದವನ್ನು ಕೇಂದ್ರದ ಹಿಂದುಳಿದ ಜಾತಿ(OBC)ಪಟ್ಟಿಗೆ ಸೇರ್ಪಡೆ ಮಾಡಿರುತ್ತಾರೆ. ಹಿಂದುಳಿದ ಜಾತಿಪಟ್ಟಿಯಲ್ಲಿರುವ ತಳವಾರ ಪರಿವಾರ ಜಾತಿಗಳನ್ನು ನಾಯಕ ಸಮಾನಾರ್ಥಕ ಪದಗಳಾಗಿ 2020ರಲ್ಲಿ ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಿ ನಿಜವಾದ ಬುಡಕಟ್ಟು ಜನಾಂಗಕ್ಕೆ ದ್ರೋಹ ಮಾಡಿರುತ್ತಾರೆ.
ಮಾರ್ಚ್ 2022ರಿಂದ ಪರಿಶಿಷ್ಟ ಪಂಗಡದಲ್ಲಿ ನಾಯಕ ಬದಲಾಗಿ ನಾಯಕ(ತಳವಾರ) ನಾಯಕ(ಪರಿವಾರ ಮತ್ತು ತಳವಾರ) ಎಂದು ಎಸ್‌ಟಿ ಪ್ರಮಾಣ ಪತ್ರವನ್ನು ನೀಡುವಂತೆ ಮಾಡಿ ನಾಯಕ ಪಂಗಡದವರಿಗೆ ಕಾನೂನಿನ ಹಾನಿಯುಂಟು ಮಾಡಿರುತ್ತಾರೆ. ಮದಕರಿ ನಾಯಕ ಜನಿಸಿದ ಮ್ಯಾಸ ನಾಯಕ ಜನಾಂಗಕ್ಕೆ ಇಷ್ಟೇಲ್ಲ ಅನ್ಯಾಯವನ್ನು ಮಾಡಿದ ಬಿಜೆಪಿಯವರಿಗೆ ಮದಕರಿ ನಾಯಕರ ಹೆಸರನ್ನು ಬಳಸಿಕೊಳ್ಳಲು ಯಾವುದೇ ನೈತಿಕ ಹಕ್ಕು ಇಲ್ಲ.
ರಾಜವೀರ ಮದಕರಿ ನಾಯಕರನ್ನು ತಳವಾರ(ಊರುನಾಯಕ) ಜಾತಿಯವರು ಕಬಳಿಸಲು ಸಂಚೂರೂಪಿಸಿರುತ್ತಾರೆ. ಬಿಜೆಪಿ (ಎಸ್.ಟಿ) ಮೋರ್ಚದ ರಾಜ್ಯಾಧ್ಯಕ್ಷ ಮ್ಯಾಸ ನಾಯಕ ಬುಡಕಟ್ಟು ಜನಾಂಗಕ್ಕೆ ಸೇರಿರುವುದಿಲ್ಲ. ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಸಾಂಸ್ಕೃತಿಕ ನಾಯಕರಾದ ರಾಜವೀರ ಮೆದಕೇರಿ ನಾಯಕರನ್ನು ಯಾವುದೇ ಒಂದು ಪಕ್ಷ, ಒಂದು ಧರ್ಮಕ್ಕೆ ಸೀಮಿತಿಗೊಳಿಸುವುದನ್ನು ವಿರೋಧಿಸಿಸುತ್ತೇವೆ ಎಂದರು.
ರಾಜವೀರ ಮದಕರಿ ನಾಯಕರು ಯಾವುದೇ ಒಂದು ಪಕ್ಷದ ಆಸ್ತಿಯಾಗಿರುವುದಿಲ್ಲ. ಮ್ಯಾಸ ನಾಯಕ ಬುಡಕಟ್ಟು ಜನಾಂಗದ ಐತಿಹಾಸಿಕ ಸಾಂಸೃತಿಕ ಪುರುಷರನ್ನು ಒಂದು ಪಕ್ಷ, ಒಂದು ಧರ್ಮಕ್ಕೆ ಸೀಮಿತಗೊಳಿಸಿ ದುರುಪಯೋಗ ಪಡಿಸಿಕೊಳ್ಳುವ ಕ್ರಮವನ್ನು ವಿರೋಧಿಸಲಿದ್ದೇವೆ ಎಂದು ಕಿಡಿಕಾರಿದರು.
ಬಿಜೆಪಿ (ಎಸ್.ಟಿ) ಮೋರ್ಚದವರು ಚುನಾವಣೆ ಉದ್ದೇಶಕ್ಕಾಗಿ 15 ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಿಗೆ ಮಾತ್ರ ಸೀಮಿತಗೋಳಿಸಿ ಮ್ಯಾಸ ನಾಯಕರ ಐತಿಹಾಸಿಕ ಸಾಂಸೃತಿಕ ಪುರಷರಾದ ಚಿತ್ರದುರ್ಗ ಪಾಳೆಯಗಾರ ಶ್ರೀ ರಾಜವೀರ ಮದಕರಿ ನಾಯಕರ ರಥಯಾತ್ರೆಯನ್ನು ಹಮ್ಮಿಕೊಂಡಿರುತ್ತಾರೆ. ಬಿಜೆಪಿಯವರಿಗೆ ಚಿತ್ರದುರ್ಗ ಪಾಳೆಯಗಾರರಾದ ರಾಜವೀರ ಮದಕರಿ ನಾಯಕರ ಬಗ್ಗೆ ಅಷ್ಟೋಂದು ಅಭಿಮಾನವಿದ್ದರೆ ಮೊದಲು ಮ್ಯಾಸ ನಾಯಕ ಜನಾಂಗಕ್ಕೆ ಮಾಡಿರುವ ಮೋಸ ಮತ್ತು ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇರುವುದರಿಂದ “ರಾಜವೀರ ಮದಕರಿ ನಾಯಕ ರಾಥಯಾತ್ರೆ”ಯನ್ನು 15 ಎಸ್.ಟಿ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಇಡೀ ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಿ. ಆದರೆ ದುರುದ್ದೇಶ ಇಟ್ಟುಕೊಂಡು 15 ಎಸ್.ಟಿ. ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಿ ಮಾಡುವ ಈ ರಥಯಾತ್ರೆಯಿಂದ Tribal ಮತ್ತು Non Tribal(ಪಂಗಡ ಮತ್ತು ಜಾತಿ)ಗಳ ನಡುವೆ ಮತ್ತು ಧರ್ಮ ಧರ್ಮಗಳ ಮಧ್ಯ ಕೋಮುಗಲಭೆ ಸೃಷ್ಟಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕೆ.ಬಿ.ಓಬಣ್ಣ, ದೊಡ್ಡಮನಿ ಪ್ರಸಾದ್, ಡಾ.ಕೆ.ಎ.ಓಬಳೇಶ, ಡಾ.ಗೆರೆಗಲ್ ಪಾಪಯ್ಯ ಇನ್ನಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243