ದಿನದ ಸುದ್ದಿ
ಪ್ರಗತಿಪರ ಚಿಂತಕ, ದೂರದೃಷ್ಠಿ ಆಡಳಿತಗಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆ
ಸುದ್ದಿದಿನ ಡೆಸ್ಕ್ : ಪ್ರಗತಿಪರ ಚಿಂತಕ ಮತ್ತು ದೂರದೃಷ್ಟಿ ಆಡಳಿತಗಾರ ಮೈಸೂರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನವನ್ನು ಇಂದು ನಾಡಿನಾದ್ಯಂತ ಆಚರಿಸಲಾಯಿತು.
ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರೂ ಆದ ರಾಜರ್ಶಿ ನಾಲ್ವಡಿ ಕೃಷ್ಣರಾಜ ಒಡೆಯರ್ 138 ನೇ ಜಯಂತಿ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಕೋಡಿರಂಗಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒಡೆಯರ್ ನೀಡಿದ್ದ ಕೊಡುಗೆ ಅಪಾರ. 38 ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಕನ್ನಡ ನಾಡು-ನುಡಿ, ನೆಲ-ಜಲದ ಉಳಿವಿಗೆ ಅಪಾರವಾಗಿ ಶ್ರಮಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ತಾಯಿ ಭುವನೇಶ್ವರಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಸಾಹಿತ್ಯ ಪರಿಷತ್ತಿನ ಪರವಾಗಿ ಪುಷ್ಪನಮನ ಸಲ್ಲಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಯ ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ದೊಡ್ಡಬಳ್ಳಾಪುರ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆ ಕಾರ್‍ಯಕ್ರಮದಲ್ಲಿ ಮಾತನಾಡಿದ ತಹಸೀಲ್ದಾರ್ ಮೋಹನ ಕುಮಾರಿ, ದೇಶದಲ್ಲಿ ಮೈಸೂರು ಸಂಸ್ಥಾನ ಮಾದರಿ ಮೈಸೂರೆಂದು ಹೆಸರುವಾಸಿಯಾಗಲು ಹಾಗೂ ಕಲೆ, ಸಾಹಿತ್ಯ, ಸಂಸ್ಕೃತಿಯ ಶೀಮಂತ ಪರಂಪರೆಗೂ ನಾಲ್ವಡಿ ಒಡೆಯರ್ ಅವರ ಕೊಡುಗೆ ಅನನ್ಯ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243