ಲೋಕಾರೂಢಿ
ಮೋದಿ ಹತಾಶೆ ನಡುದಾರಿಯಲ್ಲೇ ಶಿಖರ ಮುಟ್ಟುತ್ತಿದೆ : ಯೆಚುರಿ
ಚುನಾವಣೆಯಲ್ಲಿ ತಮಗೆ ಸೋಲುಂಟಾಗಬಹುದು ಎಂಬ ಭೀತಿಯಿಂದ ನರೇಂದ್ರ ಮೋದಿ ಈಗ ಜನತೆಯ ಬೆಂಬಲ ಗಳಿಸುವ ಮಾರ್ಗವಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟದ ಮಾತಾಡುತ್ತ, ನಮ್ಮ ಸಶಸ್ತ್ರ ಪಡೆಗಳ ತ್ಯಾಗ-ಬಲಿದಾನಗಳನ್ನು ಬಳಸಿಕೊಳ್ಳುವ ಅತ್ಯಂತ ನೀತಿಗೆಟ್ಟ ಆಕ್ರಮಣಕಾರೀ ಪ್ರಚಾರಕ್ಕೆ ಇಳಿದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಮತ್ತು ಬಿಜೆಪಿ-ಆರೆಸ್ಸೆಸ್ ಕೂಟ ಚುನಾವಣಾ ಆಯೋಗ ಹಾಕಿಕೊಟ್ಟಿರುವ ಮಾದರಿ ಆಚಾರ ಸಂಹಿತೆಯನ್ನು ಯಾವುದೇ ನಾಚಿಕೆಯಿಲ್ಲದೆ ಉಲ್ಲಂಘಿಸುತ್ತಿದ್ದಾರೆ.
ಈ ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಡೆಸುತ್ತಿರುವ ಕರ್ಣಕರ್ಕಶ ಪ್ರಚಾರದಲ್ಲಿ ಒಂದು ಹತಾಶೆಯ ಭಾವ ಬಯಲಾಗುತ್ತಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಹೇಳಿದ್ದಾರೆ.
ನಿಜಸಂಗತಿಯೆಂದರೆ, ನರೆಂದ್ರ ಮೋದಿಯವರ ನೇತೃತ್ವದಲ್ಲಿ, ಬಿಜೆಪಿ-ಆರೆಸ್ಸೆಸ್‌ಗೆ ಜನಗಳ ಬದುಕಿನ ಮಟ್ಟದಲ್ಲಿ ಆಗಿರುವ ತೀವ್ರ ಕುಸಿತದ ಬಗ್ಗೆ ಸಾರ್ವಜನಿಕ ಆಕ್ರೋಶವನ್ನು ಎದುರಿಸಲಾಗುತ್ತಿಲ್ಲ. ಚುನಾವಣೆಯಲ್ಲಿ ತಮಗೆ ಸೋಲುಂಟಾಗಬಹುದು ಎಂಬ ಭೀತಿಯಿಂದ ನರೇಂದ್ರ ಮೋದಿ ಈಗ ಜನತೆಯ ಬೆಂಬಲ ಗಳಿಸುವ ಮಾರ್ಗವಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟದ ಮಾತಾಡುತ್ತ, ನಮ್ಮ ಸಶಸ್ತ್ರ ಪಡೆಗಳ ತ್ಯಾಗ-ಬಲಿದಾನಗಳನ್ನು ಬಳಸಿಕೊಳ್ಳುವ ಅತ್ಯಂತ ನೀತಿಗೆಟ್ಟ ಆಕ್ರಮಣಕಾರೀ ಪ್ರಚಾರಕ್ಕೆ ಇಳಿದಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಅವರು ಮತ್ತು ಬಿಜೆಪಿ-ಆರೆಸ್ಸೆಸ್ ಕೂಟ ಚುನಾವಣಾ ಆಯೋಗ ಹಾಕಿಕೊಟ್ಟಿರುವ ಮಾದರಿ ಆಚಾರ ಸಂಹಿತೆಯನ್ನು ಯಾವುದೇ ನಾಚಿಕೆಯಿಲ್ಲದೆ ಉಲ್ಲಂಘಿಸುತ್ತಿದ್ದಾರೆ ಎಂದು ಯೆಚುರಿ ಪಕ್ಷದ ಕೇಂದ್ರಪತ್ರಿಕೆ ಪೀಪಲ್ಸ್ ಡೆಮಾಕ್ರಸಿಯಲ್ಲಿ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ. ಚುನಾವಣಾ ಆಯೋಗ ತನ್ನದೇ ಮಾರ್ಗಸೂಚಿಗಳ ಇಂತಹ ಉಲ್ಲಂಘನೆಗಳಿಗೆ ಏಕೆ ಅವಕಾಶ ಮಾಡಿಕೊಡುತ್ತಿದೆ ಎಂದು ಕಾರಣಗಳನ್ನು ಹುಡುಕುವ ಅಗತ್ಯವೇನಾದರೂ ಇದೆಯೇ ಎಂದು ಈ ಬಗ್ಗೆ ಈಗಾಗಲೇ ನೇರವಾಗಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ (ಈ ಸಂಚಿಕೆಯ ಪುಟ ೨ ನೋಡಿ) ಯೆಚುರಿ ತಮ್ಮ ಲೇಖನದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.
ತಮ್ಮ ಲೇಖನದ ಕೊನೆಯಲ್ಲಿ ಯೆಚುರಿಯವರು ಮೋದಿ ಈಗ ನಡೆಸಿರುವ ನೀತಿಗೆಟ್ಟ ಪ್ರಚಾರದಲ್ಲಿ ಎತ್ತುತ್ತಿರುವ ಭಾವಾವೇಶದ ಪ್ರಶ್ನೆಗಳನ್ನು ಹೀಗೆ ಪರಿಶೀಲಿಸುತ್ತಾರೆ:
ಮೋದಿ ದಾವೆ: ಗಡಿಯಾಚೆಯ ಭಯೋತ್ಪಾದನೆಯನ್ನು ನಿರ್ಮೂಲ ಮಾಡಿದ್ದೇವೆ.
ವಾಸ್ತವತೆ: ಗಡಿಯಾಚೆಯಿಂದ ಭಯೋತ್ಪಾದನೆಯನ್ನು ಪ್ರಚೋದಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಸೋಲಿಸುವ ಸಾಮರ್ಥ್ಯವುಳ್ಳ ೫೬ ಅಂಗುಲ ಎದೆಯನ್ನು ಹೊಂದಿದ್ದೇನೆ ಎಂದು ಕೊಚ್ಚಿಕೊಳ್ಳುತ್ತ ಮೋದಿ ಪ್ರಧಾನ ಮಂತ್ರಿಯಾದದ್ದು. ಇಂದು ತಾನು ಭಯೋತ್ಪಾದಕರಲ್ಲಿ ಭೀತಿಯ ಭಾವವನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಭಾವೋನ್ಮತ್ತತೆಯಿಂದ ಪ್ರಚಾರ ಮಾಡುತ್ತಿದ್ದಾರೆ.
ಆದರೆ ನಿಜಸಂಗತಿಯಾದರೂ ಏನು?
2009-14 ಗೆ ಅವಧಿಗೆ ಹೋಲಿಸಿದರೆ, 2014-19ರಲ್ಲಿ ನರೇಂದ್ರ ಮೋದಿ ಅಡಿಯಲ್ಲಿ ಭಾರತದಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ 109ರಿಂದ 626ಕ್ಕೇರಿತು. ಮತ್ತು ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆಗಳು 563 ರಿಂದ 5596 ಕ್ಕೆ ಏರಿದವು. ಹುತಾತ್ಮರಾದ ನಮ್ಮ ಭದ್ರತಾಪಡೆಗಳ ಸಿಬ್ಬಂದಿಯ ಸಂಖ್ಯೆ 139 ರಿಂದ 483 ಕ್ಕೇರಿತು; ಭಯೋತ್ಪಾದಕ ದಾಳಿಗಳಿಂದ ಸಾವಿಗೀಡಾದ ನಾಗರಿಕರ ಸಂಖ್ಯೆ 12 ರಿಂದ 210 ಕ್ಕೆ ಏರಿತು.
ಮೋದಿ ಸರಕಾರದ ಜಮ್ಮು ಮತ್ತು ಕಾಶ್ಮೀರ ಧೋರಣೆಯಿಂದಾಗಿ ಉಗ್ರರ ಪಡೆಗಳಿಗೆ ಸೇರಿಕೊಳ್ಳುವ ಸ್ಥಳೀಯ ಯುವಜನರ ಸಂಖ್ಯೆ ಕೂಡ 2014 ರಲ್ಲಿ ಕೇವಲ 16 ಇದ್ದದ್ದು 2018ರಲ್ಲಿ 191 ಕ್ಕೇರಿತು.
ಉರಿಯಲ್ಲಿನ ಮಿಲಿಟರಿ ನೆಲೆಯ ಮೇಲೆ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸೇನೆ ಮಿಂಚಿನ ಪ್ರಹಾರ(ಸರ್ಜಿಕಲ್ ಸ್ಟ್ರೈಕ್) ನಡೆಸಿತು. ಮೋದಿ ಮತ್ತು ಬಿಜೆಪಿ ಸರಕಾರ ಗಡಿಯಾಚೆಯ ಭಯೋತ್ಪಾದಕತೆಗೆ ಅನುಕೂಲಮಾಡಿಕೊಡುವುದನ್ನು ಧ್ವಂಸ ಮಾಡಿರುವುದಾಗಿಯೂ, ಇನ್ನು ಮುಂದೆ ಗಡಿಯಾಚೆಯಿಂದ ಭಯೋತ್ಪಾದಕ ದಾಳಿ ನಡೆಯುವುದಿಲ್ಲ ಎಂದೂ ಹೇಳಿಕೊಂಡರು. ನಂತರ ಬಂತು ನಮ್ಮ 40 ಸಿಆರ್‌ಪಿಎಫ್ ಸೈನಿಕರನ್ನು ಬಲಿ ತೆಗೆದುಕೊಂಡ ಪುಲ್ವಾಮ ಭಯೋತ್ಪಾದಕ ದಾಳಿ.
ಅದಾದ ನಂತರ ಭಾರತೀಯ ವಾಯು ಪಡೆ ಪಾಕಿಸ್ತಾನದ ಒಳಗೆ ಬಾಲಕೋಟ್‌ನಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ಯಶಸ್ವಿಯಾಗಿ ಗುರಿಯಿಟ್ಟಾಗ, ಭಾರತ ಭವಿಷ್ಯದ ಎಲ್ಲ ಭಯೋತ್ಪಾದಕ ದಾಳಿಗಳನ್ನು ನಿರ್ಮೂಲವಲ್ಲದಿದ್ದರೂ ಅಸ್ತವ್ಯಸ್ತಗೊಳಿಸಿದೆ ಎಂದು ನಮಗೆ ಹೇಳಲಾಯಿತು. ಬಾಲಕೋಟ್ ನಂತರವೂ ಭಯೋತ್ಪಾದಕ ದಾಳಿಗಳು ಮುಂದುವರೆದಿವೆ, ಇನ್ನಷ್ಟು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜಮ್ಮು ಪ್ರದೇಶದ ಜನನಿಬಿಡ ಪ್ರದೇಶಗಳಲ್ಲಿ ಬಾಂಬುಗಳನ್ನಿಟ್ಟ ಭಯೋತ್ಪಾದಕ ದಾಳಿಗಳಿಂದಾಗಿ ನಾಗರಿಕರು ಗಾಯಗೊಂಡಿದ್ದಾರೆ.
ಇದು ಮೋದಿಯವರ 56 ಅಂಗುಲ ಎದೆಯ ವಾಸ್ತವತೆ!
ಮತ್ತೊಂದು ದಾವೆ: ಮೋದಿಯೆಂದರೆ ಪಾಕಿಸ್ತಾನಕ್ಕೆ ಭಯ.
ವಾಸ್ತವತೆ: ಎಲ್ಲ ಬಣ್ಣಗಳ ಮೂಲಭೂತವಾದಗಳು ಪರಸ್ಪರ ಪೋಷಿಸುತ್ತವೆ ಎಂಬುದು ಸಾಬೀತಾಗಿರುವ ಸಂಗತಿ. ಪಾಕಿಸ್ತಾನಕ್ಕೆ ಬಿಜೆಪಿ/ಆರೆಸ್ಸೆಸ್ ಮತ್ತು ಮೋದಿಯೆಂದರೆ ಭಯ ಎನ್ನುವುದು ಸಂಪೂರ್ಣವಾಗಿ ವಾಸ್ತವತೆಗೆ ವಿರುದ್ದವಾದ ದಾವೆ. ನಿಜ ಹೇಳಬೇಕೆಂದರೆ, ಮುಸ್ಲಿಂ ಮೂಲಭೂತವಾದ ಮತ್ತು ಹಿಂದೂ ಕೋಮುವಾದ ಪರಸ್ಪರ ಪೋಷಿಸಿಕೊಳ್ಳುತ್ತವೆ ಮತ್ತು ಪರಸ್ಪರರಿಂದ ಶಕ್ತಿ ಪಡೆಯುತ್ತವೆ.
ಈ ಹಿಂದೆ 1999ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರ ಲೋಕಸಭೆಯಲ್ಲಿ ಬಹುಮತ ಕಳಕೊಂಡ ನಂತರ ನಡೆದ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಲಷ್ಕರ್-ಎ-ತಯ್ಯಬ ದವರನ್ನು, ಭಾರತದ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾರು ಗೆಲ್ಲಬೇಕು ಎಂದು ಬಯಸುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಆ ಸಂಘಟನೆಯ ಮಾಹಿತಿ ಕಾರ್ಯದರ್ಶಿಯ ಉತ್ತರ ಹೀಗಿತ್ತು: ಬಿಜೆಪಿ ನಮಗೆ ಅನುಕೂಲಕರ. ಒಂದೇ ವರ್ಷದಲ್ಲಿ ಅವರು ನಮ್ಮನ್ನು ಒಂದು ಪರಮಾಣು ಮತ್ತು ಕ್ಷಿಪಣಿ ಶಕ್ತಿಯನ್ನಾಗಿ ಮಾಡಿದ್ದಾರೆ. ಬಿಜೆಪಿಯ ಹೇಳಿಕೆಗಳಿಂದಾಗಿ ಲಷ್ಕರ್-ಎ-ತಯ್ಯಬ ಉತ್ತಮ ಸ್ಪಂದನೆಯನ್ನು ಪಡೆಯುತ್ತಿದೆ. ಈಗ ಪರಿಸ್ಥಿತಿ ಹಿಂದೆ ಇದ್ದುಕ್ಕಿಂತಲೂ ಬಹಳ ಉತ್ತಮವಾಗಿದೆ. ಅವರು ಮತ್ತೆ ಅಧಿಕಾರಕ್ಕೆ ಬರಲಿ ಎಂದು ನಾವು ದೇವರನ್ನು ಪ್ರಾರ್ಥಿಸುತ್ತೇವೆ. ಆಗ ನಾವು ಇನ್ನೂ ಬಲಿಷ್ಟರಾಗಿ ಮೂಡಿ ಬರುತ್ತೇವೆ(ಹಿಂದುಸ್ತಾನ್ ಟೈಮ್ಸ್, ಜುಲೈ 19, 1999).
ಸ್ಪೈ ಕ್ರಾನಿಕಲ್ಸ್ ಎಂಬ ಇಬ್ಬರು ಮಾಜಿ ಗುಪ್ತಚರ ಮುಖ್ಯಸ್ಥರು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ನ ಮಾಜಿ ಮಹಾನಿರ್ದೇಶಕ ಲೆ |ಜ |(ನಿವೃತ್ತ) ಅಸದ್ ದುರ್ರಾನಿ ಮತ್ತು ಭಾರತದ ಗುಪ್ರಚರ ಸಮಸ್ಥೆ ಆರ್‌ಎಡಬ್ಲ್ಯು ನ ಮುಖ್ಯಸ್ಥ ಎ.ಎಸ್. ದುಲಾತ್ ಜಂಟಿಯಾಗಿ ಬರೆದಿರುವ ಪುಸ್ತಕ, ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಐಎಸ್‌ಐ ಆದ್ಯತೆಯ ಆಯ್ಕೆ ಎನ್ನುತ್ತದೆ. ಮೋದಿ ಪ್ರದಾನ ಮಂತ್ರಿಯಾಗಿ ಚುನಾಯಿತರಾದ್ದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆಯೆಂದರೆ ಅದು ಭಾರತಕ್ಕೆ ಒಳ್ಳೆಯದು ಎಂದು. ಮೋದಿ ಭಾರತವನ್ನು ನೋಡಿಕೊಳ್ಲಲಿ, ಅದರ ಪ್ರತಿಷ್ಠೆಯನ್ನು ಧ್ವಂಸ ಮಾಡಲಿ, ಮತ್ತು ಬಹುಶಃ ಅದರ ಆಂತರಿಕ ಸಮತೋಲನವನ್ನು ಕೂಡ. ಹೀಗೆ ಭಾರತದ ಚುನಾವಣೆಗಳಲ್ಲಿ ಗೆಲ್ಲಬೇಕಾದವರನ್ನು ಕುರಿತಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಆಯ್ಕೆ ಸ್ಪಷ್ಟ.
ಸುಮಾರಾಗಿ, ಇದನ್ನೇ ದೃಢಪಡಿಸುತ್ತ, ಇದೇ 2019ರ ಎಪ್ರಿಲ್ 10 ರಂದು, ನಮ್ಮಲ್ಲಿ ಮೊದಲ ಹಂತದ ಮತದಾನದ ಒಂದು ದಿನದ ಹಿಂದೆಯಷ್ಟೇ, ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ತಮ್ಮ ಅನುಮೋದನೆಯನ್ನು ಕೊಟ್ಟರು. ಹಲವಾರು ವಿದೇಶಿ ಮಾಧ್ಯಮಗಳ ಪತ್ರಕರ್ತರ ಮುಂದೆ ಮಾತಾಡುತ್ತ ಅವರು ಮೋದಿಯವರು ಗೆಲ್ಲುತ್ತಾರೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದರು, ಏಕೆಂದರೆ, ಅದರಿಂದ ಭಾರತ-ಪಾಕಿಸ್ತಾನ ಶಾಂತಿಗೆ ಒಂದು ಉತ್ತಮ ಅವಕಾಶ ಸಿಗುತ್ತದೆ ಎಂದರು.
ಮೋದಿಯವರೇ, ಭಾರತದಲ್ಲಿ ಯಾರು ಗೆಲ್ಲಬೇಕೆಂದು ಪಾಕಿಸ್ತಾನ ಬಯಸುತ್ತದೆ ಎಂಬುದಕ್ಕೆ ಇನ್ನೇನಾದರೂ ಹೇಳಬೇಕಾದ ಅಗತ್ಯ ಇದೆಯೇ? ಭಾರತದಲ್ಲಿ ಹಿಂದುತ್ವ ಕೋಮುವಾದ ಬಲಿಷ್ಟವಾದಷ್ಟು ಪಾಕಿಸ್ತಾನದಲ್ಲಿ ಮುಸ್ಲಿಂ ಮೂಲಭೂತವಾದ ಬಲಿಷ್ಟಗೊಳ್ಳುತ್ತದೆ. ನಿಜ ಹೇಳಬೇಕೆಂದರೆ ಇವರು ಹೇಳಿ ಮಾಡಿಸಿದ ಜೋಡಿ.
ಭಾರತೀಯ ಜನತೆ ಖಂಡಿತವಾಗಿಯೂ ಈ ಭಾವೋನ್ಮಾದ ಬಡಿದೆಬ್ಬಿಸುವ ಹಿಂದಿರುವ ತಂತ್ರವನ್ನು ಕಾಣುತ್ತಾರೆ, ಕಳೆದ ಐದು ವರ್ಷಗಳಲ್ಲಿ ತಮ್ಮ ದೈನಂದಿನ ಬದುಕಿನ ಅನುಭವಗಳ ಆಧಾರದಲ್ಲಿ ತಮ್ಮ ಮತವನ್ನು ಚಲಾಯಿಸುತ್ತಾರೆ ಎಂದು ತಮ್ಮ ಲೇಖನದ ಕೊನೆಯಲ್ಲಿ ಹೇಳುತ್ತ, ಯೆಚುರಿಯವರು, ಈ ಬಿಜೆಪಿ ಸರಕಾರದ ಸೋಲು ಸನ್ನಿಹಿತವಾಗಿದೆ, ಅದು ಚುನಾವಣೆಗಳ ನಂತರ, ಒಂದು ಪರ್ಯಾಯ ಜಾತ್ಯತೀತ ಸರಕಾರದ ರಚನೆಗೆ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.
(ಲೇಖನ ಕೃಪೆ : ಜನಶಕ್ತಿ ಮೀಡಿಯಾ)
ಸುದ್ದಿದಿನ.ಕಾಂ|ವಾಟ್ಸಾಪ್|9980346243