ರಾಜಕೀಯ

ಕುದುರೆ ವ್ಯಾಪಾರ : ಚೌಕೀದಾರ ಪಾಲುದಾರ..?

Published

on

 

ಪಶ್ಚಿಮ ಬಂಗಾಳದ 40 ಶಾಸಕರು ಬಿಜೆಪಿಯ ಕದ ತಟ್ಟುತ್ತಿದ್ದಾರೆಂದು ಪ್ರಧಾನಿ ಮೋದಿಯವರು ನಿನ್ನೆ ಆಡಿದ ಮಾತು ಎಲ್ಲ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲೂ ಬಂದಿದೆ (ನಮ್ಮ ನಾಡಿನ ನಂ.1 ಪತ್ರಿಕೆಯ ಮುಖಪುಟದಲ್ಲಿ ಇಲ್ಲ, ಅದಕ್ಕೇ ಈ ಪೋಸ್ಟ್ ಎಂದುಕೊಳ್ಳಿ ಬೇಕಿದ್ದರೆ). ಎಲ್ಲಕ್ಕಿಂತ ವಿಶಿಷ್ಟವಾಗಿ, ಎದ್ದು ಕಾಣುವಂತೆ ಅದನ್ನು ಪ್ರಕಟಿಸಿದ್ದು ಕೋಲ್ಕತಾದ “ಟೆಲಿಗ್ರಾಫ್” ಪತ್ರಿಕೆ.

”ದೀದಿ, ನಿಮ್ಮ ನೆಲ ಕುಸಿತಾ ಇದೆ. ನೋಡ್ತಾ ಇರಿ, ಮೇ 23ರ ನಂತರ ನಾಲ್ಕೂ ನಿಟ್ಟಿನಲ್ಲಿ ಕಮಲ ಅರಳಲಿದೆ … ನಿಮ್ಮ 40ವಿಧಾಯಕರು ನನ್ನ ಸಂಪರ್ಕದಲ್ಲಿದ್ದಾರೆ..” ಎಂದು ಪ್ರಧಾನಿ ಹೇಳಿದ್ದು ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

  1. ಆಪರೇಷನ್ ಕಮಲ’ ಅಥವಾ ಅಂತಹ ಕಾರ್ಯಾಚರಣೆ ಪ್ರಜಾಪ್ರಭುತ್ವದ ಮೂಲಬೇರಿಗೆ ಕೊಡಲಿ ಹಾಕುತ್ತದೆ. ಚುನಾಯಿತ ಸದಸ್ಯರನ್ನು ಬುಟ್ಟಿಗೆ ಹಾಕಿಕೊಂಡೇವೆಂದು ಹೇಳಿ ದೇಶದ ಪ್ರಧಾನಿ ಹೆದರಿಸುತ್ತಾರೆ ಅಂದರೆ ಅದು ನೈತಿಕ ಕುಸಿತವಲ್ಲವೇ? ಪ್ರಜಾಪ್ರಭುತ್ವದ ಶೀಲಭಂಗ ಆಗುವಾಗ ಚೌಕಿದಾರ್ ಏನು ಮಾಡುತ್ತಿದ್ದಾರೆ? ಅದಕ್ಕೆ ಪ್ರಚೋದನೆ ಕೊಡುತ್ತಿದ್ದಾರೆಯೇ ?
  2.  ಇಂಥ ಕುದುರೆ ವ್ಯಾಪಾರದಲ್ಲಿ ದೊಡ್ಡ ಮೊತ್ತದ ಹಣ ವಿನಿಮಯ ಆಗೇ ಆಗುತ್ತದೆ. ಅದು ಲೆಕ್ಕಕ್ಕೆ ಸಿಕ್ಕದ ಹಣ. “ತಿನ್ನುವುದಿಲ್ಲ , ತಿನ್ನಲು ಕೊಡುವುದಿಲ್ಲ” ಎಂಬ ಘೋಷಣೆ ಎಲ್ಲಿಗೆ ಹೋಯಿತು ಹಾಗಿದ್ದರೆ ?

ಅಂಥ “ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ” ಎಂದು ಘೋಷಿಸಬೇಕಿದ್ದ ಪ್ರಧಾನ ಚೌಕಿದಾರರು ಸ್ವತಃ ಕುದುರೆ ವ್ಯಾಪಾರಕ್ಕೆ ನಿಂತಂತೆ ಕಾಣುತ್ತದೆ. ಅವರೇನೋ ತಮ್ಮ ಕೆಲಸದಲ್ಲಿ busy ಅನ್ನೋಣ. ಬಾಕಿ ಚೌಕಿದಾರರು ಏನು ಮಾಡುತ್ತಿದ್ದಾರೆ? ತಮ್ಮ ನಾಯಕನ ನಾಗಾಲೋಟಕ್ಕೆ ಲಗಾಮು ಹಾಕಬೇಕಲ್ಲವೇ ?
—————————————-
Disclaimer: (1) ನಾನು ಯಾವ ರಾಜಕೀಯ ಪಕ್ಷಕ್ಕೂ ಪಂಥಕ್ಕೂ ಸೇರಿದವನಲ್ಲ. (2) ಸ್ವಂತ ಲಾಭಕ್ಕೋ ಪ್ರಶಸ್ತಿಗೋ ನನ್ನ ಅಭಿವ್ಯಕ್ತಿಯನ್ನು ಎಂದೂ ಬಳಸಿಕೊಂಡಿಲ್ಲ. (3) ‘ವಿಜ್ಞಾನ ಲೇಖಕ’ ಎಂದು ನಾನಾಗಿ ಹೇಳಿಕೊಂಡಿಲ್ಲ. ನಾನೊಬ್ಬ ಪತ್ರಕರ್ತನಾಗಿದ್ದು, ನನ್ನ ವೃತ್ತಿಧರ್ಮಕ್ಕೆ, ಸಂವಿಧಾನಕ್ಕೆ ಬದ್ಧನಾಗಿದ್ದೇನೆ ಮತ್ತು ನನಗೆ ಆಸಕ್ತಿ ಇರುವ ಎಲ್ಲ ವಿಷಯಗಳ ಬಗ್ಗೆ ಬರೆಯುತ್ತೇನೆ. ವೈಯಕ್ತಿಕ ದೋಷಾರೋಪಣೆ ಮಾಡುವ ಚೌಕೀದಾರರು ಇದನ್ನು ಗಮನಿಸಬೇಕು. ಮತ್ತು ಸಾಧ್ಯವಿದ್ದರೆ ಶಿಷ್ಟ ಭಾಷೆಯಲ್ಲಿ ಸಂವಾದಕ್ಕೆ ತೆರೆದುಕೊಳ್ಳಬೇಕು.

ನಾಗೇಶ್ ಹೆಗಡೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version