ರಾಜಕೀಯ

ಮೋದಿ ಜಪವೇ ಪರಿಹಾರ

Published

on

ಬಿಜೆಪಿ ಮತ್ತು ಮೋದಿಯ ಈ ಅನಿರೀಕ್ಷಿತ ಯಶಸ್ಸಿನ ಬಗ್ಗೆ ಬಹಳಷ್ಟು ಸಮಾನಮನಸ್ಕರು ಆಘಾತಗೊಂಡಿದ್ದಾರೆ. ಜನಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ವಿವಿಧ ರೈತ, ದಲಿತ ಪರ ಹೋರಾಟಗಾರರು ಆಗಬಾರದು ಏನೋ ಆಗಿಹೋಗಿದೆ ಎಂಬಂತೆ ವರ್ತಿಸುತ್ತಿದ್ದಾರೆ.

ಕೆಲವರಂತೂ ದೇಶದ ಶೋಷಿತರು, ಅಲ್ಪಸಂಖ್ಯಾತರು ಇನ್ನು ಭೀತಿಯಲ್ಲೆ ಬದುಕಬೇಕಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಹೀಗೆ ಮೊನ್ನೆ ದಶಕಗಳ ಕಾಲ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡ ಗೆಳೆಯರೊಬ್ಬರು ಸಿಕ್ಕಾಗ, ಏನು ಮಾಡೋಣ. ಕಟುಕರನ್ನೇ ಕುರಿ ನಂಬುವುದು. ಹಾಗಾಗಿ ಇನ್ನು ನಾವು, ರೈತರ ಬೆಳೆಗೆ ಬೆಲೆ ಕುಸಿತ, ಗೊಬ್ಬರ ಬೆಲೆ ಏರಿಕೆ, ಬರ, ಪ್ರವಾಹ, ಅಥವಾ ಬಿಎಸ್ ಎನ್ ಎಲ್ ರೀತಿ ಕಂಪನಿ ಮುಚ್ಚಿ ನೌಕರರು ಬೀದಿಗೆ ಬಿದ್ದರೆ, ಭೂ ಕಬಳಿಕೆ ಸುಳ್ಳು ಕೇಸು ಹಾಕಿ ಮುಳುಗಡೆ ಸಂತ್ರಸ್ತರ ಮನೆ ತೋಟಕ್ಕೆ ಜೆಸಿಬಿ ನುಗ್ಗಿಸಿ ನಾಶ ಮಾಡಿದರೆ, ದಲಿತರ ಮೇಲೆ ಅಥವಾ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತ, ಬಲಾಢ್ಯರಿಂದ ದಬ್ಬಾಳಿಕೆ, ಹಲ್ಲೆ ನಡೆದರೆ ಹೀಗೆ ಯಾವುದೇ ಸಮಸ್ಯೆ, ಅನ್ಯಾಯವಾದರೆ ಆಗ ಸಂತ್ರಸ್ತರ ಪರ ದನಿ ಎತ್ತುವ ಬದಲು, ಸರ್ಕಾರದ ಪರವೇ ನಿಲ್ಲುವುದು ಸರಿ ಅಲ್ಲವಾ? ಎಂದರು.

ಏಕೆಂದರೆ, ಇದೇ ಜನಗಳು ತಮ್ಮ ನಿತ್ಯದ ಬದುಕಿನ ಸಮಸ್ಯೆಗಳಿಗಿಂತ ಬಲಿಷ್ಠ ಭಾರತ ದೊಡ್ಡದು ಎಂದು ಮತ ಹಾಕಿದ್ದಾರೆ. ಹಾಗಾಗಿ ನಾಳೆ ಏನೇ ಬಂದರು ಜನ ಅದನ್ನೆಲ್ಲಾ ಬಲಿಷ್ಠ ಭಾರತಕ್ಕಾಗಿ, ದೇಶಕ್ಕಾಗಿ ಸಹಿಸಿಕೊಳ್ಳಲೇಬೇಕು. ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎಂಬುದನ್ನೇ ಜಪಿಸಬೇಕು. ಹಾಗಾಗಿ ಮುಂದಿನ ದಿನಗಳಲ್ಲಿ ಗೊಬ್ಬರ ದರ ಏರಿದರೆ, ಬಿಎಸ್ ಎನ್ ಎಲ್ ನೌಕರರು ಬೀದಿಪಾಲಾದರೆ ನಾವಂತೂ ಮೋದಿಗೆ ಜೈ, ದೇಶಕ್ಕಾಗಿ ಇದೆಲ್ಲಾ ಮಾಡಿದ್ದಾರೆ. ಹಾಗಾಗಿ ಬಲಿಷ್ಠ ಭಾರತಕ್ಕಾಗಿ ನಾವು ಇದನ್ನೆಲ್ಲಾ ಸಹಿಸಿಕೊಳ್ಳೋಣ, ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂದು ಪ್ಲಕಾರ್ಡ್ ಹಿಡಿದು ಕೂರಲು ನಿರ್ಧರಿಸಿದ್ದೇವೆ ಎಂದರು.

ಹೌದಲ್ಲವಾ? ಜನರಿಗೆ ತಮ್ಮ ಮುಂದಿರುವ ನೈಜ ಸಮಸ್ಯೆಗಳನ್ನು ಮನವರಿಕೆ ಮಾಡಲು ಈಗ ಉಳಿದಿರುವ ದಾರಿ ಅದೊಂದೇ ಎನಿಸಿತು..!

ಶಶಿ ಸಂಪಳ್ಳಿ

(ಬರಹ ಕೃಪೆ : ಶಶಿ ಸಂಪಳ್ಳಿ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version