ಬಹಿರಂಗ

ಬ್ರಹ್ಮಾಸ್ತ್ರ ಮತ್ತು ‘ಅಹಂ ಬ್ರಹ್ಮಾಸ್ಮಿ’

Published

on

ತೀರಾ ಅನಗತ್ಯವಾಗಿ ಪ್ರಧಾನಿ ಮೋದಿಯವರು ಪರಮಾಣು ಅಸ್ತ್ರವನ್ನು ಚುನಾವಣಾ ಭಾಷಣದಲ್ಲಿ ತಂದಿದ್ದಾರೆ. ‘ತನ್ನಲ್ಲಿ ಪರಮಾಣು ಅಸ್ತ್ರ ಇದೆ ಅಂತ ಪಾಕಿಸ್ತಾನ ಕೊಚ್ಚಿಕೊಳ್ಳುತ್ತಾ ಇದೆ, ನಮ್ಮಲ್ಲಿ ಇರುವುದೇನು ದೀಪಾವಳಿ ಪಟಾಕಿಯೇ?’ ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.

ಭಾರತದ ಹಿಂದಿನ ಯಾವ ಪ್ರಧಾನಿಯೂ ಹೀಗೆ ನ್ಯೂಕ್ಲಿಯರ್ ಬಾಂಬನ್ನು ವೋಟ್ ಕೇಳಲು ಝಳಪಿಸಿರಲಿಲ್ಲ. ನಾವು ‘ಮರುದಾಳಿಗೆ ಮಾತ್ರ ಅದನ್ನು ಬಳಸುತ್ತೇವೆ ವಿನಾ ಮೊದಲ ದಾಳಿಗೆ ಅಲ್ಲ’ ಎಂಬ ಭಾರತದ ಧೋರಣೆಯನ್ನು ವಾಜಪೇಯಿಯವರೂ ಗೌರವಿಸಿದ್ದರು. ಬಾಂಬ್ ಕುರಿತು ಭಾರತ ಯಾವತ್ತೂ ಮೌನವಾಗಿಯೇ ಇತ್ತು. ಈ ಧೋರಣೆಯಿಂದಾಗಿಯೇ ಭಾರತ ಅಂತರ ರಾಷ್ಟ್ರೀಯ ರಂಗದಲ್ಲಿ ಗೌರವ ಪಡೆದಿತ್ತು.

ನ್ಯೂಕ್ಲಿಯರ್ ಬಾಂಬ್ ಎಂಬುದು ರಾಷ್ಟ್ರದ ಹೆಮ್ಮೆಯ ಸಂಕೇತ ಅಲ್ಲವೇ ಅಲ್ಲ . ರಾಷ್ಟ್ರೀಯತೆಯ ಪರಿಕಲ್ಪನೆಯಲ್ಲಿ ಅದಕ್ಕೆ ಸ್ಥಾನವೇ ಇಲ್ಲ. ಪರಮಾಣು ಬಾಂಬ್ ಪ್ರಯೋಗಿಸುವುದು ರಾಷ್ಟ್ರ ವಿರೋಧಿ ಅಷ್ಟೇ ಅಲ್ಲ, ಜೀವ ವಿರೋಧಿಯೂ ಹೌದು, ವಿಶ್ವ ವಿರೋಧಿಯೂ ಹೌದು. (ಅದು ಹೇಗೆ ಎಂಬುದರ ಬಗ್ಗೆ ನಾನು ಉಡಿ ದಾಳಿಯ ಸಂದರ್ಭದಲ್ಲಿ ಬರೆದ ಲೇಖನ ಇಲ್ಲಿದೆ. http://bit.ly/2XImOXv

ಈಗೀಗಂತೂ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯೇ ದಿನ ದಿನಕ್ಕೆ ದುರ್ಬಲ ಆಗುತ್ತಿದೆ. ರಾಷ್ಟ್ರದ ಹವಾಮಾನ ನಮ್ಮ ಕೈಯಲ್ಲಿ ಇಲ್ಲ. e-ಜಗತ್ತು (ಗೂಗಲ್, ಅಮೆಜಾನ್, ಆಂಡ್ರಾಯ್ಡ್, ಅವಕ್ಕೆ ಸಂಬಂಧಿಸಿದ ಅಲ್ಗೊರಿಥಮ್) ನಮ್ಮ ಕೈಯಲ್ಲಿ ಇಲ್ಲ; ಶಸ್ತ್ರಾಸ್ತ್ರ, ಅಥವಾ ಸಂವಹನ ಸಂಬಂಧಿ ತಂತ್ರಜ್ಞಾನ ಯಾವುದೇ ಒಂದು ರಾಷ್ಟ್ರದ ಮುಷ್ಟಿಯಲ್ಲಿ ಇಲ್ಲ. ಸತತ ಐದು ದಿನ ವಿದೇಶಿ ಪೆಟ್ರೋಲಿಯಂ ಪೂರೈಕೆ ಸ್ಥಗಿತಗೊಂಡರೆ ನಮ್ಮ ದೇಶದಲ್ಲಿ ಸಿವಿಲ್ ವಾರ್ ಆರಂಭವಾಗುತ್ತದೆ. ನಮಗೆ ಗೊತ್ತೇ ಇಲ್ಲದಂತೆ ನಾವು ನಮ್ಮ ಅಸ್ಮಿತೆ (ಐಡೆಂಟಿಟಿ) ಯನ್ನ ಕಳೆದುಕೊಂಡಿದ್ದೇವೆ. ಅತಿ ರಾಷ್ಟ್ರೀಯತೆ ನಮಗೇ ಮುಂದೆ ಮುಳುವಾಗುತ್ತದೆ.

ನಮ್ಮ ಐಡೆಂಟಿಟಿ ಕುರಿತು ಸದ್ಗುರು ತುಂಬಾ ಸೊಗಸಾದ ಮಾತುಗಳನ್ನು ಹೇಳಿದ್ದಾರೆ: ಹಾರ್ವರ್ಡ್ ತಜ್ಞರ ಜೊತೆ ನಡೆಸಿದ ಅವರ ಮಾತಿನ ಸಾರಾಂಶ ಇಷ್ಟು: ಇಂದಿನ ದಿನಗಳಲ್ಲಿ ನಮ್ಮ ಅಸ್ಮಿತೆ ಕುಬ್ಜವಾಗುತ್ತ ಹೋಗುತ್ತಿದೆ. ಫುಟ್ ಬಾಲ್ ಕ್ಲಬ್ ಗಳೂ ಒಂದೊಂದು ದೇಶವಾಗುತ್ತಿವೆ. ತನ್ನ ಕ್ಲಬ್ ಗಾಗಿ ಪ್ರಾಣ ತೆರಲೂ ಸಿದ್ಧವಾಗುತ್ತಾರೆ. ಈ ಸ್ಥಿತಿ ಯಾಕೆ ಬಂದಿದೆ ಎಂದರೆ ನಾವು ನಮ್ಮ ಐಡೆಂಟಿಟಿ ಗೆ ಸರಿಯಾದ ಸಂಸ್ಕಾರ ನೀಡುತ್ತಿಲ್ಲ. ಹಿಂದೆ ಭಾರತದಲ್ಲಿ ಅಕ್ಷರಾಭ್ಯಾಸ ಆರಂಭಿಸುವ ಮುನ್ನ ಮಗುವಿಗೆ ‘ಅಹಂ ಬ್ರಹ್ಮಾಸ್ಮಿ’ (ನಾನು ವಿಶ್ವಮಾನವ) ಎಂಬ ಐಡೆಂಟಿಟಿ ಯನ್ನು ಕೊಡುತ್ತಿದ್ದರು.

ಏಕೆಂದರೆ ಶಿಕ್ಷಣ ಎಂಬುದು ನಮ್ಮ ನಮ್ಮ ಸಬಲೀಕರಣ ಕ್ರಿಯೆ. ನಾವು ನಮ್ಮ ಐಡೆಂಟಿಟಿ ಯನ್ನು ಸಂಕುಚಿತಗೊಳಿಸಲೇ ಬಾರದು. ಸಂಕುಚಿತ ಮಾಡಿದಷ್ಟೂ ಹಿಂಸೆ ಹೆಚ್ಚುತ್ತದೆ. ನಾವು ಈಗ ಜಾತಿ, ಧರ್ಮ, ಭಾಷೆ, ರಾಷ್ಟ್ರೀಯತೆ ಮುಂತಾದ ಚಿಲ್ಲರೆ ವಿಷಯಗಳ ಬಗ್ಗೆ ಬಡಿದಾಡುತ್ತಿದ್ದೇವೆ. ಏಕೆಂದರೆ ನನ್ನ ಅಸ್ಮಿತೆ ನಿಮ್ಮ ಅಸ್ಮಿತೆಯ ಜೊತೆ ಸಂಘರ್ಷ ಮಾಡುತ್ತದೆ. ಹಾಗಾಗಬಾರದು ಎಂದೇ ಶಿಕ್ಷಣ ಪಡೆಯುವ ಮುನ್ನ ನಮ್ಮ ಅಸ್ಮಿತೆಯನ್ನು ವಿಶ್ವದೆತ್ತರಕ್ಕೆ ಏರಿಸಿಕೊಳ್ಳಬೇಕು ಎಂಬುದು ಭಾರತೀಯರ ನಿಲುವಾಗಿತ್ತು.

ಈಗ ಏನಾಗಿದೆ ಎಂದರೆ ಶಿಕ್ಷಣ ಪಡೆದವರೇ ಈ ಭೂಗ್ರಹಕ್ಕೆ ಹೊರೆ ಆಗ್ತಾ ಇದ್ದಾರೆ . ಯಾಕೆ ಹೀಗೆ ಆಗ್ತಿದೆ ಎಂದರೆ ಅಸ್ಮಿತೆಯನ್ನು ರೂಢಿಸಿಕೊಳ್ಳುವ ಮೊದಲೇ ಸಬಲೀಕರಣ ಆಗುತ್ತಿದೆ. ಸೀಮಿತ ಅಸ್ಮಿತೆ ಇರುವ ನನ್ನ ಕೈಗೆ ನ್ಯೂಕ್ಲಿಯರ್ ಬಾಂಬ್ ಸಿಕ್ಕರೆ ನಾನು ಏನುಮಾಡುತ್ತೇನೆ ಹೇಳಿ ? ನಾನು ನಿಮ್ಮ ಮೇಲೆ ಬಾಂಬ್ ಹಾಕುತ್ತೇನೆ ಏಕೆಂದರೆ ನೀವು ನನಗೆ ವಿರುದ್ಧವಾಗಿ ನಿಂತಿದ್ದೀರಿ ಅಷ್ಟೇ ! (ಆಸಕ್ತಿ ಇದ್ದವರು ಈ ಸೊಗಸಾದ ಪ್ರವಚನವನ್ನು https://www.youtube.com/watch?v=w7irEcQHChw ಇಲ್ಲಿ ಕೇಳಬಹುದು.)
ಮುತ್ಸದ್ದಿತನ ಎಲ್ಲಿಗೆ ಹೋಯಿತು? ರಾಹುಲ್ ಗಾಂಧಿಯೇನೋ ಎಳಸು. ಮಾತಿನ ಭರದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನೂ ಎಳೆದು ತಂದು, ಆಮೇಲೆ ಕ್ಷಮೆ ಯಾಚಿಸುತ್ತಾರೆ.

ಮೋದಿ ಹಾಗಲ್ಲ, ಹಿರಿಯರು. ಜಾಗತಿಕ ರಾಜಕೀಯದ ನಾಜೂಕು ತಂತಿಯ ಮೇಲೆ ನಡೆದಾಡಿದವರು. ಆದರೂ ಮತದಾರರನ್ನು ರಂಜಿಸುವ ಅಬ್ಬರದಲ್ಲಿ ಚುನಾವಣಾ ಸಂಹಿತೆಯನ್ನು ಪದೇ ಪದೇ ಧಿಕ್ಕರಿಸುವುದು; ‘ನಿಮ್ಮ ವೋಟನ್ನು ಬಾಲಕೋಟ್ ಗೆ, ಫುಲ್ವಾಮಕ್ಕೆ ಅರ್ಪಣೆ ಮಾಡಿ’ ಎಂದು ನವ ಮತದಾರರಿಗೆ ಕರೆ ನೀಡುವುದು; ಈಗ ಪರಮಾಣು ಬಾಂಬನ್ನು ಗಿಲಕಿಯಂತೆ ಬಳಸುವುದು… ಇನ್ನೂ ಏನೇನು ಕೇಳುವುದು ಇದೆಯೋ ? ನಮ್ಮ ಪ್ರಧಾನಿ ವಿಶ್ವ ಮಟ್ಟದ ಮುತ್ಸದ್ದಿಯಾಗಿ ಮೆರೆಯುವುದು ಎಂದೋ?

ನಾಗೇಶ್ ಹೆಗಡೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version