ಲೈಫ್ ಸ್ಟೈಲ್

ನಿಫಾ; ತುಸು ನಿಗಾ ಇರಲಿ..!

Published

on

ಲ್ಲರೂ ತಂತಮ್ಮ ಜೀವನದಲ್ಲಿ ತಲ್ಲೀನರಾಗಿ ಜೀವಿಸುತ್ತಿದ್ದರೆ ಒಮ್ಮೊಮ್ಮೆ ತಮ್ಮ ಪಾಡಿಗೆ ತಮ್ಮನ್ನು ಬಿಡದೇ ಗೊತ್ತಿಲ್ಲದೇ ಆಕ್ರಮಿಸಿಕೊಂಡು, ಕಾಡಿ, ನರಳಿಸಿ, ಜೀವವನ್ನೂ ತೆಗೆಯುವ ರೋಗಗಳು ಈಗಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮರುಕಳಿಸುತ್ತಿವೆಯೆಂದರೆ ನಂಬಲೇಬೇಕಾಗುತ್ತದೆ. ಪ್ರಕೃತಿಯೇ ಹಾಗೆ, ಒಂದು ಸಣ್ಣ ಸೂಕ್ಷ್ಮಾಣುಜೀವಿಯು ಇದ್ದಕ್ಕಿದ್ದಂತೆ ಅದರ ಶಕ್ತಿಮೀರಿಅದು ನಮ್ಮನ್ನು ಸಾಮೂಹಿಕವಾಗಿ ನರಳುವಂತೆ ಮಾಡಬಲ್ಲದು. ಹಾಗಾದರೆ ನಾವು ಎಷ್ಟು ಎತ್ತರಕ್ಕೆ ಬೆಳೆದು ನಿಂತರೂ ಅಂತಹ ಮಾರಕ ಸೂಕ್ಷ್ಮಾಣುಜೀವಿಗೆ ನಾವು ಆಹಾರವೇ.

ಹೌದು, ಎಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ಮೂರು ವಾರಗಳಲ್ಲಿ ಬಹುತೇಕ ಜನರಲ್ಲಿ ಆತಂಕ ಮೂಡಿಸಿದ್ದ ವೈರಸ್ ಅದು. ‘ನಿಫಾ’(Nipah) ಎಂದುಕರೆಯಲ್ಪಡುವ ಆ ವೈರಸ್, ಮೊಟ್ಟಮೊದಲು ಕಂಡುಬಂದದ್ದು 1998 ನೇ ಇಸವಿಯಲ್ಲಿ ಮಲೇಶಿಯಾದ ನಿಫಾ ಎಂಬ ಗ್ರಾಮದ ಮನೆಗಳಲ್ಲಿ ಸಾಕಲ್ಪಡುತ್ತಿದ್ದ ಹಂದಿಗಳಲ್ಲಿ. ನಂತರ 1999 ರಲ್ಲಿ ಸಿಂಗಪೂರ್, 2001 ರಲ್ಲಿ ಪಶ್ಚಿಮ ಬಂಗಾಳ, 2003ರಿಂದ 2008 ರವರೆಗೆ ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡಿರುತ್ತದೆ. ಹಂದಿಗಳಲ್ಲಿ ಅಷ್ಟೇ ಅಲ್ಲದೆ, ನಾಯಿ, ಬೆಕ್ಕು, ಮೇಕೆ, ಕುದುರೆ, ಕುರಿಗಳನ್ನೂ ಈ ವೈರಸ್ ಆಕ್ರಮಣ ಮಾಡಬಲ್ಲದು. ಇತ್ತೀಚೆಗೆ ಕೇರಳದಲ್ಲಿ ನಿಫಾ ವೈರಸ್‍ನಿಂದ ಸೋಂಕಿತ ಒಟ್ಟು 14 ಮರಣಗಳು ಸಂಭವಿಸಿವೆಯೆಂದು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ದೃಢೀಕರಿಸಿರುತ್ತದೆ.
ಸದ್ಯದ ದಿನಗಳಲ್ಲಿ ದಿನವಿಡೀ ನಾವು ಅಲ್ಲಲ್ಲಿ ಕಾಣುವ ಸಣ್ಣಜ್ವರ ಪ್ರಕರಣವೂ ನಿಫಾಜ್ವರವಾಗಿರಬಹುದು, ಹಾಗೂ ಸಮಾಜದ ಆರೋಗ್ಯ ಹದಗೆಡಲು ಕೇವಲ ಆ ಒಂದು ಪ್ರಕರಣವೇ ಸಾಕು.

ರೋಗ ಹರಡುವಿಕೆ

  • ನಿಫಾ ಸೋಂಕಿತ ಬಾವಲಿಗಳು ಮತ್ತು ಪ್ರಾಣಿಗಳಿಂದ ಸ್ರವಿಸುವ ದ್ರವಗಳ ನೇರ ಸಂಪರ್ಕದಿಂದ ಹರಡುತ್ತದೆ.
  • ಬಾವಲಿಗಳಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಪ್ರಾಣಿಗಳಿಗೆ ಮತ್ತು ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ.
  • ಸೋಂಕಿತ ಬಾವಲಿಗಳು ಮತ್ತು ಪ್ರಾಣಿಗಳ ಸಂಪರ್ಕ ಹೊಂದಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಹರಡುತ್ತದೆ
    ಸೋಂಕಿತ ವ್ಯಕ್ತಿಗಳ ನೇರಸಂಪರ್ಕದಿಂದ ಹರಡುತ್ತದೆ.

ರೋಗ ಲಕ್ಷಣಗಳು

  • ಜ್ವರ, ತಲೆನೋವು, ವಾಂತಿ, ತಲೆ ಸುತ್ತುವುದು.
  • ತೀವ್ರವಾದ ಜ್ವರಮಿದುಳಿಗೆಆವರಿಸುವುದು.( Nipah Encephalitis )ಮಾತುಗಳಲ್ಲಿ ತೊದಲುವಿಕೆ.
  • ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಕೋಮಾ ಹಂತಕ್ಕೆ ತಲುಪಿ, ಸಾವು ಸಂಭವಿಸಬಹುದು.

ರೋಗ ನಿರ್ಣಯ

  • ವ್ಯಕ್ತಿಯ ಗಂಟಲಿನ ಮತ್ತು ಮೂಗಿನ ದ್ರವಗಳ ಮಾದರಿಯಿಂದ ಪ್ರಯೋಗಾಲಯದಲ್ಲಿ ದೃಢಪಡಿಸಬಹುದು.
  • ನರಮಂಡಲದ ದ್ರವ, ಮೂತ್ರ ಮತ್ತು ರಕ್ತಪರೀಕ್ಷೆಯ ಮಾದರಿಗಳಿಂದಲೂ ಈ ರೋಗವನ್ನು ದೃಢೀಕರಿಸಬಹುದು.

ಸದ್ಯಕ್ಕೆ, ರಾಷ್ಟ್ರೀಯ ವೈರಾಣು ಸಂಸ್ಥೆ, ಪುಣೆಯಲ್ಲಿ ಈ ರೋಗ ನಿರ್ಣಯ ಮಾಡಲಾಗುತ್ತದೆ.ರೋಗ ಇತಿಹಾಸದ ಪ್ರಕಾರ, ಈ ರೋಗವು ಶೇ.40 ರಿಂದ ಶೇ.74 ರಷ್ಟು ಮಾರಣಾಂತಿಕವಾಗಿರುತ್ತದೆ ಎಂದು ಹೇಳಲಾಗಿದೆ.

ಚಿಕಿತ್ಸೆ

  • ಈ ಮಾರಣಾಂತಿಕ ವೈರಸ್ ಅನ್ನು ತಡೆಯಲು ಯಾವುದೇ ಚುಚ್ಚುಮದ್ದು ಅಥವಾ ಇದರ ಚಿಕಿತ್ಸೆಗಾಗಿ ಯಾವುದೇ ಔಷಧಿಗಳನ್ನು ಇದುವರೆಗೆ ಕಂಡು ಹಿಡಿದಿರುವುದಿಲ್ಲ. ಇದರ ಚಿಕಿತ್ಸೆ ಕೇವಲ ರೋಗ ಲಕ್ಷಣಗಳನ್ನಷ್ಟೇ ಗುರಿಯಾಗಿಸಿಕೊಂಡು ನೀಡಲಾಗುತ್ತದೆ.

ಮುಂಜಾಗ್ರತಾ ಕ್ರಮಗಳು

  • ಯಾವುದೇ ಪ್ರಾಣಿ ಪಕ್ಷಿಗಳು ಕಚ್ಚಿದ ಅಥವಾ ಮಳೆಗಾಳಿಯಿಂದ ಬಿದ್ದಿರುವ ಹಣ್ಣುಗಳನ್ನು ಸೇವಿಸಬಾರದು.
  • ರಸ್ತೆಬದಿಗಳಲ್ಲಿ ಕತ್ತರಿಸಿ ಇಟ್ಟುಕೊಂಡು ಮಾರುವ ಹಣ್ಣುಗಳನ್ನು ಸೇವಿಸಬಾರದು.
  • ಆಹಾರ ಪದಾರ್ಥ ಸೇವಿಸುವ ಮೊದಲು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು, ಹಾಗೂ ತೊಳೆದ ನಂತರಕಣ್ಣು ಮೂಗು ಅಥವಾ ಯಾವುದೇ ಇತರ ವಸ್ತುಗಳನ್ನು ಮುಟ್ಟುವುದನ್ನು ಮಾಡಬಾರದು.
  • ಮನೆ ಸುತ್ತ ಸೋಂಕಿತ ಹಂದಿಗಳು, ಅಥವಾ ಇತರ ಪ್ರಾಣಿಗಳ ಸಂಪರ್ಕದಿಂದ ದೂರವಿರುವುದು.
  • ಮನೆಯಲ್ಲೇ ಇರುವ ಸಾಕುಪ್ರಾಣಿಗಳನ್ನು ಹೊರಗೆ ಹೋಗದಂತೆ, ಅಥವಾ ಇತರ ಪ್ರಾಣಿಗಳ ಸಂಪರ್ಕವಿಲ್ಲದಂತೆ ಎಚ್ಚರವಹಿಸುವುದು.
  • ಸಾರ್ವಜನಿಕ ಸ್ಥಳಗಳಲ್ಲಿ ಹಣ್ಣಿನಜ್ಯೂಸ್ ಸೇವನೆಗಿಂತ, ಮನೆಗೆ ಒಳ್ಳೆಯ ಹಣ್ಣುಗಳನ್ನು ತಂದು ತಾವೇ ತಯಾರಿಸಿದ ಜ್ಯೂಸ್ ಸೇವಿಸುವುದು ಸೂಕ್ತ.
  • ಬಾವಲಿಗಳು ಹೆಚ್ಚಿರುವ ಸ್ಥಳಗಳಲ್ಲಿ ವಾಸಿಸುವವರು ನೀರನ್ನು ಶುದ್ಧೀಕರಿಸಿ, ಕಾದಾರಿಸಿ ಕುಡಿಯುವುದು ಹಾಗೂ ಆಹಾರ ಪದ್ಧತಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು.
  • ಯಾವುದೇ ರೀತಿಯ ಜ್ವರ ಅಥವಾ ಮೇಲ್ಕಂಡ ಯಾವುದೇ ಲಕ್ಷಣ ಕಂಡುಬಂದಲ್ಲಿ, ತಕ್ಷಣವೇ ವೈದ್ಯರ ಸಮಾಲೋಚನೆ ಪಡೆಯುವುದು.
  • ಇನ್ನು ಈಗಾಗಲೇ ಈ ಮೇಲಿನ ಯಾವುದೇ ರೋಗ ಲಕ್ಷಣಗಳು ಇದ್ದಲ್ಲಿ, ಮೂಗು ಹಾಗೂ ಬಾಯಿ ಎರಡೂ ಆವರಿಸಿಕೊಳ್ಳುವಂತಹ ಮಾಸ್ಕ್‍ಗಳನ್ನು ಬಳಸುವುದು ಮತ್ತು ಇತರರಿಗೂ ಹರಡದಂತೆ ಎಚ್ಚರವಹಿಸುವುದು.
  • ಇನ್ನು, ಹಂದಿ, ಕುರಿ, ಅಥವಾ ಇನ್ಯಾವುದೇ ಪ್ರಾಣಿಗಳ ಸಾಕಾಣಿಕೆ ಕೇಂದ್ರಗಳಲ್ಲಿ ಕೆಲಸ ಮಾಡುವವರು, ಅತೀ ಎಚ್ಚರದಿಂದ ಕೆಲಸ ಮಾಡುವುದು.
  • ಕೈಕಾಲುಗಳಲ್ಲಿ ಗಾಯ ಅಥವಾ ಸೋಂಕು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರ ಸಮಾಲೋಚನೆ ಪಡೆಯುವುದು.

ಸುದ್ದಿದಿನ.ಕಾಂ|ವಾಟ್ಸಾಪ್| 9986715401

Leave a Reply

Your email address will not be published. Required fields are marked *

Trending

Exit mobile version