ದಿನದ ಸುದ್ದಿ

ದಲಿತರಿಗಿಂತಲೂ ಹಿಂದುಳಿದಿರುವ ಹಿಂದುಳಿದ ಜಾತಿಗಳು..?

Published

on

  • ರಘೋತ್ತಮ ಹೊ.ಬ

ಮಾಜದಲ್ಲಿ ನಮ್ಮಂತಹವರು ಕಷ್ಟ ಕೇವಲ ನಮಗೆ ಮಾತ್ರ ಎಂದು ಅಂದುಕೊಳ್ಳುತ್ತೇವೆ. ಆದರೆ ವಾಸ್ತವ ಹಾಗಿಲ್ಲ. ಯಾಕೆಂದರೆ ದಲಿತರಿಗಿಂತಲೂ ಹಿಂದುಳಿದಿರುವ ಒಂದು ಬೃಹತ್ ವರ್ಗ ನಮ್ಮ ಸುತ್ತ ಇದೆ. ಅವರನ್ನು ಸಾಂವಿಧಾನಿಕ ಭಾಷೆಯಲ್ಲಿ ಹಿಂದುಳಿದ ವರ್ಗಗಳು ಎಂದೇ ಕರೆಯಬಹುದು ಮತ್ತು ಅವರ ಹಕ್ಕುಗಳಿಗಾಗಿ ಬಾಬಾಸಾಹೇಬ್ ಅಂಬೇಡ್ಕರರು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು ಎಂಬುದಷ್ಟೆ ನಮಗೆ ಗೊತ್ತಿರುವುದು.

ಆದರೆ ಈಗಿನ ವಾಸ್ತವವೆಂದರೆ so called ದಲಿತೇತರ ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ದಲಿತರಿಗಿಂತಲೂ ಹಿಂದುಳಿದಿದ್ದಾರೆ. ಬಾಲ್ಯವಿವಾಹ, ಶಿಕ್ಷಣದ ಮಹತ್ವದ ಅರಿವಿಲ್ಲದಿರುವುದು, ಅತಿಯಾದ ಮೂಢನಂಬಿಕೆ ಈ ಸಮಸ್ಯೆಗಳಿಂದ ಅವರು ಜರ್ಝರಿತರಾಗಿದ್ದಾರೆ.

ದಲಿತರ ಒಂದು advantage ಏನೆಂದರೆ ಅವರಿಗೆ ಒಂದು ಬಾಬಾಸಾಹೇಬ್ ಅಂಬೇಡ್ಕರರಂತಹ ವೈಚಾರಿಕ ಐಕಾನ್ ಸಿಕ್ಕಿದ್ದಾರೆ. ಅವರ ಮೂಢನಂಬಿಕೆ ಆಚರಣೆಗಳು ಅಂಬೇಡ್ಕರ್ ಚಿಂತನೆ ಮತ್ತು ಭಾವಚಿತ್ರಗಳ ಮುಂದೆ ಮಸುಕಾಗಿ ಹೋಗುತ್ತವೆ. ಆದರೆ ಹಿಂದುಳಿದ ವರ್ಗಗಳ ಸ್ಥಿತಿ ಹಾಗಲ್ಲ. ಅವರಿಗೆ ತಮ್ಮದೆ ಆದಂತಹ ವೈಚಾರಿಕ ಐಕಾನ್ ಅಥವಾ ಆದರ್ಶ ಸಿಕ್ಕಿಲ್ಲ. ಕೆಲ ಪೌರಾಣಿಕ ಮತ್ತು ಜಾನಪದ ಶಕ್ತಿಗಳನ್ನು ಅವರು ಆದರ್ಶ ಅಥವಾ ಐಕಾನ್ ಆಗಿ ಸ್ವೀಕರಿಸಿರಬಹುದು.

ಆದರೆ ಜಾತಿ ವ್ಯವಸ್ಥೆಯ ಶೋಷಣೆಯಿಂದ ತಪ್ಪಿಸಿಕೊಳ್ಳಲು ಅದು ಅವರಿಗೆ ಏನೇನಕ್ಕೂ ಸಹಾಯಕ್ಕೆ ಬರುತ್ತಿಲ್ಲ ಮತ್ತು ಅವರ ಈ ನಂಬಿಕೆಗಳನ್ನು ಪಟ್ಟಭದ್ರ ಜಾತಿಗಳು ತಮ್ಮ ಹಿತಾಸಕ್ತಿಗಳಿಗೆ ಬಳಸಿಕೊಂಡು ಹಿಂದುಳಿದ ಜಾತಿಗಳು ಮತ್ತಷ್ಟು ಹಿಂದುಳಿಯುವಂತಾಗಲು, ಅವರ ಹಕ್ಕುಗಳು ಅವರಿಗೆ ಅರಿವಾಗದಂತಿರಲು ನೋಡಿಕೊಳ್ಳುತ್ತಿವೆ ಎನಿಸುತ್ತಿದೆ.

ಈ ಕಾರಣಕ್ಕಾಗಿ ಹಿಂದುಳಿದ ವರ್ಗಗಳು ಕೂಡ ಬಾಬಾಸಾಹೇಬ್ ಅಂಬೇಡ್ಕರರನ್ನು ತನ್ನ ಆದರ್ಶವಾಗಿ ಸ್ವೀಕರಿಸಬಹುದು, ಅವರ ಚಿಂತನೆಗಳನ್ನು ಓದಿಕೊಂಡು ತಮ್ಮ ಸಮುದಾಯಗಳಿಗೆ ಅದನ್ನು apply ಮಾಡಿಕೊಂಡು ವಿಮೋಚನೆ ಕಂಡುಕೊಳ್ಳಬಹುದು. ಇದೇ ಉದ್ದೇಶ ಇಟ್ಟುಕೊಂಡೇ ಇರಬಹುದು ಕಾನ್ಷೀರಾಮ್ ರವರು ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ನಾವೆಲ್ಲಾ ಬಹುಜನರು ಎಂದು ಹೇಳಿದ್ದಿರಬಹುದು.

ಕಾನ್ಷೀರಾಮ್ ರವರು ಹೇಳಿದ್ದು ಕೆಲವರಿಗೆ ಅಂದು ಅಸಹಜ ಎನಿಸಿರಬಹುದು. ಆದರೆ ಇಂದು ಅದು ವಾಸ್ತವ ಎನಿಸುತ್ತಿದೆ. ದಲಿತರಿಗಿಂತ ಶಿಕ್ಷಣ, ವೈಚಾರಿಕತೆ ಮತ್ತು ವೈಜ್ಞಾನಿಕತೆಯಲ್ಲಿ ಹಿಂದುಳಿದಿರುವ ಹಿಂದುಳಿದ ವರ್ಗಗಳು ನಮ್ಮ ಕಣ್ಣ ಮುಂದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಯಾವ ಮಟ್ಟಿಗಿನ ಹಿಂದುಳಿದಿರುವಿಕೆ ಎಂದರೆ ತಮಗೂ ಕೂಡ ಸಂವಿಧಾನ ಪ್ರಕಾರ ಇಷ್ಟಿಷ್ಟು ಶೇಕಡ ಮೀಸಲಾತಿ ಇದೆ ಎಂದು ಈಗಲೂ ಎಷ್ಟೋ ಹಿಂದುಳಿದ ಜಾತಿಗಳಿಗೆ ಗೊತ್ತಿಲ್ಲ.

ಆ ಕಾರಣದಿಂದ ಜಾತಿ ವ್ಯವಸ್ಥೆಯ ಈ ಕ್ರೂರ ಪದ್ದತಿಯಲ್ಲಿ ಹಿಂದುಳಿದ ವರ್ಗಗಳು ತಡವಾಗಿಯಾದರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ತಮ್ಮ ವಿಮೋಚನೆಯನ್ನು ತಾವೇ ಎಷ್ಟು ಸಾಧ್ಯವೋ ಅಷ್ಟು ಕಂಡುಕೊಳ್ಳಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version