ಲೋಕಾರೂಢಿ

‘ಆನ್ಲೈನ್ ವೋಟಿಂಗ್’ ವ್ಯವಸ್ಥೆಯೂ ಬೇಕು..!

Published

on

ಬಾರಿ ಲೋಕಸಭಾ ಚುನಾವಣೆ ಸಮಯದಲ್ಲಿ ಸಾಲು ಸಾಲು ರಜಾದಿನಗಳು ಬರುವುದರಿಂದ ನಗರ ಪ್ರದೇಶಗಳ ಜನ ಹೊರಗೆ ಹೋಗುತ್ತಾರೆ. ಅದರಿಂದ ವೋಟಿಂಗ್ ಪರ್ಸಂಟೇಜ್ ಕಡಿಮೆಯಾಗುತ್ತದೆ, ಇದರಿಂದ ಅರ್ಹರಲ್ಲದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ…ಹೀಗೆ ಫೇಸ್ಬುಕ್ ಮತ್ತು ವಾಟ್ಸಪ್ ಗಳಲ್ಲಿ ಚರ್ಚೆ ನಡೆದಿತ್ತು. ಇದಕ್ಕೆ ಈಗಿನ ಮೊಬೈಲ್ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಪರಿಹಾರ ಕೊಡಬಲ್ಲದು. ಇದು ಹೋಬಳಿ, ಚಿಕ್ಕ ಪುಟ್ಟ ಪೇಟೆಯವರಿಗೂ ಅನುಕೂಲ.

ಈ ವ್ಯವಸ್ಥೆಯನ್ನು ಹೀಗೆ ಮಾಡಬಹುದು

ಮಾಮೂಲಿ ಬೂತ್ ವೋಟಿಂಗ್ ಜೊತೆಗೆ ಆನ್ಲೈನ್ ವೋಟಿಂಗ್ ವ್ಯವಸ್ಥೆ ಕೂಡಾ ಇರಬೇಕು. ಯಾರಿಗೆ ಯಾವುದು ಅನುಕೂಲವೋ ಅವರು ಅದನ್ನು ಮಾಡಬಹುದು. ನಮ್ಮಲ್ಲಿ ಎಟಿಎಂ, ಅಂತರ್ಜಾಲ ಬ್ಯಾಂಕಿಂಗ್ ಮತ್ತು ಬ್ಯಾಂಕುಗಳಲ್ಲಿ ಟೆಲ್ಲರ್ ಸೌಲಭ್ಯಗಳೆಲ್ಲವೂ ಒಟ್ಟಿಗೆ ಇರುವಂತೆ.

ಆನ್ಲೈನ್ ವೋಟಿಂಗ್ ವ್ಯವಸ್ಥೆಗೆ ಚುನಾವಣಾ ಆಯೋಗ ಒಂದು ಅತ್ಯುತ್ತಮ ಸುರಕ್ಷಿತ ಆಪ್ ತಯಾರು ಮಾಡಬೇಕು (ನಮ್ಮಲ್ಲಿ ಮಾಡಲು ಸಾಧ್ಯ). ಅದನ್ನು ನಮ್ಮ ಮೊಬೈಲ್ ಗಳಲ್ಲಿ ಇಳಿಸಿ ಸ್ಥಾಪಿಸಿಕೊಳ್ಳುವ ವ್ಯವಸ್ಥೆ (ಗೂಗಲ್ ಪ್ಲೇಸ್ಟೋರ್ ಇತ್ಯಾದಿಯಲ್ಲಿ) ಇರಬೇಕು. ಇದರಲ್ಲಿ ಒಂದು ನಿಶ್ಚಿತ ದಿನಾಂಕಗಳ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಬೇಕು. ಆಪಿನಲ್ಲಿ ನಮ್ಮ ಜಿಲ್ಲೆ/ತಾಲೂಕು/ಗ್ರಾಮ ದಾಖಲಿಸಿ ನಂತರ ನಮ್ಮ ಆಧಾರ್ ಕಾರ್ಡ್/ವೋಟರ್ ಐಡಿಯನ್ನು ಅಲ್ಲಿ ದಾಖಲಿಸಿದರೆ ಮೊಬೈಲಿಗೆ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಬರಬೇಕು. ಜೊತೆಗೆ ಫಿಂಗರ್ ಪ್ರಿಂಟ್/ಫೇಸ್ ರೆಕಗ್ನಿಷನ್ ತಂತ್ರಜ್ಞಾನವೂ ಇರಬೇಕು. ನಂತರ ಈ ಒಟಿಪಿಯನ್ನು ಅಲ್ಲಿ ಹಾಕಿದರೆ ನಮಗೆ ನಮ್ಮ ಕ್ಷೇತ್ರದ ಅಭ್ಯರ್ಥಿಗಳ ವಿವರ ಬ್ಯಾಲಟ್ ಯುನಿಟ್ ತರಹದ್ದೇ ಇಂಟರ್ಫೇಸ್ ನಲ್ಲಿ ಬರಬೇಕು.

ನಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ ಅದು ಇದು ನಿಮಗೆ ಒಪ್ಪಿಗೆಯಾ ಅಂತ ಕೇಳಬೇಕು. ನಂತರ ನಾವು ಓಕೆ ಕೊಟ್ಟರೆ ನಮ್ಮ ಮತದಾನ ಮುಗಿಯಿತು. ಅದಕ್ಕೆ ನಮಗೊಂದು ದೃಢೀಕರಣ ಪತ್ರ (ಸಾಫ್ಟ್ ಕಾಪಿ) ಬರಬೇಕು. ಎಷ್ಟು ಸುಲಭ ಅಲ್ಲವೇ?

ಮೊಬೈಲ್ ಆಪ್ ಜೊತೆಗೆ, ಜಾಲತಾಣದಲ್ಲೂ ಈ ವ್ಯವಸ್ಥೆ ಬೇಕು. ಜೊತೆಗೆ ಅಲ್ಲಲ್ಲಿ ಎಟಿಎಂ ಯಂತ್ರಗಳಿರುವ ಹಾಗೆ, ಬೇಕಾದರೆ ವೋಟಿಂಗ್ ಯಂತ್ರಗಳನ್ನೂ ಆಯಕಟ್ಟಿನ ಜಾಗಗಳಲ್ಲಿ ಇಡಬಹುದು. ಅದಕ್ಕೆ ನಿರಂತರ ಅಂತರ್ಜಾಲದ ವ್ಯವಸ್ಥೆ ಚುನಾವಣಾ ಆಯೋಗ ಮಾಡಬೇಕು. ಅಲ್ಲಿ ಪೋಲಿಸ್ ಕಾವಲಿದ್ದರೆ ಸಾಕು.

ಮೊಬೈಲ್ ಆಪ್, ಜಾಲತಾಣ, ವೋಟಿಂಗ್ ಯಂತ್ರ ಹಾಗೂ ಬೂತ್ ಇವೆಲ್ಲ ವ್ಯವಸ್ಥೆಗಳೂ ಒಟ್ಟಿಗೆ ಇದ್ದರೆ 95-98% ಮತದಾನ ಆಗುವುದು ಗ್ಯಾರಂಟಿ..

ಈ ಆನ್ಲೈನ್ ವ್ಯವಸ್ಥೆಯಿಂದ

  1. ಬೂತಿಗೆ ಹೋಗುವ ಶ್ರಮ, ಸಮಯ ಸಾಕಷ್ಟು ಉಳಿಯುತ್ತದೆ.
  2. ಚುನಾವಣಾ ಆಯೋಗಕ್ಕೂ ಹಣ/ಶ್ರಮ/ಸಮಯ ಉಳಿತಾಯ.
  3. ಎಲೆಕ್ಷನ್ ಡ್ಯೂಟಿಗೆ ತರಬೇತಿ ಕೊಡುವ ಶ್ರಮವೂ ಸ್ವಲ್ಪ ಮಟ್ಟಿಗೆ ಉಳಿಯುತ್ತದೆ.
  4. ಸಮಯದ ಪರಿವೆ ಇಲ್ಲದೆ ವೋಟ್ ಮಾಡಬಹುದು.
  5. ವಯಸ್ಸಾದವರಿಗೆ, ವೃದ್ಧರಿಗೆ, ಅನಾರೋಗ್ಯ ಪೀಡಿತರಿಗೆ ತೊಂದರೆಯಾಗುವುದು ತಪ್ಪುತ್ತದೆ. ಅವರನ್ನು ಕರೆತರುವವರಿಗೂ ನಿರಾಳ.
  6. ಬೇರೆ ಊರುಗಳಿಗೆ ಹೋಗುವವರಿಗೂ ಅನುಕೂಲ.
  7. ಅನ್ಯದೇಶಗಳಲ್ಲಿರುವ ಭಾರತೀಯರೂ ವೋಟಿಂಗ್ ಮಾಡಬಹುದು.
  8. ವೋಟಿಂಗ್ ಪರ್ಸಂಟೇಜ್ ಜಾಸ್ತಿಯಾಗುತ್ತದೆ.

ಇದನ್ನು ಬರೆದಾಕ್ಷಣ ಸಮಸ್ಯೆಗಳು ಕೆಲವರ ತಲೆಯಲ್ಲಿ ಮೂಡಬಹುದು (ಬಂದೇ ಬರುತ್ತದೆ!)

1. ಹಳ್ಳಿಗಳಲ್ಲಿ/ಪಟ್ಟಣಗಳಲ್ಲಿ ಅಂತರ್ಜಾಲದ ಸಮಸ್ಯೆ

ಇದಕ್ಕೆ ಪರಿಹಾರ- ಅವರಿಗೆ ಬೂತ್ ಹೇಗೂ ಇರುತ್ತದೆ. ಒಮ್ಮೆ ಅಂತರ್ಜಾಲ ಕೈಕೊಟ್ಟರೆ ಅಲ್ಲಿಗೆ ಹೋಗಿ ಮಾಡಬಹುದು. ಒಂದು ನಿಶ್ಚಿತ ದಿನಾಂಕದವರೆಗೆ ಓಟ್ ಮಾಡುವ ಸೌಲಭ್ಯವಿರುವುದರಿಂದ ಒಂದಲ್ಲಾ ಒಂದು ದಿನ ಅಂತರ್ಜಾಲದಲ್ಲಿ ವೋಟ್ ಮಾಡಲು ಸಾಧ್ಯ.

2. ದುರುಪಯೋಗದ ಸಾಧ್ಯತೆ

ಕೆಲ ಹಿರಿಯರಿಗೆ ಇದು ಗೊತ್ತಾಗುವುದಿಲ್ಲ. ಹಾಗಾಗಿ ಬೇರೆಯವರು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಅಂತ ಕೆಲವರನ್ನಬಹುದು. ಮನೆಯಲ್ಲಿರುವ, ಅಂತರ್ಜಾಲ ತಕ್ಕಮಟ್ಟಿಗೆ ಗೊತ್ತಿರುವ ಸದಸ್ಯರು ಈ ಸಮಸ್ಯೆಯನ್ನು ಬಗೆಹರಿಸಬಹುದು. ಈಗ ಸಾಧಾರಣವಾಗಿ ಈ ಬಗ್ಗೆ ಗೊತ್ತಿರುವ ಕೆಲವರಾದರೂ ಮನೆಯಲ್ಲಿ/ಊರಲ್ಲಿ/ಪಕ್ಕದ ಮನೆಯಲ್ಲಿ ಇರುತ್ತಾರೆ. ಈ ಬಗ್ಗೆ ಚುನಾವಣಾ ಆಯೋಗ ತರಬೇತಿ ಶಿಬಿರ/ರೇಡಿಯೋ/ಟಿವಿ/ವೃತ್ತಪತ್ರಿಕೆಗಳ ಮೂಲಕ ತಿಳುವಳಿಕೆ ಮೂಡಿಸುವ ಕೆಲಸ ಮಾಡಬಹುದು.

ಕೆಲವರನ್ನು ಬೆದರಿಸಿ, ಹಣದ ಆಮಿಷ ತೋರಿಸಿ ತಮಗೆ ಬೇಕಾದವರಿಗೆ ವೋಟ್ ಹಾಕಿಸಿಕೊಳ್ಳುವ ಸಾಧ್ಯತೆ. ಇದು ಆಗುವ ಸಾಧ್ಯತೆ ಬಹಳ ವಿರಳ. ಏಕೆಂದರೆ ಮನೆ ಸದಸ್ಯರು ಇರುತ್ತಾರಲ್ಲ. ಹಾಗೆ ಬೆದರಿಸಿದರೆ ಪೋಲಿಸ್ ಗೆ ದೂರು ನೀಡಬಹುದು. ಹಣದ ಆಮಿಷ ಈಗಿರುವ ಬೂತ್ ವ್ಯವಸ್ಥೆಯಲ್ಲೂ ಇದೆ!

ಹಣದಂತಾ ಹಣವನ್ನೇ (!) ನಾವು ಅಂತರ್ಜಾಲದ ಮೂಲಕ ಕಳಿಸುವ ವ್ಯವಸ್ಥೆಗೆ ಒಗ್ಗಿಕೊಂಡಿದ್ದೇವೆ. ವೋಟಿಂಗ್ ಯಾಕಾಗಬಾರದು ? ಈ ದಿಸೆಯಲ್ಲಿ ಅಮೇರಿಕಾ, ಯೂರೋಪ್ ಗಳಲ್ಲಿ ಯಾವ ವ್ಯವಸ್ಥೆ ಇದೆಯೋ ನನಗೆ ಗೊತ್ತಿಲ್ಲ. ಆದರೆ ಇಲ್ಲಿ ಮಾಡಬಹುದು ಅಂತನಿಸುತ್ತದೆ.

ನನಗೆ ಆಶ್ಚರ್ಯದ ಸಂಗತಿ – ಚುನಾವಣಾ ಆಯೋಗ ಯಾಕೆ ಆನ್ಲೈನ್ ವೋಟಿಂಗ್ ವ್ಯವಸ್ಥೆ ಇನ್ನೂ ಮಾಡಲಿಲ್ಲ ಅಂತ. ನೋಡೋಣ ಮುಂದಿನ ಎಲೆಕ್ಷನ್ ಹೊತ್ತಿಗಾದರೂ ಇದು ಬಂದೀತು!! ಏನಂತೀರಿ? ನಿಮ್ಮ ಅಭಿಪ್ರಾಯವನ್ನು ದಾಖಲಿಸಿ.

-ಡಾ. ಮೋಹನ್ ತಲಕಾಲುಕೊಪ್ಪ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version