ಸಿನಿ ಸುದ್ದಿ
ಆತ 38 ವರ್ಷದ ಬಾಲಕ; ಹೆಸರು ‘ಪಾಆ ಪಾಆ’..!
- ಸಿದ್ದು ಸತ್ಯಣ್ಣನವರ್
ಆತನ ಎತ್ತರ ತೀರಾ ಕಡಿಮೆ. ಎಷ್ಟು ಕಡಿಮೆಯೆಂದರೆ ಹೆಂಡತಿ ಪಕ್ಕ ನಿಂತರೆ, ಆಕೆಯ ಸೊಂಟಕ್ಕೆ ಬರುವಷ್ಟು. ಮುಖದಲ್ಲಿನ ವಯಸ್ಸೋ ಅದು ಎದ್ದು ಕಾಣುವುದಿಲ್ಲ. ಪಚಡಿ ಮೂಗು, ಕುಬ್ಜ ದೇಹ, ಗುಂಗುರು ಕೂದಲು, ಬಟ್ಟಲು ಕಣ್ಣು. ಅಗಲವಾದ ಮುಖದ ಈತನನ್ನ ಕಂಡರೆ ಜನ ಈಗಲೂ ಮಗು ಅಂತಲೇ ತಿಳೀತಾರೆ. ಆತ ನೈಜೀರಿಯಾದ ನಟ. ಆಫ್ರಿಕಾ ಖಂಡದ ಜನ ಆತ ನಿರ್ವಹಿಸಿದ ಪಾತ್ರವೊಂದನ್ನು ಎಷ್ಟು ಪ್ರೀತಿಸುತ್ತಾರೆಂದರೆ, ಆತನ ನಿಜನಾಮವೇ ಮರೆತು ಹೋಗುವಷ್ಟು. ಆತ ನಿರ್ವಹಿಸಿದ ಅಂತಹ ಪಾತ್ರದ ಹೆಸರು ‘ಪಾಆ ಪಾಆ‘ (Paw Paw). 2003 ರಲ್ಲಿ ಬಂದಿದ್ದ ಸಿನಿಮಾ ಅದು.
ಮೆಮೆ ಪ್ರಿಯರಿಗೆ ನಿಮಗೆ ‘ಒಶೀತಾ ಇಹೇಮಿ‘ ಗೊತ್ತಾ? ಎಂದು ಕೇಳಿ ನೋಡಿ. ಅವರು ಖಂಡಿತ ಇಲ್ಲ ಅಂತಲೇ ಉತ್ತರಿಸುತ್ತಾರೆ. ಅದೇ ಆ ಹೆಸರಿನ ವ್ಯಕ್ತಿ ಫೋಟೋ ತೋರಿಸಿದರೆ ಸಾಕು. ಖಂಡಿತ ಆಶ್ಚರ್ಯಚಕಿತರಾಗುತ್ತಾರೆ. ಆತನ ಹೆಸರು ಅದಾ!? ಎಂದು ಅಚ್ಚರಿಯಿಂದ ಮರುಕ್ಷಣದಲ್ಲೇ ಥಟ್ಟನೇ ನಗುತ್ತಾ ಮರುಪ್ರಶ್ನಿಸುತ್ತಾರೆ. ವಿಶ್ವದಾದ್ಯಂತ ಮೆಮೆ ಮೇಕರ್ಸ್ ಗೆ ಮತ್ತು ಮೆಮೇಸ್ ಪ್ರಿಯರಿಗೆ ಅಷ್ಟು ಹತ್ತಿರವಾದ ಹಿರಿಮೆ ‘ಒಶೀತಾ ಇಹೇಮಿ’ಯದ್ದು.
ಮತ್ತೊಂದು ಮಜವೆಂದರೆ ಈತ ಇದುವರೆಗೆ 160ಕ್ಕಿಂತ ಹೆಚ್ಚು ನೈಜಿರೀಯಾ, ಆಫ್ರಿಕಾ ಸಿನೇಮಾಗಳಲ್ಲಿ ನಟಿಸಿದ್ದಾನೆ. ಈತ ಅಭಿನಯಿಸಿದ ದೃಶ್ಯಗಳು ಒಂದಲ್ಲಾ ಒಂದು ಬಗೆಯಲ್ಲಿ ಜಗತ್ತಿನ ಮೆಮೆ ಮೇಕರ್ಸ್ ಗೆ ದೊಡ್ಡ ಸರಕು. ಟ್ವೀಟ್ಟರ್ ಮತ್ತು ಫೇಸ್ಬುಕ್ ನಲ್ಲಿ ಅಶ್ಲೀಲವಲ್ಲದ, ನಗು ಉಕ್ಕಿಸುವಂತಹ 10 ಅಂತರಾಷ್ಟ್ರೀಯ ಮೆಮೇಸ್ ಗಳನ್ನು ನೀವು ಗಂಭೀರವಾಗಿ ಗಮನಿಸಿ ನೋಡಿ. ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನದರಲ್ಲಿ ‘ಪಾಆ ಪಾಆ’ ಇರ್ತಾನೆ. ಜೊತೆಗೆ ನೈಜೀರಿಯಾದ ಅತೀ ಶ್ರೀಮಂತ ನಟರಲ್ಲಿ ಈತನ ಹೆಸರೂ ಇದೆ ಎಂದರೆ ನಂಬಲೇಬೇಕು.
21 ವಯಸ್ಸಿನವನಿದ್ದಾಗ ಈತ ನಿರ್ವಹಿಸಿದ್ದು ಸಣ್ಣ ಮಕ್ಕಳ ಪಾತ್ರಗಳನ್ನು. ಕುಳ್ಳ. ಮುಖದ ಮೇಲೆ ವಯಸ್ಸಿನ ಗೆರೆ ಕಾಣದ್ದೇ ಈತನಿಗೆ ದೊಡ್ಡ ವರವಾಯಿತು. ‘Aki na Ukwa’ ಸಿನೇಮಾ ಅನಂತರವೂ ಈತ ಅದೆಷ್ಟೋ ಸಿನಿಮಾಗಳಲ್ಲಿ ಬಾಲಕನ ಪಾತ್ರಗಳಲ್ಲೇ ನಟಿಸಿದ್ದು ಉಂಟು. ಆನಂತರ ತಿರುಗಿ ನೋಡಲಿಲ್ಲ.
ಒಶೀತಾ ಈಗ ಬರೀ ನೈಜೀರಿಯಾ ಅಲ್ಲ, ಆಫ್ರಿಕಾದ ಜೋಹಾನ್ಸಬರ್ಗ್, ಕೇಪ್ ಟೌನ್ ನಂತಹ ನಗರಗಳಲ್ಲದೆ, ನೈಜೀರಿಯಾ, ಉಗಾಂಡ, ಕೀನ್ಯಾ, ಬರ್ಮುಡಾ ದೇಶಗಳ ಯಾವುದೇ ಮಹಾನಗರಗಳಿಗೆ ಹೋದರೂ ಸಾಕು, ಈತನನ್ನು ಸಾವಿರಾರು ಜನ ಮುತ್ತಿಕೊಳ್ಳುತ್ತಾರೆ. ಅಭಿಮಾನ ತೋರುತ್ತಾರೆ. ತನ್ನದೇ ಪಯಣದ ಕುರಿತು ಈತ ಬರೆದ ‘ಇನ್ ಸ್ಪೈರ್ಡ್ 101’ ಎಂಬ ಕೃತಿ ಸಹ ಬಲು ಪ್ರಸಿದ್ಧ.
ಕೇವಲ ವಯಸ್ಸು ಮುಖದ ಮೇಲೆ ಕಾಣಿಸಲ್ಲ ಎಂಬ ಕಾರಣಕ್ಕೆ ಅವಕಾಶ ಈತನಿಗೆ ಸಿಕ್ಕಿತ್ತು. ಸಿಕ್ಕ ಅವಕಾಶವನ್ನು ಈತ ಬಳಸಿಕೊಂಡ ರೀತಿ ಅರಿವಾಗಬೇಕೆಂದರೆ ಒಂದು ಸಲ ಈತನಿರುವ ಮೆಮೆಗಳ ಮೇಲೆ ಕಣ್ಣು ಹಾಯಿಸಿ. ಯೂಟೂಬಿನಲ್ಲಿ ‘Aki na Ukwa’ ಎಂದು ಟೈಪ್ ಮಾಡಿದರೂ ಸಾಕು ಈತನ ಹಲವಾರು ವಿಡಿಯೋ ತೆರೆದುಕೊಳ್ಳುತ್ತವೆ. ನೈಜೀರಿಯಾ ಬಡರಾಷ್ಟ್ರವಿರಬಹುದು. ಆದರೆ, ಅಂತಹ ರಾಷ್ಟ್ರದಲ್ಲಿ ಈತನಿಗಿರುವ ಫ್ಯಾನ್ ಫಾಲೋವಿಂಗ್ ನಿಜಕ್ಕೂ ದಿಗಿಲುಗೊಳಿಸುವಂಥದ್ದು.
ಮೆಮೇಸ್ ಮೇಕಿಂಗ್. ಸೋಶಿಯಲ್ ಮೀಡಿಯಾಗಳು ಬೆಳೆದಂತೆ ಅದೂ ಒಂದು ಬಗೆಯ ಪ್ರತಿಭೆಯೆಂದೇ ಪರಿಗಣನೆಗೊಳಪಟ್ಟದ್ದು ಹಳೇ ಸಂಗತಿ. ನಮ್ಮಲ್ಲಿ ಅದು ಬೇರೆಯದೇ ಮಾತು. ಆದರೆ ಅಂತಹ ಮೆಮೆಗಳಿಂದಲೇ ಈ ‘ಪಾಆ ಪಾಆ’ ವಿಶ್ವ ಪ್ರಸಿದ್ಧನಾಗಿರುವುದು ಒಂದು ಬಗೆಯ ಮಾತಾದರೆ, ಈತನ ಸಂದರ್ಭೋಚಿತ ನಟನೆಯನ್ನೇ ಬಳಸಿಕೊಂಡು ಎಷ್ಟೋ ಮೆಮೆ ಮೇಕರ್ಸ್ ಪೇಜ್ ವಿಶ್ವದಾದ್ಯಂತ ಹೆಸರುವಾಸಿಯಾದವು ಎಂದರೆ ಅತಿಶಯೋಕ್ತಿ ಎನಿಸಲಾರದು.
‘ಪಾಆ ಪಾಆ’ ನಟಿಸಿದ ಯಾವುದೋ ಸೀನ್ ಯಾವುದೋ ಮೆಮೆಗೆ ಹೊಂದಿಕೆಯಾಗೇ ಆಗುತ್ತದೆ ಎಂಬಷ್ಟು ನಿಖರತೆ ಇರುವಂತಹ ದೃಶ್ಯಗಳಲ್ಲಿ ಈತ ಅಭಿನಯಿಸಿದ್ದಾನೆ. ಅದೂ ಆತನ ಅದೃಷ್ಟವೂ ಇರಬಹುದು. ಹಾಗಂತ ಆತನ ನಟನಾ ಕೌಶಲ್ಯ ಅಲ್ಲಗಳೆಯಲಾಗದಂಥದ್ದು. ತನ್ನ ಎತ್ತರವನ್ನು ಎಂದೂ ಹಿನ್ನಡೆ ಅಂದುಕೊಳ್ಳದ ಇಹೇಮಿ ಇಂದು ಕೋಟ್ಯಾಂತರ ಆಫ್ರಿಕಾ ಖಂಡದ ಯುವಕರ ಆಶಾಕಿರಣ.
2003ರಲ್ಲಿ ಈತ ನಟಿಸಿದ ‘Aki na Ukwa’ ಎಂಬ ಸಿನಿಮಾದಿಂದ ಈತನ ದೆಸೆಯೇ ಬದಲಾಯಿತು. ಈ ಸಿನೇಮಾದ ಜನಪ್ರಿಯತೆ ಈತನನ್ನ 2007ರಲ್ಲಿ ಆಫ್ರಿಕಾ ಮತ್ತು ನೈಜೀರಿಯಾದ ಯುವಕರ ಸಾಂಸ್ಕೃತಿಕ ಏಳಿಗೆಗಾಗಿ ‘Inspired movement africa’ ಎಂಬ ಸಂಘಟನೆ ಸ್ಥಾಪಿಸುವಂತೆ ಮಾಡಿತು. 2011 ರಲ್ಲಿ ನೈಜೀರಿಯಾ ಸರ್ಕಾರ ಈತನಿಗೆ ತನ್ನ ಅತ್ಯುನ್ನತ ಗೌರವ ‘ಆರ್ಡರ್ ಆಫ್ ದಿ ಫೆಡರಲ್ ರಿಪಬ್ಲಿಕ್’ ಎಂಬ ಗೌರವವನ್ನು ಸಹ ನೀಡಿತು.
ಕಂಫ್ಯೂಟರ್ ಸೈನ್ಸ್ ಜೊತೆಗೆ ಈತ ರಂಗಭೂಮಿ ಪದವೀಧರನೂ ಹೌದು. ಆದರೆ, ಅದನ್ನು ಆತ ಬಹಿರಂಗವಾಗಿ ಹೇಳಿಕೊಂಡರೂ ಎಷ್ಟೋ ವರದಿಗಳಲ್ಲಿ ಅದು ಕಂಡು ಬರುವುದೇ ಇಲ್ಲ. ನಿಮ್ಮ ಯಾವುದೇ ತೊಂದರೆ; ಟೆನ್ಷನ್ ಇರಲಿ. ನೀವೊಮ್ಮೆ ಕುತೂಹಲಿಗಳಾದರೆ ‘ಪಾಆ ಪಾಆ’ ನಿಮ್ಮನ್ನು ಸಾಕಷ್ಟು ನಗಿಸಬಲ್ಲ, ಕುಣಿಸಬಲ್ಲ. ಯಾವಾಗಲಾದರೂ ಆತನ ಮೆಮೆ ಕಂಡರೆ ಗಂಭೀರವಾಗಿ ಆತನ ಆಂಗಿಕ ಅಭಿನಯ ಹಾಗೂ ಮಾತನಾಡುವ ಶೈಲಿ ಗಮನಿಸಿ. ಖಂಡಿತ ಖುಷಿಯಾಗುತ್ತಿರಿ! ಅಷ್ಟನ್ನಂತೂ ಹೇಳಬಲ್ಲೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243