ಲೈಫ್ ಸ್ಟೈಲ್

ಪಾರ್ಶ್ವವಾಯು(ಸ್ಟ್ರೋಕ್) ಬಗ್ಗೆ ನಿಮಗೆಷ್ಟು ಗೊತ್ತು..?

Published

on

ಜನಸಾಮಾನ್ಯರ ಭಾಷೆಯಲ್ಲಿ ಲಕ್ವ, ಪಾರ್ಸಿ, ಪಾರಾಲಿಸಿಸ್ ಎಂದೆಲ್ಲಾ ಕರೆಯಲ್ಪಡುವ    ಪಾರ್ಶ್ವವಾಯು ಎಂದರೆ ಮಿದುಳಿಗೆ ರಕ್ತಪೂರೈಕೆಯ ಕೊರತೆಯಿಂದ ಉಂಟಾಗುವ ಅಸ್ವಾಧೀನತೆ. ಅಂದರೆ ಯಾವುದೇ ರಕ್ತನಾಳಗಳ ತೊಂದರೆಯಿಂದ ಮಿದುಳಿಗೆ ರಕ್ತಪೂರೈಕೆಯಲ್ಲಿ ತೊಂದರೆ ಉಂಟಾದರೆ, ಅದು ಆ ನಿರ್ಧಿಷ್ಟ ಜೀವಕಣಗಳ ಕಾರ್ಯಕ್ಷಮತೆಯನ್ನು ಪೂರೈಸಲಾಗದೇ ಸೋತು, ಮಿದುಳಿನ ಆ ನಿರ್ಧಿಷ್ಟ ಭಾಗದಿಂದ ನಿಯಂತ್ರಿಸಲ್ಪಡುವ ದೇಹದ ಭಾಗವೂ ಸ್ವಾಧೀನ ಕಳೆದುಕೊಳ್ಳುವುದು.

ಕಾರಣಗಳು

  • ಅಧಿಕ ರಕ್ತದೊತ್ತಡ
  • ತಂಬಾಕು, ಧೂಮಪಾನ ಸೇವನೆ
  • ಬೊಜ್ಜು
  • ಅಧಿಕ ಕೊಲೆಸ್ಟರಾಲ್
  • ಮಧುಮೇಹ

ಈ ಸಾಮಾನ್ಯ ಕಾರಣಗಳು ಅಲ್ಲದೇ ಇನ್ನೂ ಅನೇಕ ವಿರಳ ವೈದ್ಯಕೀಯ ಸಂದರ್ಭಗಳಲ್ಲಿ ಪಾರ್ಶ್ವವಾಯು ಉಂಟಾಗುವುದುಂಟು. ಸಾಮಾನ್ಯವಾಗಿ ಈ ಅಪಾಯಕಾರಿ ಅಂಶಗಳು ವಯೋವೃದ್ಧರಲ್ಲಿ  ಪಾರ್ಶ್ವವಾಯುವಿಗೆ ಗುರಿಮಾಡುತ್ತವೆ, ಆದರೆ ಯುವ ಜನರಲ್ಲೂ ಇತ್ತೀಚಿನ ದಿನಗಳಲ್ಲಿ ಕಂಡುಬರುವುದನ್ನು ನಂಬಲೇಬೇಕು.

ವಿಧಗಳು

  •  ರಕ್ತ ತಡೆಗಟ್ಟುವಿಕೆಯ ಪಾರ್ಶ್ವವಾಯು
  • ರಕ್ತ ಹೆಪ್ಪುಗಟ್ಟುವಿಕೆ
  • ರಕ್ತನಾಳಗಳಲ್ಲಿ ರಕ್ತದ ಹೊರತು ಬೇರೆ ಜೀವಕಣಗಳಿಂದುಂಟಾಗುವುದು
  • ರಕ್ತಸಂಚಾರವೇ ಕ್ಷೀಣಗೊಳ್ಳುವುದು
  • ರಕ್ತಸ್ರಾವದ ಪಾರ್ಶ್ವವಾಯು
  • ಮಿದುಳಿನೊಳಗಿನ ರಕ್ತಸ್ರಾವ
  • ಮಿದುಳಿನ ಪದರಗಳ ಮಧ್ಯೆ ಉಂಟಾಗುವ ರಕ್ತಸ್ರಾವ

ರೋಗ ಉಂಟಾಗುವಿಕೆ

ಸಾಮಾನ್ಯವಾಗಿ ಅಂದರೆ 87 ಶೇಕಡಾ ಸಂದರ್ಭಗಳಲ್ಲಿ ರಕ್ತಸಂಚಾರದ ತಡೆಗಟ್ಟುವಿಕೆಯಿಂದ ಉಂಟಾಗುವ  ಪಾರ್ಶ್ವವಾಯುಗಳೇ ಹೆಚ್ಚು. ಅದರಲ್ಲಿ, ಮಿದುಳಿಗೆ ಪೂರೈಸಲ್ಪಡುವ ರಕ್ತನಾಳಗಳು ವಿವಿಧ ಕಾರಣಗಳಿಂದ ಒಳಗೆ ತಡೆ ಹೊಂದುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಈ ಪ್ರಕಾರ ಕಾಲಕ್ರಮೇಣ ಉಂಟಾದರೆ, ಅಧಿಕ ಸಂದರ್ಭಗಳಲ್ಲಿ ತಕ್ಷಣವೇ ಸಂಭವಿಸುವ ರೋಗಶಾಸ್ತ್ರ ಈ ವಿಧದಲ್ಲಿ ಅಡಗಿದೆ.

ಇನ್ನುಳಿದ 13 ಶೇಕಡಾ ಸಂದರ್ಭಗಳಲ್ಲಿ ರಕ್ತಸ್ರಾವದಿಂದ ಪಾರ್ಶ್ವವಾಯುಉಂಟಾಗುತ್ತದೆ. ತಲೆಗೆ ಉಂಟಾಗುವ ಅಪಘಾತಗಳನ್ನು ಹೊರತುಪಡಿಸಿ, ವಿವಿಧ ಕಾರಣಗಳಿಂದ ಸ್ವಾಭಾವಿಕವಾಗಿಯೂ ಉಂಟಾಗುವ ಮಿದುಳಿನ ರಕ್ತಸ್ರಾವದಿಂದ ಈ ರೀತಿಯ  ಪಾರ್ಶ್ವವಾಯು ಉಂಟಾಗುವುದುಂಟು.

ರೋಗಲಕ್ಷಣಗಳು

  1. ಮುಖದಲ್ಲಿ (ಸಾಮಾನ್ಯವಾಗಿ ಬಾಯಿಯ ಒಂದು ಭಾಗ ಒಂದುಕಡೆಗೆ ಸೆಳೆತಕ್ಕೊಳಗಾಗುವುದು).
  2. ಕೈ, ಕಾಲುಗಳುಗಳಲ್ಲಿ(ಸಾಮಾನ್ಯವಾಗಿ ಒಂದು ಕಡೆಯ ಕೈ ಮತ್ತು ಕಾಲು ಸ್ವಾಧೀನ ಕಳೆದುಕೊಳ್ಳುವುದು) ಜುಮ್ಮೆನಿಸುವುದು.
  3. ಸ್ವಾಧೀನತೆಯಿಲ್ಲದಿರುವುದು
  4. ದೃಷ್ಟಿಯಲ್ಲಿ ತೊಂದರೆಯಾಗುವುದು
  5. ಸರಿಯಾಗಿ ಮಾತನಾಡಲಾಗದಿರುವುದು
  6. ಕ್ಷಣಿಕ ಮರೆವು ಉಂಟಾಗುವುದು
  7. ಯಾವುದೇ ಕಾರಣವಿಲ್ಲದ ಅಧಿಕ ತಲೆನೋವು, ತಲೆಸುತ್ತುವುದು.
  8. ಕಾಲ್ನಡೆತದಲ್ಲಿ ಇದ್ದಕ್ಕಿದ್ದಂತೆ ವಿಕಾರಗೊಳ್ಳುವುದು.

ಈ ಮೇಲಿನ ಲಕ್ಷಣಗಳು ಪಾರ್ಶ್ವವಾಯುವಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳಾದರೆ, ಇನ್ನೂ ಕೆಲವು ವಿರಳ ಸಂದರ್ಭಗಳಲ್ಲಿ ಕಂಡುಬರುವ ಲಕ್ಷಣಗಳು ಈ ಕೆಳಗಿನಂತಿವೆ.

  • ಪ್ರಜ್ಞಾಹೀನತೆ
  • ನಿಶ್ಯಕ್ತಿಯುಂಟಾಗುವುದು
  • ಉಸಿರಾಟದ ತೊಂದರೆ
  • ಕೈ, ಕಾಲುಗಳು, ಮುಖ, ಎದೆಯಲ್ಲಿ ನೋವು ಕಾಣಿಸಿಕೊಳ್ಳುವುದು
  • ಸ್ನಾಯುಸೆಳೆತಗಳು, ರಸ್ತೆ ಅಪಘಾತಗಳು

ರೋಗ ನಿರ್ಧಾರ

ರೋಗಲಕ್ಷಣಗಳಿಂದಲೇ ಸಾಮಾನ್ಯವಾಗಿ ಪಾರ್ಶ್ವವಾಯುವಿನ ರೋಗನಿರ್ಧಾರವಾಗುತ್ತದೆ. ಆದರೆ ರೋಗದ ಚಿಕಿತ್ಸಾ ನಿಟ್ಟಿನಲ್ಲಿ ನೋಡುವುದಾದರೆ, ಪೂರ್ಣ ರೋಗನಿರ್ಧಾಕ್ಕೆ ಕೆಲವೊಂದು ಪರೀಕ್ಷೆಗಳು ಅವಶ್ಯಕವಾಗುತ್ತವೆ.

  • ರಕ್ತಕಣಗಳ ಪರೀಕ್ಷೆ, ರಕ್ತದ ಗ್ಲೂಕೋಸ್ ಪ್ರಮಾಣ
  • ಕೊಲೆಸ್ಟರಾಲ್ ಪ್ರಮಾಣ
  • ಇಕೊಕಾರ್ಡಿಯೊಗ್ರಫಿ(ಇ.ಸಿ.ಜಿ.)
  • ಎದೆಯ ಎಕ್ಸ್ ರೇ
  • ತಲೆಯ ಸಿ.ಟಿ.ಸ್ಕ್ಯಾನ್

ಇವಿಷ್ಟು ಎಲ್ಲಾ ಪಾರ್ಶ್ವವಾಯು ರೋಗಿಗಳಲ್ಲಿ ಮಾಡಲೇಬೇಕಾದ ಪರೀಕ್ಷೆಗಳು. ಇದಲ್ಲದೇ ಇನ್ನೂ ವಿವಿಧ ರೋಗಲಕ್ಷಣಗಳಿಗನುಸಾರವಾಗಿ ಎಮ್.ಆರ್.ಐ. ಸ್ಕ್ಯಾನ್ ಸೇರಿದಂತೆ ಬೇರೆ ಬೇರೆ ಪರೀಕ್ಷೆಗಳನ್ನೂ ಮಾಡಬೇಕಾಗುವುದು.
ಆದರೆ ಇಲ್ಲಿ ಪ್ರಮುಖವಾಗಿ ನೆನಪಿಟ್ಟುಕೊಳ್ಳಬೇಕಾದ ಅಂಶವೆಂದರೆ, ರೋಗಿಗೆ ಈ ಮೇಲ್ಕಂಡ ಲಕ್ಷಣಗಳು ಶುರುವಾಗಿ 4.5 ಗಂಟೆಗಳವರೆಗೆ ಮಾತ್ರ ಸರಿಯಾದ ಚಿಕಿತ್ಸೆಯನ್ನು ಸಾಧ್ಯವಾಗುತ್ತದೆ. ಅದಕ್ಕೆ ರೋಗಿಗೆ    ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ 45ನಿಮಿಷಗಳಲ್ಲಿ ಸಿ.ಟಿ.ಸ್ಕ್ಯಾನ್ ನ ಪೂರ್ತಿ ವಿಶ್ಲೇಷಣೆ ಮಾಡಿ 1 ಗಂಟೆಯಲ್ಲಿ ಅದಕ್ಕೆ ತಕ್ಕ ಪ್ರತ್ಯೇಕ ಚಿಕಿತ್ಸೆ ಶುರು ಮಾಡಬೇಕಾಗುತ್ತದೆ.

ಚಿಕಿತ್ಸೆ

ಅತೀ ಸಾಮಾನ್ಯವಾಗಿ ರಕ್ತ ಹೆಪ್ಪುಗಟ್ಟುವಿಕೆಯ   ಪಾರ್ಶ್ವವಾಯುಗಳು ಕಂಡುಬರುವ ಹಿನ್ನೆಲೆಯಲ್ಲಿ, ರಿಕಾಂಬಿನೆಂಟ್ ಟಿಶ್ಯೂ ಪ್ಲಾಸ್ಮಿನೋಜೆನ್ ಆಕ್ಟಿವೇಟರ್( rtPA) ನ ಪಾತ್ರ ಈ ಪಾರ್ಶ್ವವಾಯುವಿನ ರೋಗಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ರೋಗಿ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ರೋಗಿಯ ಪರಿಸ್ಥಿತಿಯ ಅನುಸಾರವಾಗಿ, ನಿರ್ಜಲೀಕರಣ, ಕಡಿಮೆ ಆಮ್ಲಜನಕ, ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ, ರಕ್ತದೊತ್ತಡ ಗಳನ್ನು ಗುರಿಯಾಗಿಸಿ ಚಿಕಿತ್ಸೆ ನೀಡಲಾಗುತ್ತದೆ.

ಆದರೆ, ರಕ್ತ ಹೆಪ್ಪುಗಟ್ಟುವಿಕೆಯ ಪಾರ್ಶ್ವವಾಯು  ಶುರುವಾದ 4.5 ಗಂಟೆಗಳಲ್ಲಿ (rtPA)ಚಿಕಿತ್ಸೆ ನೀಡದೇ ಹೋದರೆ ಜೀವನವಿಡೀ ಪಾರ್ಶ್ವವಾಯುವಿಗೆ ಗುರಿಯಾಗಬೇಕಾಗುತ್ತದೆ. ಈ ಚಿಕಿತ್ಸೆ ಕೊಂಚ ದುಬಾರಿಯೇ ಆದರೂ, ಚಿಕಿತ್ಸೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಪಾಶ್ರ್ವವಾಯುವಿನಿಂದ ಮರಳಿ ಸ್ವಾಧೀನ ಪಡೆದುಕೊಳ್ಳಬಹುದು.

ಇನ್ನೂ ರಕ್ತಸ್ರಾವದ ಪಾರ್ಶ್ವವಾಯುಗಳು, ಇನ್ನೂ ಹೆಚ್ಚಿನ (ಸಿ.ಟಿ.ಆಂಜಿಯೋಗ್ರಾಮ್, ಎಮ್.ಆರ್.ಆಂಜಿಯೋಗ್ರಾಮ್ ನಂತಹ) ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ನಂತರ ರಕ್ತಸ್ರಾವ ಅಧಿಕವಿದ್ದರೆ ಅದನ್ನು ಹೊರಗೆ ತೆಗೆಯಲು ಮತ್ತು ಗಾಯಗೊಂಡ ರಕ್ತನಾಳವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಒಳಗಾಗಬೇಕಾಗುತ್ತದೆ. ಇನ್ನೂ ಅತಿ ಲಘು ರಕ್ತ ಸ್ರಾವಗಳು ತಾನಾಗೇ ಮೊಟಕಾಗುತ್ತವೆ. ನಂತರ, ಸ್ವಾಧೀನ ಕಳೆದುಕೊಂಡ ಪ್ರತ್ಯೇಕ ಅಂಗಗಳು ಮರಳಿ ಸ್ವಾಧೀನ ಪಡೆದುಕೊಳ್ಳಲು ಫಿಜಿಯೋಥೆರಪಿಗೆ ಒಳಗಾಗಬೇಕಾಗುತ್ತದೆ.

ಮುನ್ನೆಚ್ಚರಿಕಾ ಕ್ರಮಗಳು

  • ಪಾಶ್ರ್ವವಾಯುವಿನ ಲಕ್ಷಣಗಳ ಅರಿವು ಪ್ರತಿಯೊಬ್ಬರಲ್ಲೂ ಇರದು, ಆದರೆ ಅವುಗಳನ್ನು ಅರಿತರೆ ಅಸ್ವಾಧೀನಗೊಂಡ ಒಬ್ಬ ವ್ಯಕ್ತಿಯ ಅಂಗಾಂಗಗಳನ್ನು ಮರಳಿ ಪಡೆಯಲು ಅತ್ಯಂತ ಸಹಕಾರಿಯಾಗುತ್ತದೆ.
  • ಪಾಶ್ರ್ವವಾಯುವಿನ ಲಕ್ಷಣಗಳು ಕಂಡ ತಕ್ಣವೇ ತ್ವರಿತಗತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದು ಬಹುಮುಖ್ಯವಾಗುತ್ತದೆ.
  • ಇನ್ನು ಪಾಶ್ರ್ವವಾಯುವಿಗೆ ಕಾರಣವಾಗುವ ಎಲ್ಲಾ ಅಪಾಯಕಾರಿ ಅಂಶಗಳಿಂದ ದೂರವಿದ್ದರೆ, ಪಾಶ್ರ್ವವಾಯುವಿನ ಜೊತೆಗೆ ಇನ್ನೂ ಹಲವು ಅಸಾಂಕ್ರಾಮಿಕ ರೋಗಗಳಿಂದ ದೂರವಿರಬಹುದು.

-ಡಾ.ಸಂತೋಷ್ ಕೆ. ಬಿ. ಶಿವಮೊಗ್ಗ
santhosh.achar15892@gmail.com

Trending

Exit mobile version