ಲೈಫ್ ಸ್ಟೈಲ್
ಪಕ್ಷಿ ಪರಿಚಯ | ಬೇಲಿ ಚಟಕ
ಬೇಲಿ ಚಟಕವು (Pied Bush chat) ಗುಬ್ಬಚ್ಚಿಯಂತೆಯೇ ಸಣ್ಣ ಗಾತ್ರದ ಪಕ್ಷಿ. ಸಾಮಾನ್ಯವಾಗಿ ಬೇಲಿಗಳಲ್ಲಿ ಕುರುಚಲು ಗಿಡಗಳಿರುವ ಕಡೆ, ಬಾಲ ಕುಣಿಸುತ್ತಾ ಓಡಾಡುತ್ತಿರುತ್ತವೆ. ಮುಳ್ಳುಗಿಡಗಳ ತುದಿಯಲ್ಲಿ, ವಿರಳ ರೆಂಬೆಗಳಿರುವ ಗಿಡದ ತುದಿಯಲ್ಲಿ ಕೂತು ಬಾಲ ಕುಣಿಸುತ್ತಾ ಅತ್ತೀಂದಿತ್ತ ತಲೆಯನ್ನು ಅಲ್ಲಾಡಿಸುತ್ತಾ ಚಿಟಗುಡುತ್ತದೆ. ಸದಾ ಟುವಟಿಕೆಯಿಂದಿರುವ ಹಕ್ಕಿ ಇದು. ಇವೂ ಕೂಡ ಕೀಟಾಹಾರಿ ಹಕ್ಕಿಗಳ ಸಾಲಿಗೆ ಸೇರುತ್ತವೆ. ಹಾಗಾಗಿಯೇ ಪೊದೆಗಳಿರುವಲ್ಲಿ, ಹೆಚ್ಚಾಗಿ ನೆಲದ ಮೇಲೆ ಆಹಾರ ಹುಡುಕುತ್ತಾ ಇರುತ್ತವೆ.
ಗಂಡು ಬೇಲಿಚಟಕದ ಮೈಯ ಹೆಚ್ಚು ಭಾಗ ಕಪ್ಪು ಬಣ್ಣದಾಗಿದ್ದು, ರೆಕ್ಕೆಯ ಮೇಲೆ, ಕೆಳ ಹೊಟ್ಟೆಯ ಭಾಗ ಬಿಳಿಯ ಬಣ್ಣದಾಗಿರುತ್ತವೆ. ನೋಡಲು ಸಪೂರವಾಗಿದ್ದು, ಮೋಟು ಬಾಲ ಹೊಂದಿದೆ. ಪಕ್ಷಿ ಲೋಕದಲ್ಲಿ ಸಾಮಾನ್ಯವಾಗಿ ಗಂಡುಗಳೇ ಹೆಚ್ಚು ಸುಂದರ. ಆದರೆ ಹೆಣ್ಣು ಬೇಲಿಚಟಕವು ಗಂಡಿಗಿಂತ ನೋಡಲು ಮುದ್ದಾಗಿರುತ್ತವೆ.ಮೈ ಪೂರಾ ಕಂದು ಬಣ್ಣದಾಗಿದ್ದು, ಬಾಲದ ಭಾಗ ಇಟ್ಟಿಗೆಯ ಬಣ್ಣವಿರುತ್ತದೆ. ಸಾಮಾನ್ಯವಾಗಿ ಸಿಗುವ ಈ ಹಕ್ಕಿ ಎನ್ನುವ ಕಾರಣಕ್ಕೆ ಬಹುತೇಕರ, ಛಾಯಾಗ್ರಾಹಕರ ಅವಜ್ಞೆಗೆ ಗುರಿಯಾಗಿರುವ ಇವು ತನ್ನ ಪಾಡಿಗೆ ಊರೂರು ತಿರುಗುತ್ತಾ ಇರುತ್ತವೆ!
–ಭಗವತಿ ಎಂ.ಆರ್
ಛಾಯಾಗ್ರಾಹಕಿ, ಕವಯಿತ್ರಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243