ದಿನದ ಸುದ್ದಿ
‘ಅಭಿನಂದನ್’ ಕ್ಷೇಮವಾಗಿ ಮರಳಿ ಬರಲಿ
ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಕೈಯಲ್ಲಿದ್ದಾರೆ. ಹಾಲಿವುಡ್ಡಿನ ಒರಟು ಹೀರೋನಂಥಾ ಅಭಿನಂದನ್ ಕಂಡಾಗ ಅಭಿಮಾನ ಉಕ್ಕುತ್ತದೆ. ಇಂಥ ಸಂದರ್ಭ ಬಿಟ್ಟರೆ ಇವರೆಲ್ಲಾ ಅನಾಮಿಕರಾಗಿ ಸೇವೆ ಮುಗಿಸಿ ಮರಳುವವರೇ. ಈ ಸಂದರ್ಭ ಬಿಟ್ಟರೆ ನಮ್ಮ ಮಾಧ್ಯಮಗಳಿಗೆ ಡ್ಯೂಪ್ ಬಳಸಿ ಹೀರೋಯಿಸಂ ತೋರುವವರೇ ಹೀರೋಗಳು. ಭಕ್ತರಿಗೋ, ಕಡ್ಡಾಯ ಅವರವರ ನಾಯಕರು. ಈ ಆಷಾಡಭೂತಿತನ ಗೊತ್ತಿದ್ದರೂ ನಟಿಸುತ್ತಾ ಬಂದಿದ್ದೇವೆ ನಾವು.
ಈಗ ಅಭಿನಂದನ್ ಕ್ಷೇಮವಾಗಿ ಮರಳಿಬರಲಿ ಎಂದು ಹಾರೈಸಬೇಕು. ಆದರೆ ಸ್ವಲ್ಪ ರಾಜತಾಂತ್ರಿಕ ಒಳ ಸಂವಾದದ ಮೂಲಕ ಬಗೆಹರಿಯಬಹುದಾಗಿದ್ದ ಪ್ರಕರಣ ಇದು ಕಗ್ಗಂಟಾಗುವ ಸೂಚನೆಗಳಿವೆ. ಕಳೆದ ಎರಡು ದಿನಗಳಿಂದ ಭಾಜಪದ ಭಕ್ತರು ಮತ್ತು ಮಾಧ್ಯಮ ಯುದ್ಧೋನ್ಮಾದದ ತೀಟೆಯಲ್ಲಿ ಹರಿಬಿಟ್ಟ ಮಾತು ಮತ್ತು ವಿವರಗಳನ್ನು ನೋಡಿದರೆ ಇದು ಯಾಕೆ ಕಗ್ಗಂಟಾಗಲಿದೆ ಎಂದು ಗೊತ್ತಾದೀತು.
ನನಗೆ ಗೊತ್ತಿರುವ ಲೋಕ ಜ್ಞಾನದ ಪ್ರಕಾರ ಅಭಿನಂದನ್ ಪ್ರಕರಣವನ್ನು ಯುದ್ಧ ಕೈದಿ ಎಂದು ಸುತಾರಾಂ ಪಾಕ್ ಬಿಡಿ ಮೋದಿಯೂ ಒಪ್ಪಿಕೊಳ್ಳದೇ ಜಾರಿಕೊಳ್ಳಬಹುದು. ಯಾಕೆಂದರೆ ಇದು ಅಧಿಕೃತ ಯುದ್ಧ ಎಂದು ಭಾರತ ಘೋಷಿಸಿಲ್ಲ! ಇದನ್ನು ರಾಜತಾಂತ್ರಿಕ ಪರಿಭಾಷೆಯಲ್ಲಿ Intrusion ನುಸುಳುವಿಕೆ ಎನ್ನುತ್ತಾರೆ. ದೋಣಿ, ನಾವೆಗಳಲ್ಲಿ ಇದು ಸಾಮಾನ್ಯ. ಇದನ್ನು ಆಕಸ್ಮಿಕ ನುಸುಳುವಿಕೆ ಎನ್ನುತ್ತಾರೆ. ವಿಮಾನಗಳ ಸಂದರ್ಭದಲ್ಲೂ ಹೀಗೇ ನೋಡಲಾಗುತ್ತಿದೆ.
ನಾವಿಕರು ಯಾ ಪೈಲೆಟ್, ಸಿಬ್ಬಂದಿಗಳನ್ನು ವಶಕ್ಕೆ ಪಡೆದ ಮೇಲೆ ಅವರ ದೇಶದ ರಾಜತಾಂತ್ರಿಕ ಹೇಳಿಕೆ ಮತ್ತು ಒತ್ತಡದ ಮೂಲಕ ಬಂಧಿ ಮಾಡಿದ ದೇಶ ಬಿಡುಗಡೆ ಮಾಡಿರುವ ಉದಾಹರಣೆಗಳು ಯಥೇಚ್ಛ. ಆದರೆ ಈ ಸಂದರ್ಭದಲ್ಲಿ ಮೋದಿ ಪಡೆ ಮತ್ತು ಮಾಧ್ಯಮಗಳು ಟಾಂಟಾಂ ಹೊಡೆದ ಹಿನ್ನೆಲೆಯಲ್ಲಿ ಪಾಕಿಸ್ತಾನ ತನ್ನ ಸೋಲು ಮತ್ತು ಅವಮಾನವನ್ನು ಮುಚ್ಚಿಡಲು ಈ ಧೀರನನ್ನು ದಾಳದಂತೆ ಬಳಸಿಕೊಳ್ಳುವ ಸಾಧ್ಯತೆಯೇ ಹೆಚ್ಚು.
ನಮ್ಮ ವೈಮಾನಿಕ ಧಾಳಿ ಕೂಡಾ ಮುಸುಕಿನ ಏಟಿನಂತೆ ಗೌಪ್ಯವಾಗಿ ಇದ್ದಿದ್ದರೆ ಪಾಕಿಸ್ತಾನವೂ ಮುಖ ಒರೆಸಿಕೊಂಡು ಹುಳ್ಳಗೆ ವರ್ತಿಸುತ್ತಾ ತೆಪ್ಪಗಿರುತ್ತಿತ್ತು. ಆದರೆ ಈಗ ? ಧೀರ ಸುಪುತ್ರ ಅಭಿನಂದನ್ ಅವರನ್ನು ಪಾಕಿಸ್ತಾನ ಚೌಕಾಸಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಮೋದಿ ಪ್ರತಿಕ್ರಿಯೆ ಏನು? ನಾವು ಈಗ ಹಾಕುತ್ತಿರುವ public pressure ಕೆಲಸ ಮಾಡುತ್ತೆ. ಇಲ್ಲವೆಂದಲ್ಲ. ನಾಳೆ ಅಭಿನಂದನ್ ಬಿಡುಗಡೆಯಾಗಿ ಬರುತ್ತಾರೆ. ಆದರೆ ಇದು ಅಗ್ಗದ ಲಾಭಕ್ಕೆ air strikeನ್ನು ಬಳಸಿಕೊಂಡಿರುವ ಬಗ್ಗೆ ಮಾದ್ಯಮಗಳಿಗೂ ಭಕ್ತ ಪಡೆಗೂ, ಭಾಜಪದ ಚಿಲ್ಲರೆ ಮನೋಭಾವದ ರಾಜಕಾರಣಿಗಳಿಗೂ ಗೊತ್ತಾಗಬೇಕು.
ನಮ್ಮನ್ನು ಕಾಯುವ ನಮ್ಮ ಸೈನ್ಯ ಪಡೆಯ ಸುಪುತ್ರರ ಕಾರ್ಯಾಚರಣೆಯ ತಂತ್ರಗಾರಿಕೆ, ವೃತ್ತಿಪರತೆ ಟಾಂಟಾಂ ಹೊಡೆಯುವ ಸರಕಾಗಬಾರದು. ನಮ್ಮ ಕೃತಜ್ಞತೆ, ಗೌರವ ತೋರಲು ಇನ್ನೂ ನೂರಾರು ವಿಧಾನಗಳಿವೆ.
ಮತ್ತೊಮ್ಮೆ ಅಭಿನಂದನ್ ಕ್ಷೇಮವಾಗಿ ಮರಳಿ ಬರಲಿ ಎಂದು ಹಾರೈಸುತ್ತಾ ಗಂಭಿರವಾಗಿ ವರ್ತಿಸುವ ಬುದ್ಧಿಯನ್ನು ಮಾದ್ಯಮಗಳಿಗೂ ಸ್ಕ್ರೂ ಬಿದ್ದ ಭಕ್ತ ಪಡೆಗೂ ಆ ಸರ್ವ ಶಕ್ತ ದೇವರು ಕೊಡಲಿ ಎಂದು ಪ್ರಾರ್ಥನೆ.
–ಸುರೇಶ್ ಕಂಜರ್ಪಣೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401