ಬಹಿರಂಗ

ದುಷ್ಟನೊಬ್ಬನ ದೇಶಪ್ರೇಮ ಮತ್ತು “ಪವರ್”ಮೀಡಿಯಾ

Published

on

ಹೊಸದಾಗಿ ಪ್ರಾರಂಭವಾದರೂ ಇನ್ನೂ ಜನರ ಮುಂದೆ ಬಾರದ ಪವರ್ ಟಿವಿ ದುಷ್ಟ ದೇಶಪ್ರೇಮವನ್ನು ಪ್ರದರ್ಶಿಸಿದೆ. ಪವರ್ ಟಿವಿಯಲ್ಲಿ ಕೆಲಸ ಮಾಡುವ ಪತ್ರಕರ್ತನೊಬ್ಬ ಏರ್ ಸ್ಟ್ರೈಕ್ ಬಗ್ಗೆ ವ್ಯಂಗ್ಯವಾಗಿ ಪ್ರಶ್ನೆಗಳನ್ನೆತ್ತಿದ ಎಂಬ ಕಾರಣಕ್ಕಾಗಿ ಕೆಲಸದಿಂದ ಕಿತ್ತು ಹಾಕಲಾಗಿದೆ ಎಂದು ಪವರ್ ಟಿವಿ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮ‌ ಹೇಳಿದ್ದಾರೆ.

ಚಂದನ್ ಶರ್ಮ ಹೇಳಿಕೆಯ ಒಟ್ಟು ಸಾರಾಂಶ ಏನೆಂದರೆ, ಪವರ್ ಟಿವಿಯು ಸೈನಿಕರಿಗೆ ಅರ್ಪಣೆಯಾದ ರಾಜ್ಯದ ಮೊದಲ ಚಾನೆಲ್ ಆಗಿದ್ದು, ಸೈನಿಕರಿಗೆ ಯಾರೇ ಅವಮಾನ ಮಾಡಿದ್ರೂ ಸಹಿಸೋದಿಲ್ಲ. ಆದ್ದರಿಂದ ಪತ್ರಕರ್ತ ಮೋಹನ್ ನನ್ನು ಕೆಲಸದಿಂದ ತೆಗೆಯಲಾಗಿದೆ ಎಂದಿದೆ. ಚಿರು ಭಟ್ ಎಂಬ ಬಲಪಂಥೀಯ ವ್ಯಕ್ತಿ ಪತ್ರಕರ್ತ ಮೋಹನ್ ರನ್ನು ಕೆಲಸದಿಂದ ತೆಗೆಯಿರಿ ಎಂದು ಫೇಸ್ ಬುಕ್ ನಲ್ಲಿ ಹಾಕಿದ ಅರ್ಧ ಗಂಟೆಯ ಒಳಗೆ ಯಾವುದೇ ತನಿಖೆ ನಡೆಸದೇ, ಪತ್ರಕರ್ತನ ಸ್ಟೇಟಸ್ ನ ಅರ್ಥವನ್ನು ಕೇಳದೇ ಆತನನ್ನು ಕೆಲಸದಿಂದ ತೆಗೆಯಲಾಯ್ತು.

“ಲಾರ್ಡ್ ಲಬಕ್ ದಾಸ್” ಚಂದನ್ ಶರ್ಮಾರವರೇ,

ತಮ್ಮ ವಿರುದ್ದ ಮತ್ತು ನಿಮ್ಮ ಪವರ್ ಟಿವಿಯ ನಾಲ್ವರು ಸಿಬ್ಬಂದಿಗಳ ವಿರುದ್ದ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಕ್ರಿಮಿನಲ್ ದೂರು ದಾಖಲಾಗಿದೆ. ಜ್ಯುವೆಲರಿ ಅಂಗಡಿಯೊಂದರಿಂದ ಎರಡು ಕೋಟಿ ರೂಪಾಯಿ ವಸೂಲಿ ಮಾಡಲು ಹೋಗಿದ್ರಿ ಎಂದು ನಿಜಾಮುದ್ದೀನ್ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದು ಕೇವಲ ಆರೋಪವೂ ಅಲ್ಲ, ಫೇಸ್ ಬುಕ್ ಸ್ಟೇಟಸ್ಸೂ ಅಲ್ಲ, ಇದು ಖುಲ್ಲಂ ಖುಲ್ಲಾ ಎಫ್ ಐ ಆರ್ ಆಗಿರುವ ಗಂಭೀರ ಪ್ರಕರಣ !

ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ತಾವು ಅಂದರೆ ಎಕ್ಸಿಕ್ಯೂಟಿವ್ ಎಡಿಟರ್ ಚಂದನ್ ಶರ್ಮ, ಪವರ್ ಟಿವಿ ಮಾಲೀಕ ರಾಕೇಶ್ ಶೆಟ್ಟಿ, ಅಸಿಸ್ಟೆಂಟ್ ಮ್ಯಾನೇಜರ್ ವಿನೋದ್ ಕುಮಾರ್, ರಿಪೋರ್ಟರ್ ಚಂದ್ರಶೇಖರ್, ವಿರುದ್ದ ಐಪಿಸಿ ಸೆಕ್ಷನ್ 384- ಅಂದರೆ ಸುಲಿಗೆ ಪ್ರಕರಣ ದಾಖಲಾಗಿದೆ. ನೀವು ರಾಜೀನಾಮೆ ಕೊಟ್ರಾ ? ಮೋಹನ್ ಮೇಲೆ ಆರೋಪ ಬಂದಾಗ ಆತನನ್ನು ಕೆಲಸದಿಂದ ತಕ್ಷಣ ತೆಗೆದಂತೆ ನಿಮ್ಮನ್ನು ಮಾಲೀಕರು ಯಾಕೆ ಕೆಲಸದಿಂದ ತೆಗೆದಿಲ್ಲ ? ಅಥವಾ ನೈತಿಕತೆ ಹೊಣೆ ಹೊತ್ತು ತಾವೇ ರಾಜೀನಾಮೆಯನ್ನ ಯಾಕೆ ಬಿಸಾಕಲಿಲ್ಲ? ನಿಮಗೊಂದು ನ್ಯಾಯ ? ನಿಮ್ಮ ಕೈಕೆಳಗೆ ಕೆಲಸ ಮಾಡೋ ಪತ್ರಕರ್ತ ಮೋಹನ್ ಗೊಂದು ನ್ಯಾಯವೇ ?

ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿಯಾಗಿ 40 ಜನ ನಮ್ಮ ದೇಶದ ವೀರ ಯೋಧರು ಪ್ರಾಣಾರ್ಪಣೆ ಮಾಡಿದ ದಿನ ಸೈನಿಕರಿಗಾಗಿ ಅರ್ಪಣೆಯಾದ ಮೊದಲ ಚಾನೆಲ್ ಎಂದು ಸಿಲ್ಲಿಸಿಲ್ಲಿಯಾಗಿ ಘೋಷಿಸಿರುವ ಪವರ್ ಟಿವಿ ಏನ್ ಮಾಡ್ತಿತ್ತು ಅಂತ ಜನ ನೋಡಿದ್ದಾರೆ. ಅಲ್ಲಿ ಸೈನಿಕರು ಸಾಯ್ತಾ ಇದ್ರೆ ನೀವು ಸ್ಟುಡಿಯೋದಲ್ಲಿ ಖಾಲಿ ಚೇರ್ ಇಟ್ಟು ನಿಮ್ಮ ವಸೂಲಿ ಪ್ರಕರಣಕ್ಕೆ ಸ್ಪಷ್ಟನೆ ಕೊಡ್ತಾ ಇದ್ರಿ. “ನಮ್ಮ ಮೇಲೆ ಆರೋಪಿಸಿ ಎಫ್ ಐಆರ್ ದಾಖಲಿಸಿದ ಜ್ಯುವೆಲ್ಲರಿ ಮಾಲೀಕ ಈ ಚೇರ್ ನಲ್ಲಿ ಕುಳಿತು ಆರೋಪ ಸಾಬೀತು ಮಾಡಲಿ” ಎಂದು ಬೊಬ್ಬಿರಿದು ಇಡೀ ದಿನ ಚಾನೆಲ್ ಸ್ಟುಡಿಯೋವನ್ನು ಅದಕ್ಕಾಗಿ ಬಳಕೆ ಮಾಡಿಕೊಂಡ್ರಿ. ‌ಅದೇ ನ್ಯಾಯ ವ್ಯವಸ್ಥೆ ಮೋಹನ್ ಗೆ ಯಾಕಿಲ್ಲ ? ಕನಿಷ್ಟ ನಿಮ್ಮ ಪತ್ರಕರ್ತ ಮೋಹನ್ ನ ಹೇಳಿಕೆಯನ್ನಾದ್ರೂ ಪಡೆದು ಪವರ್ ಟಿವಿಯಲ್ಲಿ ಪ್ರಕಟಿಸಬಹುದಿತ್ತಲ್ವಾ ? ನಿಮ್ಮ ಮೇಲಿನ ದರೋಡೆ ಪ್ರಕರಣವನ್ನು ಅಲ್ಲಗಳೆಯಲು ಜರ್ನಲಿಸಂ ಬಳಕೆಯಾಗುತ್ತದೆ, ಮೋಹನನಂತಹ ಬಡ ಪತ್ರಕರ್ತನೊಬ್ಬ ಫೇಸ್ ಬುಕ್ ನಲ್ಲಿ ಕೇಂದ್ರ ಸರಕಾರವನ್ನು ತನ್ನ ವಯಕ್ತಿಕ ವ್ಯಂಗ್ಯಭರಿತವಾಗಿ ಪ್ರಶ್ನೆ ಮಾಡಿದ್ರೆ ಅದಕ್ಕೆ ವಿವರಣೆ ಪಡೆಯದೆ ಅಮಾನತ್ತು ಮಾಡ್ತೀರಿ. ನಿಮ್ಮದೇ ಪತ್ರಕರ್ತ ಮೋಹನ್ ಮತ್ತು ಅವನ ಸ್ಟೇಟಸ್ ವಿರುದ್ದ ನಿಮಗೆ ದೂರು ನೀಡಿದ ಬಲಪಂಥೀಯ ಪತ್ರಕರ್ತ ಚಿರು ಭಟ್ ನನ್ನು ಕರೆದು ಡಿಸ್ಕಷನ್ ಮಾಡಬಹುದಿತ್ತಲ್ಲವೇ ? ನಿಮ್ಮ ಶೋ ನಲ್ಲಿ ಒಂದತ್ತು ಬಾರಿ ನೀವೇ ಹೇಳುವ “ನಾನು ಇವತ್ತು ಒಂದಿಷ್ಟು ಚಿಂತನ-ಮಂಥನ ನಡೆಸಬೇಕಿದೆ. ನಾನು ಒಬ್ಬ ಪತ್ರಕರ್ತನಾಗಿ ಈ ಚೇರ್ ನಲ್ಲಿ ಕೂತಿದ್ದೇನೆ.‌ನಾನು ನ್ಯೂಟ್ರಲ್” ಎಂದು ಬೊಬ್ಬೆ ಹಾಕುತ್ತೀರಿ. ಹಾಗಾದ್ರೆ ಒಬ್ಬ ಪತ್ರಕರ್ತನ ನ್ಯೂಟ್ರಲ್ ಸ್ಟ್ಯಾಂಡ್ ಯಾವುದು? ಏಕಾಏಕಿ ಒಬ್ಬ ಪತ್ರಕರ್ತನನ್ನ ಕೆಲಸದಿಂದ ತೆಗೆಯುವುದಾ?

ಚಿರು ಭಟ್ ಎಂಬ ಬಲಪಂಥೀಯ ಪತ್ರಕರ್ತರು ನಿಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಮೋಹನ್ ಬಗ್ಗೆ ಫೇಸ್ ಬುಕ್ ನಲ್ಲಿ ಬರೆಯುತ್ತಾರೆ. ಅದನ್ನು ಆಧರಿಸಿ ತಾವು ಮೋಹನ್ ವಿರುದ್ದ ಕ್ರಮ ಕೈಗೊಂಡಿರಿ. ಆದರೆ ಮೋಹನ್ ತಕ್ಷಣ ನನ್ನದು ತಪ್ಪಾಯ್ತು ಎಂದೂ ಕ್ಷಮೆ ಕೇಳಿ ಸ್ಟೇಟಸ್ ಹಾಕಿದ್ದ. ಇಷ್ಟಕ್ಕೂ ಇದು ಚಾನೆಲ್ ಗೆ ಸಂಬಂಧಿಸಿದ ವಿಚಾರವಲ್ಲ. ಮೋಹನ್ ನಿಜವಾಗಿಯೂ ಸೈನಿಕರಿಗೆ ಅವಹೇಳನ ಮಾಡಿದ್ದರೆ ಎಫ್ ಐಆರ್ ದಾಖಲಿಸಲು ಚಿರು ಭಟ್ ಗೆ ಸೂಚಿಸಬೇಕಿತ್ತು. ಅದ್ಯಾವುದನ್ನೂ ಮಾಡದೇ ತಾವು ಸಾಚಾ ಎಂದು ಬಿಂಬಿಸಲು ಪತ್ರಕರ್ತನೊಬ್ಬನನ್ನು ಬಲಿ ಕೊಟ್ಟಿದ್ದು ಕನ್ನಡ ಪತ್ರಿಕೋಧ್ಯಮದ ದುರಂತ.

ಬೆಂಗಳೂರು ಕಮರ್ಷಿಯಲ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಸೆಕ್ಷನ್ ಗಳಡಿ ದಾಖಲಿಸಿಕೊಂಡ ಎಫ್ ಐಆರ್ ಪ್ರಕಾರ ದರೋಡೆಕೋರ/ವಸೂಲಿಕೋರ ಆಗಿರುವ ತಾವು ಮತ್ತೊಬ್ಬ ಪತ್ರಕರ್ತ ಅಪರಾಧಿ ಎಂದು ನ್ಯಾಯ ತೀರ್ಮಾನ ಮಾಡುತ್ತಿರುವುದು ಮಾಧ್ಯಮ ಜಗತ್ತಿನ ದುರಂತ. ನೀವು ಕೆಲಸದಿಂದ ಕಿತ್ತು ಹಾಕಿದ ಪತ್ರಕರ್ತ ಮೋಹನ್, ಪೊಲೀಸರ ಭಾಷೆಯಲ್ಲಿ ಹೇಳೋದಾದರೆ ನಿಮ್ಮಂತೆ ದರೋಡೆಕೋರನೂ ಅಲ್ಲ, ವಸೂಲಿಕೋರನೂ ಅಲ್ಲ. ಆತನ ವಿರುದ್ದ ನಿಮ್ಮ ವಿರುದ್ದ ದಾಖಲಾದಂತೆ ಎಲ್ಲೂ ಎಫ್ ಐಆರ್ ಆಗಿಲ್ಲ ! ದುಷ್ಟನೊಬ್ಬ ತನ್ನ ಮೇಲಿನ ಆರೋಪಗಳಿಂದ ಮುಕ್ತವಾಗಲು ದೇಶಪ್ರೇಮವನ್ನು ಆಯ್ಕೆ ಮಾಡುತ್ತಾನೆ !

ಲಾರ್ಡ್ ಲಬಕ್ ದಾಸ್ ಎಂಬ ಚಂದನ್ ಶರ್ಮಾರವರೇ ಈ ಲಬಕ್ ದಾಸ್ ಹೆಸರಿನ ಹಿಂದೆ ಹತ್ತಾರು ಕತೆಗಳಿವೆ ಅದನ್ನ ಬರೆದ್ರೆ ನೀವು ಯಾವ “ದೇಶಪ್ರೇಮ”ದ ಓಝೋನ್ ಪರದೆಯಲ್ಲಿ ಅಡಗಿ ಕೂತರು ರಕ್ಷಣೆ ಸಿಗಲಾರದು. ಇದು ಕೂಡ ನಿಮ್ “ನೋ ನಾನ್ ಸೆನ್ಸ್ ” ಅಡಿಯಲ್ಲಿಯೇ ಬರುತ್ತೆ. ಬಾಯಿ‌ಬಡುಕತನ ಮಾತ್ರ ಜರ್ನಲಿಸಂ ಅಲ್ಲ ಎಂಬ ಕಟು ಸತ್ಯ ನಿಮಿಗೂ ಗೊತ್ತಾಗಬೇಕಿದೆ.

ಜ್ಯುವೆಲ್ಲರಿ ಮಾಲೀಕ ಕೊಟ್ಟ ದೂರಿನ ಹಿನ್ನಲೆಯಲ್ಲಿ ಎಫ್ ಐಆರ್ ದಾಖಲಾಗಿ ಕಳ್ಳ, ಛೀ, ಥೂ ಎಂದು ಉಗಿಸಿಕೊಳ್ಳುತ್ತಿದ್ದ ನೀವು ಈಗ ಸೈನಿಕರ ನೆಪದಲ್ಲಿ ಪತ್ರಕರ್ತನನ್ನು ಕೆಲಸದಿಂದ ತೆಗೆದು ದೇಶಪ್ರೇಮದ ಪರದೆಯಲ್ಲಿ ಅಡಗಿ ಕೂರಬಹುದು ಅಂದುಕೊಂಡ್ರಾ ?

-ಸತೀಶ್ ನಾಯ್ಕ್

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version